ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನಿಮ್ಮಲ್ಲಿ ದೇವರನ್ನು ಕಂಡೆ' ಎಂದ ಮಹಿಳೆ: ಭಾವುಕರಾದ ಪ್ರಧಾನಿ ಮೋದಿ

Last Updated 7 ಮಾರ್ಚ್ 2020, 20:54 IST
ಅಕ್ಷರ ಗಾತ್ರ

ನವದೆಹಲಿ: ‘ಜನೌಷಧಿ ದಿನ’ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ (ಪಿಎಂಬಿಜೆಪಿ)ದ ಫಲಾನುಭವಿಗಳು ಹಾಗೂ ಕೆಲವು ಜನೌಷಧಿ ಕೇಂದ್ರಗಳ ಮಾಲೀಕರ ಜತೆ ಪ್ರಧಾನಿ ಶನಿವಾರ ಸಂವಹನ ನಡೆಸಿದರು.

ಯೋಜನೆ ಫಲಾನುಭವಿಯಾಗಿರುವ ಡೆಹ್ರಾಡೂನ್‌ ನಿವಾಸಿ ದೀಪಾ ಶಾ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಪ್ರಧಾನಿ ಜತೆ ಮಾತನಾಡಿ, ‘ನಾನು ದೇವರನ್ನು ನೋಡಿಲ್ಲ. ಆದರೆ ನಿಮ್ಮಲ್ಲಿ ದೇವರನ್ನು ಕಂಡಿದ್ದೇನೆ’ ಎಂದು ಕಣ್ಣೀರಿಟ್ಟರು. ಅವರ ಈ ಮಾತಿಗೆ ಪ್ರಧಾನಿ ಭಾವುಕರಾದರು.

‘2011ರಲ್ಲಿ ಪಾರ್ಶ್ವವಾಯುವಿಗೆ ಒಳಗಾದ ನಾನು, ದುಬಾರಿ ಚಿಕಿತ್ಸೆಯಿಂದ ಸಾಕಷ್ಟು ಕಷ್ಟ ಅನುಭವಿಸಿದೆ. ಆದರೆ ಬಳಿಕ ಸರ್ಕಾರದ ಈ ಯೋಜನೆಯಿಂದಾಗಿ ಮಾಸಿಕ ₹ 3,500 ಉಳಿತಾಯ ಮಾಡಲು ಸಾಧ್ಯವಾಗುತ್ತಿದೆ’ ಎಂದು ತಮ್ಮ ಅನುಭವ ಹಂಚಿಕೊಂಡರು.

ಇದರೊಂದಿಗೆ ಮಹಿಳೆಯು ಉತ್ತರಾಖಂಡದ ಮುಖ್ಯಮಂತ್ರಿ ಮತ್ತು ತನಗೆ ಸಹಾಯ ಮಾಡಿದ್ದ ಇತರರಿಗೆ ಧನ್ಯವಾದಗಳನ್ನು ಅರ್ಪಿಸಿದರು. 'ವೈದ್ಯರು ಒಮ್ಮೆ ತನ್ನನ್ನು ಗುಣಪಡಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಆದರೆ ಈ ನಿಮ್ಮ ಧ್ವನಿಯನ್ನು ಕೇಳಿದ ಬಳಿಕ ನಾನು ಸುಧಾರಿಸಿಕೊಂಡಿದ್ದೇನೆ.' ಎಂದು ಔಷಧಿಗಳ ಬೆಲೆ ಕಡಿಮೆ ಮಾಡುವ ಪ್ರಯತ್ನಕ್ಕೆ ಪ್ರಧಾನಮಂತ್ರಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘ನಿಮ್ಮ ಇಚ್ಛಾಶಕ್ತಿಯಿಂದಲೇ ನಿಮ್ಮ ಸಮಸ್ಯೆಯನ್ನು ಸೋಲಿಸಿದ್ದೀರಿ. ನಿಮ್ಮ ಸ್ಥೈರ್ಯವೇ ನಿಮ್ಮ ದೇವರು. ಇಷ್ಟು ದೊಡ್ಡ ಸಮಸ್ಯೆಯಿಂದ ಹೊರಬರಲು ಅದೇ ಕಾರಣ. ಎಂದಿಗೂ ಇದೇ ಸ್ಥೈರ್ಯ ಕಾಪಾಡಿಕೊಳ್ಳಿ’ ಎಂದು ಶಾ ಅವರಿಗೆ ಹೇಳಿದರು.

ಕೆಲವು ಜನರು ಇನ್ನೂ ಜೆನೆರಿಕ್ ಔಷಧಿಗಳ ಬಗ್ಗೆ ವದಂತಿಗಳನ್ನು ಹರಡುತ್ತಿದ್ದಾರೆ. ಔಷಧಿಗಳು ಇಷ್ಟು ಅಗ್ಗವಾಗಿ ಹೇಗೆ ಲಭ್ಯವಾಗಬಹುದು ಮತ್ತು ಔಷಧದಲ್ಲಿ ಏನಾದರೂ ದೋಷವಿರಬೇಕು ಎಂದು ಆಶ್ಚರ್ಯ ಪಡುತ್ತಾರೆ. ಆದರೆ, ನಿಮ್ಮನ್ನು ನೋಡುವ ಮೂಲಕ ಜೆನೆರಿಕ್ ಔಷಧಿಗಳಲ್ಲಿ ಯಾವುದೇ ದೋಷವಿಲ್ಲ ವಿಶ್ವಾಸವನ್ನು ಜನರು ಪಡೆಯುತ್ತಾರೆ. ಈ ಔಷಧಿಗಳನ್ನುಅತ್ಯುತ್ತಮ ಪ್ರಯೋಗಾಲಯಗಳು ಪ್ರಮಾಣೀಕರಿಸಿವೆ. ಈ ಔಷಧಿಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಮತ್ತು ಇದು 'ಮೇಕ್ ಇನ್ ಇಂಡಿಯಾ' ಮತ್ತು ಅಗ್ಗವಾಗಿದೆ ಎಂದು ಸ್ಪಷ್ಟಪಡಿಸಿದರು.

ಭಾರತದ ಜೆನೆರಿಕ್ ಔಷಧಿಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದೆ ಮತ್ತು ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ, ವೈದ್ಯರು ರೋಗಿಗಳಿಗೆ ಜೆನೆರಿಕ್ ಔಷಧಿಗಳನ್ನೇ ಶಿಫಾರಸು ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

ಅರಿವು ಮೂಡಿಸುವ ದಿನ: ‘ಜನೌಷಧಿ ದಿನ ಎಂದರೆ ಕೇವಲ ಯೋಜನೆಯ ಆಚರಣೆ ಅಲ್ಲ. ಈ ಯೋಜನೆಯ ಫಲಾನುಭವಿಗಳಾದ ಕೋಟ್ಯಂತರ ಜನರು ಹಾಗೂ ಲಕ್ಷಾಂತರ ಕುಟುಂಬಗಳ ಜತೆ ಈ ದಿನ ಬೆರೆಯಲು ಅವಕಾಶ ದೊರಕುತ್ತದೆ. ಜತೆಗೆ ದೇಶದ ಕಡುಬಡವರು ಸಹ ಈ ಯೋಜನೆಯ ಲಾಭ ಪಡೆಯಬಹುದು ಎಂದು ಯೋಜನೆ ಕುರಿತು ಅರಿವು ಮೂಡಿಸುವ ದಿನವೂ ಹೌದು’ ಎಂದು ಅವರು ಹೇಳಿದರು.

‘ಕೈಕುಲುಕುವ ಬದಲು, ನಮಸ್ತೆ’
‘ಯಾವುದೋ ಕಾರಣದಿಂದಾಗಿ ‘ನಮಸ್’ತೆ ಮಾಡುವ ಪದ್ಧತಿಯನ್ನು ನಾವು ಕೈಬಿಟ್ಟಿದ್ದಲ್ಲಿ, ಅದನ್ನು ಪುನಃ ಅನುಸರಿಸಲು ಇದು ಉತ್ತಮ ಕಾಲ’ ಎಂದು ಕೋವಿಡ್–19 ಕುರಿತು ಪ್ರಧಾನಿ ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT