ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಂದರಲ್ಲಿ ಉಗುಳುವುದನ್ನು ನಿಲ್ಲಿಸಿ, ಮಾಸ್ಕ್ ಧರಿಸಿ: ಮೋದಿ ‘ಮನ್ ಕೀ ಬಾತ್’

ಕೊರೊನಾ ವಿರುದ್ಧ ಭಾರತದ ಯುದ್ಧದಲ್ಲಿ ಜನರೇ ಸೈನಿಕರು ಎಂದ ಪ್ರಧಾನಿ
Last Updated 26 ಏಪ್ರಿಲ್ 2020, 6:49 IST
ಅಕ್ಷರ ಗಾತ್ರ

ನವದೆಹಲಿ:ಕೊರೊನಾ ವೈರಸ್ ಸೋಂಕಿನ (ಕೋವಿಡ್–19) ವಿರುದ್ಧ ಇಡೀ ದೇಶವೇ ಒಗ್ಗಟ್ಟಿನಿಂದ ಹೋರಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮನದ ಮಾತು (ಮನ್ ಕೀ ಬಾತ್) ರೇಡಿಯೊ ಕಾರ್ಯಕ್ರಮದ 64ನೇ ಕಂತಿನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಎಲ್ಲರೂ ಮಾಸ್ಕ್ ಧರಿಸಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ನಾವು ಆರೋಗ್ಯವಂತರಾಗಿ ಬದುಕಬೇಕು, ಇತರರನ್ನೂ ಬದುಕಲು ಬಿಡಬೇಕು. ಅದಕ್ಕಾಗಿ ಎಲ್ಲರೂ ಮಾಸ್ಕ್ ಧರಿಸಬೇಕು. ಎಲ್ಲೆಂದರಲ್ಲಿ ಉಗುಳುವುದನ್ನು ನಿಲ್ಲಿಸಬೇಕು’ ಎಂದು ಹೇಳಿದರು.

‘ಕೊರೊನಾ ವಿರುದ್ಧ ಭಾರತದ ಯುದ್ಧದಲ್ಲಿ ಪ್ರತಿಯೊಬ್ಬ ಪ‍್ರಜೆಯೂ ಸೈನಿಕನೇ. ಭಾರತದಲ್ಲಿ ಜನರಿಂದಲೇ ಈ ಹೋರಾಟ ನಡೆಯುತ್ತಿದೆ. ಆಡಳಿತವೂ ಜತೆಗಿದೆ. ಭವಿಷ್ಯದ ಬಗ್ಗೆ ನನಗೆ ಭರವಸೆಯಿದೆ. ಇಡೀ ದೇಶವು ಒಂದೇ ಲಕ್ಷ್ಯ, ಒಂದೇ ಹಾದಿಯಲ್ಲಿ ಜತೆಯಾಗಿ ಸಾಗುತ್ತಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸುತ್ತಿದ್ದಾರೆ. ಕಾನೂನು, ನೀತಿ ರೂಪಿಸುವ ಮತ್ತು ವೈದ್ಯಕೀಯ ಸೌಲಭ್ಯ ಹೆಚ್ಚಿಸುವ ಮೂಲಕಸರ್ಕಾರವೂ ಕೆಲಸ ಮಾಡುತ್ತಿದೆ. ಇಡೀ ದೇಶವೇ ಒಂದು ತಂಡವಾಗಿ ಕೆಲಸ ಮಾಡುತ್ತಿದೆ’ ಎಂದು ಮೋದಿ ಹೇಳಿದರು.

ಕೋವಿಡ್ ವಾರಿಯರ್ಸ್‌ಗಳ ರಕ್ಷಣೆ ನಮ್ಮೆಲ್ಲರ ಹೊಣೆ. ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹಗಲು ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ಗೌರವಿಸಬೇಕಾದ್ದು ಮತ್ತು ರಕ್ಷಿಸಬೇಕಾದ್ದು ನಮ್ಮೆಲ್ಲರ ಹೊಣೆ ಎಂದು ಪ್ರಧಾನಿ ಹೇಳಿದರು.

ರಾಜ್ಯ ಸರ್ಕಾರಗಳನ್ನು ಶ್ಲಾಘಿಸಿದ ಪ್ರಧಾನಿ: ಕೊರೊನಾ ವಿರುದ್ಧ ಎಲ್ಲ ರಾಜ್ಯ ಸರ್ಕಾರಗಳೂ ಉತ್ತಮವಾಗಿ ಕೆಲಸ ಮಾಡುತ್ತಿವೆ. ಕೊರನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರ ಮಹತ್ವದ್ದು. ಅವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಮೋದಿ ಹೇಳಿದರು.

ಕೊರೊನಾ ಟೆಸ್ಟಿಂಗ್‌ ಸಾಮರ್ಥ್ಯ ಹೆಚ್ಚಿಸುವುದು, ವೈದ್ಯಕೀಯ ಸಾಮರ್ಥ್ಯ ಹೆಚ್ಚಿಸುವುದು, ವೈದ್ಯಕೀಯ ಸಿಬ್ಬಂದಿಗೆ ಸೌಕರ್ಯಗಳನ್ನು ಒದಗಿಸುವ ಕೆಲಸಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದೂ ಅವರು ತಿಳಿಸಿದರು.

‘ಭಾರತದ ಆಯುರ್ವೇದ ಮತ್ತು ಯೋಗವನ್ನು ವಿಶ್ವವೇ ಇಂದು ಗಮನಿಸುತ್ತಿದೆ. ರೋಗನಿರೋಧಕ ಶಕ್ತಿ ವೃದ್ಧಿಸುವ ಬಗ್ಗೆ ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ಚರ್ಚೆಯಾಗುತ್ತಿರುವುದನ್ನು ನೀವು ಗಮನಿಸಿರಬಹುದು. ಆಯುಷ್ ಸಚಿವಾಲಯ ನೀಡಿರುವ ಸಲಹೆಗಳನ್ನು ಪಾಲಿಸಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಿ’ ಎಂದು ಪ್ರಧಾನಿ ಸಲಹೆ ನೀಡಿದರು.

ದೇಶದ ಜನತೆಗೆ ಅಕ್ಷಯ ತೃತೀಯ ಮತ್ತು ರಂಜಾನ್‌ ಸಂದರ್ಭದ ಶುಭಾಶಯಗಳನ್ನೂ ಪ್ರಧಾನಿ ತಿಳಿಸಿದರು.

ಕಳೆದ ತಿಂಗಳು 63ನೇ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿಯವರು ಕೊರೊನಾ ವೈರಸ್ ಸೋಂಕಿನ (ಕೋವಿಡ್–19) ಪರಿಣಾಮ ಮತ್ತು ದೇಶದ ಪರಿಸ್ಥಿತಿ ಬಗ್ಗೆಯೇ ಹೆಚ್ಚು ಮಾತನಾಡಿದ್ದರು. ಈ ಬಾರಿಯ ಮನ್‌ ಕಿ ಬಾತ್‌ಗಾಗಿ ಕೆಲವು ಸೂಕ್ಷ್ಮ ವಿಚಾರಗಳನ್ನು ಸಿದ್ಧಪಡಿಸಿರುವುದಾಗಿ ಮೋದಿಯವರು ಶನಿವಾರ ಟ್ವೀಟ್ ಮಾಡಿದ್ದರು. ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮಾರ್ಚ್‌ 24ರಂದು ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿತ್ತು. ಬಳಿಕ ಅದನ್ನು ಮೇ 3ರ ವರೆಗೆ ವಿಸ್ತರಿಸಲಾಗಿದೆ. ಮನ್ ಕಿ ಬಾತ್ ಕಾರ್ಯಕ್ರಮವನ್ನು ಆಕಾಶವಾಣಿಯ ಎಲ್ಲ ಕೇಂದ್ರಗಳಲ್ಲಿ, ದೂರದರ್ಶನ ಮತ್ತು ಅದರ ಜಾಲತಾಣ​, ನ್ಯೂಸ್​​ ಆನ್‌ ಎಐಆರ್​ ಆ್ಯಪ್​​ನಲ್ಲೂ ಕೇಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT