ರಫೇಲ್‌ ವಿಚಾರಣೆಯಿಂದ ಮೋದಿ ಬಚಾವಾಗುವುದು ಅಸಾಧ್ಯ: ರಾಹುಲ್‌

7

ರಫೇಲ್‌ ವಿಚಾರಣೆಯಿಂದ ಮೋದಿ ಬಚಾವಾಗುವುದು ಅಸಾಧ್ಯ: ರಾಹುಲ್‌

Published:
Updated:

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಎಸಗಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಈ ಹಗರಣದ ಬಗ್ಗೆ ತನಿಖೆ ನಡೆದರೆ ಮೋದಿ ಅವರು ಬಚಾವಾಗಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. 

ನಾಗಪುರದಲ್ಲಿ ಜಮೀನು ಖರೀದಿಗೆ ಉದ್ಯಮಿ ಅನಿಲ್‌ ಅಂಬಾನಿ ಅವರಿಗೆ ಡಾಸೋ ಏವಿಯೇಷನ್‌ ಸಂಸ್ಥೆಯು ₹284 ಕೋಟಿ ಕೊಟ್ಟಿದೆ. ಇದು ಲಂಚದ ಮೊದಲ ಕಂತು. ನಾಗಪುರದಲ್ಲಿ ಜಮೀನು ಇದೆ ಎಂಬುದೇ ರಫೇಲ್‌ ಒಪ್ಪಂದದಲ್ಲಿ ರಿಲಯನ್ಸ್‌ ಡಿಫೆನ್ಸ್ ಸಂಸ್ಥೆಯನ್ನು ದೇಶೀ ಪಾಲುದಾರ ಸಂಸ್ಥೆಯಾಗಿ ಆಯ್ಕೆ ಮಾಡಲು ಕಾರಣ ಎಂದು ನಂತರ ಹೇಳಲಾಯಿತು ಎಂದು ರಾಹುಲ್‌ ಹೇಳಿದ್ದಾರೆ. 

‘ಈ ಜಮೀನಿಗೆ ಅನಿಲ್‌ ಅಂಬಾನಿ ಹಣ ಕೊಟ್ಟಿಲ್ಲ, ಬದಲಿಗೆ ಡಾಸೋ ಕಂಪನಿಯೇ ಹಣ ನೀಡಿದೆ. ಸಿಬಿಐ ಮುಖ್ಯಸ್ಥರು ಈ ಪ್ರಕರಣದ ಪರಿಶೀಲನೆ ನಡೆಸುತ್ತಿದ್ದರು. ಹಾಗಾಗಿಯೇ ಅವರನ್ನು ಆ ಸ್ಥಾನದಿಂದ ಕದಲಿಸಲಾಗಿದೆ’ ಎಂದು ಅವರು ಆಪಾದಿಸಿದರು. ರಿಲಯನ್ಸ್‌ ಎಡಿಎಜಿ ಸಂಸ್ಥೆಗೆ ಡಾಸೋ ಕಂಪನಿಯಿಂದ ಸುಮಾರು ₹284 ಕೋಟಿ ಪಾವತಿಯಾಗಿದೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಅವರು ಮಾತನಾಡಿದರು. 

ನಾಗಪುರ ವಿಮಾನ ನಿಲ್ದಾಣಕ್ಕೆ ತಾಗಿಕೊಂಡು ರಿಲಯನ್ಸ್‌ ಡಿಫೆನ್ಸ್‌ ಸಂಸ್ಥೆಯು ಜಮೀನು ಹೊಂದಿದೆ ಎಂಬುದೇ ದೇಶೀ ಪಾಲುದಾರನಾಗಿ ಈ ಸಂಸ್ಥೆಯನ್ನು ಆಯ್ಕೆ ಮಾಡಲು ಕಾರಣ ಎಂದು ಡಾಸೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಎರಿಕ್‌ ಟ್ರಾಪಿಯರ್‌ ಸಂದರ್ಶನವೊಂದರಲ್ಲಿ ಇತ್ತೀಚೆಗೆ ಹೇಳಿದ್ದರು.

‘ಡಾಸೋ ಸಿಇಒ ಸುಳ್ಳು ಹೇಳುತ್ತಿದ್ದಾರೆ. ಅವರು ಈ ದೇಶದ ಚುಕ್ಕಾಣಿ ಹಿಡಿದಿರುವ ವ್ಯಕ್ತಿಯನ್ನು ರಕ್ಷಿಸುತ್ತಿದ್ದಾರೆ. ಈ ವಿಚಾರದಲ್ಲಿ ತನಿಖೆ ನಡೆದರೆ ಮೋದಿ ಅವರು ಬಚಾವಾಗುವುದಿಲ್ಲ. ಅದು ಖಚಿತ. ಮೊದಲನೆಯದಾಗಿ, ಅದಕ್ಕೆ ಕಾರಣ ಭ್ರಷ್ಟಾಚಾರ. ಎರಡನೆಯದಾಗಿ, ನಿರ್ಧಾರ ಕೈಗೊಳ್ಳುವವರು ಯಾರು ಎಂಬುದು ಬಹಳ ಸ್ಪಷ್ಟ. ಅದು ನರೇಂದ್ರ ಮೋದಿ. ಅನಿಲ್‌ ಅಂಬಾನಿಗೆ ₹30 ಸಾವಿರ ಕೋಟಿ ನೀಡುವುದಕ್ಕಾಗಿಯೇ ಮೋದಿ ಅವರು ಈ ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದು ರಾಹುಲ್‌ ಪುನರುಚ್ಚರಿಸಿದ್ದಾರೆ. 

ರಫೇಲ್‌ ಒಪ್ಪಂದ ಎಂಬುದು ಇಬ್ಬರು ವ್ಯಕ್ತಿಗಳ ನಡುವಣ ಒಪ್ಪಂದ. ಈ ಒಪ್ಪಂದದ ಬಗ್ಗೆ ಆಗ ರಕ್ಷಣಾ ಸಚಿವರಾಗಿದ್ದ ಮನೋಹರ ಪರ್‍ರೀಕರ್‌ ಅವರಿಗೇ ತಿಳಿದಿರಲಿಲ್ಲ. ಪ್ರಧಾನಿಯವರು ಫ್ರಾನ್ಸ್‌ನಿಂದ ಮರಳಿದ ಬಳಿಕವಷ್ಟೇ ಭದ್ರತೆಯ ಬಗೆಗಿನ ಸಂಪುಟ ಸಮಿತಿ ಈ ಒಪ್ಪಂದಕ್ಕೆ ಅನುಮತಿ ಕೊಟ್ಟಿತು ಎಂದು ರಾಹುಲ್‌ ಟೀಕಿಸಿದ್ದಾರೆ. 

ಕಾಂಗ್ರೆಸ್‌ ಸುಳ್ಳು ಹೇಳುತ್ತಿದೆ: ರಿಲಯನ್ಸ್‌ 

ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ವಾಸ್ತವಾಂಶಗಳನ್ನು ಕಾಂಗ್ರೆಸ್‌ ಪಕ್ಷವು ತಿರುಚುತ್ತಿದೆ. ರಾಜಕೀಯ ಲಾಭಕ್ಕಾಗಿ ಅನಗತ್ಯ ಅಭಿಯಾನವೊಂದನ್ನು ನಡೆಸಲು ಯತ್ನಿಸುತ್ತಿದೆ ಎಂದು ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಗ್ರೂಪ್‌ ಹೇಳಿದೆ. ರಿಲಯನ್ಸ್‌ ಕಂಪನಿ ಮತ್ತು ಅದರ ಮುಖ್ಯಸ್ಥ ಅನಿಲ್‌ ಅಂಬಾನಿ ಅವರನ್ನು ರಾಜಕೀಯ ಸಂಘರ್ಷದ ನಡುವೆ ಅನಗತ್ಯವಾಗಿ ಎಳೆದು ತರಲಾಗುತ್ತಿದೆ ಎಂದು ಸಂಸ್ಥೆಯು ಅಸಮಾಧಾನ ವ್ಯಕ್ತಪಡಿಸಿದೆ. 

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !