ಗುರುವಾರ , ಜೂನ್ 4, 2020
27 °C

ಪ್ರಧಾನಿ ಮೋದಿ ದೀಪದ ಸವಾಲಿಗೆ ಪ್ರತಿಪಕ್ಷ, ನೆಟ್ಟಿಗರ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೀಪ ಹಚ್ಚುವ ಮೂಲಕ ಕೊರೊನಾಗೆ ಸವಾಲು ಎಸೆಯೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

‘ಇದೇ ಭಾನುವಾರ, ಏಪ್ರಿಲ್ 5ರಂದು ಕೊರೊನಾವೈರಸ್‌ನ ಅಂಧಕಾರಕ್ಕೆ ಎಲ್ಲರೂ ಒಗ್ಗಟ್ಟಾಗಿ ಸವಾಲು ಎಸೆಯೋಣ. ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ನೀವೆಲ್ಲರೂ ನನಗಾಗಿ 9 ನಿಮಿಷ ನೀಡಿ. ರಾತ್ರಿ 9 ಗಂಟೆಗೆ ನಿಮ್ಮ ಮನೆಯ ಎಲ್ಲಾ ಲೈಟ್‌ಗಳನ್ನು ಆರಿಸಿ. ನಿಮ್ಮ ಮನೆಯ ಬಾಗಿಲು ಅಥವಾ ಬಾಲ್ಕನಿಗಳಲ್ಲಿ ನಿಂತು ದೀಪ, ಮೊಂಬತ್ತಿ, ಟಾರ್ಚ್‌, ಮೊಬೈಲ್‌ನ ಫ್ಲಾಶ್‌ಲೈಟ್‌ ಅನ್ನು ಬೆಳಗಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.

ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಅವರು ಟ್ವೀಟ್‌ ಮಾಡಿದ ವಿಡಿಯೊ ಸಂದೇಶದಲ್ಲಿ ಇದ್ದ ಮಾಹಿತಿ ಇದು.

‘ಕೊರೊನಾ ವೈರಸ್‌ನ ಹಾವಳಿಯಲ್ಲಿ ಉಂಟಾಗಿರುವ ಅಂಧಕಾರಕ್ಕೆ, ಬೆಳಕಿನ ಶಕ್ತಿಯನ್ನು ಪರಿಚಯಿಸಬೇಕಿದೆ. ಇದಕ್ಕಾಗಿ ಎಲ್ಲರೂ 9 ನಿಮಿಷ ದೀಪ ಬೆಳಗಿ’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಇದನ್ನು ವಿರೋಧ ಪಕ್ಷಗಳು ಟೀಕಿಸಿವೆ. ಮೋದಿಯ ಕರೆಗೆ ನೆಟ್ಟಿಗರ ವಲಯದಿಂದಲೂ ಟೀಕೆ ವ್ಯಕ್ತವಾಗಿದೆ. ‘ಸಮಸ್ಯೆಯನ್ನು ಬಗೆ ಹರಿಸುವ ನಿಜವಾದ ಉಪಾಯಗಳ ಬಗ್ಗೆ ಮಾತನಾಡಿ’ ಎಂಬ ಸಲಹೆಗಳು ಟ್ವಿಟರ್‌, ಫೇಸ್‌ಬುಕ್‌ನಲ್ಲಿ ವ್ಯಕ್ತವಾಗಿವೆ.

‘ಮಾರ್ಚ್‌ 22ರಂದು ಮೋದಿ ಅವರು, ಬಾಲ್ಕನಿಗೆ ಬಂದು ಚಪ್ಪಾಳೆ ತಟ್ಟಲು ಹೇಳಿದ್ದರು, ಜನ ರಸ್ತೆಗೆ ಇಳಿದು ಜಾಗಟೆ ಬಾರಿಸಿದ್ದರು. ಈಗ ದೀಪ ಹಚ್ಚಲು ಹೇಳಿದ್ದಾರೆ, ಜನ ತಮ್ಮ ಮನೆಗಳಿಗೆ ಎಲ್ಲಿ ಬೆಂಕಿ ಹಚ್ಚಿಕೊಳ್ಳುತ್ತಾರೋ’ ಎಂಬ ಲೇವಡಿಯೂ ವ್ಯಕ್ತವಾಗಿದೆ.

ಮೋದಿ ಅವರ ಕರೆಯನ್ನು ಬಿಜೆಪಿ ನಾಯಕರು ಮತ್ತು ಹಲವು ಗಣ್ಯರು ಸ್ವಾಗತಿಸಿದ್ದಾರೆ.

ದೇಶದ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಪ್ರಧಾನಿಯವರ ಈ ವಿಶಿಷ್ಟ ಕ್ರಮವನ್ನು ನಾನು ಸ್ವಾಗತಿಸುತ್ತೇನೆ ಎಂದು ಕೇಂದ್ರ ಸಚಿವ
ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿಯವರ ಈ ಸಂದೇಶವನ್ನು ಬಿಜೆಪಿ ಕಾರ್ಯಕರ್ತರೆಲ್ಲರೂ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ನೀಡಿದ್ದಾರೆ.

ಬಾಲಿವುಡ್ ನಟರಾದ ಅರ್ಜುನ್ ಕಪೂರ್, ಭೂಮಿ ಪೆಡ್ನೆಕರ್ ಮತ್ತು ಹಿರಿಯ ನಟಿ ಹೇಮಾ ಮಾಲಿನಿ ಅವರು, ಮೋದಿ ಅವರ ಈ
ಕರೆಯನ್ನು ಸ್ವಾಗತಿಸಿದ್ದಾರೆ. ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶಿಸುವ ಅವಕಾಶ ದೊರೆತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

**

ವಾಸ್ತವಕ್ಕೆ ಬನ್ನಿ ಮಿಸ್ಟರ್‌ ಮೋದಿ! ಭಾರತಕ್ಕೆ ಜಿಡಿಪಿಯ ಶೇ8–10ರಷ್ಟು ಆರ್ಥಿಕ ಪ್ಯಾಕೇಜ್ ಘೋಷಿಸಿ. ಲಾಕ್‌ಡೌನ್‌ ಅವಧಿಯಲ್ಲಿ ನಿರ್ಮಾಣ ಮತ್ತು ಇತರ ಕಾರ್ಮಿಕರಿಗೆ ತಕ್ಷಣವೇ ವೇತನ ದೊರೆಯುವಂತೆ ಮಾಡಿ. ಸುಳ್ಳುಸುದ್ದಿಗಳನ್ನು ನಿಯಂತ್ರಿಸುವ ನೆಪದಲ್ಲಿ, ನೈಜ ಮಾಧ್ಯಮಗಳನ್ನು ಹತ್ತಿಕ್ಕುವುದನ್ನು ನಿಲ್ಲಿಸಿ.
–ಮಹುಆ ಮೌಯಿತ್ರಾ, ಟಿಎಂಸಿ ಸಂಸದೆ

**

ಡಿಯರ್ ನರೇಂದ್ರ ಮೋದಿ, ನಾವು ನಿಮ್ಮ ಮಾತು ಕೇಳುತ್ತೇವೆ ಮತ್ತು ಏ್ರಪ್ರಿಲ್ 5ರಂದು ದೀಪ ಬೆಳಗಿಸುತ್ತೇವೆ. ಅದಕ್ಕೆ ಪ್ರತಿಯಾಗಿ ನೀವು, ದಯವಿಟ್ಟು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳಿ. ಆರ್ಥಿಕ ತಜ್ಞರು ಮತ್ತು ಸೋಂಕುರೋಗತಜ್ಞರು ಏನು ಹೇಳುತ್ತಾರೆ ಎಂಬುದನ್ನು ಕೇಳಿಸಿಕೊಳ್ಳಿ.
–ಪಿ.ಚಿದಂಬರಂ, ಕಾಂಗ್ರೆಸ್ ಸಂಸದ ಮತ್ತು ಮಾಜಿ ಹಣಕಾಸು ಸಚಿವ

**
ಪ್ರಧಾನ ಷೋಮ್ಯಾನ್‌ನ ಮಾತು ಕೇಳಿಸಿಕೊಂಡು. ಜನರ ನೋವು, ಅವರ ಹೊರೆ, ಅವರ ಆರ್ಥಿಕ ಸಂಕಷ್ಟಗಳನ್ನು ಹೋಗಲಾಡಿಸುವ ಬಗ್ಗೆ ಒಂದು ಮಾತೂ ಇಲ್ಲ. ಭವಿಷ್ಯದ ಬಗ್ಗೆ ಯಾವುದೇ ಧ್ಯೇಯವಿಲ್ಲ. ಲಾಕ್‌ಡೌನ್‌ ಮುಗಿದ ನಂತರ ಏನು ಎಂಬುದರ ಬಗ್ಗೆಯೂ ಏನೂ ಹೇಳಲಿಲ್ಲ. ಈ ಮಾತು ಭಾರತದ ಫೋಟೊಪ್ರಿಯ ಪ್ರಧಾನ ಮಂತ್ರಿ ಸೃಷ್ಟಿಸಿದ ಒಂದು ಅದ್ಭುತಅನುಭವ.
–ಶಶಿ ತರೂರ್, ಕಾಂಗ್ರೆಸ್ ಸಂಸದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು