ನಮ್ಮದೇ ಬೆಸ್ಟ್‌ ರಫೇಲ್‌ ಡೀಲ್‌: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಖಚಿತ ನುಡಿ

7

ನಮ್ಮದೇ ಬೆಸ್ಟ್‌ ರಫೇಲ್‌ ಡೀಲ್‌: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಖಚಿತ ನುಡಿ

Published:
Updated:
Deccan Herald

ನವದೆಹಲಿ: ಫ್ರಾನ್ಸ್‌ನ ಡಸಾಲ್ಟ್ ಏವಿಯೇಶನ್ ಸಹಯೋಗದಲ್ಲಿ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯ ಎಚ್‌ಎಎಲ್‌ಗೆ ಇರಲಿಲ್ಲ. ಯುಪಿಎ ಆಡಳಿತದ ಅವಧಿಯಲ್ಲಿ ಮಾಡಿಕೊಂಡಿದ್ದ 126 ರಫೆಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದ ಮುರಿದುಬೀಳಲು ಇದು ಮುಖ್ಯಕಾರಣ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಪ್ರೆಸ್‌ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಸುದ್ದಿಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸುದ್ದಿಸಂಸ್ಥೆಯ ಸಂಪಾದಕರು ಮತ್ತು ವರದಿಗಾರರೊಂದಿಗೆ ಸಂವಾದ ನಡೆಸಿದ ಅವರು ರಫೇಲ್‌ ಡೀಲ್ ಕುರಿತು ವಿರೋಧ ಪಕ್ಷಗಳ ಆರೋಪಕ್ಕೆ ಉತ್ತರ ನೀಡಿದರು. ಮಾತ್ರವಲ್ಲದೆ ‘ನಾವು ಮಾಡಿಕೊಂಡಿರುವ ರಫೇಲ್ ಡೀಲ್ ಅತ್ಯುತ್ತಮವಾದುದು’ ಎಂದು ಗಟ್ಟಿದನಿಯಲ್ಲಿ ಪ್ರತಿಪಾದಿಸಿದರು.

‘2013ರಲ್ಲಿ ರಕ್ಷಣಾ ಸಚಿವರಾಗಿದ್ದ ಎ.ಕೆ.ಆಂಟನಿ ಅವರು ಅಚಾನಕ್ ರಫೇಲ್ ಯುದ್ಧವಿಮಾನ ಖರೀದಿ ಮಾತುಕತೆಗಳಲ್ಲಿ ಮಧ್ಯಪ್ರವೇಶಿಸಿದರು. ಇಡೀ ಮಾತುಕತೆಯ ಮೇಲೆ ಈ ಬೆಳವಣಿಗೆ ಪ್ರತಿಕೂಲ ಪರಿಣಾಮ ಉಂಟು ಮಾಡಿತು. ಆಂಟನಿ ಮಧ್ಯಪ್ರವೇಶವು ಆ ಹೊತ್ತಿಗಾಗಲೇ ಶವದಪೆಟ್ಟಿಗೆ ಸೇರಿದ್ದ ಒಪ್ಪಂದಕ್ಕೆ ಹೊಡೆದ ಕೊನೆಯ ಮೊಳೆಯಾಯಿತು’ ಎಂದು ಅಭಿಪ್ರಾಯಪಟ್ಟರು.

ಸಂವಾದದಲ್ಲಿ ನಿರ್ಮಲಾ ಸೀತಾರಾಮನ್ ಹಂಚಿಕೊಂಡ ಮಾಹಿತಿಯ ಮುಖ್ಯಾಂಶಗಳು ಇಲ್ಲಿವೆ...

‘ರಫೇಲ್ ಯುದ್ಧವಿಮಾನಗಳ ಖರೀದಿ ಸಂಬಂಧ ಎಚ್‌ಎಎಲ್ ಮತ್ತು ಫ್ರಾನ್ಸ್‌ನ ಡಸಾಲ್ಟ್ ಏವಿಯೇಶನ್ ಜೊತೆಗೆ ಹಲವು ಸುತ್ತಿನ ಸಮಾಲೋಚನಾ ಮಾತುಕತೆಗಳು ನಡೆದವು. ರಫೇಲ್ ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ಉತ್ಪಾದಿಸಲು ಮುಂದಾದರೆ ಅದರ ಬೆಲೆ ಹಲವು ಪಟ್ಟು ಹೆಚ್ಚಾಗಲಿದೆ ಎಂದು ಈ ವೇಳೆ ನಮಗೆ ತಿಳಿದುಬಂತು. ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಿದರೆ ಅದಕ್ಕೆ ಗ್ಯಾರೆಂಟಿ ಕೊಡಬೇಕಾಗಿತ್ತು. ಡಸಾಲ್ಟ್ ಕಂಪನಿಗೆ ಅದು ದೊಡ್ಡ ಬಾಬ್ತು ಎನಿಸಿತು. ವಾಯುಪಡೆಯು ಜೆಟ್ ವಿಮಾನಗಳಿಗೆ ಗ್ಯಾರೆಂಟಿ ಬಯಸುವುದು ನಿರೀಕ್ಷಿತ ಎನಿಸಿತ್ತು. ಗ್ಯಾರೆಂಟಿ ಕೊಡುವ ಪರಿಸ್ಥಿತಿಯಲ್ಲಿ ಎಚ್‌ಎಎಲ್ ಇರಲಿಲ್ಲ. ಇದೇ ಕಾರಣದಿಂದಾಗಿ ಎಚ್‌ಎಎಲ್ ಜೊತೆಗಿನ ಮಾತುಕತೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಡಸಾಲ್ಟ್‌ಗೆ ಸಾಧ್ಯವಾಗಲಿಲ್ಲ.

‘ಯುಪಿಎ ಅವಧಿಯಲ್ಲಿ ಆಗಿದ್ದ ಒಪ್ಪಂದಕ್ಕೆ ಹೋಲಿಸಿದರೆ ಮುಂದಿನ ವರ್ಷ, ಅಂದರೆ 2019ರ ಸೆಪ್ಟೆಂಬರ್‌ ತಿಂಗಳಿನಲ್ಲಿ ನಮಗೆ ಸಿಗಲಿರುವ ರಫೇಲ್ ಯುದ್ಧ ವಿಮಾನಗಳು ಶಸ್ತ್ರಬಳಕೆ, ಏವಿಯೋನಿಕ್ಸ್ (ವಿಮಾನಗಳಿಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ಸ್ ತಾಂತ್ರಿಕತೆ) ಸೇರಿದಂತೆ ಹಲವು ವಿಚಾರಗಳಲ್ಲಿ ಉನ್ನತ ಸ್ತರಕ್ಕೆ ಸೇರಿದ ತಾಂತ್ರಿಕತೆಯನ್ನು ಹೊಂದಿರುತ್ತವೆ. ಈ ಹಿಂದಿನ ಒಪ್ಪಂದದ ವೇಳೆ ನಿಗದಿಯಾಗಿದ್ದ ದರಕ್ಕಿಂತಲೂ ಶೇ9ರಷ್ಟು ರಿಯಾಯ್ತಿ ದರದಲ್ಲಿ ಯುದ್ಧ ವಿಮಾನಗಳು ನಮಗೆ ಸಿಗುತ್ತಿವೆ.

‘ಯುಪಿಎ ಸರ್ಕಾರವು 2012ರಲ್ಲಿ ಫ್ರಾನ್ಸ್‌ನ ಡಸಾಲ್ಟ್ ಏವಿಯೇಶನ್ ಜೊತೆಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಸಾಧ್ಯತೆಗಳಿರುವ ಯುದ್ಧ ವಿಮಾನಗಳ (ಎಂಎಂಆರ್‌ಸಿಎ– ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್‌ಕ್ರಾಫ್ಟ್) ಖರೀದಿಗೆ ಮಾತುಕತೆ ನಡೆಸಿತ್ತು. ‘ಡಸಾಲ್ಟ್ ಏವಿಯೇಶನ್ 18 ರಫೇಲ್ ಜೆಟ್‌ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಸರಬರಾಜು ಮಾಡಬೇಕು. ಎಚ್‌ಎಎಲ್ ಸಹಯೋಗದಲ್ಲಿ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕು’ ಎನ್ನುವ ಷರತ್ತು ಒಪ್ಪಂದದಲ್ಲಿ ಇತ್ತು. ಆದರೆ ಈ ಒಪ್ಪಂದ ಊರ್ಜಿತಕ್ಕೆ ಬರಲಿಲ್ಲ. ಒಪ್ಪಂದದಿಂದ ಎಚ್‌ಎಎಲ್ ಹೊರಗಿಟ್ಟಿದ್ದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.

‘ಎಚ್‌ಎಎಲ್‌ಗೆ 108 ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯವಿಲ್ಲ ಎನ್ನುವುದೇ ಈ ಒಪ್ಪಂದ ಮುರಿದುಬೀಳಲು ಮುಖ್ಯ ಕಾರಣ. ಎಚ್‌ಎಎಲ್‌ನಲ್ಲಿ ಉತ್ಪಾದನೆಯಾಗುವ ಯುದ್ಧ ವಿಮಾನಗಳ ವೆಚ್ಚವು ಫ್ರಾನ್ಸ್‌ನಲ್ಲಿ ತಯಾರಾಗುವ ವಿಮಾನಗಳ ವೆಚ್ಚಕ್ಕಿಂತ ಹೆಚ್ಚು ಎನ್ನುವ ಸಂಗತಿ ಎಚ್‌ಎಎಲ್ ಮತ್ತು ಡಸಾಲ್ಟ್ ನಡುವಣ ಮಾತುಕತೆ ವೇಳೆ ದೃಢಪಟ್ಟಿತ್ತು. ಹಿಂದಿನ ಸರ್ಕಾರ ಎಚ್‌ಎಎಲ್‌ಗೆ ಮತ್ತಷ್ಟು ಸಂಪನ್ಮೂಲ ನೀಡುವ ಮೂಲಕ ಸಹಾಯ ಮಾಡಬಹುದಿತ್ತು. ಆದರೆ ಅದು ಹಾಗೆ ಮಾಡಲಿಲ್ಲ.

‘ಎಚ್‌ಎಎಲ್‌ ಸಮರ್ಥ ಸಂಸ್ಥೆಯಲ್ಲ ಎಂದು ಹೀಗಳೆಯುವುದು ನನ್ನ ಉದ್ದೇಶವಲ್ಲ. (ರಫೇಲ್ ವಿಮಾನ ತಯಾರಿಕೆಗಾಗಿ) ‘ಎಚ್‌ಎಎಲ್‌ಗೆ ಬೇಕಿರುವ ಸಂಪನ್ಮೂಲಗಳನ್ನು ಒದಗಿಸಲಾಗುವುದು’ ಎಂದು ಅಂದಿನ ರಕ್ಷಣಾ ಸಚಿವರು ಹೇಳಬಹುದಿತ್ತು. ಅವರು ಅಗತ್ಯ ಸಂಪನ್ಮೂಲವನ್ನು ಒದಗಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಸರ್ಕಾರದ ಅಧೀನದಲ್ಲಿರುವ ವೈಮಾನಿಕ ಸಂಸ್ಥೆಯನ್ನು ಸದೃಢಗೊಳಿಸಲು ನಾವು ಈಗ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ.

‘ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2016ರಲ್ಲಿ 35 ರಫೇಲ್ ಯುದ್ಧ ವಿಮಾನಗಳನ್ನು ₹58 ಸಾವಿರ ಕೋಟಿಗೆ ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎನ್ನುವ ಕಾಂಗ್ರೆಸ್ ಪಕ್ಷದ ಆರೋಪದಲ್ಲಿ ಹುರುಳಿಲ್ಲ. ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿದೆ. ವಿರೋಧ ಪಕ್ಷದ ಆರೋಪಗಳಿಗೆ ಜನರು ಸೊಪ್ಪು ಹಾಕುವುದಿಲ್ಲ. ಪ್ರಧಾನಿ ಎಂದೂ ಭ್ರಷ್ಟರಾಗುವುದಿಲ್ಲ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಜನರಿಗೆ ಗೊತ್ತಾಗಿದೆ. ಇನ್ನು ಈ ಪ್ರಕರಣದ ಬಗ್ಗೆ ಜನರು ಹೆಚ್ಚು ಗಮನಕೊಡುವುದಿಲ್ಲ. ಇದು ಮುಗಿದ ಅಧ್ಯಾಯ.

‘ರಫೇಲ್ ಒಪ್ಪಂದ ಕುರಿತು ಮನವರಿಕೆ ಮಾಡಿಕೊಡಲು ವಿರೋಧಪಕ್ಷಗಳ ನಾಯಕರೊಂದಿಗೆ ಸಭೆ ನಡೆಸುವ ಆಸಕ್ತಿ ನನಗಿಲ್ಲ. ವಿರೋಧ ಪಕ್ಷಗಳ ನಾಯಕರು ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ವಾಯುಪಡೆಯ ಕಾರ್ಯಾಚರಣೆ ಸನ್ನದ್ಧತೆಯ ಕುರಿತು ಅವರಿಗೆ ಯಾವುದೇ ಕಾಳಜಿ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯಲು ಯಾವುದೇ ವಿಷಯಗಳು ದೊರೆಯುತ್ತಿಲ್ಲ. ಹೀಗಾಗಿ ರಫೇಲ್ ಒಪ್ಪಂದದಲ್ಲಿ ಭಷ್ಟ್ರಾಚಾರ ನಡೆದಿದೆ ಎನ್ನುವ ವಿಷಯವನ್ನು ಪ್ರಸ್ತಾಪಿಸುತ್ತಿದೆ. ದೇಶಕಂಡ ಅತ್ಯಂತ ಸ್ವಚ್ಛ, ಭ್ರಷ್ಟಾಚಾರ ಮುಕ್ತ ಸರ್ಕಾರ ಇದು. ಹತಾಶ ಸ್ಥಿತಿ ತಲುಪಿರುವ ಕಾಂಗ್ರೆಸ್‌ ಈ ಸರ್ಕಾರದಿಂದ ಕಲಿಯಬೇಕಾದ ಪಾಠಗಳು ಸಾಕಷ್ಟು ಇವೆ.

‘ಈ ಮಾತನ್ನು ನಾವು ಹೆಮ್ಮೆಯಿಂದ ಮತ್ತು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ; ಉದ್ಧಟತನದಿಂದ ಅಲ್ಲ. ರಕ್ಷಣಾ ಸಚಿವಾಲಯವನ್ನು ಮಧ್ಯವರ್ತಿಗಳ ಹಂಗಿಲ್ಲದೆ ಪಾರದರ್ಶಕವಾಗಿ ಮುನ್ನಡೆಸಲಾಗುತ್ತಿದೆ. ಮಧ್ಯವರ್ತಿಗಳೇ ಇಲ್ಲದೆ ರಕ್ಷಣಾ ಉತ್ಪನ್ನಗಳ ಖರೀದಿ ಸಾಧ್ಯವಿದೆ ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹526 ಕೋಟಿಗೆ ಯುದ್ಧವಿಮಾನ ಖರೀದಿ ಒಪ್ಪಂದ ಅಂತಿಮಗೊಂಡಿತ್ತ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಪ್ಪಂದದ ಮೊತ್ತ 1,670 ಕೋಟಿಗೆ ಏರಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ನಾನು ಇಷ್ಟಂತೂ ಹೇಳಬಲ್ಲೆ, ಕಾಂಗ್ರೆಸ್ ಅವಧಿಯಲ್ಲಿ ಮಾಡಿಕೊಂಡಿದ್ದ ಒಪ್ಪಂದ ಅನ್ವಯ ನಮಗೆ ಸಿಗುತ್ತಿದ್ದ ವಿಮಾನಗಳಿಗೆ ಹಾರುವ–ಇಳಿಯುವ ಸಾಮರ್ಥ್ಯ ಮಾತ್ರ ಇರುತ್ತಿತ್ತು. ಆದರೆ ಈಗ 

‘₹526 ಕೋಟಿ ವೆಚ್ಚದ ಒಪ್ಪಂದಿಂದ ದೊರಕುತ್ತಿದ್ದ ಯುದ್ಧವಿಮಾನಕ್ಕೆ ಹಾರುವ ಮತ್ತು ಕೆಳಗಿಳಿಯುವ ಸಾಮರ್ಥ್ಯವಷ್ಟೇ ಇತ್ತು. ವಾಯುಪಡೆಯ ಇತರ ಬೇಡಿಕೆಗಳನ್ನು ಪೂರೈಸುವ ಸ್ಥಿತಿಯಲ್ಲಿ ಅದು ಇರಲಿಲ್ಲ. ಈಗ ನಮಗೆ ಸಿಗಲಿರುವ ಯುದ್ಧವಿಮಾನಗಳಿಗೆ ಎಲ್ಲ ರೀತಿಯ ಸಾಮರ್ಥ್ಯ ಇರುತ್ತದೆ’

ಬರಹ ಇಷ್ಟವಾಯಿತೆ?

 • 15

  Happy
 • 5

  Amused
 • 1

  Sad
 • 1

  Frustrated
 • 7

  Angry

Comments:

0 comments

Write the first review for this !