₹637 ಕೋಟಿಯ ನೀರವ್‌ ಆಸ್ತಿ ಮುಟ್ಟುಗೋಲು

7
ಜಾರಿ ನಿರ್ದೇಶನಾಲಯದ ಕುಣಿಕೆ ಮತ್ತಷ್ಟು ಬಿಗಿ

₹637 ಕೋಟಿಯ ನೀರವ್‌ ಆಸ್ತಿ ಮುಟ್ಟುಗೋಲು

Published:
Updated:
Deccan Herald

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿದ ಆರೋಪ ಹೊತ್ತು ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಮತ್ತು ಅವರ ಕುಟುಂಬಕ್ಕೆ ಸೇರಿದ ₹637 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

ನ್ಯೂಯಾರ್ಕ್‌, ಲಂಡನ್‌ ಮತ್ತು ಮುಂಬೈನಲ್ಲಿರುವ ಅಪಾರ್ಟ್‌ಮೆಂಟ್‌, ವಿದೇಶಗಳಲ್ಲಿರುವ ಬ್ಯಾಂಕ್‌ ಖಾತೆಗಳು, ಸಿಂಗಪುರದಿಂದ ಖರೀದಿಸಲಾಗಿದ್ದ ₹22.69 ಕೋಟಿ ಬೆಲೆಬಾಳುವ ವಜ್ರದ ಆಭರಣಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಇ.ಡಿ ಸೋಮವಾರ ತಿಳಿಸಿದೆ.

ಸಿಬಿಐ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಈ ವಜ್ರಾಭರಣಗಳನ್ನು ಭಾರತದಿಂದ ಹಾಂಕಾಂಗ್‌ಗೆ ರವಾನಿಸಿ, ಅಲ್ಲಿಯ ಖಾಸಗಿ ಕಂಪನಿ ಲಾಕರ್‌ನಲ್ಲಿ ಇಡಲಾಗಿತ್ತು. ಅಲ್ಲಿಂದ ಈ ವಜ್ರಾಭರಣಗಳನ್ನು ತರಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರೊಂದಿಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಜಾರಿ ನಿರ್ದೇಶನಾಲಯ ಇದುವರೆಗೆ ನೀರವ್‌ ಮೋದಿ ಮತ್ತು ಅವರ ಕುಟುಂಬಕ್ಕೆ ಸೇರಿದ ₹700 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಂತಾಗಿದೆ.

ಇ.ಡಿ ಅಧಿಕಾರಿಗಳು ಈ ಸಂಬಂಧ ಇಲ್ಲಿಯವರೆಗೆ ಐದು ನೋಟಿಸ್‌ ಹೊರಡಿಸಿದ್ದರು. ವಿದೇಶಗಳಲ್ಲಿರುವ ಸ್ಥಿರಾಸ್ತಿ ಮತ್ತು ಬ್ಯಾಂಕ್‌ ಖಾತೆ ಮುಟ್ಟುಗೋಲಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಲವು ತಿಂಗಳಿಂದ ಆಡಳಿತಾತ್ಮಕ ಮತ್ತು ಕಾನೂನು ಸಿದ್ಧತೆಯಲ್ಲಿ ತೊಡಗಿದ್ದರು.  

ಮುಟ್ಟುಗೋಲು ಆಸ್ತಿಯ ವಿವರ

* ವಜ್ರಾಭರಣ ಉದ್ಯಮಿಗಳಾದ ನೀರವ್‌ ಮೋದಿ ಮತ್ತು ಸಂಬಂಧಿ ಮೆಹುಲ್‌ ಚೋಕ್ಸಿ ಜಂಟಿಯಾಗಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚಿಸಿದ ಹಣ ₹13,000 ಕೋಟಿ

* ನ್ಯೂಯಾರ್ಕ್‌ನ ಪ್ರತಿಷ್ಠಿತ ಸೆಂಟ್ರಲ್‌ ಪಾರ್ಕ್‌ ಪ್ರದೇಶದಲ್ಲಿ ನೀರವ್‌ ಮೋದಿ ಹೆಸರಿನಲ್ಲಿರುವ ₹216 ಕೋಟಿ ಬೆಲೆಬಾಳುವ ಎರಡು ಅಪಾರ್ಟ್‌ಮೆಂಟ್‌

* ಲಂಡನ್‌ನ ಮೆರಿಲ್‌ ಬೋನ್‌ ರಸ್ತೆಯಲ್ಲಿ ನೀರವ್‌ ಸಹೋದರಿ ಪೂರ್ವಿ ಹೆಸರಿನಲ್ಲಿರುವ ₹56.97 ಕೋಟಿ ಬೆಲೆಬಾಳುವ ಫ್ಲ್ಯಾಟ್‌

* ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌ ಮೂಲದ ಹೂಡಿಕೆ ಕಂಪನಿ ಹೆಸರಿನಲ್ಲಿ ಸಿಂಗಪುರ ಬ್ಯಾಂಕ್‌ ಖಾತೆಯಲ್ಲಿ ಠೇವಣಿ ಮಾಡಲಾಗಿದ್ದ ₹44 ಕೋಟಿ

* ಪೂರ್ವಿ ಮತ್ತು ಆಕೆಯ ಪತಿ ಮಯಾಂಕ್‌ ಮೆಹ್ತಾ ಹೆಸರಿನಲ್ಲಿ ಈ ಹೂಡಿಕೆ ಕಂಪನಿಯನ್ನು ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌ನಲ್ಲಿ ನೋಂದಣಿ ಮಾಡಲಾಗಿದೆ.

* ನೀರವ್‌, ಪೂರ್ವಿ ಮತ್ತು ಕಂಪನಿಗಳ ಹೆಸರಲ್ಲಿದ್ದ ಐದು ವಿದೇಶಿ ಬ್ಯಾಂಕ್‌ ಖಾತೆಗಳಿಂದ ಒಟ್ಟು ₹278 ಕೋಟಿ

* ದಕ್ಷಿಣ ಮುಂಬೈನಲ್ಲಿರುವ ₹19.5 ಕೋಟಿ ಮೌಲ್ಯದ ಫ್ಲ್ಯಾಟ್‌

**

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾದ ನಂತರ ಹಣವನ್ನು ವಿದೇಶಿ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗಿದೆ
- ಜಾರಿ ನಿರ್ದೇಶನಾಲಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !