ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮೈತ್ರಿ ಅನಿವಾರ್ಯವಲ್ಲ: ಸಮಾಜವಾದಿ ಪಕ್ಷ ವಿಶ್ವಾಸ

ಬಿಎಸ್‌ಪಿ–ಎಸ್‌ಪಿ ಮೈತ್ರಿಕೂಟಕ್ಕೆ ಬಿಜೆಪಿ ಮಣಿಸುವ ವಿಶ್ವಾಸ
Last Updated 6 ಜನವರಿ 2019, 19:59 IST
ಅಕ್ಷರ ಗಾತ್ರ

ಕೋಲ್ಕತ್ತ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ವಿಶ್ವಾಸ ವ್ಯಕ್ತಪಡಿಸಿದೆ.

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಎಸ್‌ಪಿ ಮೈತ್ರಿಕೂಟಕ್ಕೆ ಬಿಜೆಪಿಯನ್ನು ಮಣಿಸುವ ಎಲ್ಲ ಸಾಮರ್ಥ್ಯವಿದೆ. ಅದಕ್ಕಾಗಿ ಮತ್ತೊಂದು ಶಕ್ತಿ ಜತೆ ಕೈಜೋಡಿಸುವ ಅಗತ್ಯವಿಲ್ಲ ಎಂದು ಎಸ್‌ಪಿ ರಾಷ್ಟ್ರೀಯ ಉಪಾಧ್ಯಕ್ಷ ಕಿರಣ್ಮಯಿ ನಂದಾ ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಕಾಂಗ್ರೆಸ್‌ ಪಕ್ಷ ಬಿಎಸ್‌ಪಿ–ಎಸ್‌ಪಿ ಮೈತ್ರಿಕೂಟ ಸೇರಲು ಬಯಸಿದಲ್ಲಿ ರಾಯ್‌ ಬರೇಲಿ ಮತ್ತು ಅಮೇಠಿ ಈ ಎರಡು ಲೋಕಸಭಾ ಕ್ಷೇತ್ರಗಳನ್ನು ಮಾತ್ರ ಕಾಂಗ್ರೆಸ್‌ಗೆ ಬಿಟ್ಟು ಕೊಡಲಾಗುವುದು ಎಂದು ಅವರು ಸುಳಿವು ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ನೆಲೆ ಇಲ್ಲ.ಮೈತ್ರಿಕೂಟಕ್ಕೆ ಕಾಂಗ್ರೆಸ್‌ ಸೇರಿಸಿಕೊಳ್ಳುವ ಅಥವಾ ಕೈಬಿಡುವ ಬಗ್ಗೆ ಗಂಭೀರವಾಗಿ ಯೋಚಿಸಿಲ್ಲ. ಮೈತ್ರಿಕೂಟ ಸೇರುವ ಅಥವಾ ಸೇರದಿರುವ ನಿರ್ಧಾರವನ್ನು ಕಾಂಗ್ರೆಸ್‌ ವಿವೇಚನೆಗೆ ಬಿಡಲಾಗಿದೆ ಎಂದು ನಂದಾ ಹೇಳಿದ್ದಾರೆ.

ಎಸ್‌ಪಿ–ಬಿಎಸ್‌ಪಿ ಮೈತ್ರಿಗೆ ಅಖಿಲೇಶ್‌ ಯಾದವ್‌ ಮತ್ತು ಮಾಯಾವತಿ ತಾತ್ವಿಕ ಒಪ್ಪಿಗೆ ದೊರೆತ ಬೆನ್ನಲ್ಲೇ ಅವರ ಈ ಹೇಳಿಕೆ ಹೊರಬಿದ್ದಿದೆ. ಮೈತ್ರಿಕೂಟದಿಂದ ಕಾಂಗ್ರೆಸ್‌ ಹೊರಗಿಟ್ಟರೆ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬ ವರದಿಗಳನ್ನು ಅವರು ತಳ್ಳಿ ಹಾಕಿದರು.

ಸಾಧ್ಯವಾದಷ್ಟು ಮಿತ್ರ ಪಕ್ಷಗಳಿಂದ ಲಾಭ ಪಡೆಯಲು ಹವಣಿಸುವ ಕಾಂಗ್ರೆಸ್‌, ಸಿಕ್ಕ ಅವಕಾಶವನ್ನು ಯಾರೊಂದಿಗೂ ಹಂಚಿಕೊಳ್ಳಲು ತಯಾರಿಲ್ಲ ಎಂದು ಅವರು ದೂಷಿಸಿದರು.

80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ–ಎಸ್‌ಪಿ ಮೈತ್ರಿ ದೇಶದ ಸಂಪೂರ್ಣ ರಾಜಕಾರಣದ ಚಿತ್ರಣ ಬದಲಿಸಲಿದೆ. ಸರ್ಕಾರ ರಚನೆಯಲ್ಲಿ ಮೈತ್ರಿಕೂಟ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ನಂದಾ ಭವಿಷ್ಯ ನುಡಿದರು.

ಶಿವಪಾಲ ಸಿಂಗ್‌ ಯಾದವ್‌ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಸೇರಿದಂತೆ ಚುನಾವಣೆಗೆ ಮುನ್ನ ಜನ್ಮತಾಳಿದ ಯಾವ ಹೊಸ ಪಕ್ಷಗಳೂ ಬಿಎಸ್‌ಪಿ–ಎಸ್‌ಪಿ ಮೈತ್ರಿಕೂಟದ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.

**

‘ಬಿಜೆಪಿ ಮುಳುಗುತ್ತಿರುವ ಹಡಗು’:ಶಶಿ ತರೂರ್‌

ನವದೆಹಲಿ: ‘ಬಿಜೆಪಿ ಮುಳುಗುತ್ತಿರುವ ಹಡಗು’ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಲೇವಡಿ ಮಾಡಿದ್ದಾರೆ.

ಕೇಂದ್ರ ಸರ್ಕಾರದಲ್ಲಿಯ ‘ಏಕ ವ್ಯಕ್ತಿ ಪ್ರದರ್ಶನ’ವೇ ಬಿಜೆಪಿ ಹಡಗು ಮುಳುಗಲು ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.

‘ಈ ಸುಳಿವು ಅರಿತಿರುವ ಅನೇಕ ಮಿತ್ರಪಕ್ಷಗಳು ಈಗಾಗಲೇ ಒಂದೊಂದಾಗಿಯೇ ಬಿಜೆಪಿಯ ನಂಟು ಕಡಿದುಕೊಳ್ಳುತ್ತಿವೆ. ಎನ್‌ಡಿಎದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ’ ಎಂದು ತರೂರ್‌ ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ಮೈತ್ರಿಕೂಟದಲ್ಲಾಗಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಬೇಕು. ಆದರೆ, ಏಕವ್ಯಕ್ತಿ ಪ್ರದರ್ಶನದಿಂದ ಎನ್‌ಡಿಎ ಅಂಗಪಕ್ಷಗಳು ಬೇಸತ್ತಿದ್ದು ತೀವ್ರ ಅಸಮಾಧಾನ ಹೊಗೆಯಾಡುತ್ತಿದೆ ಎಂದರು.

‘ಮಿತ್ರ ಪಕ್ಷಗಳೇ ನಿಮ್ಮ ಬಗ್ಗೆ ಅಸಮಾಧಾನ ಹೊಂದಿರುವುದಾದರೆ, ದೇಶದ ಜನರು ನಿಮ್ಮ ಕಾರ್ಯವೈಖರಿ, ಸಾಧನೆಗಳ ಬಗ್ಗೆ ಎಷ್ಟೊಂದು ನಕಾರಾತ್ಮಕ ಭಾವನೆ ಹೊಂದಿರಬೇಡ’ ಎಂದು ತರೂರ್‌ ಪ್ರಶ್ನಿಸಿದ್ದಾರೆ.

ಎನ್‌ಡಿಎದಲ್ಲಿ ಅಪಸ್ವರ ಹೆಚ್ಚುತ್ತಿದೆ. ಬಿಹಾರದಲ್ಲಿ ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕಸಮತಾ ಪಕ್ಷದ (ಆರ್‌ಎಲ್‌ಎಸ್‌ಪಿ), ಆಂಧ್ರ ಪ್ರದೇಶದಲ್ಲಿ ಎನ್‌. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಕಳೆದ ವರ್ಷ ಎನ್‌ಡಿಎದಿಂದ ಹೊರಬಂದಿವೆ.

ಉತ್ತರ ಪ್ರದೇಶದಲ್ಲಿ ಸ್ಥಾನ ಹೊಂದಾಣಿಕೆ ವಿಚಾರವಾಗಿ ಅಪ್ನಾ ದಳ (ಎಸ್‌), ಸುಹೇಲ್‌ದೇವ್‌ ಭಾರತೀಯ ಸಮಾಜಪಕ್ಷದಲ್ಲಿ (ಎಸ್‌ಬಿಎಸ್‌ಪಿ) ಅಸಮಾಧಾನ ಭುಗಿಲೆದ್ದಿದೆ ಎಂದು ತರೂರ್‌ ಹೇಳಿದ್ದಾರೆ.

**

ಉತ್ತರ ಪ್ರದೇಶದ ಬಲಾಬಲ

ಲೋಕಸಭಾ ಕ್ಷೇತ್ರ 80

ಬಿಜೆಪಿ ಮೈತ್ರಿಕೂಟ 73

ಎಸ್‌ಪಿ 5

ಕಾಂಗ್ರೆಸ್‌ 2

ಬಿಎಸ್‌ಪಿ 0

**

ಸಾಲಮನ್ನಾ ಶಾಶ್ವತ ಪರಿಹಾರ ಅಲ್ಲವೆಂದು ಗೊತ್ತು. ಮೊದಲು ರೈತರ ಆತ್ಮಹತ್ಯೆ ತಡೆಯಬೇಕಾಗಿದೆ. ಅದಕ್ಕೆ ಸಾಲಮನ್ನಾವೊಂದೇ ತಕ್ಷಣದ ಪರಿಹಾರ.

-ಶಶಿ ತರೂರ್‌,ಕಾಂಗ್ರೆಸ್‌ ಸಂಸದ

*

ಬಿಎಸ್‌ಪಿ–ಎಸ್‌ಪಿ ಮೈತ್ರಿಕೂಟ ಯಾರನ್ನೂ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ. ಚುನಾವಣೆ ನಂತರ ಎಲ್ಲ ಪಕ್ಷಗಳ ಜತೆ ಚರ್ಚಿಸಿ ನಿರ್ಧರಿಸಲಾಗುವುದು.

-ಕಿರಣ್ಮಯಿ ನಂದಾ, ಎಸ್‌ಪಿ ರಾಷ್ಟ್ರೀಯ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT