ಗುರುವಾರ , ನವೆಂಬರ್ 14, 2019
18 °C
ವ್ಯಾಟಿಕನ್‌ನ ಸೇಂಟ್‌ ಪೀಟರ್‌ ಸ್ಕ್ವೇರ್‌ನಲ್ಲಿ ಪದವಿ ಪ್ರದಾನ

ಕೇರಳದ ಭಗಿನಿ ಮರಿಯಮ್‌ ಥ್ರೇಸಿಯಾಗೆ ಸಂತ ಪದವಿ

Published:
Updated:
Prajavani

ವ್ಯಾಟಿಕನ್‌ ನಗರ: ಕೇರಳದ ಸನ್ಯಾಸಿನಿ ಮರಿಯಮ್‌ ಥ್ರೇಸಿಯಾ ಸೇರಿದಂತೆ ಐವರಿಗೆ ಪೋಪ್‌ ಫ್ರಾನ್ಸಿಸ್‌ ಅವರು ಭಾನುವಾರ ‘ಸಂತ’ ಪದವಿ ನೀಡಿದ್ದಾರೆ. 

ಬ್ರಿಟನ್‌ನ ಕಾರ್ಡಿನಲ್‌ ಜಾನ್‌ ಹೆನ್ರಿ ನ್ಯೂಮೆನ್‌, ಸ್ವಿಟ್ಜರ್ಲೆಂಡ್‌ನ ಮಾರ್ಗರೆಟ್ ಬೇಯ್ಸ್‌, ಬ್ರೆಜಿಲ್‌ನ ಸಿಸ್ಟರ್‌ ದುಲ್ಸಿ ಲೋಪಸ್‌ ಮತ್ತು ಇಟಲಿಯ ಸಿಸ್ಟರ್‌ ಗಿಸೆಪ್ಪಿನಾ ವನ್ನಿನಿ ಅವರಿಗೂ ಸಂತ ಪದವಿ ಪ್ರದಾನ ಮಾಡಲಾಯಿತು. ಸೇಂಟ್‌ ಪೀಟರ್‌ ಸ್ಕ್ವೇರ್‌ನಲ್ಲಿ ಸಂತ ಪದವಿ ಪ್ರದಾನ ಸಮಾರಂಭ ನಡೆಯಿತು.

ಸೇಂಟ್‌ ಪೀಟರ್ಸ್‌ ಬೆಸಿಲಿಕಾದಲ್ಲಿ ಐವರು ನೂತನ ಸಂತರ ಬೃಹತ್‌ ಚಿತ್ರಗಳನ್ನು ಅಳವಡಿಸಲಾಗಿತ್ತು. ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್‌ ಭಾರತದ ನಿಯೋಗದ ನೇತೃತ್ವ ವಹಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರಿನ್ಸ್‌ ಚಾರ್ಲ್ಸ್‌ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಭಾನುವಾರ ನಡೆದ ಸಂತ ದೀಕ್ಷಾ ಪ್ರದಾನ ಸಮಾರಂಭದ ಬಳಿಕ ಇದೀಗ ಕೇರಳದ ಶತಮಾನದಷ್ಟು ಹಳೆಯದಾದ ಸಿರೋ–ಮಲಬಾರ್‌ ಚರ್ಚ್‌ನ ನಾಲ್ವರಿಗೆ ಸಂತ ಪದವಿ ದೊರೆತಂತಾಗಿದೆ.

2008ರಲ್ಲಿ ಸಿಸ್ಟರ್‌ ಅಲ್ಫೋನ್ಸಾ ಅವರಿಗೆ ಸಂತ ಪದವಿ ದೊರೆಯಿತು. ಪಾದ್ರಿ ಕುರಿಯಕೋಸ್ ಅಲಿಯಾಸ್‌ ಚವರಾ,  ಸಿಸ್ಟರ್‌ ಯುಫ್ರೇಷಿಯಾ ಅವರಿಗೂ 2014ರಲ್ಲಿ ಸಂತ ಪದವಿ ದೊರೆತಿದೆ. ಮರಿಯಮ್‌ ಥ್ರೇಸಿಯಾ ನಾಲ್ಕನೇಯವರು.

ಸಂತ ಪದವಿಗೇರಿದ ಐವರ ಪೈಕಿ ಮೂವರು ಮಹಿಳೆಯರಾಗಿದ್ದಾರೆ. ಸಿಸ್ಟರ್‌ ದುಲ್ಸಿ ಲೋಪಸ್‌ ಅವರು ಬ್ರೆಜಿಲ್‌ನಲ್ಲಿ ಆರೋಗ್ಯ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡವರಿಗೆ ನೆರವಾಗಿದ್ದರು. ಅವರ ಹೆಸರು ನೊಬೆಲ್‌ ಶಾಂತಿ ಪ್ರಶಸ್ತಿಗೆ ಎರಡು ಬಾರಿ ಶಿಫಾರಸುಗೊಂಡಿತ್ತು. ಈ ಪದವಿಗೇರಿದ ಬ್ರೆಜಿಲ್‌ನ ಮೊದಲನೇ
ಭಗಿನಿಯಾಗಿದ್ದಾರೆ. 

ಅತೀಂದ್ರಿಯ ಶಕ್ತಿ ಗಳಿಸಿದ ಸಾಧಕಿ

ಥ್ರೇಸಿಯಾ ಅವರಿಗೆ 1904ರಲ್ಲಿ ವರ್ಜಿನ್‌ ಮೇರಿಯ ಪ್ರೇರಣೆ ದೊರೆತ ಬಳಿಕ, ಅವರು ತಮ್ಮ ಹೆಸರಿನೊಡನೆ ‘ಮರಿಯಮ್‌’ ಎಂದು ಸೇರಿಸಿಕೊಂಡರು. 

ಕೇರಳದ ತ್ರಿಶೂರ್‌ನಲ್ಲಿ 1914ರ ಮೇ ತಿಂಗಳಲ್ಲಿ ‘ಕಾಂಗ್ರಿಗೇಷನ್‌ ಆಫ್‌ ದ ಸಿಸ್ಟರ್ಸ್‌ ಅಫ್‌ ದ ಹೋಲಿ ಫ್ಯಾಮಿಲಿ’ಯನ್ನು ಮರಿಯಮ್‌ ಥ್ರೇಸಿಯಾ ಸ್ಥಾಪಿಸಿದ್ದರು. ಅನಾರೋಗ್ಯದಿಂದ ಬಳಲುವವರಿಗೆ ಶುಶ್ರೂಷೆ ಮಾಡುತ್ತಿದ್ದರು.

ಭವಿಷ್ಯದ ಕಾಲಜ್ಞಾನ, ರೋಗಗಳನ್ನು ಶಮನ ಮಾಡುವ ಸಾಮರ್ಥ್ಯ ಮುಂತಾದ ಅತೀಂದ್ರಿಯ ಶಕ್ತಿ ಅವರಿಗೆ ದೊರೆತಿತ್ತು. ದೇವರು ಅವರಿಗೆ ಬೆಳಕಿನ ಪ್ರಭಾವಳಿಯನ್ನು ಕೊಟ್ಟಿದ್ದರು. ಅವರ ಸಾಮೀಪ್ಯವು ಆಹ್ಲಾದಕರ ಸೌಗಂಧ ಬೀರುತ್ತಿತ್ತು. ಅನೇಕ ಬಾರಿ ಅವರು ಭಾವಪರವಶರಾಗುತ್ತಿದ್ದರು ಎಂದು ವ್ಯಾಟಿಕನ್‌ ನ್ಯೂಸ್‌ ಹೇಳಿದೆ.

ತ್ರಿಶ್ಶೂರ್‌ನಲ್ಲಿ ಸಂಭ್ರಮ: ಮರಿಯಮ್‌ ಅವರ ಹುಟ್ಟೂರು ತ್ರಿಶ್ಶೂರ್‌ನಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಯಿತು. ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಹಮ್ಮಿಕೊಳ್ಳಲಾಯಿತು. ಕುಳಿಕಟ್ಟುಶೆರಿಯಲ್ಲಿರುವ ಮರಿಯಮ್‌ ಸಮಾಧಿ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ತ್ರಿಶೂರಿನಲ್ಲಿ ಸಂಭ್ರಮ 

ಮರಿಯಮ್‌ ಅವರ ಹುಟ್ಟೂರು ತ್ರಿಶೂರಿನಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಯಿತು. ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಹಮ್ಮಿಕೊಳ್ಳಲಾಯಿತು.

ಕುಳಿಕಟ್ಟುಶೆರಿಯಲ್ಲಿರುವ ಮರಿಯಮ್‌ ಸಮಾಧಿ ಬಳಿ ನೂರಾರು ಜನರು ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅವರ ಪ್ರತಿಮೆಯ ಮೇಲೆ ಕಿರೀಟ ತೊಡಿಸಲಾಯಿತು. 

 

 

ಪ್ರತಿಕ್ರಿಯಿಸಿ (+)