ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘370ನೇ ವಿಧಿ ರದ್ದತಿಗೆ ಪಟೇಲ್‌ ಸ್ಫೂರ್ತಿ’

ಹುಟ್ಟುಹಬ್ಬದ ದಿನ ಕಲ್ಯಾಣ ಕರ್ನಾಟಕ ಉತ್ಸವ ಪ್ರಸ್ತಾಪಿಸಿದ ಪ್ರಧಾನಿ
Last Updated 17 ಸೆಪ್ಟೆಂಬರ್ 2019, 20:23 IST
ಅಕ್ಷರ ಗಾತ್ರ

ಕೆವಡಿಯಾ (ಗುಜರಾತ್‌): ‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ನಿರ್ಧಾರವು ಸರ್ದಾರ್‌ ವಲ್ಲಭಬಾಯಿ ಪಟೇಲರಿಂದ ಸ್ಫೂರ್ತಿ ಪಡೆದಿದ್ದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ಜಮ್ಮು ಮತ್ತು ಕಾಶ್ಮೀರದ್ದು ಹಲವು ದಶಕದ ಸಮಸ್ಯೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗೊಂಡ ಈ ನಿರ್ಧಾರಕ್ಕೆ ಪಟೇಲರೇ ಸ್ಫೂರ್ತಿಯಾಗಿದ್ದಾರೆ. ಮತ್ತು ಸಮಸ್ಯೆ ಬಗೆಹರಿಸುವಲ್ಲಿ ಇದೊಂದು ಹೊಸ ಹೆಜ್ಜೆ’ ಎಂದರು.

‘ಇಂದು ಹೈದರಾಬಾದ್‌ ನಿಜಾಮ ಭಾರತ ಒಕ್ಕೂಟ ವ್ಯವಸ್ಥೆಗೆ ಸೇರಿದ ದಿನವಾಗಿದೆ. ಇದನ್ನು ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚರಿಸಲಾಗುತ್ತಿದೆ. ಇದನ್ನು ಸಾಧ್ಯವಾಗಿಸಿದ್ದು, ಪಟೇಲರ ದೂರದೃಷ್ಟಿ’ ಎಂದು ಶ್ಲಾಘಿಸಿದರು.

ಸರ್ದಾರ್‌ ಸರೋವರ ಜಲಾಶಯವು ಭರ್ತಿ ಆಗಿರುವ ಕಾರಣ ಗುಜರಾತ್‌ ಸರ್ಕಾರವು ‘ನಮಾಮಿ ನರ್ಮದಾ’ ಹಬ್ಬವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡಿದರು. 2016ರಲ್ಲಿ ಜಲಾಶಯದ ಎತ್ತರವನ್ನು 138.86 ಮೀಗೆ ಹೆಚ್ಚಿಸಿನ ಬಳಿಕ ಇದೇ ಮೊದಲ ಬಾರಿಗೆ ಜಲಾಶಯ ಭರ್ತಿಯಾಗಿದೆ.

ಸ್ವಚ್ಛತಾ ದಿನ ಆಚರಣೆ:ಪ್ರಧಾನಿ ಮೋದಿ ಅವರು ಮಂಗಳವಾರದಂದು ತಮ್ಮ 69ನೇ ಹುಟ್ಟು ಹಬ್ಬವನ್ನು ಆಚರಿಸಿ
ಕೊಂಡರು. ಇದರ ಪ್ರಯುಕ್ತ‘ಸ್ವಚ್ಛತಾ ದಿವಸ್‌’ ಕಾರ್ಯಕ್ರಮವನ್ನು ಆಚರಿಸಲಾಯಿತು.

‘ಮೋದಿ ಹುಟ್ಟು ಹಬ್ಬ ಆಚರಣೆಗಾಗಿಯೇ ಅವಧಿಗೂ ಮುನ್ನ ಜಲಾಶಯ ಭರ್ತಿ’

ಭೋಪಾಲ್‌ (ಪಿಟಿಐ): ‘ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ ಆಚರಣೆಗಾಗಿಯೇ ಅವಧಿಗೂ ಮೊದಲೇ ಸರ್ದಾರ್‌ ಸರೋವರ ಜಲಾಶಯ ಮಟ್ಟವನ್ನು ತುಂಬಿಸಲಾಗಿದೆ’ ಎಂದು ಮಧ್ಯಪ್ರದೇಶ ಗೃಹ ಮಂತ್ರಿ ಬಾಲ ಬಚ್ಚನ್‌ ಮಂಗಳವಾರ ದೂರಿದರು.

‘ನರ್ಮದಾ ನಿಯಂತ್ರಣ ಪ್ರಾಧಿಕಾರದ ವೇಳಾಪಟ್ಟಿಯ ಪ್ರಕಾರ ಜಲಾಶಯವು ಅಕ್ಟೋಬರ್‌ ಮಧ್ಯಭಾಗದಲ್ಲಿ ತುಂಬಬೇಕಾಗಿತ್ತು’ ಎಂದು ಹೇಳಿದರು.

‘ಇದರಿಂದ ರಾಜ್ಯದಲ್ಲಿ ಕಾಮಗಾರಿ ಹಂತದಲ್ಲಿರುವ ಪರಿಹಾರ ಮತ್ತು ಪುನರ್ವಸತಿ ಕೆಲಸಕ್ಕೆ ಅಡಚಣೆ ಉಂಟಾಗಿದೆ. ಕಾಮಗಾರಿ ಪ್ರದೇಶಗಳು ಮುಳುಗಡೆಯಾಗಿವೆ’ ಎಂದರು.

‘ಜಲಾಶಯದಿಂದ ಮುಳುಗಡೆಯಾದವರಿಗೆ ಪುನರ್ವಸತಿ ಕಲ್ಪಿಸಲು ಸಹಕಾರ ನೀಡುವುದಾಗಿ ಕೇಂದ್ರ ಹೇಳಿತ್ತು. ಆದರೆ, ಇಲ್ಲಿಯವರೆಗೂ ಈ ಭರವಸೆಯನ್ನು ಪೂರ್ಣಗೊಳಿಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT