ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್‌ ಸೋರೆನ್ ಪ್ರಮಾಣ ವಚನ: ಶಕ್ತಿಪ್ರದರ್ಶನ

Last Updated 30 ಡಿಸೆಂಬರ್ 2019, 2:47 IST
ಅಕ್ಷರ ಗಾತ್ರ

ರಾಂಚಿ: ಜಾರ್ಖಂಡ್‌ನ 11ನೇ ಮುಖ್ಯಮಂತ್ರಿಯಾಗಿ ಜೆಎಂಎಂನ ಕಾರ್ಯಾಧ್ಯಕ್ಷ ಹೇಮಂತ್‌ ಸೊರೇನ್‌ ಅವರು ರಾಂಚಿಯ ಮೊರಹಾಬಾದ್‌ ಮೈದಾನದಲ್ಲಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ಈ ಸಮಾರಂಭವನ್ನು ತಮ್ಮ ಶಕ್ತಿ ಪ್ರದರ್ಶನದ ವೇದಿಕೆಯಾಗಿಯೂ ಬಳಸಿಕೊಂಡವು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಪಿಐ ನಾಯಕ ಡಿ.ರಾಜಾ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಡಿಎಂಕೆ ಮುಖಂಡರಾದ ಸ್ಟಾಲಿನ್‌, ಟಿ.ಆರ್‌.ಬಾಲು ಮತ್ತು ಕನಿಮೊಳಿ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್‌, ಮಾಜಿ ಸಂಸದ ಶರದ್‌ ಯಾದವ್‌, ರಾಜಸ್ಥಾನ ಮತ್ತು ಛತ್ತೀಸಗಡ ಮುಖ್ಯಮಂತ್ರಿಗಳಾದ ಅಶೋಕ್‌ ಗೆಹ್ಲೋಟ್‌ ಮತ್ತು ಭೂಪೇಶ್‌ ಬಘೆಲ್‌ ಅವರು ಕಾರ್ಯಕ್ರಮಕ್ಕೆ ಬಂದಿದ್ದರು.

ಕಾಂಗ್ರೆಸ್‌ನ ಅಲಂಗೀರ್‌ ಆಲಂ ಮತ್ತು ರಾಮೇಶ್ವರ್‌ ಒರಾಂವ್‌, ಆರ್‌ಜೆಡಿಯ ಸತ್ಯಾನಂದ ಭೋಕ್ತ ಅವರೂ ಸಚಿವ ಸಂಪುಟದ ಸದಸ್ಯರಾಗಿ ಪ್ರಮಾಣ ವಚನ ಪಡೆದುಕೊಂಡಿದ್ದಾರೆ.

ಪ್ರಮಾಣ ವಚನಕ್ಕೆ ಮೊದಲು, ಹೇಮಂತ್‌ ಅವರು ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ತಂದೆ ಶಿಬು ಸೊರೇನ್‌ ಅವರ ನಿವಾಸಕ್ಕೆ ಭೇಟಿ ಕೊಟ್ಟರು. ಬಳಿಕ ಅವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಂದರು.

ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ರಘುವರ್‌ ದಾಸ್‌ ಅವರನ್ನು ಸೋಲಿಸಿದ ಸರಯೂ ರಾಯ್‌, ಸಿಪಿಎಂ–ಎಂಎಲ್‌ನ ವಿನೋದ್‌ ಸಿಂಗ್‌ ಮತ್ತು ಎನ್‌ಸಿಪಿಯ ಕಮಲೇಶ್‌ ಕುಮಾರ್‌ ಸಿಂಗ್‌ಅವರೂ ಜೆಎಂಎಂ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ.

ಕರ್ನಾಟಕದಿಂದ ಆರಂಭ

2018 ಮೇ 23:ಎಚ್‌.ಡಿ. ಕುಮಾರಸ್ವಾಮಿ ಅವರುಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನ ಬಿಜೆಪಿವಿರೋಧಿ ಪಕ್ಷಗಳು ಮೊದಲ ಬಾರಿಗೆ ಶಕ್ತಿ ಪ್ರದರ್ಶನ ಮಾಡಿದ್ದವು. ಉನ್ನತ ನಾಯಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ, ಲೋಕಸಭಾ ಚುನಾವಣೆಗೆ ಮೊದಲು ಒಗ್ಗಟ್ಟಿನ ಸಂದೇಶ ರವಾನಿಸಿದ್ದರು.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಸ್‌ಪಿಯ ಅಖಿಲೇಶ್ ಯಾದವ್,ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆರ್‌ಜೆಡಿಯ ತೇಜಸ್ವಿ ಯಾದವ್, ಸಿಪಿಎಂನ ಸೀತಾರಾಂ ಯೆಚೂರಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮೊದಲಾದ ಮುಖಂಡರು ಪರಸ್ಪರ ಕೈಹಿಡಿದು ಒಗ್ಗಟ್ಟು ಪ್ರದರ್ಶಿಸಿದ್ದರು.

ರಾಜಸ್ಥಾನದಲ್ಲಿ ಒಗ್ಗಟ್ಟು

ಡಿ.17, 2018:ರಾಜಸ್ಥಾನದಲ್ಲಿ ಕಾಂಗ್ರೆಸ್‌ ಜಯಗಳಿಸಿತು. ಹಿರಿಯ ಮುಖಂಡ ಅಶೋಕ್ ಗೆಹ್ಲೋಟ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕಾರ್ಯಕ್ರಮವು ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟನ್ನು ತೋರಿಸಿತು.ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಡಾ. ಮನಮೋಹನ್ ಸಿಂಗ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎನ್‌ಸಿಪಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ಸಾಕ್ಷಿಯಾಗಿದ್ದರು.

ಜೆಡಿಎಸ್‌ನ ಎಚ್‌.ಡಿ ದೇವೇಗೌಡ. ಎಚ್‌.ಡಿ ಕುಮಾರಸ್ವಾಮಿ, ಜೆಎಂಎಂ ಮುಖಂಡ ಹೇಮಂತ್ ಸೊರೇನ್, ಜೆವಿಎಂ ಮುಖಂಡ ಬಾಬುಲಾಲ್ ಮರಾಂಡಿ ಕೂಡ ಇದ್ದರು.

ಮಧ್ಯಪ್ರದೇಶದಲ್ಲಿ ಕಮಲ್‌ನಾಥ್‌ಗೆ ಬಲ

ಡಿ.17, 2018: ಮಧ್ಯಪ್ರದೇಶದಲ್ಲಿ ಮೋಡಿ ಮಾಡಿದ ಕಾಂಗ್ರೆಸ್‌, ಹಿರಿಯ ನಾಯಕ ಕಮಲ್‌ನಾಥ್ ಅವರಿಗೆ ರಾಜ್ಯದ ಚುಕ್ಕಾಣಿ ನೀಡಿತು. ಇಲ್ಲಿಯೂ ಪ್ರತಿಪಕ್ಷಗಳು ಒಂದುಗೂಡಿದ್ದವು. ಕಾಂಗ್ರೆಸ್ ನಾಯಕರಾದ ಡಾ. ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ದಿಗ್ವಿಜಯ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಶರದ್ ಯಾದವ್, ಜೆಡಿಎಸ್‌ನ ಎಚ್‌.ಡಿ. ದೇವೇಗೌಡ ಇದ್ದರು.

ಛತ್ತೀಸಗಡದಲ್ಲಿ...

ಡಿ.17, 2018:ಕಾಂಗ್ರೆಸ್ ಹಿರಿಯ ನಾಯಕ ಭೂಪೇಶ್ ಬಘೆಲ್ ಅವರು ಛತ್ತೀಸಗಡದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕಾರ್ಯಕ್ರಮವು ‘ಮಹಾಘಟಬಂಧನ’ ನಾಯಕರ ಬಲ ಪ್ರದರ್ಶನಕ್ಕೆ ವೇದಿಕೆ ಒದಗಿಸಿತ್ತು. ಆದರೆ ಅಂದೇ ನಡೆದ ಕಮಲ್‌ನಾಥ್ ಅವರ ಪದಗ್ರಹಣ ಸಮಾರಂಭದಲ್ಲಿ ಬಹುತೇಕ ನಾಯಕರು ಭಾಗಿಯಾಗಿದ್ದರಿಂದ ಕೆಲವರು ಇಲ್ಲಿಗೆ ಬರಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT