6
ಕರ್ನಾಟಕದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ದೋಸ್ತಿ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ

ಅವಕಾಶವಾದಿ ಮೈತ್ರಿಯಿಂದ ಅರಾಜಕತೆ

Published:
Updated:
ನರೇಂದ್ರ ಮೋದಿ

ನವದೆಹಲಿ : ಮುಂದಿನ ಲೋಕಸಭಾ ಚುನಾವಣೆಯು ಆಡಳಿತ, ಅಭಿವೃದ್ಧಿ ಮತ್ತು ಅರಾಜಕತೆಯ ನಡುವಣ ಆಯ್ಕೆಯಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟವು ಜನಾದೇಶವನ್ನು ಕಸಿದುಕೊಂಡು ಸರ್ಕಾರ ರಚಿಸಿದೆ. ಅಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

‘ಯಾವ ಚುನಾವಣೆಯಲ್ಲಿಯೇ ಆಗಲಿ, ಸಿದ್ಧಾಂತವಿಲ್ಲದ, ಅವಕಾಶವಾದಿ ಮೈತ್ರಿಕೂಟವು ಅರಾಜಕತೆಯಲ್ಲಿಯೇ ಕೊನೆಯಾಗುತ್ತದೆ ಎಂಬುದು ಖಚಿತ. ಕರ್ನಾಟಕದಲ್ಲಿ ಈಗ ಆಗುತ್ತಿರುವುದು ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದರ ಟ್ರೇಲರ್‌’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಅಭಿವೃದ್ಧಿಗೆ ಸಂಬಂಧಿಸಿದ ಸಮ್ಯಸ್ಯೆಗಳನ್ನು ಪರಿಹರಿಸಲು ಸಚಿವರು ಭೇಟಿಯಾಗಬೇಕು ಎಂಬ ನಿರೀಕ್ಷೆ ಜನರಲ್ಲಿ ಇರುತ್ತದೆ. ಆದರೆ, ಕರ್ನಾಟಕದಲ್ಲಿ ಜಗಳ ಪರಿಹಾರಕ್ಕಾಗಿ ಮಾತ್ರ ಅವರು ಭೇಟಿಯಾಗುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.  ಒಗ್ಗಟ್ಟಿನ ಹಿಂದೆ ಮೋದಿ ದ್ವೇಷ: ‘ಮೋದಿ ದ್ವೇಷವೇ ವಿರೋಧ ಪಕ್ಷಗಳನ್ನು ಒಟ್ಟಾಗಿಸಿರುವ ಅಂಟು’ ಎಂದು ಮೋದಿ ಹೇಳಿದ್ದಾರೆ. ಹಾಗಿದ್ದರೂ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ಏರಿಸಲಿದ್ದಾರೆ ಎಂದು ‘ಸ್ವರಾಜ್ಯ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಹುದ್ದೆಗೇರುವ ಆಕಾಂಕ್ಷೆಯಿಂದ ಪ್ರತಿಸ್ಪರ್ಧಿಗಳು ಒಟ್ಟಾಗಿದ್ದಾರೆ. ಸ್ವಂತ ಅಸ್ತಿತ್ವ ಉಳಿಸಿಕೊಳ್ಳುವುದು ಮತ್ತು ಅಧಿಕಾರ ರಾಜಕಾರಣವೇ ಈ ಒಗ್ಗಟ್ಟಿನ ಹಿಂದಿನ ಚಾಲಕ ಶಕ್ತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  ಮುಖ್ಯ ವಿರೋಧ ಪಕ್ಷವು (ಕಾಂಗ್ರೆಸ್‌) ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟದಲ್ಲಿದೆ. ಸೊಕ್ಕಿನ ವರ್ತನೆಗೆ ಜನರು ಪಾಠ ಕಲಿಸಿದ ಬಳಿಕ ಆ ಪಕ್ಷವು ಮೈತ್ರಿಗಾಗಿ ವಿವಿಧ ಪಕ್ಷಗಳ ಮನೆಬಾಗಿಲಿಗೆ ಅಲೆದಾಡುತ್ತಿದೆ. ಆ ಪಕ್ಷವು ಈಗ ಪ್ರಾದೇಶಿಕ ಪಕ್ಷದಂತಾಗಿದೆ. ತಮ್ಮ ವಿರುದ್ಧ ಎಲ್ಲ ಪಕ್ಷಗಳನ್ನು ಒಗ್ಗೂಡಿಸಲು ಕಾಂಗ್ರೆಸ್‌ಗೆ ಸಾಧ್ಯವಾಗದು ಎಂದು ಮೋದಿ ಹೇಳಿದ್ದಾರೆ. 

ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನು ಮುಂದಿಟ್ಟುಕೊಂಡೇ ಬಿಜೆಪಿ ಚುನಾವಣೆ ಎದುರಿಸಲಿದೆ. ಹಲವು ರಾಜ್ಯಗಳಲ್ಲಿ ಬೆನ್ನು ಬೆನ್ನಿಗೆ ಬಿಜೆಪಿ ಪರವಾಗಿ ಜನಾದೇಶ ಸಿಕ್ಕಿದ್ದು ಚಾರಿತ್ರಿಕ. ಹಾಗಾಗಿಯೇ ಜನರು ನಮ್ಮ ಮೇಲೆ ವಿಶ್ವಾಸ ಇರಿಸುತ್ತಾರೆ ಎಂಬ ನಂಬಿಕೆ ಇದೆ. ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬುದು ಬಿಟ್ಟರೆ ವಿರೋಧ ಪಕ್ಷಗಳಿಗೆ ಬೇರೆ ಕಾರ್ಯಸೂಚಿಯೇ ಇಲ್ಲ ಎಂದು ಮೋದಿ ಟೀಕಿಸಿದರು. 

‘ಎನ್‌ಡಿಎ ಸಂತುಷ್ಟ ಕುಟುಂಬ’: ದೊಡ್ಡ ಮತ್ತು ವೈವಿಧ್ಯಮಯವಾದ ಎನ್‌ಡಿಎ ಮೈತ್ರಿಕೂಟವು ಭಾರತ ಪ್ರಜಾಪ್ರಭುತ್ವಕ್ಕೆ ಬೇಕಾಗಿದೆ. ಪ್ರಾದೇಶಿಕ ಆಶೋತ್ತರಗಳನ್ನು ಗೌರವಿಸುವುದು ಬಹಳ ಮುಖ್ಯ. ಈ ಆಶೋತ್ತರಗಳ ಈಡೇರಿಕೆಗೆ ಎನ್‌ಡಿಎ ಬದ್ಧವಾಗಿದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. 

‘ಎನ್‌ಡಿಎ ಎಂಬುದು 20 ಪಕ್ಷಗಳ ಸಂತುಷ್ಟ ಕುಟುಂಬ. ವಿವಿಧ ರಾಜ್ಯಗಳಲ್ಲಿ ಈ ಮೈತ್ರಿಕೂಟ ಪ್ರಬಲವಾಗಿದೆ. ಬೇರೆ ಯಾವ ಮೈತ್ರಿಕೂಟ ಇಷ್ಟು ಪ್ರಬಲವಾಗಿದೆ? ಎಷ್ಟು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ’ ಎಂದು ಮೋದಿ ಪ್ರಶ್ನಿಸಿದ್ದಾರೆ.  2014ರ ಲೋಕಸಭೆ ಫಲಿತಾಂಶದ ಬಳಿಕ ಬಿಜೆಪಿ ಏಕಾಂಗಿಯಾಗಿಯೇ ಸರ್ಕಾರ ರಚಿಸಬಹುದಿತ್ತು. ಆದರೆ, ಹಾಗೆ ಮಾಡದೆ ಮೈತ್ರಿಕೂಟದ ಪಕ್ಷಗಳನ್ನು ಸರ್ಕಾರಕ್ಕೆ ಸೇರಿಸಿಕೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ. 

‘ಜನರ ಪ್ರೀತಿಗೆ ಸ್ಪಂದಿಸದಿರಲಾಗದು’: 

ಜನರ ಪ್ರೀತಿಗೆ ಸ್ಪಂದನೆಯೇ ಇಲ್ಲದ ಚಕ್ರವರ್ತಿ ಅಥವಾ ಅಧಿಕಾರ ದರ್ಪದ ಆಡಳಿತಗಾರ ತಾನು ಅಲ್ಲ. ಜನರ ಜತೆಗಿನ ಸಂವಹನದಿಂದಲೇ ಶಕ್ತಿ ಪಡೆದುಕೊಳ್ಳುತ್ತೇನೆ ಎಂದು ಮೋದಿ ಹೇಳಿದ್ದಾರೆ.  ತಮ್ಮನ್ನು ಸ್ವಾಗತಿಸಲು ಭಾರಿ ಸಂಖ್ಯೆಯಲ್ಲಿ ಜನರು ಸೇರಿರುವಾಗ ಕಾರಿನಲ್ಲಿಯೇ ಕುಳಿತಿರುವುದು ತಮಗೆ ಸಾಧ್ಯವಿಲ್ಲ ಎಂದೂ ಅವರು ತಿಳಿಸಿದ್ದಾರೆ. 

ಪ್ರಧಾನಿಯ ಭದ್ರತೆಯನ್ನು ಅಭೂತಪೂರ್ವ ಮಟ್ಟಕ್ಕೆ ಏರಿಸಿದ್ದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿಯ ಭದ್ರತೆಗೆ ಹೊಸ ಮಾರ್ಗದರ್ಶಿಸೂತ್ರವನ್ನು ಗೃಹ ಸಚಿವಾಲಯವು ಇತ್ತೀಚೆಗೆ ಸಿದ್ಧಪಡಿಸಿದೆ. 2019ರ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಜೀವಕ್ಕೆ ಅತಿ ಹೆಚ್ಚಿನ ಅಪಾಯ ಇದೆ ಎಂಬ ಕಾತರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !