ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ- ಅಗಲ| ಪೋಷಣ ಅಭಿಯಾನ ನಿತ್ರಾಣ

ಕರ್ನಾಟಕ: ಅನುದಾನ ಇದ್ದರೂ ಜಾರಿಯಾಗದ ಕಾರ್ಯಕ್ರಮಗಳು
Last Updated 25 ಫೆಬ್ರುವರಿ 2020, 20:23 IST
ಅಕ್ಷರ ಗಾತ್ರ

ನವಜಾತ ಶಿಶುಗಳ ಮರಣ ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ತಗ್ಗಿಸಲು ಕೇಂದ್ರ ಸರ್ಕಾರ ಶುರುಮಾಡಿದ ಯೋಜನೆಯೇ ಪೋಷಣ ಅಭಿಯಾನ. ಈ ಅಭಿಯಾನದ ಪ್ರಗತಿಗೆ ಸಂಬಂಧಿಸಿದಂತೆ ನೀತಿ ಆಯೋಗ ವರದಿ ಸಿದ್ಧಪಡಿಸಿದ್ದು, ಅಪೌಷ್ಟಿಕ ಸಮಸ್ಯೆ ನೀಗಿಸುವಲ್ಲಿ ಕರ್ನಾಟಕದ ಸಾಧನೆ ನಿರಾಶಾದಾಯಕವಾಗಿದೆ. ಕರ್ನಾಟಕವು ಅನುದಾನದ ಬಳಕೆಯಲ್ಲಿ ಮುಂದಿದ್ದರೂ ನಿಶ್ಚಿತ ಗುರಿ ತಲುಪುವಲ್ಲಿ ಹಿಂದೆ ಬಿದ್ದಿದೆ ಎನ್ನುತ್ತದೆ ವರದಿ. ನವಜಾತ ಶಿಶುಗಳ ಮರಣದ ಪ್ರಮಾಣ ತಪ್ಪಿಸುವಲ್ಲಿ ಮಾತ್ರ ರಾಜ್ಯಕ್ಕೆ ಒಳ್ಳೆಯ ಅಂಕಗಳು ಸಿಕ್ಕಿವೆ. ನೀತಿ ಆಯೋಗದ ಆ ವರದಿ ಮೇಲಿನ ಒಂದು ಅವಲೋಕನ ಇಲ್ಲಿದೆ...

ಅಪೌಷ್ಟಿಕತೆಯನ್ನು ಹೋಗಲಾಡಿಸುವ ಸಲುವಾಗಿ ಕೇಂದ್ರ ಸರ್ಕಾರವು ಆರಂಭಿಸಿರುವ ‘ಪೋಷಣ ಅಭಿಯಾನ’ದ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕವು ಹಿಂದೆ ಬಿದ್ದಿದೆ. ನೀತಿ ಆಯೋಗವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ‘ಪೋಷಣ ಅಭಿಯಾನ: ಪ್ರಗತಿ ವರದಿ’ಯಲ್ಲಿ ಈ ಮಾಹಿತಿ ಇದೆ.

ಅಭಿಯಾನದ ಅನುಷ್ಠಾನವನ್ನು ಪರಿಶೀಲಿಸುವ ಉದ್ದೇಶದಿಂದ ನೀತಿ ಆಯೋಗವು ದೇಶದಾದ್ಯಂತ ಸಮೀಕ್ಷೆ ನಡೆಸಿದೆ. ಪೋಷಣ ಅಭಿಯಾನದ ಕಾರ್ಯಕ್ರಮಗಳನ್ನು ಹಲವು ವಲಯಗಳಾಗಿ ವಿಂಗಡಿಸಿ, ಪ್ರಗತಿಯನ್ನು ಪರಿಶೀಲಿಸಲಾಗಿದೆ. ಆದರೆ, ಬಹುತೇಕ ಎಲ್ಲಾ ವಲಯಗಳಲ್ಲಿ ಕರ್ನಾಟಕವು ಕಡಿಮೆ ಅಂಕ ಪಡೆದಿದೆ.

ಅಪೌಷ್ಟಿಕತೆ ನಿರ್ಮೂಲನೆಗೆ ಕಾರ್ಯ ಯೋಜನೆ ಸಿದ್ಧಪಡಿಸುವುದು, ರಾಜ್ಯ ಮಟ್ಟದ ನಿರ್ವಹಣಾ ಸಮಿತಿ ರಚಿಸುವುದು, ಅಪೌಷ್ಟಿಕತೆ ನಿರ್ಮೂಲನೆ ಪ್ರಮಾಣ ಮೇಲ್ವಿಚಾರಣೆಗೆ ಉಪಕರಣಗಳ ಖರೀದಿ ಮತ್ತು ಸಿಬ್ಬಂದಿಗೆ ತರಬೇತಿ ನೀಡುವುದರಲ್ಲಿ ರಾಜ್ಯವು ಸಂಪೂರ್ಣ ವಿಫಲವಾಗಿದೆ. ಈ ಎಲ್ಲಾ ವಲಯಗಳಲ್ಲಿ ಕರ್ನಾಟಕವು ‘ಶೂನ್ಯ’ ಅಂಕಗಳನ್ನು ಪಡೆದಿದೆ.

ಈ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ದೇಶದ 19ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಕೊನೆಯ ಎರಡನೇ ಸ್ಥಾನದಲ್ಲಿದೆ. ಅಭಿಯಾನದ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದ ರಾಜ್ಯಗಳ ಪಟ್ಟಿಯಲ್ಲೂ ಕರ್ನಾಟಕವು ಕೊನೆಯ ಎರಡನೇ ಸ್ಥಾನದಲ್ಲಿದೆ.

ಅಭಿಯಾನದ ಅಡಿ ಬಿಡುಗಡೆ ಮಾಡಲಾದ ಅನುದಾನ ಬಳಕೆಯಲ್ಲಿ ಮಹಾರಾಷ್ಟ್ರ (54%) ಮೊದಲ ಸ್ಥಾನದಲ್ಲಿದೆ. ಅನುಷ್ಠಾನದಲ್ಲಿ ಹಿಂದೆ ಉಳಿದಿದ್ದರೂ ಕರ್ನಾಟಕವು ಶೇ 40ರಷ್ಟು ಅನುದಾನವನ್ನು ಬಳಕೆ ಮಾಡಿಕೊಂಡಿದ್ದು, ಎರಡನೇ ಸ್ಥಾನದಲ್ಲಿದೆ. ಅಭಿಯಾನದ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹಿಂದೆ ಉಳಿದಿದ್ದರೂ, ಅಂಗನವಾಡಿ ಮೂಲಕ ವಾರಕ್ಕೊಮ್ಮೆ ಪೌಷ್ಟಿಕ ಆಹಾರ ಪೂರೈಕೆಯಲ್ಲಿ ಅನುಷ್ಠಾನದ ಪ್ರಮಾಣ ಶೇ 90ಕ್ಕಿಂತ ಹೆಚ್ಚು. ಹೀಗಾಗಿ ಅನುದಾನ ಬಳಕೆಯಲ್ಲಿ ಎರಡನೇ ಸ್ಥಾನ ಪಡೆದಿದೆ.

ಅನುದಾನ ಬಳಕೆಯಲ್ಲಿ ಬಿಹಾರವು (35%) ಮೂರನೇ ಸ್ಥಾನದಲ್ಲಿದೆ. ಕೆಲವು ರಾಜ್ಯಗಳಲ್ಲಿ ಈ ಪ್ರಮಾಣ ಶೇ 5ಕ್ಕಿಂತಲೂ ಕಡಿಮೆಯಿದೆ. ಅನುದಾನ ಬಳಕೆಯಲ್ಲಿ ರಾಜ್ಯಗಳು ವಿಫಲವಾಗುತ್ತಿರುವ ಬಗ್ಗೆ ನೀತಿ ಆಯೋಗವು ತೀವ್ರ ಕಳವಳ ವ್ಯಕ್ತಪಡಿಸಿದೆ.ಕಾರ್ಯಯೋಜನೆ ಇಲ್ಲದೇ ಇರುವುದು, ಅನುದಾನ ಬಳಕೆ ಆಗದೇ ಇರುವುದರ ಮೊದಲ ಕಾರಣ. ಪರಿಸ್ಥಿತಿ ಹೀಗೇ ಮುಂದುವರಿದರೆ, ಹಲವು ರಾಜ್ಯಗಳಲ್ಲಿ ಅಭಿಯಾನವು ವಿಫಲವಾಗುವ ಅಪಾಯವಿದೆ. ಇದನ್ನು ತಪ್ಪಿಸಬೇಕು ಅಂದರೆ, ಕರ್ನಾಟಕವೂ ಸೇರಿ ಅನುಷ್ಠಾನದಲ್ಲಿ ಹಿಂದುಳಿದಿರುವ ಎಲ್ಲಾ ರಾಜ್ಯಗಳೂ ತಕ್ಷಣವೇ ಕಾರ್ಯಪ್ರವೃತ್ತವಾಗಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ನವಜಾತ ಶಿಶು ಮರಣ ಇಳಿಕೆ

ನವಜಾತ ಶಿಶುಗಳ ಆರೋಗ್ಯ ರಕ್ಷಣೆಯಲ್ಲಿ ಕರ್ನಾಟಕ ಈಗ ಮುಂಚೂಣಿಯಲ್ಲಿದ್ದು, ಇತರ ರಾಜ್ಯಗಳಿಗೆ ಮಾದರಿ ಎನಿಸುವಂತಹ ಹೆಜ್ಜೆ ಇರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ರಾಜ್ಯದಲ್ಲಿ ನವಜಾತ ಶಿಶುಗಳ 41 ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಆ ಪೈಕಿ 22 ಕೇಂದ್ರಗಳಲ್ಲಿ ಕೃತಕ ಉಸಿರಾಟ ವ್ಯವಸ್ಥೆ ಸೇರಿದಂತೆ ಎಲ್ಲ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೀಗಾಗಿ ಶಿಶುಗಳ ಮರಣದ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ. 2018ರಲ್ಲಿ ಒಟ್ಟಾರೆ 61,529 ಶಿಶುಗಳು ಈ ಕೇಂದ್ರಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದವು. ಅವುಗಳಲ್ಲಿ ಶೇ 76ರಷ್ಟು ಶಿಶುಗಳು ಗುಣಮುಖವಾಗಿ ಬಿಡುಗಡೆ ಹೊಂದಿವೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.

ಶಿಶು ಆಸ್ಪತ್ರೆಗಳಲ್ಲಿ ‘ಕಾಂಗರೂ ಮದರ್‌’ ವಾರ್ಡ್‌ ಹಾಗೂ ಎದೆಹಾಲು ಉಣಿಸುವ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದ್ದು, ಜನಿಸುವಾಗ ಕಡಿಮೆ ತೂಕ ಇರುವ ಶಿಶುಗಳ ಜೀವ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಬೆಂಗಳೂರಿನ ಇಂದಿರಾಗಾಂಧಿ ಶಿಶು ರೋಗಗಳ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವೈದ್ಯಕೀಯ ಅಧಿಕಾರಿಗಳು ಹಾಗೂ ನರ್ಸ್‌ಗಳಿಗೆ ತರಬೇತಿಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಕರ್ನಾಟಕ ನವಜಾತ ಶಿಶುಗಳ ಕ್ರಿಯಾ ಯೋಜನೆಯನ್ನೂ ಸಿದ್ಧಪಡಿಸಲಾಗಿದ್ದು, ನವಜಾತ ಶಿಶುಗಳ ಮರಣದ ಪ್ರಮಾಣವನ್ನು ಇನ್ನಷ್ಟು ತಗ್ಗಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ ಎಂದು ವರದಿ ಹೇಳುತ್ತದೆ.

ಏನಿದು ಕಾಂಗರೂ ಕೇರ್‌?

ಜನಿಸುವಾಗ ಕಡಿಮೆ ತೂಕ ಹಾಗೂ ಅಕಾಲಿಕ ಜನನ ನವಜಾತ ಶಿಶುಗಳ ಮರಣಕ್ಕೆ ಪ್ರಮುಖ ಕಾರಣವಾಗಿದೆ. ನವಜಾತ ಶಿಶುಗಳಲ್ಲಿ ಇಂತಹ ಸಮಸ್ಯೆ ಎದುರಿಸುತ್ತಿರುವ ಕೂಸುಗಳ ಸಂಖ್ಯೆಯೇ ಶೇ 35ರಷ್ಟಿದೆ. ಎಲ್ಲ ಶಿಶುಗಳನ್ನು ತುರ್ತು ನಿಗಾ ಘಟಕಕ್ಕೆ ಸೇರಿಸುವುದಾದರೆ, ಸ್ಥಳಾವಕಾಶದ ಲಭ್ಯತೆ, ವೈಯಕ್ತಿಕ (ನರ್ಸ್‌ಗಳು/ವೈದ್ಯರು) ನಿಗಾ, ತಪಾಸಣಾ ಉಪಕರಣ, ಶಾಖ ಒದಗಿಸುವ ಸಾಧನವನ್ನು ಎಲ್ಲರಿಗೂ ಒದಗಿಸುವುದು ಕಷ್ಟ. ಅಲ್ಲದೆ, ಇಷ್ಟೊಂದು ವೆಚ್ಚ ಮಾಡಿ, ಶಿಶುಗಳಿಗೆ ಚಿಕಿತ್ಸೆ ಕೊಡಿಸುವಷ್ಟು ಶಕ್ತಿಯು ಬಡ ಕುಟುಂಬಗಳಿಗೆ ಇರುವುದಿಲ್ಲ. ಹೀಗಾಗಿ ಇನ್‌ಕ್ಯುಬೇಟರ್‌ಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ರೂಪುಗೊಂಡ ವಿಧಾನ ಕಾಂಗರೂ ಮದರ್‌ ಕೇರ್‌. ಕಾಂಗರೂ ಪ್ರಾಣಿ ತನ್ನ ಮರಿಯನ್ನು ಚೀಲದಲ್ಲಿ ಇಟ್ಟುಕೊಳ್ಳುವ ಹಾಗೆ, ತಾಯಿ ತನ್ನ ಎದೆಯ ನಡುವೆ ಮಗುವನ್ನು ಇರಿಸಿಕೊಳ್ಳುವುದರಿಂದ ಇದಕ್ಕೆ ಈ ಹೆಸರು.

ಈ ಪದ್ಧತಿಯಲ್ಲಿ ಮಗುವನ್ನು ಒಂದು ವಿಶೇಷ ಚೀಲದಲ್ಲಿ ಇರಿಸಿ ತಾಯಿಯ ಎದೆಗೆ ಕಟ್ಟಲಾಗುತ್ತದೆ. ಅಮ್ಮನ ಎದೆಯ ನಡುವೆ ಮಗು ಇರುವಂತೆ ಚೀಲವನ್ನು ಇರಿಸಲಾಗುತ್ತದೆ. ಇದರಿಂದ ತಾಯಿ ಹಾಗೂ ಮಗುವಿನ ನಡುವೆ ಚರ್ಮ-ಚರ್ಮಗಳ ಸಂಪರ್ಕ ನಿರಂತರ ಸಾಧ್ಯವಾಗುತ್ತದೆ. ಅಲ್ಲದೆ, ಈ ವಿಧಾನದಲ್ಲಿ ಮಗುವಿಗೆ ಎದೆಹಾಲು ಉಣಿಸುವುದೂ ಸುಲಭ. ಮಗುವಿಗೆ ನೈಸರ್ಗಿಕವಾಗಿ ದಕ್ಕಬೇಕಾದ ಸೂಕ್ತ ಶಾಖ (ಹೆಚ್ಚು ಶಾಖವಾಗುವ ಅಥವಾ ಸುಡುವ ಸಾಧ್ಯತೆಯೇ ಇಲ್ಲ) ಹಾಗೂ ನೈಸರ್ಗಿಕ ಆಹಾರ ದೊರಕುವುದಲ್ಲದೆ, ಯಾವುದೇ ಸೋಂಕು ತಗುಲಲಾರದು. ಇದರಿಂದಾಗಿ ತಾಯಿ ಮತ್ತು ಮಗುವಿನ ಅನುಬಂಧವೂ ಗಟ್ಟಿಯಾಗುತ್ತದೆ.

ಪ್ರಗತಿಯ ಮೌಲ್ಯಮಾಪನ

‘ಪೋಷಣ’ ಅಭಿಯಾನ ಜಾರಿಯಲ್ಲಿ ಕೆಲವುಕ್ಷೇತ್ರಗಳ ಪ್ರಗತಿಯೇ ನಿರ್ಣಾಯಕ. ಭರ್ತಿಯಾಗದ ಖಾಲಿ ಹುದ್ದೆಗಳು, ಖರ್ಚಾಗದ ಅನುದಾನ ಮೊದಲಾದ ವಿಚಾರಗಳಲ್ಲಿರಾಜ್ಯದಿಂದ ರಾಜ್ಯಕ್ಕೆ ಭಿನ್ನತೆ ಇದೆ. ಕರ್ನಾಟಕ ಈ ಎಲ್ಲ ವಿಭಾಗಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಬೇಕಿದೆ ಎಂದು ನೀತಿ ಆಯೋಗ ಅಭಿಪ್ರಾಯಪಟ್ಟಿದೆ.

ಸಿಬ್ಬಂದಿ ಕೊರತೆ: ಮಹಿಳಾ ಮೇಲ್ವಿಚಾರಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ), ಡಿಪಿಒ ಸೇರಿದಂತೆ ಮೇಲ್ವಿಚಾರಣೆ ಶ್ರೇಣಿಯಲ್ಲಿ ದೊಡ್ಡ ಸಂಖ್ಯೆಯ ಸಿಬ್ಬಂದಿ ಕೊರತೆ ಬಹುತೇಕ ರಾಜ್ಯಗಳಲ್ಲಿ ಕಂಡುಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಖಾಲಿ ಹುದ್ದೆ ಪ್ರಮಾಣ ಶೇ 25ರಷ್ಟಿದೆ. ಈ ಪ್ರಮಾಣ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ.

- ಕರ್ನಾಟಕ ಮತ್ತು ಪಂಜಾಬ್‌ನಲ್ಲಿ ರಾಜ್ಯ ಯೋಜನೆ ನಿರ್ವಹಣಾ ಘಟಕಗಳು (ಎಸ್‌ಪಿಎಂಯು) ಸ್ಥಾಪನೆಯಾಗಿಲ್ಲ

- 10 ದೊಡ್ಡ ರಾಜ್ಯಗಳಲ್ಲಿ ಶೇ 30ರಷ್ಟು ಹುದ್ದೆಗಳು ಖಾಲಿ ಬಿದ್ದಿವೆ; ಗುಜರಾತ್‌ನಲ್ಲಿ ಮಾತ್ರ ಈ ಹುದ್ದೆ ಭರ್ತಿಯಾಗಿವೆ

- ಮಾತೃವಂದನಾ ಯೋಜನೆಯಡಿ ರಾಜ್ಯಮಟ್ಟದಲ್ಲಿ 60 ಹಾಗೂ ಜಿಲ್ಲಾ ಮಟ್ಟದಲ್ಲಿ 1,434 ಗುತ್ತಿಗೆ ಸಿಬ್ಬಂದಿ ನೇಮಕಕ್ಕೆ ಅವಕಾಶವಿದೆ. ಆದರೆ ನೇಮಕಾತಿಯು ನಿಗದಿತ ಗುರಿ ತಲುಪಿಲ್ಲ (2019ರ ಫೆಬ್ರುವರಿವರೆಗೆ)

ಸಾಂಸ್ಥಿಕ ಸಿದ್ಧತೆ:ರಾಜ್ಯಕ್ಕೆ ಕನಿಷ್ಠ ಅಂಕ

ಪೋಷಣ ಅಭಿಯಾನವನ್ನು ಅನುಷ್ಠಾನಕ್ಕೆ ತರಲು ಅಗತ್ಯವಾದ ಸಿದ್ಧತೆಯನ್ನು ರಾಜ್ಯ ಸರ್ಕಾರಗಳು ಮಾಡಿಕೊಳ್ಳಬೇಕಿತ್ತು. ಬಹುತೇಕ ರಾಜ್ಯಗಳು ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿವೆ. ಅಭಿಯಾನವನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಇದೆ. ಇವರಿಗೆ ತರಬೇತಿ ನೀಡುವುದೂ ಅಭಿಯಾನದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು.ಇದಕ್ಕಾಗಿ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳ ಗುಂಪನ್ನು ರಚಿಸಬೇಕಿತ್ತು. ಆದರೆ, ಕರ್ನಾಟಕದಲ್ಲಿ ರಾಜ್ಯ, ಜಿಲ್ಲೆ
ಮತ್ತು ತಾಲ್ಲೂಕು ಮಟ್ಟದಲ್ಲಿ ಇಂತಹ ಗುಂಪುಗಳನ್ನು ರಚಿಸಿಲ್ಲ.

- ಈ ಸೂಚಿಯಲ್ಲಿ ಪ್ರಗತಿಯನ್ನು ಗುರುತಿಸಲು ಗರಿಷ್ಠ 20 ಅಂಕಗಳನ್ನು ನೀಡಲಾಗುತ್ತದೆ

- ತರಬೇತಿ ನೀಡುವ ವಿಚಾರದಲ್ಲಿ ಕರ್ನಾಟಕವು ‘ಶೂನ್ಯ’ ಅಂಕ ಪಡೆದಿದೆ

- ಅನುದಾನವನ್ನು ಬಳಕೆ ಮಾಡಿಕೊಂಡಿರುವ ಕಾರಣಕ್ಕೆ, ಕರ್ನಾಟಕವು 2 ಅಂಕಗಳನ್ನು ಪಡೆದಿದೆ

ಸ್ಮಾರ್ಟ್‌ಫೋನ್ ಖರೀದಿ

ಸ್ಮಾರ್ಟ್‌ಫೋನ್‌ ಹಾಗೂ ಮಾಪಕ ಸಾಧನಗಳ ಖರೀದಿ ಹಾಗೂ ಪೂರೈಕೆಯೇ ಎಲ್ಲ ರಾಜ್ಯಗಳಲ್ಲಿ ದೊಡ್ಡ ಸವಾಲಾಗಿದೆ.ಅಪೌಷ್ಟಿಕತೆ ನಿರ್ಮೂಲನೆ ಪ್ರಗತಿ ಯನ್ನುಅಂಗನವಾಡಿ ಮಟ್ಟದಲ್ಲಿ ಪರಿಶೀಲಿಸಲು ಕೆಲವುಉಪಕರಣಗಳನ್ನು ಖರೀದಿಸಲು ಅಭಿಯಾನದ ಅಡಿ ರಾಜ್ಯಗಳಿಗೆ ಸೂಚಿಸಲಾಗಿತ್ತು. ಇದಕ್ಕಾಗಿ ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು. ಮಕ್ಕಳ ತೂಕವನ್ನು ಪರಿಶೀಲಿಸುವ ಯಂತ್ರ, ಶಿಶುಗಳ ಎತ್ತರ ಮಾಪನ ಯಂತ್ರ, ಮಕ್ಕಳ ಎತ್ತರ ಮಾಪನ ಯಂತ್ರಗಳನ್ನು ಖರೀದಿಸಬೇಕಿತ್ತು. ಆದರೆ ಕರ್ನಾಟಕದಲ್ಲಿ, ಈ ಅಭಿಯಾನದ ಅಡಿ ಒಂದು ಯಂತ್ರವನ್ನೂ ಖರೀದಿಸಿಲ್ಲ. ಹೀಗಾಗಿ ಅಪೌಷ್ಟಿಕತೆ ನಿರ್ಮೂಲನೆಯನ್ನು ಅಂಗನವಾಡಿ ಮಟ್ಟದಲ್ಲೇ ಪರಿಶೀಲಿಸುವ ಉದ್ದೇಶ ವಿಫಲವಾಗಿದೆ. ಇನ್ನು ದತ್ತಾಂಶಗಳನ್ನು ಸಂಗ್ರಹಿಸುವ ಉದ್ದೇಶದಿಂದ ಸ್ಮಾರ್ಟ್‌ಫೋನ್ ಬಳಕೆಗೆ ನಿರ್ಧರಿಸಲಾಗಿತ್ತು. ಆದರೆ ರಾಜ್ಯದ ಯಾವ ಜಿಲ್ಲೆಯಲ್ಲೂ ಸ್ಮಾರ್ಟ್‌ಫೋನ್ ವಿತರಿಸಲಾಗಿಲ್ಲ. ಸ್ಮಾರ್ಟ್‌ಫೋನ್ ಹಾಗೂ ಯಂತ್ರಗಳ ಖರೀದಿಗೆ ಕರ್ನಾಟಕವು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ನೀತಿ ಆಯೋಗವು ವರದಿಯಲ್ಲಿ ಹೇಳಿದೆ. ಅಸ್ಸಾಂ, ಹರಿಯಾಣ, ಗುಜರಾತ್‌, ಕೇರಳ, ಪಂಜಾಬ್, ಮಹಾರಾಷ್ಟ್ರ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿವೆ.

ನಿಧಿ ಬಳಕೆ

ಯೋಜನೆಯೊಂದರ ಯಶಸ್ಸಿಗೆ ನಿಧಿಯ ಸಮರ್ಪಕ ಬಳಕೆ ಅತಿಮುಖ್ಯ. ಪೋಷಣ ಅಭಿಯಾನದಲ್ಲಿ ನಿಧಿ ಬಳಕೆ ಪ್ರಮಾಣ ವಿವಿಧ ರಾಜ್ಯಗಳಲ್ಲಿ ವ್ಯತ್ಯಾಸವಿದೆ. ದೊಡ್ಡ ರಾಜ್ಯಗಳಲ್ಲಿ ಈ ಪ್ರಮಾಣ ಶೇ 20ರಷ್ಟಿದ್ದರೆ, ಚಿಕ್ಕ ರಾಜ್ಯಗಳಲ್ಲಿ ಶೇ 42ರಷ್ಟಿದೆ

-ಹರಿಯಾಣ, ಪಂಜಾಬ್, ಗೋವಾ, ತಮಿಳುನಾಡು, ದೆಹಲಿಯಲ್ಲಿ ಶೇ 5ಕ್ಕಿಂತ ಕಡಿಮೆ ಹಣ ಖರ್ಚು ಮಾಡಲಾಗಿದೆ

- ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದರೂ, ಸ್ಮಾರ್ಟ್‌ಫೋನ್ ಹಾಗೂ ಮಾಪನ ಯಂತ್ರಗಳ ಖರೀದಿಯಲ್ಲಿ ರಾಜ್ಯಗಳು ಅಸಡ್ಡೆ ತೋರಿವೆ

-ನಿಧಿ ಬಳಕೆಯಾಗದ ಕಾರಣ, ಯೋಜನೆ ಅನುಷ್ಠಾನಗೊಳಿಸುವ ತಳಮಟ್ಟದ ಕಾರ್ಯಕರ್ತರ ಕೆಲಸಕ್ಕೆ ಹಾಗೂ ಫಲಾನುಭವಿಗಳಿಗೆ ತೊಂದರೆಯಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT