ಚುನಾವಣಾ ತಂತ್ರನಿಪುಣ ಪ್ರಶಾಂತ್ ಕಿಶೋರ್ ಜೆಡಿಯು ಸೇರ್ಪಡೆ

7

ಚುನಾವಣಾ ತಂತ್ರನಿಪುಣ ಪ್ರಶಾಂತ್ ಕಿಶೋರ್ ಜೆಡಿಯು ಸೇರ್ಪಡೆ

Published:
Updated:
Deccan Herald

ಪಾಟ್ನಾ (ಬಿಹಾರ): ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಭಾನುವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮಕ್ಷಮ ಜೆಡಿಯುಗೆ ಸೇರಿದರು. ಮುಖ್ಯಮಂತ್ರಿ ನಿವಾಸದಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಶಾಂತ್ ಅವರನ್ನು ಜೆಡಿಯು ರಾಷ್ಟ್ರ ಘಟಕದ ಅಧ್ಯಕ್ಷ ನಿತೀಶ್ ಕುಮಾರ್ ಅಂಗವಸ್ತ್ರ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು ಎಂದು ಪಕ್ಷದ ಮೂಲಗಳು ಹೇಳಿವೆ.

ಕಾರ್ಯಕಾರಿ ಸಮಿತಿಯಲ್ಲಿ 41 ವರ್ಷದ ಪ್ರಶಾಂತ್ ಅವರಿಗೆ ಮುಖ್ಯಮಂತ್ರಿ ಪಕ್ಕದ ಆಸನವನ್ನೇ ನೀಡಲಾಗಿತ್ತು. ಪಕ್ಷದಲ್ಲಿ ಅವರಿಗೆ ನೀಡಿರುವ ಸ್ಥಾನಮಾನ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದರೆ ನಿತೀಶ್ ಅವರ ಈ ನಡೆಯನ್ನು ‘ಲೋಕಸಭೆ ಚುನಾವಣೆಗೆ ಮುನ್ನ ತೆಗೆದುಕೊಂಡ ಮಹತ್ವದ ನಿರ್ಧಾರ’ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಜೆಡಿಯು ಸೇರ್ಪಡೆಗೂ ಮುನ್ನ ಪ್ರಶಾಂತ್ ಅವರು ‘ನನ್ನ ಹೊಸ ಬದುಕನ್ನು ಬಿಹಾರದಿಂದ ಆರಂಭಿಸಲು ಖುಷಿಯಾಗುತ್ತಿದೆ’ ಎಂದು ಟ್ವಿಟ್ ಮಾಡಿದ್ದರು. ಬಿಹಾರದ ಬಕ್ಸರ್ ಜಿಲ್ಲೆಯ ಪ್ರಶಾಂತ್ 2014ರಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದ್ದ ಬಿಜೆಪಿಯ ಚುನಾವಣಾ ಪ್ರಚಾರ ನಿರ್ವಹಿಸಿದ್ದರು. ಬಿಜೆಪಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ಖ್ಯಾತರಾಗಿದ್ದರು.

ಒಂದು ವರ್ಷದ ತರುವಾಯ ಬಿಜೆಪಿಯಿಂದ ದೂರವಾಗಿ ನಿತೀಶ್ ಪಾಳಯಕ್ಕೆ ಧುಮುಕಿದ್ದರು. ಆರ್‌ಜೆಡಿ ಮತ್ತು ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಜೆಡಿಯು ವಿಧಾನಸಭೆಯ ಚುನಾವಣೆಯಲ್ಲಿ ಬಹುಮತಗಳಿಸಿ ಅಧಿಕಾರಕ್ಕೆ ಬಂದಿತ್ತು. ಪ್ರಶಾಂತ್ ಅವರನ್ನು ಸರ್ಕಾರದ ಸಲಹೆಗಾರರಾಗಿ ನೇಮಿಸಿಕೊಂಡಿದ್ದ ನಿತೀಶ್, ಸಂಪುಟ ದರ್ಜೆ ಸ್ಥಾನಮಾನ ನೀಡಿ ಗೌರವಿಸಿದ್ದರು.

ಇದಾದ ನಂತರ ಪಂಜಾಬ್‌ನಲ್ಲಿ ಪ್ರಶಾಂತ್ ಕಾಂಗ್ರೆಸ್ ಜೊತೆಗೆ ಕೆಲಸ ಮಾಡಿದ್ದರು. ಶಿರೋಮಣಿ ಅಕಾಲಿ ದಳ– ಬಿಜೆಪಿ ಮೈತ್ರಿಕೂಟವನ್ನು ಮಣಿಸಿ ಕಾಂಗ್ರೆಸ್ ಅಲ್ಲಿ ಅಧಿಕಾರಕ್ಕೆ ಬಂದಿತ್ತು. ಉತ್ತರ ಪ್ರದೇಶ ಚುನಾವಣೆಯಲ್ಲಿಯೂ ಪ್ರಶಾಂತ್ ಕಾಂಗ್ರೆಸ್ ಜೊತೆಗೆ ಕೆಲಸ ಮಾಡಿದ್ದರು. ಆದರೆ ಅಲ್ಲಿ ಮಾತ್ರ ಅವರ ತಂತ್ರ ಫಲಿಸಲಿಲ್ಲ. 403 ಸ್ಥಾನಗಳಿರುವ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ 10 ಸ್ಥಾನಗಳನ್ನು ಗೆಲ್ಲಲೂ ಸಾಧ್ಯವಾಗಿರಲಿಲ್ಲ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !