ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: ನಡೆಯದ ಗುಣಮಟ್ಟದ ಚರ್ಚೆ

ಸದಸ್ಯರನ್ನು ಪ್ರಶ್ನಿಸುವಂತೆ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ
Last Updated 27 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ‘ವಿರೋಧ ಪಕ್ಷಗಳ ಧೋರಣೆಯಿಂದ ರಾಜ್ಯಸಭೆಯಲ್ಲಿ ಗುಣಮಟ್ಟದ ಚರ್ಚೆಗಳು ನಡೆಯುತ್ತಿಲ್ಲ. ಇದು ಆತಂಕಕಾರಿ ಬೆಳವಣಿಗೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ.

ಬುಧವಾರ ರಾಷ್ಟ್ರೀಯ ಯುವ ಸಂಸತ್‌ ಉತ್ಸವದಲ್ಲಿ ಮಾತನಾಡಿದ ಅವರು, ‘ಈ ವಿಷಯದ ಕುರಿತು ರಾಜ್ಯಸಭೆ ಸದಸ್ಯರನ್ನು ಯುವಕರು ಪ್ರಶ್ನಿಸಬೇಕು’ ಎಂದು ಸಲಹೆ ನೀಡಿದ್ದಾರೆ.

‘16ನೇ ಲೋಕಸಭೆಯಲ್ಲಿ ಚರ್ಚೆಯ ಗುಣಮಟ್ಟದಿಂದ ಶೇಕಡ 85ರಷ್ಟು ಫಲಿತಾಂಶ ದೊರೆತಿದೆ. ಹಿಂದಿನ ಲೋಕಸಭೆಗಿಂತಲೂ ಇದು ಶೇಕಡ 20ರಷ್ಟು ಹೆಚ್ಚು. ಒಟ್ಟು 205 ಮಸೂದೆಗಳಿಗೆ ಲೋಕಸಭೆ ಅನುಮೋದನೆ ನೀಡಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಸಂಪೂರ್ಣ ಬಹುಮತ ನೀಡಿದ್ದರಿಂದ ಲೋಕಸಭೆಯಲ್ಲಿ ಗುಣಮಟ್ಟದ ಚರ್ಚೆ ನಡೆಸಲು ಸಾಧ್ಯವಾಯಿತು’ ಎಂದು ವಿವರಿಸಿದ್ದಾರೆ.

‘ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರ ಸಂಖ್ಯೆ ಹೆಚ್ಚಿದೆ. ಆದರೆ, ಚರ್ಚೆಗಳು ಸಮರ್ಪಕವಾಗಿ ನಡೆದಿಲ್ಲ. ಕೇವಲ ಶೇಕಡ 8ರಷ್ಟು ಮಾತ್ರ ಫಲಿತಾಂಶ ದೊರೆತಿದೆ. ಹೀಗಾಗಿ, ಮುಖ್ಯ ಅತಿಥಿಗಳನ್ನಾಗಿ ರಾಜ್ಯಸಭೆ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ವಿವರಣೆ ಪಡೆಯಬೇಕು’ ಎಂದು ಯುವಕರಿಗೆ ಸಲಹೆ ನೀಡಿದ್ದಾರೆ.

‘ನವದೆಹಲಿಗೆ ಭೇಟಿ ನೀಡುವವರು ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ರಾಷ್ಟ್ರೀಯ ಪೊಲೀಸ್‌ ಸ್ಮಾರಕಕ್ಕೆ ಭೇಟಿ ನೀಡಬೇಕು. ಈ ಸ್ಮಾರಕಗಳಿಂದ ದೇಶ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಲು ಸ್ಫೂರ್ತಿ ದೊರೆಯುತ್ತದೆ’ ಎಂದು ಹೇಳಿದ್ದಾರೆ.

ಅಂಜನಾಕ್ಷಿಗೆ ದ್ವಿತೀಯ ಸ್ಥಾನ: ಯುವ ಸಂಸತ್‌ ಉತ್ಸವದಲ್ಲಿ ಬೆಂಗಳೂರಿನ ಅಂಜನಾಕ್ಷಿ ಎಂ.ಎಸ್‌. ಎರಡನೇ ಬಹುಮಾನ ಪಡೆದರು. ಮೊದಲ ಬಹುಮಾನವನ್ನು ಮಹಾರಾಷ್ಟ್ರದ ಶ್ವೇತಾ ಉಮ್ರೆ ಹಾಗೂ ತೃತೀಯ ಬಹುಮಾನವನ್ನು ಬಿಹಾರದ ಮಮತಾ ಕುಮಾರಿ ಪಡೆದರು.

ಮೊದಲ ಬಹುಮಾನ ಪಡೆದವರಿಗೆ ₹2 ಲಕ್ಷ, ದ್ವಿತೀಯ ಸ್ಥಾನ ಪಡೆದವರಿಗೆ ₹1.5ಲಕ್ಷ ಹಾಗೂ ತೃತೀಯ ಸ್ಥಾನ ಪಡೆದವರಿಗೆ ₹1 ಲಕ್ಷ ಬಹುಮಾನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT