ಪರ‍್ರೀಕರ್‌– ಆರ್‌ಎಸ್‌ಎಸ್‌ ನಿಷ್ಠೆಗೆ ಒಲಿದ ಸಿ.ಎಂ ಹುದ್ದೆ

ಶುಕ್ರವಾರ, ಏಪ್ರಿಲ್ 26, 2019
31 °C
46ನೇ ವಯಸ್ಸಿಗೆ ಗೋವಾ ಮುಖ್ಯಮಂತ್ರಿಯಾದ ಪ್ರಮೋದ್‌ ಸಾವಂತ್

ಪರ‍್ರೀಕರ್‌– ಆರ್‌ಎಸ್‌ಎಸ್‌ ನಿಷ್ಠೆಗೆ ಒಲಿದ ಸಿ.ಎಂ ಹುದ್ದೆ

Published:
Updated:
Prajavani

ಪಣಜಿ: ಗೋವಾದ ನಿಕಟಪೂರ್ವ ಮುಖ್ಯಮಂತ್ರಿ ಮನೋಹರ್‌ ಪರ‍್ರೀಕರ್‌ ಅವರ ಆಪ್ತ ಮತ್ತು ಆರ್‌ಎಸ್‌ಎಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿರುವ ಪ್ರಮೋದ್‌ ಸಾವಂತ್‌ ಈಗ ಗೋವಾ ಮುಖ್ಯಮಂತ್ರಿ.

ಎರಡು ಬಾರಿ ಶಾಸಕರಾಗಿ, ವಿಧಾನಸಭಾ ಸ್ಪೀಕರ್‌ ಆಗಿಯೂ ಕಾರ್ಯನಿರ್ವಹಿಸಿರುವ ಅವರಿಗೆ 46ನೇ ವಯಸ್ಸಿಗೆ ಮುಖ್ಯಮಂತ್ರಿ ಹುದ್ದೆ ಒಲಿದು ಬಂದಿದೆ. ವಿವಾದಗಳಿಂದ ದೂರ ಇರುವ ಸಾವಂತ್‌ ಅವರನ್ನು ಮೊದಲಿನಿಂದಲೂ, ಪರ‍್ರೀಕರ್‌ ಅವರ ನಂತರದ ಆಯ್ಕೆ ಎಂದೇ ಪರಿಗಣಿಸಲಾಗಿತ್ತು.

ಪಾಂಡುರಂಗ ಮತ್ತು ಪದ್ಮಿನಿ ಸಾವಂತ್‌ ದಂಪತಿಯ ಮಗನಾಗಿ 1973ರ ಏಪ್ರಿಲ್‌ 24ರಂದು ಜನಿಸಿರುವ ಪ್ರಮೋದ್ ಸಾವಂತ್, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿನ ಗಂಗಾ ಎಜುಕೇಶನ್‌ ಸೊಸೈಟಿ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅಲ್ಲದೆ, ಪುಣೆಯ ತಿಲಕ್‌ ಮಹಾರಾಷ್ಟ್ರ ವಿಶ್ವವಿದ್ಯಾಲಯದಿಂದ ಸಾಮಾಜಿಕ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಬಿಜೆಪಿ ಯುವನಾಯಕನಾಗಿ ರಾಜಕೀಯ ಜೀವನ ಆರಂಭಿಸಿದ ಸಾವಂತ್, ಪರ‍್ರೀಕರ್‌ ಅವರ ಕಟ್ಟಾ ಬೆಂಬಲಿಗ. ಸದಾ ಅವರೊಂದಿಗೆ ಕೆಲಸ ಮಾಡಿದ ಅದೃಷ್ಟಶಾಲಿ. ಕಾಂಗ್ರೆಸ್‌ನ ಹಿಡಿತ ಹೆಚ್ಚು ಗಟ್ಟಿಯಾಗಿದ್ದ ಉತ್ತರ ಗೋವಾದ ಸಂಖಲಿಮ್‌ ಕ್ಷೇತ್ರದಲ್ಲಿ 2012 ಮತ್ತು 2017ರಲ್ಲಿ ಶಾಸಕರಾಗಿ ಆಯ್ಕೆಯಾದರು.

ಗೋವಾ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಸಾವಂತ್‌, ಪರ‍್ರೀಕರ್‌ ರೂಪಿಸಿದ್ದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಪುನರಾಯ್ಕೆಯಾದ ಬಿಜೆಪಿಯ ಕೆಲವೇ ಕೆಲವು ಶಾಸಕರಲ್ಲಿ ಸಾವಂತ್‌ ಕೂಡ ಒಬ್ಬರು. 

2012ರಲ್ಲಿ 21 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2017ರಲ್ಲಿ ಕೇವಲ 13 ಸೀಟುಗಳನ್ನು ಮಾತ್ರ ತನ್ನದಾಗಿಸಿಕೊಂಡಿತ್ತು. ಕಾಂಗ್ರೆಸ್‌ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಮನೋಹರ್‌ ಪರ‍್ರೀಕರ್‌ ಅವರು ಗೋವಾ ಫಾರ್ವರ್ಡ್‌ ಪಾರ್ಟಿ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್‌ ಪಾರ್ಟಿಯೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿದರು.

ಸಾವಂತ್‌, ವಿಧಾನಸಭಾ ಸ್ಪೀಕರ್‌ ಆಗಿ ಆಯ್ಕೆಯಾದರು. ಸಾವಿರ ಸವಾಲುಗಳನ್ನು ಹೊಂದಿದ್ದ ಸದನವನ್ನು ನಡೆಸಿಕೊಂಡ ಹೋಗಬೇಕಾದ ಜವಾಬ್ದಾರಿ ಅವರ ಹೆಗಲೇರಿತ್ತು.

ಸಾವಂತ್‌ ಅವರ ಪತ್ನಿ ಸುಲಕ್ಷಣ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಘಟಕದ ಅಧ್ಯಕ್ಷೆಯಾಗಿದ್ದಾರೆ. 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !