ಪ್ರಯಾಗ್‌ರಾಜ್ ಕುಂಭಮೇಳದ ಯಶಸ್ವಿ ನಿರ್ವಹಣೆ

7
ಬಂಟ್ವಾಳ ಮೂಲದ ಐಎಎಸ್ ಅಧಿಕಾರಿ ವಿಜಯಕಿರಣ್ ಆನಂದ್

ಪ್ರಯಾಗ್‌ರಾಜ್ ಕುಂಭಮೇಳದ ಯಶಸ್ವಿ ನಿರ್ವಹಣೆ

Published:
Updated:
Prajavani

ಬಂಟ್ವಾಳ: ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಭಕ್ತರು ಸೇರುವ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಕುಂಭಮೇಳದ ಯಶಸ್ವಿ ನಿರ್ವಹಣೆಯಲ್ಲಿ ಬಂಟ್ವಾಳ ಮೂಲದ ಐಎಎಸ್ ಅಧಿಕಾರಿ ವಿಜಯಕಿರಣ್ ಆನಂದ್ ಗಮನ ಸೆಳೆದಿದ್ದಾರೆ.

ಇಲ್ಲಿನ ಲೊರೆಟ್ಟೊ ನಿವಾಸಿ ಆಗಿರುವ 38 ವರ್ಷದ  ವಿಜಯಕಿರಣ್ ಆನಂದ್ ಅವರು ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ.

1 ರಿಂದ 3ನೇ ತರಗತಿ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದಿದ್ದ ವಿಜಯಕಿರಣ್‌, ಬಳಿಕ ತನ್ನ ಪೋಷಕರು ಕರ್ತವ್ಯ ನಿಮಿತ್ತ ವಿದೇಶಕ್ಕೆ ತೆರಳಿದಾಗ, ತಮ್ಮ ಸಂಬಂಧಿ ಬಂಟ್ವಾಳದ ಗುತ್ತಿಗೆದಾರ ಉದಯಕುಮಾರ್ ರಾವ್ ಮತ್ತು ವಿದ್ಯಾ ರಾವ್ ದಂಪತಿ ಮನೆಯಲ್ಲಿ ಉಳಿದು ಶಿಕ್ಷಣ ಮುಂದುವರಿಸಿದ್ದರು.

ಬಂಟ್ವಾಳದ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 4 ರಿಂದ 7ನೇ ತರಗತಿ ಮುಗಿಸಿದ ಬಳಿಕ ಮತ್ತೆ ಪೋಷಕರು ಬೆಂಗಳೂರಿಗೆ ವಾಪಸಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ಪ್ರೌಢ ಮತ್ತು ಪದವಿ ಶಿಕ್ಷಣ ಪೂರೈಸಲು ಸಾಧ್ಯವಾಯಿತು.

ಸಿಎ ರ‍್ಯಾಂಕ್, ಐಎಎಸ್ ಟಾಪರ್: ಸಿಎ ಪರೀಕ್ಷೆಯಲ್ಲಿ ರ‍್ಯಾಂಕ್‌ ಗಳಿಸಿದ್ದ ಇವರು, 2009ರಲ್ಲಿ ನಡೆದ ಐಎಎಸ್ ಪರೀಕ್ಷೆಯಲ್ಲಿ 38ನೇ ಉನ್ನತ ಕ್ರಮಾಂಕ (ಟಾಪರ್)ದಲ್ಲಿ ಉತ್ತೀರ್ಣರಾದರು. ಆ ಬಳಿಕ ಉತ್ತರ ಪ್ರದೇಶದ ಶಹಜಾನ್ಪುರ್, ಫಿರೋಜಾಬಾದ್, ಬಿಜ್ನೂರ್, ಉನೇವ್ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಉತ್ತರ ಪ್ರದೇಶದಲ್ಲಿ ಯೋಗಿ ನೇತೃತ್ವದ ಬಿಜೆಪಿ ಸರ್ಕಾರವು ವಿಜಯಕಿರಣ್ ಆನಂದ್ ಅವರ ಕಾರ್ಯತತ್ಪರತೆ ಮತ್ತು ದಕ್ಷತೆ ಗುರುತಿಸಿ, ಪ್ರಯಾಗ್‌ರಾಜ್ ಕುಂಭ ಮೇಳ ಆಯೋಜನೆಯಲ್ಲಿ ಸ್ವಚ್ಛ ಭಾರತ್ ಮಿಷನ್ ನಿರ್ದೇಶಕ ಸ್ಥಾನ ನೀಡಿ ಅಲ್ಲಿನ ಸಂಪೂರ್ಣ ಜವಾಬ್ದಾರಿ ವಹಿಸಿತ್ತು. ಇದರಿಂದಾಗಿ ಅಲ್ಲಿನ ಅಚ್ಚುಕಟ್ಟುತನ ಮತ್ತು ಸುವ್ಯವಸ್ಥೆ ಬಗ್ಗೆ ಸರ್ಕಾರ ಮತ್ತು ನಾಗರಿಕರಿಂದಲೂ ಇವರಿಗೆ ಶಹಬ್ಬಾಸ್‌ಗಿರಿ ದೊರೆತಿದೆ.

ಇವರ ಪತ್ನಿ ಶಬರಿ ದಂತ ವೈದ್ಯೆಯಾಗಿದ್ದು, ಐದರ ಹರೆಯದ ಪುತ್ರ ಕಬೀರ್ ಕೂಡಾ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ (ವಾರಣಾಸಿ) ತಂದೆಯೊಂದಿಗೆ ನೆಲೆಸಿದ್ದಾರೆ.

ಕುಂಭ ಮೇಳದಲ್ಲಿ ಭಾಗವಹಿಸುವ ರಾಜ್ಯದ ಜನತೆಗೆ ಉಳಿದುಕೊಳ್ಳಲು ಶಂಕರಾಚಾರ್ಯ ಗುರುಪೀಠದಲ್ಲಿ ಸಂಪೂರ್ಣ ವ್ಯವಸ್ಥೆ ಕಲ್ಪಿಸಿದ್ದು, ಜತೆಗೆ ಸಮನ್ವಯಕಾರರಾಗಿ ಕನ್ನಡ ಭಾಷಾ ಜ್ಞಾನ ಹೊಂದಿದವರನ್ನು ಇವರು ನಿಯೋಜಿಸಿದ್ದಾರೆ.

ರಾಜ್ಯದ ತಿಂಡಿ ತಿನಿಸು ಮತ್ತು ಭೋಜನ ವ್ಯವಸ್ಥೆಗಾಗಿ ಬೆಂಗಳೂರು ಇಡ್ಲಿ ನಾಮಾಂಕಿತ ಕನ್ನಡದ ಹೆಸರಿನ ಸ್ಟಾಲ್ ಮತ್ತು ಹೋಟೆಲ್ ತೆರೆಯಲಾಗಿದೆ ಎಂದು ವಿಜಯಕಿರಣ್ ಆನಂದ್ ಅವರ ಸಂಬಂಧಿಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !