ಶನಿವಾರ, ಡಿಸೆಂಬರ್ 14, 2019
25 °C

ಬಿಜೆಪಿ-ಎನ್‌ಸಿಪಿ ಸರ್ಕಾರ ರಚಿಸುವ ಮೋದಿ ಪ್ರಸ್ತಾಪ ನಿರಾಕರಿಸಿದೆ: ಪವಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಹಾಗೂ ಬಿಜೆಪಿ ಒಟ್ಟಾಗಿ ಕೆಲಸ ಮಾಡುವ ಪ್ರಸ್ತಾವವನ್ನು ಪ್ರಧಾನಿ ನರೇಂದ್ರ ಮೋದಿಯವರು ಮುಂದಿಟ್ಟಿದ್ದರು. ಆದರೆ ನಾನೇ ಅವರ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ.

ಮರಾಠಿ ಟಿವಿ ಚಾನಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ರೈತರ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ ಮೋದಿಯವರು ನನಗೆ ಮಹಾರಾಷ್ಟ್ರದಲ್ಲಿ ಒಟ್ಟಾಗಿ ಕೆಲಸ ಮಾಡುವ ಪ್ರಸ್ತಾಪವನ್ನು ಮುಂದಿಟ್ಟರು. ನಮ್ಮ ವೈಯಕ್ತಿಕ ಸಂಬಂಧ ಅತ್ಯಂತ ಉತ್ತಮವಾಗಿದೆ ಮತ್ತು ಅದು ಹಾಗೆಯೇ ಇರಲಿ. ಆದರೆ ಒಟ್ಟಾಗಿ ಕೆಲಸ ಮಾಡುವ ಸಾಧ್ಯತೆ ಇಲ್ಲವೆಂಬುದನ್ನು ಅವರಿಗೆ ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ.

ಮೋದಿ ಸರ್ಕಾರವು ಅವರಿಗೆ ಭಾರತದ ರಾಷ್ಟ್ರಪತಿ ಹುದ್ದೆಯನ್ನು ನೀಡುವುದಾಗಿ ಹೇಳಿದೆ ಎನ್ನುವ ವರದಿಗಳು ಹರಿದಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಂತಹ ಯಾವುದೇ ಆಯ್ಕೆಯನ್ನು ಮೋದಿ ಸರ್ಕಾರ ನನಗೆ ನೀಡಿಲ್ಲ. ಆದರೆ ನನ್ನ ಪುತ್ರಿ ಸುಪ್ರಿಯಾ ಸುಳೆ ಅವರನ್ನು ಕೇಂದ್ರ ಸಚಿವೆಯನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದ್ದರು.

ಯಾವಾಗ ಅಜಿತ್ ಪವಾರ್ ದೇವೇಂದ್ರ ಫಡಣವೀಸ್ ಅವರಿಗೆ ಬೆಂಬಲ ನೀಡಿದ್ದಾರೆ ಎನ್ನುವ ವಿಚಾರ ತಿಳಿಯಿತೋ ಆಗ ನಾನು ಶಿವಸೇನಾದ ಉದ್ಧವ್ ಠಾಕ್ರೆ ಅವರನ್ನು ಸಂಪರ್ಕಿಸಿದೆ. ಈಗ ಏನು ಸಂಭವಿಸಿದೆಯೋ ಅದು ಸರಿಯಲ್ಲ ಮತ್ತು ಈ ಸಮಸ್ಯೆಯನ್ನು ನಾನು ಪರಿಹರಿಸುವುದಾಗಿ ಅವರಿಗೆ ಭರವಸೆ ನೀಡಿದೆ. ನನ್ನ ಬೆಂಬಲವು ಅಜಿತ್ ನಿರ್ಧಾರದ ಪರವಾಗಿ ಇಲ್ಲ ಎಂಬುದನ್ನು ತಿಳಿದಾಗ ಅಜಿತ್ ಪವಾರ್‌ನೊಂದಿಗಿದ್ದ 10 ಶಾಸಕರು ಕೂಡ ಬೆಂಬಲ ಹಿಂಪಡೆಯಲು ತೀರ್ಮಾನಿಸಿದರು ಎಂದು ತಿಳಿಸಿದ್ದಾರೆ.

ಸುಪ್ರಿಯಾ ಸುಳೆ ಶರದ್ ಪವಾರ್ ಅವರ ಪುತ್ರಿ ಮತ್ತು ಪುಣೆ ಜಿಲ್ಲೆಯ ಬಾರಾಮತಿ ಲೋಕಸಭಾ ಕ್ಷೇತ್ರದ ಸಂಸದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬೆಳವಣಿಗೆಗಳ ಬೆನ್ನಲ್ಲೇ ಶರದ್ ಪವಾರ್ ಕಳೆದ ತಿಂಗಳು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಚರ್ಚಿಸಿದ್ದರು.

ಇದನ್ನು ಓದಿ: ಎನ್‌ಸಿಪಿ, ಬಿಜೆಡಿಯಿಂದ ಬಿಜೆಪಿಯೂ ಪಾಠ ಕಲಿಯಬೇಕು: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ

ಇದಾದ ಬೆನ್ನಲ್ಲೇ ರಾಜ್ಯಸಭೆಯ 250ನೇ ಅಧಿವೇಶನದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಬಿಜು ಜನತಾ ದಳದಿಂದ (ಬಿಜೆಡಿ) ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಪಾಠ ಕಲಿಯಬೇಕು ಎಂದು ಹೇಳಿದ್ದರು.

‘ಸದನದಲ್ಲಿ ಸಭಾಧ್ಯಕ್ಷರ ಪೀಠದ ಮುಂದೆ ಬಂದು ಧರಣಿ ನಡೆಸದೇ ಇರುವ ಮೂಲಕವೂ ಜನರ ಹೃದಯಗಳನ್ನು ಗೆಲ್ಲಬಹುದು. ಇಂದು ನಾನು ಎರಡು ಪಕ್ಷಗಳನ್ನು ಶ್ಲಾಘಿಸಲು ಬಯಸುತ್ತೇನೆ, ಅವುಗಳೆಂದರೆ ಎನ್‌ಸಿಪಿ ಮತ್ತು ಬಿಜೆಡಿ. ಈ ಪಕ್ಷಗಳು ಸಂಸದೀಯ ಆದರ್ಶಗಳಿಗೆ ಬದ್ಧವಾಗಿವೆ ಎಂದು ಹೊಗಳಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು