ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂ ಗಲಿಲ್ಲದೆ...

Last Updated 15 ಏಪ್ರಿಲ್ 2018, 6:18 IST
ಅಕ್ಷರ ಗಾತ್ರ

ಈತ ನಮ್ಮನ್ನು ಈ ಪರಿ ಆವರಿಸುತ್ತಾನೆಂದು ನಾವ್ಯಾರೂ ಕನಸಿನಲ್ಲೂ ಊಹಿಸಿರಲಿಲ್ಲ. ನಮ್ಮೆಲ್ಲರ ಮಧ್ಯೆಯೇ ಸ್ನೇಹಿತನಂತೆ, ಒಡಹುಟ್ಟಿದವರಿಗಿಂತ ಹೆಚ್ಚು ಒಡನಾಡಿಯಾಗಿದ್ದುಕೊಂಡು ನಮಗೆ ತಿಳಿಯದಂತೆ ಹಿಂಬಾಲಿಸಿ, ಅಂತಿಮವಾಗಿ ನಮ್ಮ ಖಾಸಗಿತನವನ್ನೇ ಬಂಡವಾಳವನ್ನಾಗಿಸಿಕೊಂಡು ಬೆನ್ನಿಗೇ ಚೂರಿ ಹಾಕುತ್ತಾನೆಂದರೆ ಆತನ ಚಾಣಾಕ್ಷ ನಡೆಗೆ ಮೆಚ್ಚಲೇಬೇಕು.

ಪರಿಣಾಮ ಈ ಚಾಣಾಕ್ಷನಿಲ್ಲದೇ ನಮ್ಮ ಅಸ್ತಿತ್ವವೇ ಇಲ್ಲವೇನೋ ಅನ್ನುವ ಹಂತಕ್ಕೆ ಇಂದು ನಾವೆಲ್ಲರೂ ತಲುಪಿದ್ದೇವೆ. ವಿವಿಧ ಆಯಾಮಗಳಲ್ಲಿ ನಮ್ಮನ್ನು ಆವರಿಸಿಕೊಳ್ಳುವ ಆ ಚಾಣಾಕ್ಷನ ರೂಪಗಳು ಗೂಗಲ್, ಫೇಸ್‌ ಬುಕ್‌ನಂತಹ ಜಾಲತಾಣಗಳು ಮತ್ತು ವಾಟ್ಸ್‌ ಆ್ಯಪ್‌ನಂತಹ ಸಂಪರ್ಕ ಮಾಧ್ಯಮಗಳು.

ಸಾಮಾಜಿಕ ಜಾಲತಾಣಗಳ ಪೈಕಿ ಫೇಸ್‌ಬುಕ್‌, ಕೇಂಬ್ರಿಡ್ಜ್ ಅನಾಲಿಟಿಕ ಸಂಸ್ಥೆ ಜತೆ ಕೈಜೋಡಿಸಿ ಒಂದು ರಾಷ್ಟ್ರದ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರಿದ ಆರೋಪ ಕೇಳಿಬಂದಿದೆ. ಇಷ್ಟು ಮಾತ್ರವಲ್ಲದೆ, ಕೇಂಬ್ರಿಡ್ಜ್‌ ಅನಾಲಿಟಿಕ ಸಂಸ್ಥೆಯು ಭಾರತದ ರಾಜಕೀಯ ಪಕ್ಷಗಳ ಜೊತೆಯಲ್ಲೂ ನಂಟು ಬೆಳೆಸಿಕೊಂಡ ಆರೋಪ ಕೇಳಿಬಂದಿದೆ. ವಾಸ್ತವ ಹೀಗಿರುವಾಗ ಇನ್ನು ನಮ್ಮ ನಿಮ್ಮೆಲ್ಲರ ಜಾತಕ ಮೂರನೇ ವ್ಯಕ್ತಿಯ ಕೈಸೇರುವುದು ಅಷ್ಟು ಕಷ್ಟದ ಕೆಲಸವೇನಲ್ಲ.

ನಾವು ವಾಸಿಸುವ ಪ್ರದೇಶದಲ್ಲಿ ಸರ್ಕಾರಿ ಇಲಾಖೆಗಳು ಕಾಮಗಾರಿ ಕೈಗೆತ್ತಿಕೊಂಡರೆ ಮಾಹಿತಿ ಪಡೆಯಲು ₹ 10 ವ್ಯಯಿಸಿ ಮಾಹಿತಿ ಹಕ್ಕಿನ ಮೂಲಕ ವಿವರ ಪಡೆಯುತ್ತೇವೆ. ಆದರೆ ಇಂದು ಗೂಗಲ್ ನಮ್ಮ ಬಳಿ ಒಂದು ನಯಾಪೈಸೆ ಕೂಡ ಪಡೆಯದೆ ದೇಶ ವಿದೇಶಗಳ ಮಾಹಿತಿಯನ್ನು ನಮ್ಮ ಅಂಗೈಗೆ ತಲುಪಿಸುತ್ತದೆ. ಉಚಿತವಾಗಿ ಗೂಗಲ್‌ ನಮಗೆ ಮಾಹಿತಿ ನೀಡಲು ಅದೇನು ದತ್ತಿ ಇಲಾಖೆಯೋ ಅಥವಾ ಸಂಘ– ಸಂಸ್ಥೆಯೋ ಅಲ್ಲವಲ್ಲ. ಅತಿ ಹೆಚ್ಚು ವೇತನ ನೀಡುವ ಸಂಸ್ಥೆಗಳು ಎಂದೇ ಗೂಗಲ್‌, ಫೇಸ್‌ಬುಕ್ ಖ್ಯಾತಿ ಪಡೆದಿವೆ. ಹಾಗಿದ್ದಲ್ಲಿ ಇವರಿಗೆ ಆ ಪ್ರಮಾಣದಲ್ಲಿ ಲಾಭ ಮಾಡಲು ಇವರು ತಯಾರು ಮಾಡುತ್ತಿರುವ ಉತ್ಪನ್ನವಾದರೂ ಏನು? ಇದಕ್ಕೆ ಉತ್ತರ ಸುಲಭ. ಗೂಗಲ್‌ ಹಾಗೂ ಇತರೆ ಜಾಲತಾಣಗಳು ನಮ್ಮನ್ನೇ ಉತ್ಪನ್ನವನ್ನಾಗಿಸಿಕೊಂಡು ನಮ್ಮ ಖಾಸಗಿ ಮಾಹಿತಿಯನ್ನು ಕಲೆಹಾಕಿ ಅದನ್ನೇ ಉದ್ಯಮವನ್ನಾಗಿಸಿಕೊಂಡಿವೆ.

ಸಾಮಾಜಿಕ ಜಾಲತಾಣ ಮಾತ್ರವಲ್ಲದೆ ಗೂಗಲ್ ಸಹ ಖಾಸಗಿ ಮಾಹಿತಿ ಕ್ರೋಢೀಕರಿಸುತ್ತಿರುವ ಆರೋಪ ಕೇಳಿಬಂದಿದೆ. ನಾವು ಜಾಲತಾಣದ ಒಳಹೊಕ್ಕು ಶೋಧಿಸುವ ಪ್ರತಿ ಅಂಶವನ್ನೂ ಗೂಗಲ್‌ ತನ್ನ ಸರ್ವರ್‌ನಲ್ಲಿ ಶೇಖರಿಸಿಕೊಳ್ಳುತ್ತದೆ.

ಉದಾ: ನನ್ನ ಮೊಬೈಲ್‌ ಫೋನಿನಲ್ಲಿರುವ ಗೂಗಲ್‌ನಲ್ಲಿ ಕಾರಿನ ಮಾಹಿತಿ ತಿಳಿದುಕೊಳ್ಳುವ ಆಸಕ್ತಿಯಿಂದ ಅದರ ಒಳಹೊಕ್ಕು ಹೊರಬಂದರೆ ಅಷ್ಟಕ್ಕೇ ಅದು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಾವು ಮಾಡುವ ಪ್ರತಿ ಕರೆ ಅಂತ್ಯಗೊಂಡಾಗಲೂ ಸರಿಸಮನಾದ ವಿವಿಧ ಕಾರುಗಳ ಮಾಹಿತಿಯನ್ನು ನನ್ನ ಮೊಬೈಲ್‌ ಫೋನಿಗೆ ಹರಿಬಿಡುತ್ತದೆ. ಇದರ ಅರ್ಥ ನನ್ನ ಅನುಮತಿ ಇಲ್ಲದೇ ನನ್ನ ಖಾಸಗಿ ಮಾಹಿತಿ ಬೇರೆಯವರ ಪಾಲಾಗುತ್ತಿದೆ ಎಂದಲ್ಲವೆ? ಇದು ಕೇವಲ ಉದಾಹರಣೆ ಅಷ್ಟೇ. ಇದೇ ರೀತಿ ನೀವು ರಕ್ಷಿಸಿಟ್ಟ ಕ್ರೆಡಿಟ್ ಕಾರ್ಡ್‌ ಮಾಹಿತಿಯೂ ಹ್ಯಾಕರ್‌ಗಳ ಪಾಲಾಗಬಹುದು. ಕ್ರೆಡಿಟ್ ಕಾರ್ಡ್‌ ಮಾಹಿತಿ ಸಂಗ್ರಹಿಸಿ ನಿಮ್ಮ ಖಾತೆಯಿಂದ ಹಣ ಲಪಟಾಯಿಸುವಂತಹ, ಖಾಸಗಿತನಕ್ಕೆ ಧಕ್ಕೆ ಉಂಟುಮಾಡುವಂತಹ ಸಂಘಟಿತ ಸೈಬರ್ ಅಪರಾಧ ಇಂದು ಜಾಗತಿಕ ಮಟ್ಟದಲ್ಲೂ ಎಲ್ಲರ ನಿದ್ದೆಗೆಡಿಸಿದೆ. ಅಪರಾಧ ಕೃತ್ಯಗಳಲ್ಲಿ ಅಂತರ್ಜಾಲಗಳಂತೆ ಕಾರ‍್ಯ ನಿರ್ವಹಿಸುವ ಹ್ಯಾಕರ್‌ಗಳ ಸ್ವರ್ಗ DARKNET ಮುಂಚೂಣಿಯಲ್ಲಿದೆ.

ಹಾಗಾದರೆ ಇದಕ್ಕೆಲ್ಲ ಕಡಿವಾಣವೇ ಇಲ್ಲವೆ? ಗೂಗಲ್, ಯೂಟ್ಯೂಬ್, ವಾಟ್ಸ್‌ ಆ್ಯಪ್, ಫೇಸ್‌ಬುಕ್‌ಗೆ ಪರ‍್ಯಾಯ ಆಯ್ಕೆಗಳಿದ್ದರೂ ಅದರೊಂದಿಗೇ ನಂಟಸ್ತಿಕೆ ಮುಂದುವರಿಸುತ್ತಿರುವುದು ಹಾಗೂ ಬಳಕೆದಾರರ ಅಜಾಗರೂಕತೆಯೇ ಇದಕ್ಕೆ ಕಾರಣ ಎಂದರೆ ತಪ್ಪಲ್ಲ. ಗೂಗಲ್ ಆಗಲಿ ಯಾಹೂ ಆಗಲಿ ಸುರಕ್ಷತೆಗೆ ಆದ್ಯತೆ ನೀಡಿರುತ್ತವೆ. ಆದರೆ ಬಳಸುವ ರೀತಿ ಮಾತ್ರ ಅಸುರಕ್ಷತೆಯ ಆಗರವಾಗಿದೆ.

ಖಾಸಗಿ ನಿಲುವು ಭದ್ರವಾದರೆ ಎಲ್ಲವೂ ಸುಭದ್ರ
ಯಾವುದೇ ಜಾಲತಾಣದ ಒಳಹೊಕ್ಕರೂ ಅದರದೇ ಆದ ಕೆಲವು ಖಾಸಗಿ ನಿಲುವುಗಳಿರುತ್ತವೆ (ಪ್ರೈವೆಸಿ ಸೆಟ್ಟಿಂಗ್). ನಮಗೆ ತಿಳಿಯದ ಹಾಗೆ ಎಷ್ಟೋ ಆಯ್ಕೆ ಸಕ್ರಿಯಗೊಂಡಿರುತ್ತವೆ. ಅದರತ್ತ ಒಮ್ಮೆ ಕಣ್ಣು ಹಾಯಿಸಿ ನಮಗೆ ಬೇಡವಾದ ಸೇವೆ ನಿಷ್ಕ್ರಿಯಗೊಳಿಸುವ ಮೂಲಕ ನಮ್ಮ ಖಾಸಗಿತನ ಬೇರೆಯವರ ಪಾಲಾಗದಂತೆ ನೋಡಿಕೊಳ್ಳಬಹುದು. ಉದಾಹರಣೆಗೆ: ನಾವು ಮನೆಯಿಂದ ಹೊರ ನಡೆದರೆ ನಮ್ಮ ಹೆಜ್ಜೆ ಗುರುತು ಸಹ ಲೆಕ್ಕಹಾಕಿ ನಾವಿರುವ ಜಾಗದ ಕುರಿತು ಅಭಿಪ್ರಾಯ ತಿಳಿಸುವಂತೆ ಗೂಗಲ್ ಕೇಳುತ್ತದೆ. ಇದರಿಂದ ನಮಗೇನೂ ಪ್ರಯೋಜನ ಇಲ್ಲವೆಂದಾಗ ಗೂಗಲ್‌ನಲ್ಲಿನ ಟ್ರ್ಯಾಕ್ ಆಯ್ಕೆ ನಿಷ್ಕ್ರಿಯಗೊಳಿಸಿಕೊಳ್ಳಬಹುದು.

ಗೂಗಲ್‌ ಇಲ್ಲದೆಯೂ ಜೀವಿಸಬಹುದು
ಸ್ಪರ್ಧಾತ್ಮಕ ಯುಗದಲ್ಲಿ ಅಪ್ಪ ನೆಟ್ಟಿದ್ದೇ ಆಲದಮರ ಎನ್ನುವ ಪರಿಸ್ಥಿತಿ ಇಲ್ಲ. ಅದಕ್ಕೆ ಗೂಗಲ್‌ ಹೊರತಾಗಿಲ್ಲ. ಇಂದು ಗೂಗಲ್‌ಗೆ ಪೈಪೋಟಿ ನೀಡಲು ಗೂಗಲ್‌ಗಿಂತಲೂ ಹೆಚ್ಚು ಸಾಮರ್ಥ್ಯವುಳ್ಳ ಸರ್ಚ್ ಎಂಜಿನ್‌ಗಳು ಲಭ್ಯ ಇವೆ. ಮೊಜಿಲ್ಲಾ, ಡಕ್ ಡಕ್ ಗೊ, ಸ್ಟಾರ್ಟ್ ಪೇಜ್‌ನಂತಹ ಸರ್ಚ್ ಎಂಜಿನ್‌ಗಳು ಕೂಡ ನಮ್ಮ ಅಭಿರುಚಿಗೆ ತಕ್ಕಂತೆ ಸ್ಪಂದಿಸುತ್ತವೆ. ಅದರಲ್ಲಿ ಡಕ್ ಡಕ್ ಗೊ ಗೂಗಲ್‌ನಂತೆ ನಮ್ಮನ್ನು ಹಿಂಬಾಲಿಸುವುದಿಲ್ಲ. ಗೂಗಲ್‌ನಲ್ಲಿ ಸಿಗುವ ಎಲ್ಲಾ ಮಾಹಿತಿ ಡಕ್ ಡಕ್ ಗೊ ನಲ್ಲಿ ಲಭ್ಯ ಇದೆ. ಜಿ ಮೇಲ್ ಬದಲು ಔಟ್ ಲುಕ್, ಗೂಗಲ್ ಮ್ಯಾಪ್ ಬದಲು ಬಿಂಗ್ ಮ್ಯಾಪ್, ಗೂಗಲ್ ಡಾಕ್‌ಗೆ ವರ್ಡ್‌ ಡಾಕ್, ಗೂಗಲ್ ಕಿ ಗೆ ಫ್ಲೆಸ್ಕಿ, ಗೂಗಲ್ ಕ್ರೋಮ್‌ ಬದಲು ಫೈರ್ ಫಾಕ್ಸ್ ಹೀಗೆ ಗೂಗಲ್‌ನಲ್ಲಿ ಲಭ್ಯ ಇರುವ ಎಲ್ಲಾ ಸೇವೆಗಳನ್ನು ವಿವಿಧ ವೆಬ್‌ಸೈಟ್‌ಗಳಿಂದಲೂ ಪಡೆಯಬಹುದು. ಈ ಮೂಲಕ ಮನುಷ್ಯ ಗೂಗಲ್‌ ಇಲ್ಲದೆಯೂ ಜೀವಿಸಬಹುದು!

ವಾಟ್ಸ್ಆ್ಯಪ್ ಇಲ್ಲ ‘ಏನ್’ ಇವಾಗ?
ಅನೇಕ ಬಹುರಾಷ್ಟ್ರೀಯ ಕಂಪನಿಗಳು ಇಂದು ವಾಟ್ಸ್ಆ್ಯಪ್‌ನಿಂದ ದೂರ ಉಳಿದಿದೆ. ವಾಟ್ಸ್ಆ್ಯಪ್‌ನಲ್ಲಿ ಮಾಹಿತಿ ಸೋರಿಕೆ ಆಗುವ ಭೀತಿಯಿಂದಾಗಿ ಪರ್ಯಾಯ ಆಯ್ಕೆಗಳೆಡೆಗೆ ಮುಖ ಮಾಡಿವೆ. ಅದರಲ್ಲಿ ಪ್ರಮುಖವಾಗಿ ಲೈನ್, ಸಿಗ್ನಲ್, ವಿಕರ‍್ಮಿ, ಟೆಲಿಗ್ರಾಂ ಇವುಗಳು ಪರ್ಯಾಯ ಆಯ್ಕೆ ಆಗಿ ಹೊರಹೊಮ್ಮಿವೆ. ಸ್ನೇಹಿತರು, ಸಂಬಂಧಿಕರ ಗ್ರೂಪ್‌ಗಳಿಗೆ ಮಾತ್ರ ವಾಟ್ಸ್ಆ್ಯಪ್ ಸೀಮಿತಗೊಂಡಿದೆ. ವಾಟ್ಸ್ಆ್ಯಪ್‌ನಂತೆ ಕಾರ್ಯ ನಿರ್ವಹಿಸುವ ಲೈನ್ ಇಂದು ವಾಟ್ಸ್ಆ್ಯಪ್‌ಗೆ ಪ್ರತಿಸ್ಪರ್ಧಿ. ಲೈನ್ ಆ್ಯಪ್ ವಾಟ್ಸ್ಆ್ಯಪ್‌ಗಿಂತಲೂ ಕಡಿಮೆ ಡಾಟಾ ಬಳಸಿಕೊಳ್ಳುತ್ತದೆ. ಲೈನ್ ಆ್ಯಪ್‌ನಲ್ಲಿ ಲ್ಯಾಂಡ್ ಲೈನ್‌ಗೆ ಕರೆ ಮಾಡುವ ಸೌಲಭ್ಯವಿರುವುದು ಗಮನಾರ್ಹ. ಇನ್ನು ತಮ್ಮ ಖಾಸಗಿ ವ್ಯವಹಾರಗಳು ಖಾಸಗಿಯಾಗಿಯೇ ಇರಬೇಕೆಂದು ಇಚ್ಛಿಸುವರಿಗೆ ವಿಕ್ಕರ್‌ ಮಿ ಉತ್ತಮ ಆಯ್ಕೆ. ವಿಕ್ಕರ್ ಮಿ ರಾಷ್ಟ್ರ ನಾಯಕರು, ಹೆಸರಾಂತ ಪತ್ರಕರ್ತರ ನೆಚ್ಚಿನ ಆಯ್ಕೆಯೂ ಹೌದು. ಹಾಗೆಯೇ ಪ್ರತಿ ಜಾಲತಾಣಕ್ಕೂ ಪರ್ಯಾಯ ಆಯ್ಕೆಗಳಿರುತ್ತದೆ. ಯೂಟ್ಯೂಬ್‌ಗೆ ಪರ್ಯಾಯವಾಗಿ ವಿಮೆಯೂ, ಮೆಟಕೆಫೆ, ಡೈಲಿಮೋಷನ್ ವೆಬ್‌ಸೈಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಫೇಸ್ ತಿಳಿದಿದ್ದರೆ ಸ್ನೇಹ
ಇಂದು ಜಾಗತಿಕ ಮಟ್ಟದಲ್ಲಿ ಸೈಬರ್ ಅಪರಾಧ ಕೃತ್ಯಗಳಲ್ಲಿ ಬಹಳಷ್ಟು ಮಂದಿ ಫೇಸ್‌ ಬುಕ್‌ನಿಂದಲೇ ವಂಚನೆಗೊಳಗಾಗಿದ್ದಾರೆ. ಫೇಸ್‌ ಬುಕ್‌ನಲ್ಲಿ ಅಪರಿಚಿತರ ಸ್ನೇಹ ಬೆಳೆಸುವಾಗ ಜಾಗರೂಕರಾಗಿರಬೇಕು. ಎಷ್ಟೋ ಬಾರಿ ನಕಲಿ ಖಾತೆಗಳು ಫೇಸ್‌ಬುಕ್‌ನಲ್ಲಿ ಪಾರುಪತ್ಯ ಮೆರೆದಿವೆ. ಇನ್ನು ಸ್ವಲ್ಪ ಆಳ ಹೊಕ್ಕರೆ ಅಪರಿಚಿತರ ಇ ಮೇಲ್‌ ಬಳಸಿ ನನ್ನ ಸ್ನೇಹಿತನಿಗೆ ನನ್ನ ಹೆಸರಿನಲ್ಲಿ ಮತ್ತೊಬ್ಬ ಅಪರಿಚಿತ ವ್ಯಕ್ತಿ ಹರಟೆ ಹೊಡೆಯುವಂತಹ ಮಟ್ಟಕ್ಕೂ ತಂತ್ರಜ್ಞಾನ ಬೆಳೆದು ನಿಂತಿದೆ. ಐ.ಟಿ ಭಾಷೆಯಲ್ಲಿ ಇದನ್ನು ಐ.ಪಿ ಸ್ಪೂಫಿಂಗ್ ಎಂದು ಕರೆಯುತ್ತಾರೆ. ಈ ರೀತಿಯ ವಂಚನೆಗೊಳಗಾಗದಂತೆ ಎಚ್ಚರವಹಿಸಬೇಕು. ನಾವು ಹೋಗುವ ಜಾಗದಿಂದ ಹಿಡಿದು, ತೊಡುವ ಬಟ್ಟೆಯವರೆಗೂ ಫೇಸ್‌ಬುಕ್‌ನಲ್ಲಿ ದಾಖಲಿಸುತ್ತೇವೆ. ಇದಕ್ಕೆ ಎಷ್ಟು ಸಾಧ್ಯವೋ ಅಷ್ಟು ಕಡಿವಾಣ ಹಾಕುವುದು ಉತ್ತಮ. ಅಗತ್ಯವೆಂದೆನಿಸಿದ ಪೋಸ್ಟ್‌ ಮಾತ್ರ ಫೇಸ್‌ಬುಕ್‌ನಲ್ಲಿ ದಾಖಲಿಸುವ ಮೂಲಕ ಖಾಸಗಿತನಕ್ಕೆ ಗೌರವ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.

ಸೈಬರ್‌ ಬಳಕೆ ಕುರಿತು ಸರ್ಕಾರ ಕಟ್ಟುನಿಟ್ಟಿನ ನೀತಿ ಮತ್ತು ಕಾನೂನು ಜಾರಿ ಮಾಡಬೇಕು. ಸೈಬರ್ ಬಳಕೆ ಹಾಗೂ ಮಾಹಿತಿ ರಕ್ಷಣೆಗೆ ಸಂಬಂಧಿಸಿದಂತೆ ಐರೋಪ್ಯ ರಾಷ್ಟ್ರಗಳು ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಷನ್ (ಜಿ.ಡಿ.ಪಿ.ಆರ್) ಎಂಬ ನೂತನ ಕಾನೂನು ರೂಪಿಸಿವೆ. ಐರೋಪ್ಯ ರಾಷ್ಟ್ರಗಳಲ್ಲಿರುವ ಪ್ರತಿ ನಾಗರಿಕನ ಖಾಸಗಿ ಮಾಹಿತಿಯನ್ನು ಭದ್ರವಾಗಿ ಕಾಪಾಡುವುದೇ ಈ ಕಾನೂನಿನ ಉದ್ದೇಶ. ಭಾರತದಲ್ಲಿ ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಮಾತ್ರ ಇದೆಯೇ ಹೊರತು ಕಠಿಣ ಕಾನೂನು ಜಾರಿ ಆಗದೆ ಇರುವುದು ವಂಚಕರಿಗೆ ವರದಾನವಾಗಿದೆ.

ಆದಾಗ್ಯೂ ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಇಲಾಖೆ ಮಾಹಿತಿ ಹ್ಯಾಕ್ ಆದಲ್ಲಿ ಅಥವಾ ರ‍್ಯಾನ್ಸಮ್‌ವೇರ್‌, ವೈರಸ್‌ಅನ್ನು ಹ್ಯಾಕರ್‌ಗಳು ಹರಿಬಿಟ್ಟಲ್ಲಿ ಅದರ ಕುರಿತು ಜಾಗೃತಿ ಮೂಡಿಸಿ ಅದನ್ನು ನಿಯಂತ್ರಣಗೊಳಿಸುವ ಕಾರ್ಯದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ ಸಿ.ಇ.ಆರ್‌.ಟಿ –ಇನ್ (ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಂ) ಕಾರ್ಯಪ್ರವೃತ್ತಗೊಳ್ಳುತ್ತದೆ.

ಖಾಸಗಿ ಮಾಹಿತಿ ರಕ್ಷಣಾ ದಿನ
ಪ್ರತಿ ವರ್ಷ ಜನವರಿ 28ರಂದು ಪ್ರಪಂಚದಾದ್ಯಂತ ಖಾಸಗಿ ಮಾಹಿತಿ ರಕ್ಷಣಾ ದಿನ ಎಂದು ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾರತ, ಅಮೆರಿಕ, ಕೆನಡಾ ಸೇರಿದಂತೆ ಒಟ್ಟು 47 ರಾಷ್ಟ್ರಗಳು ಕೈ ಜೋಡಿಸಿವೆ. ಭಾರತದಲ್ಲಿ ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿ.ಎಸ್.ಐ.ಸಿ) ಎಂಬ ಹೆಸರಿನಲ್ಲಿ ನ್ಯಾಸ್ ಕಾಂ ಈ ಸಂಸ್ಥೆ ಆರಂಭಿಸಿದೆ. ಆನ್ ಲೈನ್ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಖಾಸಗಿ ಮಾಹಿತಿಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಖಾಸಗಿ ಮಾಹಿತಿ ರಕ್ಷಣಾ ದಿನ ಆಚರಿಸಲಾಗುತ್ತಿದೆ.

ಇಂಟರ್‌ ನೆಟ್ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಬೇಕು. ನಮ್ಮ ಕ್ಷಣಮಾತ್ರದ ಬೇಜವಾಬ್ದಾರಿತನ ನಮ್ಮನ್ನು ಸಂಕಷ್ಟಕ್ಕೆ ಈಡು ಮಾಡುತ್ತದೆ. ಸಾಮಾಜಿಕ ಜಾಲತಾಣ ಎಂಬುದು ನಮ್ಮ ಐಷಾರಾಮಿ ಬದುಕು ತೋರಿಸುವ ಸಾಧನವಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಜಾಲತಾಣ ಬಳಕೆಯಲ್ಲಿ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು. ಅಗತ್ಯ ಮತ್ತು ಅವಶ್ಯಕತೆಯನ್ನು ಯೋಚಿಸಿ, ಅಗತ್ಯ ಎನಿಸಿದರೆ ಮಾತ್ರ ಜಾಲತಾಣ ಬಳಸಿ, ಅವಶ್ಯವಾದದ್ದನ್ನು ಮಾತ್ರ ಜಾಲತಾಣದಲ್ಲಿ ದಾಖಲಿಸುವಂತಾಗಬೇಕು. ನಾವು ಮಾಡುವ ಸಾಧನೆ ಜಾಲತಾಣದಲ್ಲಿ ಅಚ್ಚಾಗಿ ಬೇರೆಯವರಿಗೆ ಸ್ಫೂರ್ತಿ ಆಗಬೇಕೇ ಹೊರತು ನಾವೇ ಜಾಲತಾಣಗಳಿಗೆ ಸಾಧನ ಆಗಬಾರದು.

ಮೋಸಕ್ಕೆ ದಾರಿ...

* ಪ್ರತಿ ಸೇವೆಗೂ (ಅಪ್ಲಿಕೇಷನ್) ಒಂದೇ ಯೂಸರ್ ಐ.ಡಿ ಮತ್ತು ಪಾಸ್‌ವರ್ಡ್ ಬಳಸುವುದು.

* ಪಾಸ್ ವರ್ಡ್ ಆಗಾಗ್ಗೆ ಬದಲಾಯಿಸದೆ ಇರುವುದು.

* ಯೂಸರ್ ಐ.ಡಿ ಮತ್ತು ಪಾಸ್‌ವರ್ಡ್ ಮೊಬೈಲ್ ಫೋನಿನಲ್ಲಿ ದಾಖಲಿಸುವುದು.

* ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಸಂರಕ್ಷಿಸಿಡುವುದು.

* 24/7 ಸುದ್ದಿ ವಾಹಿನಿಗಳು ಪ್ರತಿ ನಿಮಿಷಕ್ಕೂ ನೀಡುವ ಬ್ರೇಕಿಂಗ್ ಸುದ್ದಿಯಂತೆ ವೈಯಕ್ತಿಕ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಅಡಕಗೊಳಿಸುವುದು.

* ಅಗ್ಗದ ದರವೆಂದು ಚೀನಾ ಮೊಬೈಲ್‌ಗೆ ಮಾರುಹೋಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT