ಸೋಮವಾರ, ನವೆಂಬರ್ 18, 2019
25 °C
ಭವಿಷ್ಯದ ಭಾರತಕ್ಕಾಗಿ ಒಂದಾಗಿ ಕೆಲಸ ಮಾಡೋಣ ಎಂದು ಪ್ರಧಾನಿ ಕರೆ

ಅಯೋಧ್ಯೆ ತೀರ್ಪು ನಮ್ಮ ಜವಾಬ್ದಾರಿ ಹೆಚ್ಚಿಸಿದೆ: ಪ್ರಧಾನಿ ಮೋದಿ

Published:
Updated:
ನರೇಂದ್ರ ಮೋದಿ

ನವದೆಹಲಿ: ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಅಯೋಧ್ಯೆ ಪ್ರಕರಣ ಕೊನೆಗೂ ಅಂತ್ಯ ಕಂಡಿದೆ. ಅಯೋಧ್ಯೆ ತೀರ್ಪಿನ ಬಗ್ಗೆ ಇಡೀ ದೇಶ ಕಾತರದಿಂದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ‘ಇಡೀ ದೇಶ ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸಬೇಕೆಂದು ಬಯಸಿತ್ತು. ಅದು ಹಾಗೆಯೇ ನಡೆದು ಇಂದು ತೀರ್ಪು ಪ್ರಕಟವಾಗಿದೆ. ಇದನ್ನು ಎಲ್ಲರೂ ಸ್ವೀಕರಿಸಿದ್ದಾರೆ’ ಎಂದು ಹೇಳಿದರು.

ಇದನ್ನೂ ಓದಿ: ಅಯೋಧ್ಯೆ ತೀರ್ಪು: ವಿವಾದಿತ ಭೂಮಿಯಲ್ಲಿ ರಾಮ ಮಂದಿರ; ಮಸೀದಿಗೆ ಪರ್ಯಾಯ ಜಮೀನು

ದೇಶದ ಪ್ರತಿಯೊಂದು ಸಮುದಾಯ, ವರ್ಗ, ಧರ್ಮದವರು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಇದು ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಸಾಮರಸ್ಯದ ಸಂಪ್ರದಾಯದ ಪ್ರತೀಕವಾಗಿದೆ. ವಿಭಿನ್ನ ಪಥದಲ್ಲಿ ಸಾಗುತ್ತಿದ್ದವರು ಇಂದು ಒಂದಾಗಿದ್ದೇವೆ ಎಂದು ಮೋದಿ ಹೇಳಿದರು.

ಭಾರತದ ಇತಿಹಾಸದಲ್ಲಿ ‘ನವೆಂಬರ್ 9’ ಬಹು ಕಾಲ ನೆನಪಿನಲ್ಲುಳಿಯುವಂತಹ ದಿನ. ಒಂದೆಡೆ ಕರ್ತಾರಪುರ ಕಾರಿಡಾರ್ ಉದ್ಘಾಟನೆಯಾಗಿದೆ. ಮತ್ತೊಂದೆಡೆ ಸುಪ್ರೀಂ ಕೋರ್ಟ್‌ ಅಯೋಧ್ಯೆಗೆ ಸಂಬಂಧಿಸಿದ ತೀರ್ಪು ನೀಡಿದೆ. ಈ ತೀರ್ಪು ಮುಂದಿನ ಪೀಳಿಗೆ ಮೇಲೆ ಪ್ರಭಾವ ಬೀರಲಿದೆ. ಅಯೋಧ್ಯೆ ತೀರ್ಪು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಭವಿಷ್ಯದ ಭಾರತಕ್ಕಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ. ದೇಶ ಕಟ್ಟುವ ಕೆಲಸ ಮಾಡಬೇಕಿದೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: 

ಇದು ಸುಪ್ರೀಂ ಕೋರ್ಟ್‌ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿದೆ. 125 ಕೋಟಿ ಜನ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದ್ದಾರೆ. ದಶಕಗಳಿಂದ ಬಾಕಿ ಇರುವ ಪ್ರಕರಣವನ್ನೂ ಪ್ರತಿದಿನ ವಿಚಾರಣೆ ನಡೆಸಿ ಕೊನೆಗೊಳಿಸಬಹುದು ಎಂಬುದನ್ನು ಸುಪ್ರೀಂ ಕೋರ್ಟ್‌ ತೋರಿಸಿಕೊಟ್ಟಿದೆ. ಅದಕ್ಕಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ನಾವು ಧನ್ಯವಾದ ಹೇಳಬೇಕು. ಅಯೋಧ್ಯೆ ತೀರ್ಪಿನ ಸಂದೇಶವೆಂದರೆ ಶಾಂತಿ ಮತ್ತು ಏಕತೆ ಎಂದು ಮೋದಿ ಹೇಳಿದರು.

ಪ್ರತಿಕ್ರಿಯಿಸಿ (+)