ಮತಗಟ್ಟೆಗಳಲ್ಲಿ ಸಿಸಿಟಿ.ವಿ: ಕಾಂಗ್ರೆಸ್‌ಗೆ ಮತಹಾಕುವುದು ತಿಳಿಯಲಿದೆ–ಬಿಜೆಪಿ ಶಾಸಕ

ಬುಧವಾರ, ಏಪ್ರಿಲ್ 24, 2019
29 °C

ಮತಗಟ್ಟೆಗಳಲ್ಲಿ ಸಿಸಿಟಿ.ವಿ: ಕಾಂಗ್ರೆಸ್‌ಗೆ ಮತಹಾಕುವುದು ತಿಳಿಯಲಿದೆ–ಬಿಜೆಪಿ ಶಾಸಕ

Published:
Updated:

ನವದೆಹಲಿ: ಮತಗಟ್ಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು ಯಾರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂಬುದು ಗೊತ್ತಾಗಲಿದೆ ಎಂದು ಗುಜರಾತ್ ಬಿಜೆಪಿ ಶಾಸಕ ರಮೇಶ್‌ ಕಾತ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

ಹಿಂದುಳಿದ ಗ್ರಾಮೀಣ ಪ್ರದೇಶವೊಂದರಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ರಮೇಶ್‌ ಕಾತ್ರಾ ಈ ವಿವಾದಿತ ಹೇಳಿಕೆ ನೀಡಿದ್ದಾರೆ. ಇವರು ಪ್ರಸ್ತುತ ಫತೇಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಕ್ಷೇತ್ರ ದಾಹೊದ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಜಸ್ವಂತ್‌ ಸಿನ್ಹಾ ಬಾಭೋರ್ ಅವರು ದಾಹೊದ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. 

ನೀವು ಮತ ಹಾಕುವಾಗ ಮತಯಂತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಜಸ್ವಂತ್‌ ಸಿನ್ಹಾ ಬಾಭೋರ್ ಅವರ ಭಾವಚಿತ್ರ, ಪಕ್ಕದಲ್ಲಿ ಕಮಲದ ಗುರುತು ಇರಲಿದ್ದು ಅದರ ಪಕ್ಕದಲ್ಲೇ ಇರುವ ಗುಂಡಿಯನ್ನು ಒತ್ತಬೇಕು. ಸಿಸಿ ಕ್ಯಾಮೆರಾಗಳನ್ನು ಅಳವಡಿಸಿರುವುದರಿಂದ ಯಾರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ, ಯಾರು ಬಿಜೆಪಿಗೆ ಮತ ಹಾಕಿದ್ದಾರೆ ಎಂಬುದು ತಿಳಿಯಲಿದೆ. ಇದಕ್ಕಾಗಿಯೇ ಪ್ರಧಾನಿ ಮೋದಿ ಮತದಾನ ಕೇಂದ್ರಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಎಂದು ರಮೇಶ್ ಕಾತ್ರಾ ಹೇಳಿದ್ದಾರೆ. 

ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ‌ಚಿತ್ರ ಹಾಗೂ ಆಧಾರ್‌ ಕಾರ್ಡ್‌ ಸೇರಿದಂತೆ ಇತರೆ ಗುರುತಿನ ಚೀಟಿಗಳಲ್ಲಿ ಇರುವ ಭಾವಚಿತ್ರಗಳನ್ನು ತಾಳೇ ನೋಡಲಾಗುವುದು. ಬಿಜೆಪಿ ಪರವಾಗಿ ಮತಹಾಕಿದವರಿಗೆ ಉದ್ಯೋಗ ಸೇರಿದಂತೆ ಇತರೆ ಸೌಕರ್ಯಗಳನ್ನು ನೀಡಲಾಗುವುದು. ಕಾಂಗ್ರೆಸ್‌ಗೆ ಮತ ನೀಡಿದವರಿಗೆ ಉದ್ಯೋಗ ಸೇರಿದಂತೆ ಯಾವುದೇ ಸೌಕರ್ಯಗಳನ್ನು ನೀಡಲಾಗುವುದಿಲ್ಲ ಎಂದು ರಮೇಶ್‌ ಕಾತ್ರಾ ಹೇಳಿದ್ದಾರೆ. 

ರಮೇಶ್‌ ಕಾತ್ರಾ ಅವರ ಹೇಳಿಕೆಯನ್ನು ಖಂಡಿಸಿರುವ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿವೆ. 

ಅಸಹಾಯಕ ಮತದಾರರ ಮೇಲೆ ಬಿಜೆಪಿ ದಬ್ಬಾಳಿಕೆ ನಡೆಸುವ ಮೂಲಕ ಬಲವಂತವಾಗಿ ಮತ ಹಾಕಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ರಾಷ್ಟ್ರೀಯ ಜನತಾದಳ ಆರೋಪಿಸಿದೆ. 

ಇತ್ತೀಚೆಗೆ ಬಿಜೆಪಿಯ ಮೇನಕಾ ಗಾಂಧಿ ಮಸ್ಲಿಮರು ನನಗೆ ಮತ ಹಾಕದಿದ್ದರೆ ಅವರಿಗೆ ಯಾವುದೇ ಕೆಲಸವನ್ನು ಮಾಡಿಕೊಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 3

  Sad
 • 0

  Frustrated
 • 15

  Angry

Comments:

0 comments

Write the first review for this !