ವಿದ್ಯುತ್‌ ಚಾಲಿತ ವಾಹನ ‘ಶೀಘ್ರ ಹೊಸ ನೀತಿ’

7
ಪರ್ಯಾಯ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಸರ್ಕಾರ ಒಲವು

ವಿದ್ಯುತ್‌ ಚಾಲಿತ ವಾಹನ ‘ಶೀಘ್ರ ಹೊಸ ನೀತಿ’

Published:
Updated:
Deccan Herald

ನವದೆಹಲಿ: ವಿದ್ಯುತ್‌ ಚಾಲಿತ ಮತ್ತು ಪರ್ಯಾಯ ಇಂಧನ ಚಾಲಿತ ವಾಹನಗಳ ತಯಾರಿಕೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಸುಸ್ಥಿರ ನೀತಿಯನ್ನು ಶೀಘ್ರ ಪ್ರಕಟಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಸ್ವಚ್ಛ ಇಂಧನ’ ಬಳಕೆಗೆ ಉತ್ತೇಜನ ನೀಡಲು ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ವಾಹನಗಳ ತಯಾರಿಕಾ ವಲಯದಲ್ಲಿ ಭಾರಿ ಬಂಡವಾಳ ಹೂಡಿಕೆಗೆ ಸರ್ಕಾರ ಉತ್ಸುಕವಾಗಿದೆ ಎಂದು ಅವರು ಇದೇ ವೇಳೆ ಪ್ರಕಟಿಸಿದ್ದಾರೆ.

ಹಸಿರುಮನೆ ಅನಿಲಗಳ ದುಷ್ಪರಿಣಾಮ ತಡೆಗಟ್ಟಲು ಮತ್ತು ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಬನೆ ತಗ್ಗಿಸಲು ಬ್ಯಾಟರಿ ಚಾಲಿತ ವಾಹನ ತಯಾರಿಕಾ ವಲಯಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದರು.

ಭವಿಷ್ಯದಲ್ಲಿ ಬ್ಯಾಟರಿ ಚಾಲಿತ ವಾಹನಗಳ ತಯಾರಿಕಾ ವಲಯಕ್ಕೆ ಹೆಚ್ಚಿನ ಬೇಡಿಕೆ ಮತ್ತು ಅವಕಾಶಗಳಿವೆ ಎಂದು ಶುಕ್ರವಾರ ‘ಮೂವ್‌’ ಜಾಗತಿಕ ಸಾರಿಗೆ ಶೃಂಗಸಭೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಒಟ್ಟು ವಾಹನಗಳ ಪೈಕಿ ಶೇ 15ರಷ್ಟು ಬ್ಯಾಟರಿ ಚಾಲಿತ ವಾಹನಗಳಿರಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಬ್ಯಾಟರಿ ಚಾಲಿತ ಕಾರುಗಳ ತಯಾರಿಕೆಗೆ ನೀಡುತ್ತಿರುವ ಆದ್ಯತೆಯನ್ನು ಸ್ಕೂಟರ್‌, ರಿಕ್ಷಾ ಹಾಗೂ ಇನ್ನಿತರ ವಾಹನಗಳಿಗೂ ನೀಡುವಂತೆ ಆಟೊಮೊಬೈಲ್‌ ಉದ್ಯಮಿಗಳು ಮತ್ತು ಸಿಇಒಗಳಿಗೆ ಸಲಹೆ ಮಾಡಿದ್ದಾರೆ.

**

ಭಾರತೀಯರ ಬದುಕು ಬದಲಾಗಿದೆ

ಭಾರತೀಯರ ಬದುಕು ತ್ವರಿತಗತಿಯಲ್ಲಿ ಬದಲಾಗುತ್ತಿದೆ. ಹೊಸ ಶಕ್ತಿ, ತುಡಿತ ಮತ್ತು ಉದ್ದೇಶಗಳೊಂದಿಗೆ ಭಾರತ ಮುನ್ನುಗ್ಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಎಲ್ಲರಿಗೂ ಸೂರು ಕಲ್ಪಿಸಲಾಗಿದೆ. ಎಲ್ಲರೂ ಬ್ಯಾಂಕ್‌ ಖಾತೆ ತೆರೆದಿದ್ದಾರೆ. ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ದೊರೆಯುತ್ತಿದೆ. ಎಲ್ಲ ಮನೆಗಳಲ್ಲೂ ಶೌಚಾಲಯಗಳಿವೆ. ಎಲ್ಲ ಕುಟುಂಬಗಳಿಗೂ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತವು ವಿಶ್ವದ ನವೋದ್ಯಮಗಳ ಕೇಂದ್ರವಾಗಿ ಹೊರಹೊಮ್ಮಿದೆ. ಔದ್ಯೋಗಿಕ ಮತ್ತು ಹೂಡಿಕೆಯ ಪ್ರಶಸ್ತ ತಾಣವಾಗಿ ಭಾರತ ಗುರುತಿಸಿಕೊಂಡಿದೆ ಎಂದು ಮೋದಿ ಬಣ್ಣಿಸಿದರು.

**

ಹವಾಮಾನ ವೈಪರೀತ್ಯದ ವಿರುದ್ಧದ ಹೋರಾಟಕ್ಕೆ ಬ್ಯಾಟರಿ ಚಾಲಿತ ವಾಹನಗಳು ಪ್ರಮುಖ ಸಾಧನ. ಪರಿಸರ ಮಾಲಿನ್ಯ ತಡೆಗೆ ‘ಸ್ವಚ್ಛ ಇಂಧನ’ ಪ್ರಬಲ ಅಸ್ತ್ರ.

–ನರೇಂದ್ರ ಮೋದಿ,  ಪ್ರಧಾನಿ

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !