‘ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ’: ನೆಮ್ಮದಿಯಾಗಿರಿ ಎಂದ ಮೋದಿ

7
ಆಯುಷ್ಮಾನ್ ಭಾರತ್ ಉದ್ಘಾಟಿಸಿ ಭಾಷಣ

‘ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ’: ನೆಮ್ಮದಿಯಾಗಿರಿ ಎಂದ ಮೋದಿ

Published:
Updated:

ರಾಂಚಿ: ‘ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಃ’ (ಎಲ್ಲರೂ ಸುಖವಾಗಿರಬೇಕು, ಎಲ್ಲರೂ ನೆಮ್ಮದಿಯಾಗಿರಬೇಕು); ಇದು ನಮ್ಮ ಋಷಿಮುನಿಗಳ ಕನಸು. ಇದನ್ನು ನನಸಾಗಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಇಂದು ದೊಡ್ಡ ಹೆಜ್ಜೆ ಇಟ್ಟಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಸಮಾಜದ ಕೊನೆಯಲ್ಲಿ ನಿಂತಿರುವ ಬಡವರು, ಅತಿಬಡವರಿಗೆ ಉತ್ತಮ ಚಿಕಿತ್ಸೆ ಸಿಗಲಿದೆ. ಇಂದು ಈ ಕನಸು ಸಾಕಾರಗೊಳಿಸುವ ಒಂದು ದೊಡ್ಡ ಹೆಜ್ಜೆ ಬಿರ್ಸಾ ಮುಂಡಾರ ಭೂಮಿಯ ಮೇಲೆ ಇಡುತ್ತಿದ್ದೇವೆ’ ಎಂದು ಹೇಳಿದರು.

ಇಂದು ಇಡೀ ದೇಶದ ಗಮನ ರಾಂಚಿಯ ಮೇಲೆ ನೆಟ್ಟಿದೆ. ದೇಶದ 400ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂಥದ್ದೇ ಕಾರ್ಯಕ್ರಮಗಳು ನಡೆಯುತ್ತಿವೆ. ಅಲ್ಲಿರುವ ಎಲ್ಲರೂ ರಾಂಚಿಯ ಭವ್ಯ ಸಮಾರಂಭ ನೋಡುತ್ತಿದ್ದಾರೆ. ಈ ಕಾರ್ಯಕ್ರಮದ ನಂತರ ಅಲ್ಲೆಲ್ಲರೂ ಮುಂದಿನ ಹೆಜ್ಜೆ ಇಡುತ್ತಾರೆ. ಇಂದು ಎರಡು ಮೆಡಿಕಲ್ ಕಾಲೇಜು ಆರಂಭಿಸುವ ಅಗತ್ಯವಿದೆ. ಸ್ವಾತಂತ್ರ್ಯಾನಂತರ ಮೂರು ಮೆಡಿಕಲ್ ಕಾಲೇಜು ಇತ್ತು. ಕೇವಲ 4 ವರ್ಷಗಳಲ್ಲಿ 8 ಮೆಡಿಕಲ್ ಕಾಲೇಜು ಆರಂಭವಾಗಿದೆ. ಕೆಲಸಗಳು ಹೇಗೆ ಆಗುತ್ತವೆ, ಎಷ್ಟು ವ್ಯಾಪಕವಾಗಿ ನಡೆಯುತ್ತವೆ. ಎಷ್ಟು ವೇಗವಾಗಿ ನಡೆಯುತ್ತದೆ ಎಂಬುದಕ್ಕೆ ಇದಕ್ಕಿಂದ ದೊಡ್ಡ ಉದಾಹರಣೆ ಬೇಕಿಲ್ಲ ಎಂದು ಮೋದಿ ಹೇಳಿದರು.

ಈ ದೇಶದ ದರಿದ್ರ ನಾರಾಯಣ ಸೇವೆಗೆ ಹೆಚ್ಚು ಬೇಕು. ಬಡವರಿಗೆ ಸೇವೆ ಮಾಡಲು ಇದಕ್ಕಿಂತ ದೊಡ್ಡ ಕಾರ್ಯಕ್ರಮ ಇನ್ಯಾವುದೂ ಇರಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.

‘ಆಯುಷ್ಮಾನ್ ಭಾರತ್’ ದೇಶದ 50 ಕೋಟಿಗೂ ಅಧಿಕ ಅಣ್ಣತಂಗಿಯರಿಗೆ ₹5 ಲಕ್ಷವರೆಗೆ ಆರೋಗ್ಯ ಖಾತ್ರಿ ಕೊಡುವ ವಿಶ್ವದ ಅತಿದೊಡ್ಡ ಯೋಜನೆಯಾಗಿದೆ. ಪೂರ್ಣ ವಿಶ್ವದಲ್ಲಿ ಸರ್ಕಾರದ ಹಣದಲ್ಲಿ ಇಷ್ಟು ದೊಡ್ಡ ಯೋಜನೆ ಯಾವುದೇ ದೇಶದಲ್ಲಿ ಜಾರಿಯಾಗಿಲ್ಲ. ಈ ಯೋಜನೆಯ ಒಟ್ಟು ಫಲಾನುಭವಿಗಳ ಸಂಖ್ಯೆ ಪೂರ್ಣ ಐರೋಪ್ಯ ಒಕ್ಕೂಟದಷ್ಟು ದೊಡ್ಡದು ಎಂದು ಮೋದಿ ಹೇಳಿದರು.

ಪೂರ್ಣ ಅಮೆರಿಕ, ಪೂರ್ಣ ಕೆನಡಾ, ಪೂರ್ಣ ಮೆಕ್ಸಿಕೋ– ಈ ಮೂರೂ ದೇಶಗಳ ಜನಸಂಖ್ಯೆ ಸೇರಿಸಿದರೂ ಅದಕ್ಕಿಂತಲೂ ಹೆಚ್ಚು ಜನರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಫಲ ಸಿಗುತ್ತದೆ. ಇದಕ್ಕಾಗಿಯೇ ಆರೋಗ್ಯ ವಿಶ್ವದ ಅತಿದೊಡ್ಡ ಪ್ರಾಮುಖ್ಯತೆ ಪಡೆದಿದೆ. ಭಾರತದಲ್ಲಿ ಒಂದು ಗೇಮ್ ಚೇಂಜರ್ ಯೋಜನೆ ಶುರು ಮಾಡಿದ್ದೇವೆ. ನಮಗೆ ಪೂರ್ಣ ಭರವಸೆ ಇದೆ. ಮುಂಬರುವ ದಿನಗಳಲ್ಲಿ ವಿಶ್ವದಲ್ಲಿ ಮೆಡಿಕಲ್ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು, ಆರೋಗ್ಯ ಮತ್ತು ಆರ್ಥಿಕತೆ, ಆರೋಗ್ಯ ಮತ್ತು ಆಧುನಿಕತೆ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡುವವರು ಭಾರತದ ಆಯುಷ್ಮಾನ್ ಭಾರತ್ ಯೋಜನೆಯನ್ನು ಅಭ್ಯಾಸ ಮಾಡಲೇಬೇಕಾದ ಸ್ಥಿತಿ ಬರುತ್ತದೆ. ಈ ಯೋಜನೆಗೆ ಮೂರ್ತರೂಪ ಕೊಡಲು ಒಂದು ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದೆ. ನಾಲ್ಕು ತಿಂಗಳಲ್ಲಿ ಇಷ್ಟು ದೊಡ್ ಡಯೋಜನೆಯನ್ನು ಕಲ್ಪನೆ ಮಾಡಿಕೊಂಡು, ಸಾಕಾರಗೊಳಿಸುವುದು ದೊಡ್ಡ ಸಾಧನೆ. ಈಗ ಯಾರು ಸರ್ಕಾರದ ಒಳ್ಳೆಯ ಕೆಲಸದ ಬಗ್ಗೆ ಮಾತನಾಡುತ್ತಾರೆ? ಅವರಿಗೆ ಆಗುತ್ತಾ? 13 ಸಾವಿರ ಆಸ್ಪತ್ರೆಗಳನ್ನು ಜೋಡಣೆ ಮಾಡಲಾಗಿದೆ. ನನ್ನ ಇಡೀ ತಂಡಕ್ಕೆ ಈಗ ಸಾರ್ವಜನಿಕವಾಗಿ ಶಹಬ್ಬಾಸ್ ಹೇಳುತ್ತೇನೆ. ಮನಃಪೂರ್ವಕ ಶಹಬ್ಬಾಸ್ ಹೇಳುತ್ತೇನೆ ಎಂದು ಮೋದಿ ಹೇಳಿದರು. 

ಈ ತಂಡವು ಇನ್ನೂ ಹೆಚ್ಚು ಶಕ್ತಿ ಮತ್ತು ಸಮರ್ಪಣಾ ಮನೋಭಾವದೊಂದಿಗೆ ಕೆಲಸ ಮಾಡುತ್ತದೆ. ಇಷ್ಟು ದಿನ ಪ್ರಧಾನಿ ಅವರ ಹಿಂದಿದ್ದರು. ಇನ್ನು ಮುಂದೆ 50 ಕೋಟಿ ಬಡವರ ಆಶೀರ್ವಾದ ಅವರ ಜೊತೆಗಿರುತ್ತೆ. ಹಳ್ಳಿಗಳಲ್ಲಿರುವ ಆಶಾ ಕಾರ್ಯಕರ್ತೆಯರು ಈ ಯೋಜನೆಯ ಅನುಷ್ಠಾನಕ್ಕಾಗಿ ದುಡಿಯುತ್ತಾರೆ. ಬಡವರಿಗೆ ಆರೋಗ್ಯ ಸುರಕ್ಷಾ ಕವಚಕ್ಕಾಗಿ ಯೋಜನೆ ಒಳ್ಳೆಯದಿದೆ. ಉದ್ದೇಶವೂ ಚೆನ್ನಾಗಿದೆ. ಆದರೆ ನಾನು ಆಸ್ಪತ್ರೆ ಉದ್ಘಾಟಿಸಲು ಹೋಗುವಾಗ ನಿಮ್ಮ ಆಸ್ಪತ್ರೆ ನಮಗಾಗಿ ಖಾಲಿ ಇರಲಿ ಅಂತ ಹೇಳ್ತೀನಿ. ನಾನು ಇಂದು ಭಗವಂತನಲ್ಲಿ ಒಂದು ಪ್ರಾರ್ಥನೆ ಮಾಡಿದ್ದೇನೆ. ನನ್ನ ದೇಶದ ಯಾರಿಗೂ ಈ ಯೋಜನೆಯಲ್ಲಿ ಆಸ್ಪತ್ರೆಗೆ ಹೋಗುವ ಅನಾರೋಗ್ಯ ಬರದಿರಲಿ ಅಂತ ಕೇಳ್ತೀನಿ. ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತೇನೆ ಎಂದು ಪ್ರಧಾನಿ ಹೇಳಿದರು.

ಒಂದು ವೇಳೆ ರೋಗ ಬಂದರೆ ಆಯುಷ್ಮಾನ್ ಭಾರತ್ ನಿಮ್ಮ ಕಾಲಿನ ಮೇಲಿದೆ. ರೋಗ ಬಂದರೆ ನಿಮ್ಮ ಆರೋಗ್ಯದ ಸೇವೆ, ಬಡವರಿಗೂ ಸೇವೆ ಸಿಗುವಂತೆ ಆಗುತ್ತದೆ. ಧನಿಕರಿಗೆ ಸಿಗುವ ಎಲ್ಲ ಸೌಲಭ್ಯಗಳು ಸಿಗುತ್ತವೆ. ಈ ಯೋಜನೆ ಇಂದಿನಿಂದ ಆರಂಭವಾಗುತ್ತದೆ. ದೊಡ್ಡ ಯೋಜನೆ. ಪ್ರಾಯೋಗಿಕ ಪರೀಕ್ಷೆ ಆಗಬೇಕು. ಸಾಫ್ಟ್‌ವೇರ್ ಪರೀಕ್ಷೆ ಆಗಬೇಕು. ಹೀಗಾಗಿ ಕೆಲ ಜಿಲ್ಲೆಗಳಲ್ಲಿ ಟ್ರಯಲ್ ನಡೆಯಿತು. ಕೆಲವೇ ತಿಂಗಳಲ್ಲಿ ಆರೋಗ್ಯದ ಅಧಿಕಾರ ಕೊಡುವ ಈ ಅಭಿಯಾನ ಯಶಸ್ವಿಯಾಗುತ್ತದೆ. ಸ್ವಾಸ್ಥ್ಯವನ್ನು ಮತ್ತಷ್ಟು ಸುಧರಿಸುತ್ತದೆ. ಗೆಳೆಯರೇ ಆಯುಷ್ಮಾನ್ ಭಾರತ್‌ ಒಂದು ವಿಶೇಷ ಅವಸರ ಬಂದಿದೆ. ಏಪ್ರಿಲ್‌ನಲ್ಲಿ ಅಂಬೇಡ್ಕರ್ ಜಯಂತಿ ದಿನ ಈ ಪ್ರಸ್ತಾವ ಮಾಡಿದ್ದೆ. ದೀನ್‌ ದಯಾಳ್ ಉಪಾಧ್ಯಯರ ಜಯಂತಿಗೆ ಎರಡು ದಿನ ಮೊದೊಲು ಆರಂಭಿಸಿದ್ದೇನೆ. ಇಂದು ರಾಷ್ಟ್ರಕವಿ ದಿನಕರ ಜಯಂತಿಯೂ ಹೌದು. ಬಡವರ ಬಡತನ ನೀಗಿಸಲು ಹೋರಾಡಿದ ಮಹಾಪುರುಷರನ್ನು ನೆನಪಿಸಿಕೊಂಡು ಈ ಯೋಜನೆ ಸಮರ್ಪಣೆ ಮಾಡುತ್ತಿದ್ದೇನೆ. ಎಲ್ಲರಿಗೂ ಉತ್ತಮ ಚಿಕಿತ್ಸೆ ಸಿಗಲಿ ಎಂಬ ಆಶಯದೊಂದಿಗೆ ಈ ಯೋಜನೆಯನ್ನು ದೇಶಕ್ಕೆ ಸಮರ್ಪಿಸುತ್ತಿದ್ದೇನೆ ಎಂದು ಮೋದಿ ನುಡಿದರು.

ಕುಟುಂಬದಲ್ಲಿ ಯಾರಿಗೇ ರೋಗ ಬಂದರೂ ಎಲ್ಲ ಉಳಿತಾಯದ ಹಣವೂ ಖರ್ಚಾಗಿಬಿಡುತ್ತದೆ. ಆದ್ದರಿಂದಲೇ ಲಕ್ಷಾಂತರ ಮಂದಿ ಬಡತದಿಂದ ಹೊರಗೆ ಬರಲು ಸಾಧ್ಯವಾಗದೆ ತೊಳಲುತ್ತಾರೆ. ಇದರಿಂದ ನಮ್ಮ ದೇಶದ ಕುಟುಂಬಗಳನ್ನು ಹೊರಗೆ ತರಲೆಂದು ನಾವು ಈ ಹೆಜ್ಜೆ ಇರಿಸಿದ್ದೇವೆ ಎಂದೂ ಅವರು ಹೇಳಿದರು.

‘ಗರೀಬಿ ಹಠಾವೋ’ ಘೋಷಣೆ ಮೊಳಗಿಸಿದವರು ಏನು ಮಾಡಿದರು. ಬಡವರ ಸ್ವಾಭಿಮಾನ ಗೌರವಿಸದೆ ಅವರನ್ನು ಕೇವಲ ವೋಟ್‌ಬ್ಯಾಂಕ್ ಆಗಿ ಮಾತ್ರ ಕಂಡರು. ಆದರೆ ನಾನು ಅವರ ಸ್ವಾಭಿಮಾನವನ್ನು ಗೌರವಿಸಿದೆ. ಸ್ಬಾಭಿಮಾನವೇ ಬಡವರಿಗೆ ಬದುಕಲು ಶಕ್ತಿ ಕೊಡುತ್ತದೆ. ಬಡವರ ಕನಸುಗಳನ್ನು ನನಸು ಮಾಡಿಕೊಳ್ಳಲು ಬೆನ್ನತ್ತುವಂತೆ ಮಾಡುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೋಟ್ಯಂತರ ಕುಟುಂಬಗಳು ಬಡತನರೇಖೆಯಿಂದ ಹೊರಗೆ ಬಂದಿವೆ. ಮನೆ, ಅಡುಗೆ ಅನಿಲ ಸಂಪರ್ಕ, ಬ್ಯಾಂಕ್‌ ಖಾತೆಗಳು ಅವರಲ್ಲಿ ಆತ್ಮಗೌರವ, ದುಡಿಯುವ ಕೆಚ್ಚು ಮತ್ತು ಉಳಿತಾಯ ಮನೋಭಾವ ಹೆಚ್ಚಿಸಿವೆ ಎಂದು ನುಡಿದರು.

‘ಏಷ್ಯನ್ ಗೇಮ್ಸ್‌ನಲ್ಲಿ ‍ಚಿನ್ನದ ಪದಕ ತಂದವರು. ದೇಶದ ಹೆಮ್ಮೆಯನ್ನು ಹೊಸ ಎತ್ತರಕ್ಕೇರಿಸಿದವರು ಯಾರು? ಸಣ್ಣಹಳ್ಳಿಗಳಲ್ಲಿ ಬೆಳೆದ ಬಡವರ ಮಕ್ಕಳು ತಮಗೆ ಅವಕಾಶ ಸಿಕ್ಕಾಗ ದೇಶದ ಹೆಸರನ್ನು ಬೆಳಗಿಸಿ ಬಂದರು. ಬಡವರಿಗೆ ಅವಕಾಶ ಕೊಟ್ಟು ಬೆಳೆಸುವುದು ಅಗತ್ಯ. ಹೀಗಾಗಿಯೇ ನಮ್ಮ ಎಲ್ಲ ಯೋಜನೆಗಳು ಬಡವರ ಸಶಕ್ತೀಕರಣಕ್ಕೆ ಯತ್ನಿಸುತ್ತದೆ. ಈ ಹಿಂದೆ ಎಲ್ಲ ಯೋಜನೆಗಳು ವೋಟ್‌ಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದವು. ಯಾವ ಜಾತಿಯಿಂದ ಚುನಾವಣೆಯಲ್ಲಿ ಲಾಭ ಸಿಗುತ್ತದೆಯೋ, ಯಾವ ಇಲಾಖೆಯಿಂದ ಹಣ ಮಾಡಲು ಸಾಧ್ಯವಿದೆಯೋ ಅದಕ್ಕೆ ಮಾತ್ರ ಆದ್ಯತೆ ಸಿಗುತ್ತಿತ್ತು. ರಾಜಕಾರಿಣಿಗಳ ಅನುಕೂಲಕ್ಕಾಗಿ ರೂಪುಗೊಳ್ಳುತ್ತಿದ್ದ ಯೋಜನೆಗಳು ಸರ್ಕಾರದ ಖಜಾನೆ ಲೂಟಿ ಮಾಡುತ್ತಿದ್ದವು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ ಎಂದು ಹೆಸರು ಉಲ್ಲೇಖಿಸದೆ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಆಯುಷ್ಮಾನ್ ಭಾರತ್ ಯೋಜನೆ ಯಾವುದೇ ಒಂದು ಜಾತಿ, ವರ್ಗಕ್ಕೆ ಸೀಮಿತವಾದ ಯೋಜನೆಯಲ್ಲ. ಜಾತಿ, ಸಂಪ್ರದಾಯ, ಆಸ್ತಿಕ, ನಾಸ್ತಿಕ.. ಹೀಗೆ ಯಾವ ಭೇದಭಾವವೂ ಇಲ್ಲದೆ ಎಲ್ಲರಿಗೂ ಆಯುಷ್ಮಾನ್ ಭಾರತದ ಲಾಭ ಸಿಗುತ್ತದೆ.  ಕ್ಯಾನ್ಸರ್, ಸಕ್ಕರೆ ಕಾಯಿಲೆ ಸೇರಿದಂತೆ 1300 ಗಂಭೀರ ಕಾಯಿಲೆಗಳ ಚಿಕಿತ್ಸೆ ದೇಶದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸುಲಭವಾಗಿ ಸಿಗುತ್ತದೆ. ಆಸ್ಪತ್ರೆಗೆ ಸೇರುವ ಮೊದಲಿನ ಖರ್ಚು, ಚಿಕಿತ್ಸಾ ವೆಚ್ಚ, ನಂತರದ ಔಷಧೀಯ ವೆಚ್ಚ ಈ ಯೋಜನೆಯ ಅನ್ವಯ ಭರಿಸಲಾಗುವುದು ಎಂದು ವಿವರಿಸಿದರು.

ಈ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬೇಕಾಗಿಲ್ಲ. ಫಲಾನುಭವಿಗಳಿಗೆ ಕೊಡುವ ಇ–ಕಾರ್ಡ್‌ನಲ್ಲಿಯೇ ಎಲ್ಲ ವಿವರಗಳೂ ಇರುತ್ತವೆ. 145555 ನಂಬರ್‌ಗೆ ಫೋನ್ ಮಾಡಿದರೆ ಎಲ್ಲ ಅಗತ್ಯ ಮಾಹಿತಿ ಸಿಗುತ್ತದೆ. ದೇಶದಾದ್ಯಂತ ಹರಡಿಕೊಂಡಿರುವ 3 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಲ್ಲಿಯೂ ಅಗತ್ಯ ಮಾಹಿತಿ ಸಿಗುತ್ತದೆ. ನಿಮ್ಮ ಗ್ರಾಮದ ಆಶಾ– ಎಎನ್‌ಎಂ ನರ್ಸ್‌, ಸರ್ಕಾರಿ ಆಸ್ಪತ್ರೆಗಳಲ್ಲಿರುವ ಪ್ರಧಾನ ಮಂತ್ರಿ ಆರೋಗ್ಯ ಮಿತ್ರ ನಿಮಗೆ ಸಹಾಯ ಮಾಡುತ್ತಾರೆ. ಈ ಯೋಜನೆಯಡಿ ದೇಶದ ಯಾವುದೆ ರಾಜ್ಯದಲ್ಲಿ ನೀವು ಅನುಕೂಲ ಪಡೆದುಕೊಳ್ಳಬಹುದು. ದೇಶದ ಒಟ್ಟು 13,0000 ಆಸ್ಪತ್ರೆಗಳು ಸಹಯೋಗಕೊಟ್ಟಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಆಸ್ಪತ್ರೆಗಳು ಸಹಯೋಗ ಕೊಡಲಿವೆ ಎಂದರು.

ಬಯಲು ಮಲ ವಿಸರ್ಜನೆ, ಯೋಗ, ವೆಲ್‌ನೆಸ್‌ ಸೆಂಟರ್‌, ಸ್ವಚ್ಛ ಭಾರತ್ ಅಭಿಯಾನಗಳು ದೇಶದ ಆರೋಗ್ಯ ಸುಧಾರಿಸುವ ಉದ್ದೇಶ ಹೊಂದಿವೆ. ಸ್ವಚ್ಛ ಭಾರತ್ ಅಭಿಯಾನದಿಂದ ಲಕ್ಷಾಂತರ ಮಕ್ಕಳ ಆರೋಗ್ಯ ಉಳಿದಿದೆ. ರಾಷ್ಟ್ರೀಯ ಪೋಷಣ್ ಮಿಷನ್‌ನಂಥ ಯೋಜನೆಯ ಮೂಲಕ ಪೌಷ್ಟಿಕಾಂಶ ವೃದ್ಧಿಗೆ ಯತ್ನಿಸುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಸಣ್ಣಪುಟ್ಟ ಪಟ್ಟಣಗಳಲ್ಲಿಯೂ ಉತ್ತಮ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು. ಆರೋಗ್ಯ ಕ್ಷೇತ್ರವೂ ಉದ್ಯೋಗಾವಕಾಶಗಳನ್ನು ತಂದುಕೊಡಲಿದೆ. ವಿಮೆ, ಔಷಧ ತಯಾರಿಕೆ, ಕಾಲ್ ಸೆಂಟರ್, ಆಸ್ಪತ್ರೆ, ಪ್ಯಾರಾ ಮೆಡಿಕಲ್ ಸೇರಿದಂತೆ ವಿವಿಧೆಡೆ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಆರೋಗ್ಯಕ್ಕೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗಳಿಗೂ ಹೆಚ್ಚು ಅವಕಾಶಗಳಿವೆ ಎಂದು ಭವಿಷ್ಯ ನುಡಿದರು.

ಸಣ್ಣ ಪಟ್ಟಣಗಳಲ್ಲಿಯೂ ಆರೋಗ್ಯ ಸೌಕರ್ಯ ಸುಧಾರಿಸಲು ಶ್ರಮಿಸಲಾಗುತ್ತಿದೆ. ಎಲ್ಲ ರಾಜ್ಯಗಳಲ್ಲಿಯೂ ಒಂದು ಏಮ್ಸ್‌ (AIMS) ಶುರು ಮಾಡಲು ಉದ್ದೇಶಿಸಲಾಗಿದೆ. ಪ್ರತಿ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಒಂದು ಮೆಡಿಕಲ್ ಕಾಲೇಜು ಇರುವಂತೆ ಮಾಡುವುದು ನನ್ನ ಕನಸು. ಆರೋಗ್ಯ ಸುಧಾರಣೆಗೆ ಮಾಡುವ ಖರ್ಚು ನಷ್ಟ ಅಲ್ಲ. ನಾಗರಿಕರು ಅಸ್ವಸ್ಥರಾದರೆ ಸಶಕ್ತ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ. ಆರೋಗ್ಯಮಿತ್ರ, ಆಶಾ ಸೇರಿದಂತೆ ಎಲ್ಲರೂ ಸಮರ್ಪಿತ ಭಾವನೆಯಿಂದ ಕೆಲಸ ಮಾಡಿದರೆ ಆಯುಷ್ಮಾನ್ ಭಾರತ ನಿರ್ಮಾಣ ಸುಲಭಸಾಧ್ಯ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !