ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹದ ಬಳಿಕ ರಾಜಕೀಯ ಕೆಸರೆರಚಾಟ

ಕೇರಳ ಮಹಾಮಳೆ ವಿಕೋಪ: ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಆರೋಪ
Last Updated 22 ಆಗಸ್ಟ್ 2018, 20:19 IST
ಅಕ್ಷರ ಗಾತ್ರ

ತಿರುವನಂತಪುರ: ಮಹಾಮಳೆಯಿಂದ ತತ್ತರಿಸಿರುವ ಕೇರಳದಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಮುಗಿಯುವ ಹಂತಕ್ಕೆ ಬಂದಿದೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕೆಲಸಗಳು ಇನ್ನಷ್ಟೇ ಆರಂಭವಾಗಬೇಕಿದೆ. ಆದರೆ ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳ ಆರೋಪ–ಪ್ರತ್ಯಾರೋಪಗಳು ಆರಂಭವಾಗಿವೆ.

ಇದು ಸರ್ಕಾರದ ನಿರ್ಲಕ್ಷದಿಂದ ಸಂಭವಿಸಿದ ದುರಂತ ಎಂದು ವಿರೋಧ ಪಕ್ಷವಾದಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಆರೋಪಿಸಿದೆ. ರಾಜ್ಯ ಬಿಜೆಪಿ ಸಹ ಇಂಥದ್ದೇ ಆರೋಪ ಮಾಡಿದೆ.

‘ಪಂಪಾ ನದಿಗೆ ಅಡ್ಡವಾಗಿ ಕಟ್ಟಿರುವ ಒಂಬತ್ತು, ಪೆರಿಯಾರ್ ನದಿಯ 11, ಚಾಲಕ್ಕುಡಿ ನದಿಗೆ ಕಟ್ಟಲಾಗಿರುವ ಆರು ಅಣೆಕಟ್ಟೆಗಳ ನೀರನ್ನು ಒಮ್ಮೆಲೇ ಹೊರಬಿಟ್ಟರೆ ಯಾವೆಲ್ಲಾ ಪ್ರದೇಶಗಳು ಜಲಾವೃತವಾಗುತ್ತವೆ ಎಂಬುದರ ಬಗ್ಗೆ ಸರ್ಕಾರಕ್ಕೆ ಮಾಹಿತಿಯೇ ಇರಲಿಲ್ಲ. ಹೀಗಿದ್ದೂ ನೀರನ್ನು ಹೊರಬಿಡಲಾಯಿತು. ಹೀಗಾಗಿಯೇ ಇಷ್ಟೆಲ್ಲಾ ದುರಂತ ನಡೆಯಿತು’ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷ ಯುಡಿಎಫ್‌ನ ನಾಯಕ ರಮೇಸ್ ಚೆನ್ನಿತಾಲಾ ಆರೋಪಿಸಿದ್ದಾರೆ.

ತಜ್ಞರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‘ಅತೀವ ಮಳೆಯಿಂದ ಈ ಪ್ರವಾಸ ಸಂಭವಿಸಿಲ್ಲ. ಕೇರಳ ಸರ್ಕಾರ ಇದನ್ನು ಸುಲಭವಾಗಿ ತಡೆಯಬಹುದಿತ್ತು. ಆದರೆ ದೂರದೃಷ್ಟಿಯೇ ಇಲ್ಲದಂತೆ ಅಣೆಕಟ್ಟೆಗಳಿಂದ ನೀರು ಹೊರಬಿಟ್ಟರು. ಇದೊಂದು ಮಾನವ ನಿರ್ಮಿತ ದುರಂತ’ ಎಂದು ವಿಕೋಪ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಅಮೃತಾ ಸಿಂಗ್ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ಆದರೆ ಅಣೆಕಟ್ಟೆಗಳಿಂದ ನೀರು ಬಿಟ್ಟಿದ್ದನ್ನು ಕೇರಳ ಸರ್ಕಾರ ಸಮರ್ಥಿಸಿಕೊಂಡಿದೆ. ‘ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡೇ ನೀರನ್ನು ಬೀಡಲಾಗಿತ್ತು. ಅಲ್ಲದೆ ಜನರಿಗೆ ಹಲವು ಬಾರಿ ಸೂಚನೆಯನ್ನು ನೀಡಲಾಗಿತ್ತು’ ಎಂದು ಕೇರಳ ರಾಜ್ಯ ವಿದ್ಯುತ್ ಮಂಡಳಿಯು (ಕೆಎಸ್‌ಇಬಿ) ಹೇಳಿದೆ. ರಾಜ್ಯದ ಎಲ್ಲಾ ಅಣೆಕಟ್ಟೆಗಳ ಉಸ್ತುವಾರಿ ಈ ಮಂಡಳಿಯದ್ದು.

***

₹ 20,000 ಕೋಟಿ ಮಹಾಮಳೆಯಿಂದ ಕೇರಳದಲ್ಲಿ ಆಗಿರುವ ಅಂದಾಜು ನಷ್ಟ

₹ 2,600 ಕೋಟಿ‌ ಮೊತ್ತದ ವಿಶೇಷ ಪ್ಯಾಕೇಜ್‌ಗೆ ಕೇರಳ ಸರ್ಕಾರ ಬೇಡಿಕೆ ಇಟ್ಟಿದೆ

₹ 680 ಕೋಟಿ ತಕ್ಷಣದ ಪರಿಹಾರವಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಮೊತ್ತ

₹ 600 ಕೋಟಿ ಕೇಂದ್ರದಿಂದ ಬಿಡುಗಡೆಯಾಗಿರುವ ಮೊತ್ತ

₹ 700 ಕೋಟಿ ಯುಎಇ ಸರ್ಕಾರ ಘೋಷಿಸಿರುವ ದೇಣಿಗೆ ಮೊತ್ತ

***

ಬದುಕು ಕಟ್ಟಿಕೊಳ್ಳುವತ್ತ ಚಿತ್ತ
ಮಳೆ ಬಿಡುವು ನೀಡಿರುವುದರಿಂದ ಮತ್ತು ಹಲವೆಡೆ ನೆರೆಯ ನೀರು ಇಳಿದುಹೋಗಿರುವುದರಿಂದ ಲಕ್ಷಾಂತರ ಮಂದಿ ಪರಿಹಾರ ಕೇಂದ್ರದಿಂದ ತಮ್ಮ ಮನೆಗಳಿಗೆ ಹಿಂತಿರುಗಿದ್ದಾರೆ. ಜಲಾವೃತವಾಗಿದ್ದ ತಮ್ಮ ಮನೆ–ಅಂಗಡಿಗಳಲ್ಲಿ ಶೇಖರವಾಗಿರುವ ಕೆಸರನ್ನು ತೆರವು ಮಾಡಿ, ಸ್ವಚ್ಛ ಮಾಡುವುದರಲ್ಲಿ ಜನರು ತಲ್ಲೀನರಾಗಿದ್ದಾರೆ.

ಕೆಲವು ಹಳ್ಳಿಗಳ ರಸ್ತೆ, ಜಮೀನು ಮತ್ತು ಮನೆಗಳಲ್ಲಿ ಆರು ಅಡಿಗಿಂತಲೂ ಹೆಚ್ಚು ಎತ್ತರದಷ್ಟು ಕೆಸರು ಸಂಗ್ರಹವಾಗಿದೆ. ಬೃಹತ್ ಯಂತ್ರಗಳನ್ನು ಬಳಸಿ ಅವನ್ನು ತೆರವು ಮಾಡಲಾಗುತ್ತಿದೆ. ವಿವಿಧಸ್ವಯಂಸೇವಾ ಸಂಸ್ಥೆಗಳ 12 ಸಾವಿರ ಸ್ವಯಂಸೇವಕರು ಮನೆ ಸ್ವಚ್ಛತಾ ಕಾರ್ಯದಲ್ಲಿ ಜನರಿಗೆ ನೆರವಾಗುತ್ತಿದ್ದಾರೆ.

ಮನೆಗಳು ಸಂಪೂರ್ಣ ಮುಳುಗಿದ್ದುದ್ದರಿಂದ ಮನೆಯ ಎಲ್ಲ ವಸ್ತುಗಳಿಗೂ ಹಾನಿಯಾಗಿವೆ. ಬಹುತೇಕ ಜನರ ಆಧಾರ್, ಪಡಿತರ ಚೀಟಿ, ಆಸ್ತಿ ದಾಖಲೆ ಪತ್ರಗಳು, ಶೈಕ್ಷಣಿಕ ಪ್ರಮಾಣ ಪತ್ರಗಳು ನಾಶವಾಗಿವೆ. ಪುಸ್ತಕಗಳು ಒದ್ದೆಯಾಗಿರುವುದರಿಂದ, ಅವುಗಳನ್ನು ಒಣಗಿಸಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಗ್ರಾಮದಲ್ಲಿನ ದೇವಾಲಯ, ಚರ್ಚ್ ಮತ್ತು ಮಸೀದಿಗಳನ್ನು ಎಲ್ಲ ಸಮುದಾಯದ ಜನರೂ ಒಟ್ಟಿಗೇ ಸ್ವಚ್ಛಗೊಳಿಸುತ್ತಿದ್ದಾರೆ. ಮಲ್ಲಪುರಂ ಜಿಲ್ಲೆಯ ಹಲವೆಡೆ ಮುಸ್ಲಿಂ ಯುವಕರು ದೇವಾಲಯಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಆಸ್ಪತ್ರೆ, ಕಚೇರಿ, ಬಸ್‌–ರೈಲು ನಿಲ್ದಾಣಗಳು ಮತ್ತು ಸಮುದಾಯಭವನಗಳನ್ನು ಸ್ವಚ್ಛಗೊಳಿಸುವುದಕ್ಕೆ ಸರ್ಕಾರ ಮುಂದಾಗಿದೆ. ಕೊಚ್ಚಿಹೋಗಿರುವ ರಸ್ತೆ ಮತ್ತು ಸೇತುವೆಗಳನ್ನು ರಿಪೇರಿ ಮಾಡಲಾಗುತ್ತಿದೆ. ಹಲವೆಡೆ ಮರಳಿನ ಚೀಲಗಳನ್ನು ಬಳಸಿ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ.

ಕೇರಳದ ಬಹುತೇಕ ಕಡೆ ನೀರಿಗಾಗಿ ಬಾವಿ ಮತ್ತು ಹೊಳೆಗಳಲ್ಲೇ ಅವಲಂಭಿಸಲಾಗಿದೆ. ಬಾವಿಗಳಲ್ಲೂ ಕೆಸರು ಶೇಖರವಾಗಿರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ. ಈ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸಲು ಹರಸಾಹಸ ಮಾಡಲಾಗುತ್ತಿದೆ. ರಸ್ತೆಗಳು ನಾಶವಾಗಿರುವುದರಿಂದ ನೀರಿನ ಟ್ಯಾಂಕರ್‌ಗಳನ್ನು ಅಲ್ಲಿಗೆ ಕೊಂಡೊಯ್ಯಲು ಸಮಸ್ಯೆಯಾಗಿದೆ.

ಮನೆ ಸ್ವಚ್ಛತೆ ಮತ್ತು ರಸ್ತೆ–ಸೇತುವೆ ದುರಸ್ಥಿಯಲ್ಲಿ ಜನರಿಗೆ ನೆರವಾಗಲು ಗಡಿ ಭದ್ರತಾ ಪಡೆಯು 40 ಪರಿಣಿತರನ್ನು ನಿಯೋಜಿಸಿದೆ. 40 ಪರಿಣಿತರನ್ನೂ ಬೇರೆ–ಬೇರೆ ಗ್ರಾಮಗಳಿಗೆ ಕಳುಹಿಸಲಾಗಿದೆ. ಗುಡ್ಡಗಾಡು–ಕೆಸರಿನಲ್ಲಿ ಸಂಚರಿಸುವ ಸಾಮರ್ಥ್ಯವಿರುವ ವಿಶಿಷ್ಟ ವಾಹನಗಳನ್ನು ಮತ್ತು ದುರಸ್ಥಿ ಉಪಕರಣಗಳನ್ನು ಈ ಪರಿಣಿತರಿಗೆ ಒದಗಿಸಲಾಗಿದೆ.

54.14 ಲಕ್ಷಮಹಾಮಳೆ ಮತ್ತು ಪ್ರವಾಹದಿಂದ ತೊಂದರೆಗೆ ಒಳಗಾದವರು

3,879 ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ

14.50 ಲಕ್ಷ ಜನರು ಇನ್ನೂ ಪರಿಹಾರ ಕೇಂದ್ರಗಳಲ್ಲೇ ಆಶ್ರಯ ಪಡೆದಿದ್ದಾರೆ

***

ಹೆಚ್ಚು ಮಳೆಯ ಪ್ರಮಾಣ ಶೇ 44ರಷ್ಟು ಮಾತ್ರ. ಯಾವ ಮುಂದಾಲೋಚನೆಯೂ ಇಲ್ಲದೆ 44 ಅಣೆಕಟ್ಟೆಗಳ ನೀರನ್ನು ಹೊರಬಿಟ್ಟಿದ್ದಕ್ಕೇ ಈ ದುರಂತ ಸಂಭವಿಸಿತು
–ರಮೇಶ್ ಚೆನ್ನಿತಾಲಾ, ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ

***

ಈ ಸರ್ಕಾರಕ್ಕೆ ಮುಂದಾಲೋಚನೆಯ ಇಲ್ಲ. ಮುಂದೇನಾಗುತ್ತದೆ ಎಂಬುದನ್ನು ಪರಿಗಣಿಸದೆ ಅಣೆಕಟ್ಟೆಗಳ ಗೇಟ್‌ಗಳನ್ನು ತೆರಯಲಾಗಿದೆ. ಇದೇ ದುರಂತಕ್ಕೆ ಕಾರಣ
–ಪಿ.ಎಸ್.ಶ್ರೀಧರನ್ ಪಿಳ್ಳೈ, ಕೇರಳ ಬಿಜೆಪಿ ಘಟಕದ ಅಧ್ಯಕ್ಷ

***

ಎಲ್ಲಾ ಅಣೆಕಟ್ಟೆಗಳು ತುಂಬುತ್ತಿವೆ, ನದಿಗಳು ಉಕ್ಕಿಹರಿಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಈಗ ರಾಜಕೀಯ ಕಾರಣಕ್ಕಾಗಿ ಸರ್ಕಾರದ ಮೇಲೆ ಆರೋಪ ಹೊರಿಸಲಾಗುತ್ತಿದೆ
–ಸಿ.ಎನ್.ರಾಮಚಂದ್ರನ್ ನಾಯರ್, ಅಣೆಕಟ್ಟೆ ಸಂರಕ್ಷಣಾ ಅಧಿಕಾರಿ,ಕೆಎಸ್‌ಇಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT