‘ಶೂನ್ಯ’ ಸಂಪಾದಿಸಿದವರೂ ಕಾನ್‌ಸ್ಟೆಬಲ್‌!

7
2 ವರ್ಷಗಳಲ್ಲಿ ಕಡಿಮೆ ಅಂಕಗಳಿಸಿದ 1000 ಕ್ಕೂ ಹೆಚ್ಚು ಅಭ್ಯರ್ಥಿಗಳ ಆಯ್ಕೆ

‘ಶೂನ್ಯ’ ಸಂಪಾದಿಸಿದವರೂ ಕಾನ್‌ಸ್ಟೆಬಲ್‌!

Published:
Updated:

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ‘ಶೂನ್ಯ’ ಅಂಕ ಸಂಪಾದನೆ ಮಾಡಿದ ಅಭ್ಯರ್ಥಿಗಳೂ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಹುದ್ದೆಯನ್ನು ಗಿಟ್ಟಿಸಲು ಸಾಧ್ಯವೇ?

‘0’ ಮಾತ್ರವಲ್ಲ, 5,10,15, 25, 30 ಈ ರೀತಿ ಅಂಕಗಳಿಸಿದವರೂ ಆಯ್ಕೆ ಆಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ರೀತಿ ಕಡಿಮೆ ಅಂಕ ಪಡೆದವರು ಮಾಜಿ ಯೋಧರು ಎನ್ನುವುದೇ ವಿಶೇಷ.

 2017ರಲ್ಲಿ ಕಾನ್‌ಸ್ಟೆಬಲ್‌ಗಳ ಆಯ್ಕೆಗೆ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ, ಸಹಿಷ್ಣುತೆ ಮತ್ತು ದೇಹ ದಾರ್ಢ್ಯ ಪರೀಕ್ಷೆಗಳನ್ನು ನಡೆಸಲಾಗಿತ್ತು. ಅದರಲ್ಲಿ 100 ಕ್ಕೆ 30 ಕ್ಕೂ ಕಡಿಮೆ ಅಂಕಗಳನ್ನು ಪಡೆದಿರುವ ಸಾಕಷ್ಟು ಅಭ್ಯರ್ಥಿಗಳು ನೌಕರಿಗೆ ಅರ್ಹತೆ ಪಡೆದಿದ್ದಾರೆ.

ಒಟ್ಟು 1,575 ಸಿವಿಲ್‌ ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಗರಿಷ್ಠ ಶೇ 88.75 ಅಂಕ ಪಡೆದವರೂ ಆಯ್ಕೆ ಆಗಿದ್ದಾರೆ. ಸಾಮಾನ್ಯವಾಗಿ ತೇರ್ಗಡೆಗಿರುವ ಕನಿಷ್ಠ ಅಂಕ (35) ಪಡೆಯಲು ವಿಫಲರಾದವರೂ ಕಾನ್‌ಸ್ಟೆಬಲ್‌ ಹುದ್ದೆಗಳನ್ನು ಗಿಟ್ಟಿಸಿದ್ದಾರೆ. ಪೊಲೀಸ್‌ ಇಲಾಖೆ ಬಿಡುಗಡೆ ಮಾಡಿದ ಆಯ್ಕೆ ಪಟ್ಟಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಆಯ್ಕೆಗೊಂಡಿರುವ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆದು, ಸಹಿಷ್ಣುತೆ ಮತ್ತು ದೇಹದಾರ್ಢ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ. ವೃಂದ ಮತ್ತು ನೇಮಕಾತಿ ನಿಯಮದನ್ವಯ ಮೆರಿಟ್‌ ಆಧರಿಸಿದ ಅರ್ಹತಾ ಪಟ್ಟಿ ಹಾಗೂ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ತಯಾರಿಸಿರುವುದಾಗಿ ಪೊಲೀಸ್‌ ಇಲಾಖೆ ತಿಳಿಸಿದೆ.

ಇಲಾಖೆಯ ಮೂಲಗಳ ಪ್ರಕಾರ, ‘2016 ರಿಂದ ಇಲ್ಲಿಯವರೆಗೆ ರಾಜ್ಯ ಮಟ್ಟದಲ್ಲಿ 20 ಸಾವಿರ ಕಾನ್‌ಸ್ಟೆಬಲ್‌ ಹುದ್ದೆಗಳನ್ನು ಭರ್ತಿ ಮಾಡಿದ್ದು, ಅದರಲ್ಲಿ ಸುಮಾರು 1,000 ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶೇ 30 ಕ್ಕಿಂತ ಕಡಿಮೆ ಅಂಕಗಳನ್ನು ಪಡೆದವರೇ ಆಯ್ಕೆ ಆಗಿದ್ದಾರೆ. ಇನ್ನೂ ಅಚ್ಚರಿಯೆಂದರೆ ‘0’ ಗಿಂತ ಕಡಿಮೆ, –0.75 ಅಂಕ ಪಡೆದ ಅಭ್ಯರ್ಥಿಯೂ ಆಯ್ಕೆಯಾಗಿದ್ದಾರೆ’.

‘ಈ ರೀತಿ ಕಡಿಮೆ ಅಂಕಗಳಿಸಿ ಆಯ್ಕೆ ಆದವರು ಬಹುಪಾಲು ಮಾಜಿ ಯೋಧರು. ಪೊಲೀಸ್‌ ಇಲಾಖೆ ಆಧುನಿಕವಾಗುತ್ತಿರುವ ಈ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿರುವ ವೈಖರಿಯೇ ಸರಿ ಇಲ್ಲ. ಬೆಂಗಳೂರು ಕಾಸ್ಮೋಪಾಲಿಟಿನ್‌ ಸ್ವರೂಪ ಪಡೆದಿದೆ. ಇಂಗ್ಲಿಷ್‌ ಅರ್ಥಮಾಡಿಕೊಳ್ಳುವ ಮತ್ತು ಕನಿಷ್ಠ ಪ್ರಮಾಣದಲ್ಲಿ ಉತ್ತರ ನೀಡುವ ಸಾಮರ್ಥ್ಯವೇ ಕಾನ್‌ಸ್ಟೆಬಲ್‌ಗಳಿಗೆ ಇರುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಅತ್ಯಂತ ಕಡಿಮೆ ನಿರ್ವಹಣೆ ತೋರಿದವರನ್ನು ಆಯ್ಕೆ ಮಾಡುವುದು ಎಷ್ಟು ಮಟ್ಟಿಗೆ ಸರಿ’ ಎಂದು ಹೆಸರು ಹೇಳಲು ಬಯಸದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಹೀಗೆ ಆಯ್ಕೆಯಾದ ಕಾನ್‌ಸ್ಟೆಬಲ್‌ ಗಳು ಮುಂದೆ ಬಡ್ತಿ ಪಡೆದು ಇನ್‌ಸ್ಪೆಕ್ಟರ್‌ ಹುದ್ದೆಗಳಿಗೂ ಏರುತ್ತಾರೆ. ಇಂತಹ ಹುದ್ದೆಗಳಿಗೇರುವವರಿಗೆ ಲೋಕ ಜ್ಞಾನ ಮತ್ತು ಸಾಮಾನ್ಯ ಜ್ಞಾನ ಎರಡೂ ಇರಬೇಕು. ಅಪರಾಧಗಳು ನಡೆದಾಗ ಅದನ್ನು ಅರ್ಥೈಸಿಕೊಂಡು, ಅದರ ಹಿಂದಿನ ಗೋಜಲುಗಳನ್ನು ಅನಾವರಣಗೊಳಿಸಲು ಬುದ್ಧಿಮತ್ತೆ ಇರಬೇಕಾಗುತ್ತದೆ. ಪರೀಕ್ಷೆಯಲ್ಲಿ ಅತಿ ಕಡಿಮೆ ಅಂಕ ಪಡೆದವರಿಂದ ಇಂತಹ ಚಾಕಚಕ್ಯತೆ ನಿರೀಕ್ಷಿಸಲು ಸಾಧ್ಯವೇ’ ಎಂಬ ಪ್ರಶ್ನೆ ಅವರದು.

**

ಅಂಕದ ಬಗ್ಗೆ ನಿಯಮದಲ್ಲಿ ಪ್ರಸ್ತಾಪವಿಲ್ಲ: ಔರಾದಕರ

‘ಮಾಜಿ ಯೋಧರು ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಇಂತಿಷ್ಟೇ ಅಂಕ ಗಳಿಸಬೇಕು ಎಂಬ ಬಗ್ಗೆ ಮಾಜಿ ಸೈನಿಕ ಮೀಸಲಾತಿ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಯಾವುದೇ ಉಲ್ಲೇಖವಿಲ್ಲ’ ಎಂದು ಪೊಲೀಸ್‌ ನೇಮಕಾತಿಗಳ ಡಿಜಿಪಿ ರಾಘವೇಂದ್ರ ಔರಾದಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ವೇಳೆ ಪೋಲಿಸ್ ನೇಮಕಾತಿಗೆ ನಿಗದಿ ಮಾಡಿದ ಎತ್ತರ ಮತ್ತು ದೇಹದಾರ್ಢ್ಯ ಇಲ್ಲದಿದ್ದರೂ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಮಾಜಿ ಯೋಧರನ್ನು ಸೇರಿಸಬೇಕು.ಈ ಬಗ್ಗೆ ನಾವು ಏನೂ ಮಾಡುವಂತಿಲ್ಲ’ ಎಂದರು.

ಶೂನ್ಯ ಅಂಕ ಪಡೆದ ವಿಷಯಕ್ಕೆ ಸಂಬಂಧಿಸಿದಂತೆ 1995 ರ ‘ಹರಿಸಿಂಗ್ ವರ್ಸಸ್‌ ರಾಜಸ್ಥಾನ ಸರ್ಕಾರದ ಪ್ರಕರಣ’ದ ತೀರ್ಪನ್ನು ಪಾಲಿಸಲಾಗುತ್ತದೆ. ಸರ್ಕಾರ ಸಕಾರಣ ನೀಡದೇ ಮತ್ತು ಅಭ್ಯರ್ಥಿಗೆ ಕಾರಣವನ್ನೂ ತಿಳಿಸದೇ (ಮಾಜಿ ಯೋಧರಿಗೆ) ಉದ್ಯೋಗವನ್ನು ನಿರಾಕರಿಸುವಂತಿಲ್ಲ. ಹೀಗಾಗಿ ಸೊನ್ನೆ ಬಂದವರಿಗೂ ಉದ್ಯೋಗ ನೀಡಲಾಗುತ್ತಿದೆ ಎಂದು ತಿಳಿಸಿದೆ ಎಂದು ವಿವರಿಸಿದರು.

**

ಈಗ ಅಪರಾಧದ ಸ್ವರೂಪವೇ ಬದಲಾಗಿದೆ. ಅದಕ್ಕೆ ತಕ್ಕಂತೆ ಚಾಣಾಕ್ಷ ಕಾನ್‌ಸ್ಟೆಬಲ್‌ಗಳನ್ನೇ ಆಯ್ಕೆ ಮಾಡಬೇಕು. ಕಡಿಮೆ ಅಂಕಗಳಿಸುವ ಅಭ್ಯರ್ಥಿಗಳಿಂದ ಇಂತಹ ಕೆಲಸ ನಿಭಾಯಿಸಲು ಸಾಧ್ಯವೇ?
ಸಾಯಿದತ್ತ, ಸಾಮಾಜಿಕ ಕಾರ್ಯಕರ್ತ

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 2

  Frustrated
 • 6

  Angry

Comments:

0 comments

Write the first review for this !