‘ಸೋರಿಕೆ ತಡೆ ಬಿಜೆಪಿ ಸರ್ಕಾರದ ಸಾಧನೆ’

7
ಭ್ರಷ್ಟಾಚಾರದ ರೋಗ ಗುರುತಿಸಿದ್ದರೂ ಮದ್ದು ಮಾಡದ ಕಾಂಗ್ರೆಸ್‌: ಮೋದಿ ಆರೋಪ

‘ಸೋರಿಕೆ ತಡೆ ಬಿಜೆಪಿ ಸರ್ಕಾರದ ಸಾಧನೆ’

Published:
Updated:
Prajavani

ವಾರಾಣಸಿ: ‘ದೇಶದಲ್ಲಿ ಸುದೀರ್ಘ ಕಾಲ ಅಧಿಕಾರದಲ್ಲಿದ್ದರೂ ಭ್ರಷ್ಟಾಚಾರ ತಡೆಗೆ ಕಾಂಗ್ರೆಸ್‌ ಪಕ್ಷ ಏನನ್ನೂ ಮಾಡಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಇಲ್ಲಿ ನಡೆದಿರುವ ಪ್ರವಾಸಿ ಭಾರತೀಯ ದಿನ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿಯೊಬ್ಬರಿಗೆ ಭ್ರಷ್ಟಾಚಾರದ ಬಗ್ಗೆ ಗೊತ್ತಿದ್ದರೂ ಅದಕ್ಕೆ ಕೊನೆಹಾಡಲು ಮುಂದಾಗಲಿಲ್ಲ. ಆದರೆ, ಶೇ 85ರಷ್ಟು ದೋಚುತ್ತಿದ್ದುದಕ್ಕೆ ನಾಲ್ಕೂವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರ ಅಂತ್ಯ ಹಾಡಿದೆ ಎಂದರು.

ರಾಜೀವ್‌ ಗಾಂಧಿ ಹೆಸರನ್ನು ಪ್ರಸ್ತಾಪಿಸದೇ ಮಾತನಾಡಿದ ಅವರು, ‘ಯೋಜನೆಗೆ ಕೊಡುವ ಒಂದು ರೂಪಾಯಿಯಲ್ಲಿ ಜನರಿಗೆ ಕೇವಲ 15 ಪೈಸೆ ತಲುಪುತ್ತಿದೆ ಎಂದು ಮಾಜಿ ಪ್ರಧಾನಿ ಹೇಳಿದ್ದರು. ಆದರೆ, ಈ ಸೋರಿಕೆ ತಡೆಗಟ್ಟಲು ಕಾಂಗ್ರೆಸ್‌ ಪ್ರಯತ್ನ ಮಾಡಲೇ ಇಲ್ಲ’ ಎಂದು ಆಪಾದಿಸಿದರು.

ವಿವಿಧ ಯೋಜನೆಗಳ ಮೂಲಕ ತಮ್ಮ ಸರ್ಕಾರ ₹5,80,000 ಕೋಟಿ ಅನುದಾನವನ್ನು ಫಲಾನುಭವಿಗಳಿಗೆ ನೇರವಾಗಿ ತಲುಪಿಸಿದೆ ಎಂದು ಪ್ರಧಾನಿ ಹೇಳಿದರು.

ಅನಿವಾಸಿ ಭಾರತೀಯರು ಭಾರತದ ರಾಯಭಾರಿಗಳು. ಅವರು ದೇಶದ ಸಾಮರ್ಥ್ಯದ ಸಂಕೇತವಾಗಿದ್ದಾರೆ ಎಂದು ಮೋದಿ ಬಣ್ಣಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೊಡುಗೆಗೆ ಮಾನ್ಯತೆ ಸಿಕ್ಕಿದೆ ಎಂದರು.

‘ಹಲವು ವರ್ಷಗಳಿಂದ ದೇಶವನ್ನು ಆಳಿದ ಪಕ್ಷವು ದೇಶಕ್ಕೆ ಒಂದು ವ್ಯವಸ್ಥೆಯನ್ನು ನೀಡಿದೆ. ಅಂದಿನ ಪ್ರಧಾನಿ ಭ್ರಷ್ಟಾಚಾರದ ರೋಗ ಗುರುತಿಸಿದ್ದರು. ಆದರೆ, ಮುಂದಿನ 10ರಿಂದ 15 ವರ್ಷಗಳವರೆಗೆ ಆಡಳಿತ ನಡೆಸಿದ ಸರ್ಕಾರಗಳು ಅದಕ್ಕೆ ಮದ್ದು ಮಾಡಲು ಯಾವುದೇ ಪ್ರಯತ್ನ ಮಾಡಲಿಲ್ಲ’ ಎಂದು ಆರೋಪಿಸಿದರು. 

‘ದೇಶದ ಮಧ್ಯಮ ವರ್ಗದ ಜನರು ಪ್ರಾಮಾಣಿಕವಾಗಿ ತೆರಿಗೆ ಭರಿಸುತ್ತ ಸಾಗಿದರೆ, ಇತ್ತ ಶೇ 85ರಷ್ಟು ಅನುದಾನ ದೋಚುವುದು ಮುಂದುವರಿದಿತ್ತು. ಇದಕ್ಕೆ ಕೊನೆ ಹಾಡಬೇಕು ಎಂಬ ಉದ್ದೇಶದಿಂದಲೇ ತಂತ್ರಜ್ಞಾನದ ಮೂಲಕ ಫಲಾನುಭವಿಗಳಿಗೆ ನೇರವಾಗಿ ಯೋಜನೆಯ ಲಾಭ ದೊರಕುವಂತೆ ಮಾಡಿ, ಈ ವ್ಯವಸ್ಥೆಗೆ ತಿಲಾಂಜಲಿ ಇಡಲಾಗಿದೆ’ ಎಂದು ಹೇಳಿದರು.

‘ಹಳೆಯ ವ್ಯವಸ್ಥೆಯೇ ಮುಂದುವರಿದಿದ್ದರೆ, ನಮ್ಮ ಸರ್ಕಾರ ವಿವಿಧ ಯೋಜನೆಗಳಿಗೆ ನೀಡಿದ ₹5,80,000 ಕೋಟಿ ಅನುದಾನದಲ್ಲಿ ₹4,50,000 ಕೋಟಿ ಸೋರಿಕೆಯಾಗುತ್ತಿತ್ತು. ಅದಕ್ಕಾಗಿಯೇ ನಾವು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಇಂಥ ವ್ಯವಸ್ಥೆಯನ್ನು ಈ ಮೊದಲೇ ತರಲು ಹಿಂದಿನ ಸರ್ಕಾರಕ್ಕೆ ಉದ್ದೇಶ ಹಾಗೂ ಮನಸ್ಸು ಇರಲಿಲ್ಲ’ ಎಂದು ಮೋದಿ ಆಪಾದಿಸಿದರು.

ಮಾರಿಷಸ್‌ ಪ್ರಧಾನಿ ಪ್ರವೀಂದ್‌ ಜುಗ್ನೌತ್‌ ಅವರು, ‘ಮುಂದಿನ ತಿಂಗಳು ಭಗವದ್ಗೀತಾ ಮಹೋತ್ಸವ ಮತ್ತು ಮುಂದಿನ ವರ್ಷ ಭೋಜಪುರಿ ಉತ್ಸವವನ್ನು ಮಾರಿಷಸ್‌ನಲ್ಲಿ ಆಯೋಜಿಸಿದ್ದೇವೆ’ ಎಂದು ತಿಳಿಸಿದರು. 

ಪ್ರತಿನಿಧಿಗಳಿಗೆ ಕುಂಭಮೇಳದಲ್ಲಿ ಭಾಗವಹಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಜನವರಿ 9 ರಿಂದ ನಡೆಯಬೇಕಿದ್ದ ಪ್ರವಾಸಿ ಭಾರತೀಯ ದಿನ ಕಾರ್ಯಕ್ರಮವನ್ನು 21ರಿಂದ 23ರ ವರೆಗೆ ಆಯೋಜಿಸಲಾಗಿದೆ. 

7 ಕೋಟಿ ನಕಲಿ ಹೆಸರು’

‘ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ದೇಶದಲ್ಲಿ 7 ಕೊಟಿ ನಕಲಿ ಹೆಸರುಗಳು ದಾಖಲೆಯಲ್ಲಿರುವು
ದನ್ನು ಗುರುತಿಸಲಾಗಿದೆ. ಬ್ರಿಟನ್‌, ಫ್ರಾನ್ಸ್‌, ಇಟಲಿ ಮುಂತಾದ ದೇಶಗಳ ಜನಸಂಖ್ಯೆಗಿಂತಲೂ ಇದು ಹೆಚ್ಚು. ಇಂಥ ಜನರನ್ನೂ ನಾವು ಹೊಂದಿದ್ದೇವೆ’ ಎಂದು ನರೇಂದ್ರ ಮೋದಿ ಹೇಳಿದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !