ಭಾನುವಾರ, ಮಾರ್ಚ್ 7, 2021
27 °C

ರಾಜಕೀಯ ಜಾಹೀರಾತಿಗೆ ಫೇಸ್‌ಬುಕ್ ಮೂಗುದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದಲ್ಲಿ ರಾಜಕೀಯ ಜಾಹೀರಾತುಗಳ ಪ್ರಸಾರ ಮತ್ತು ಪ್ರದರ್ಶನಕ್ಕೆ ಫೇಸ್‌ಬುಕ್ ಹೊಸ ನೀತಿಯನ್ನು ರೂಪಿಸಿದೆ. ಗುರುವಾರದಿಂದಲೇ ಇದು ಜಾರಿಯಾಗಲಿದೆ.

ರಾಜಕೀಯ ಜಾಹೀರಾತುಗಳ ಪ್ರಾಯೋಜಕರು ಯಾರು ಮತ್ತು ಯಾವ ವ್ಯಕ್ತಿ ಅಥವಾ ಸಂಸ್ಥೆ ಅಥವಾ ಪಕ್ಷ ಈ ಜಾಹೀರಾತನ್ನು ನಿರ್ವಹಿಸುತ್ತಿದ್ದಾರೆ ಎಂಬ ವಿವರ ಪ್ರತಿ ರಾಜಕೀಯ ಜಾಹೀರಾತಿನ ಮೇಲೆ ಪ್ರಕಟವಾಗಲಿದೆ ಎಂದು ಫೇಸ್‌ಬುಕ್ ತಿಳಿಸಿದೆ.

‘ಫೇಸ್‌ಬುಕ್‌ನಲ್ಲಿ ಪ್ರಕಟವಾಗುವ ಎಲ್ಲಾ ಸ್ವರೂಪದ ರಾಜಕೀಯ ಜಾಹೀರಾತುಗಳಿಗೆ ಈ ನೀತಿ ಅನ್ವಯವಾಗಲಿದೆ. ನಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಜಾಹೀರಾತುಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಫೇಸ್‌ಬುಕ್‌ನ ಭಾರತ ಮತ್ತು ದಕ್ಷಿಣ ಏಷ್ಯಾ ಸಾರ್ವಜನಿಕ ನೀತಿ ನಿರ್ದೇಶಕ ಶಿವಾಂತ್ ತುಕ್ರಾಲ್ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಫೇಸ್‌ಬುಕ್ ಈ ಕ್ರಮ ತೆಗೆದುಕೊಂಡಿದೆ.

‘ಆ್ಯಡ್ ಲೈಬ್ರರಿ’ ಸವಲತ್ತು

ಭಾರತದ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದಂತೆ ಪ್ರಕಟವಾಗುವ ಎಲ್ಲಾ ಜಾಹೀರಾತುಗಳು ಒಂದೆಡೆ ಲಭ್ಯವಿರುವ ‘ಆ್ಯಡ್‌ ಲೈಬ್ರರಿ’ಯ ಸವಲತ್ತನ್ನು ಫೇಸ್‌ಬುಕ್ ಶೀಘ್ರವೇ ಆರಂಭಿಸಲಿದೆ

* ಫೇಸ್‌ಬುಕ್ ಖಾತೆ ಇರುವವರು ಮತ್ತು ಇಲ್ಲದೇ ಇರುವವರೂ ಈ ಲೈಬ್ರರಿಯನ್ನು ವೀಕ್ಷಿಸಬಹುದಾಗಿದೆ

* ಪ್ರಕಟವಾಗುವ ದಿನದಿಂದ ಏಳು ವರ್ಷಗಳವರೆಗೆ ಜಾಹೀರಾತು ಈ ಲೈಬ್ರರಿಯಲ್ಲಿ ಲಭ್ಯವಿರಲಿದೆ

* ಜಾಹೀರಾತುದಾರರ ವಿವರ, ಕಚೇರಿ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಇ–ಮೇಲ್ ವಿಳಾಸ ಇಲ್ಲಿ ಲಭ್ಯವಿರಲಿದೆ

* ಆಯಾ ಜಾಹೀರಾತುಗಳ ವೆಚ್ಚ, ವೀಕ್ಷಕರ ವಿವರ, ವೀಕ್ಷಕರ ಸ್ವರೂಪದ ವಿವರವನ್ನೂ ಈ ಲೈಬ್ರರಿ ಒಳಗೊಂಡಿರಲಿದೆ

ಫೆ.21ರಿಂದ ಮತ್ತಷ್ಟು ಬಿಗಿ

ಈಗಾಗಲೇ ಪ್ರಕಟವಾಗಿರುವ ಜಾಹೀರಾತುಗಳ ಮೇಲೆ ನಿಯಂತ್ರಣ ಕಷ್ಟಸಾಧ್ಯ. ಹೀಗಾಗಿ ಮತ್ತಷ್ಟು ಕಠಿಣ ನಿಯಮಗಳನ್ನು ಅನುಷ್ಠಾನಕ್ಕೆ ತರಲು ಫೇಸ್‌ಬುಕ್ ಸಿದ್ಧತೆ ನಡೆಸಿದೆ. ಫೆ.21ಕ್ಕೆ ಈ ನಿಯಮಗಳು ಜಾರಿಗೆ ಬರಲಿವೆ ಎಂದು ಕಂಪನಿ ಹೇಳಿದೆ

* ಈಗಾಗಲೇ ಬಿತ್ತರವಾಗುತ್ತಿರುವ ರಾಜಕೀಯ ಜಾಹೀರಾತುಗಳ ಬಗ್ಗೆ ಬಳಕೆದಾರರೇ ಫೇಸ್‌ಬುಕ್‌ಗೆ ಮಾಹಿತಿ ನೀಡಬೇಕಾಗುತ್ತದೆ

* ಬಳಕೆದಾರರು ಅಂತಹ ಜಾಹೀರಾತುಗಳ ‘ಆ್ಯಡ್‌ ರಿಪೋರ್ಟ್‌’ ಆಯ್ಕೆ ಮಾಡಿದರೆ ಸಾಕು

* ಫೇಸ್‌ಬುಕ್ ರಾಜಕೀಯ ಜಾಹೀರಾತುದಾರರು ತಮ್ಮ ನೋಂದಣಿ ಮಾಡುವುದು ಕಡ್ಡಾಯ. ಡಿಸೆಂಬರ್‌ನಿಂದಲೇ ಈ ಪ್ರಕ್ರಿಯೆ ನಡೆಯುತ್ತಿದೆ

* ಜಾಹಿರಾತುದಾರರು ಅಥವಾ ಜಾಹೀರಾತು ಸಂಸ್ಥೆಗಳು ತಮ್ಮ ‘ಲೊಕೇಷನ್’ ಅನ್ನು ದೃಢಪಡಿಸುವುದು ಕಡ್ಡಾಯ. ಯಾವ ಪ್ರದೇಶದ ರಾಜಕೀಯ ನಾಯಕರು/ವ್ಯಕ್ತಿಗಳು ಜಾಹೀರಾತು ನೀಡುತ್ತಿದ್ದಾರೆ ಎಂಬುದು ಇದರಿಂದ ವೀಕ್ಷಕರಿಗೆ ಗೊತ್ತಾಗಲಿದೆ

* ರಾಜಕೀಯ ಜಾಹೀರಾತು ಪುಟಗಳನ್ನು ನಿರ್ವಹಿಸುವವರು ಎರಡು ಹಂತದ ದೃಢೀಕರಣವನ್ನು ಹೊಂದಿರಬೇಕಾಗುತ್ತದೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು