ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಹ್ವಾನ ರದ್ದಾಗಲು ರಾಜಕೀಯ ಒತ್ತಡ ಕಾರಣ’

ಹಿರಿಯ ಲೇಖಕಿ ನಯನತಾರಾ ಸೆಹಗಲ್ ಆರೋಪ
Last Updated 8 ಜನವರಿ 2019, 19:49 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಮುಂಬೈನಲ್ಲಿ ಇದೇ 11ರಂದು ನಡೆಯಲಿರುವ ‘ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನ’ವನ್ನು ಉದ್ಘಾಟಿಸಲು ತಮ್ಮನ್ನು ಆಹ್ವಾನಿಸಿ, ಕೊನೆಗೆ ಆಹ್ವಾನ ರದ್ದುಪಡಿಸಿರುವುದರ ಹಿಂದೆ ರಾಜಕೀಯ ಒತ್ತಡ ಕೆಲಸ ಮಾಡಿದೆ ಎಂದು ಹಿರಿಯ ಲೇಖಕಿ ನಯನತಾರಾ ಸೆಹಗಲ್‌ ಮಂಗಳವಾರ ಆರೋಪಿಸಿದ್ದಾರೆ.

‘ನನ್ನ ಅಭಿಪ್ರಾಯ, ಲೇಖನ ಮತ್ತು ಕಾಳಜಿಗಳ ಬಗ್ಗೆ ತಿಳಿದೇ ಕಾರ್ಯಕ್ರಮ ಸಂಘಟಕರು ನನಗೆ ಆಹ್ವಾನ ನೀಡಿದ್ದರು. ನಾನು ಮುಕ್ತವಾಗಿ ಮಾತನಾಡುತ್ತೇನೆ ಎಂಬುದು ಅವರಿಗೆ ತಿಳಿದಿತ್ತು. ಅದೇ ಖುಷಿಯಿಂದಾಗಿಯೇ ನನ್ನನ್ನು ಆಯ್ಕೆ ಮಾಡಿದ್ದರು. ನಾನೂ ಕಾರ್ಯಕ್ರಮಕ್ಕೆ ಹೋಗಲು ತಯಾರಿ ಮಾಡಿಕೊಂಡಿದ್ದೆ. ಆದರೆ, ಜನವರಿ 6ರಂದು ಸಂಘಟಕರಿಂದ ಮೂರ್ನಾಲ್ಕು ಸಾಲಿನ ಸಂದೇಶ ಬಂತು. ಅದರಲ್ಲಿ, ನನಗೆ ನೀಡಿದ್ದ ಆಹ್ವಾನವನ್ನು ರದ್ದುಪಡಿಸಿದ ವಿಷಯ ತಿಳಿಸಲಾಗಿತ್ತು’ ಎಂದು ಅವರು ಹೇಳಿದ್ದಾರೆ.

‌ಕಾರ್ಯಕ್ರಮದಿಂದ ಕೈಬಿಟ್ಟಿರುವ ದಿಢೀರ್‌ ನಿರ್ಧಾರದ ಹಿಂದೆ ಯಾರಿರಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲೇಖಕಿ, ‘ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವವರ ರಾಜಕೀಯ ಒತ್ತಡದಿಂದಲೇ ಹೀಗಾಗಿದೆ’ ಎಂದು ಹೇಳಿದ್ದಾರೆ.

ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ 2015ರಲ್ಲಿ ನಡೆದ ‘ಪ್ರಶಸ್ತಿ ವಾಪಸ್‌’ ಆಂದೋಲನದಲ್ಲಿ ಸೆಹಗಲ್‌ ಮುಂಚೂಣಿಯಲ್ಲಿದ್ದರು.

ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮೂಲಭೂತವಾದ ಮತ್ತು ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿದ್ದ ಅವರು ಅದರ ಪ್ರತಿಭಟನಾರ್ಥವಾಗಿ, 1986ರಲ್ಲಿ ‘ರಿಚ್‌ ಲೈಕ್‌ ಅಸ್‌’ ಕೃತಿಗಾಗಿ ತಮಗೆ ನೀಡಲಾಗಿದ್ದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್‌ ಮಾಡಿದ್ದರು.

ಡೆಹ್ರಾಡೂನ್‌ನಲ್ಲಿ ನೆಲೆಸಿರುವ 91 ವರ್ಷದ ಸೆಹಗಲ್‌ ಅವರು, ವಿಜಯಲಕ್ಷ್ಮಿ ಪಂಡಿತ್‌ ಅವರ ಪುತ್ರಿ ಹಾಗೂ ಜವಾಹರಲಾಲ್‌ ನೆಹರೂ ಅವರ ಸೋದರ ಸೊಸೆ.

ಶಿವಸೇನಾ ಆಕ್ಷೇಪ

ಮುಂಬೈ: ‘ನಯನತಾರಾ ಸೆಹಗಲ್‌ ಅವರು ಉದ್ದೇಶಿತ ಕಾರ್ಯಕ್ರಮದಲ್ಲಿ ಗೋ ಸಂಬಂಧಿತ ಹಿಂಸಾಚಾರ, ಬಡಿದು ಕೊಲ್ಲುವ ಕೃತ್ಯ ಮತ್ತು ಸರ್ಕಾರಿ ಯಂತ್ರದ ದುರ್ಬಳಕೆ ಕುರಿತು ಮಾತನಾಡಲು ಬಯಸಿದ್ದಾರೆ ಎಂಬುದನ್ನು ತಿಳಿದು, ಕಾರ್ಯಕ್ರಮ ಸಂಘಟಕರು ಅವರಿಗೆ ನೀಡಿದ್ದ ಆಹ್ವಾನವನ್ನು ರದ್ದುಪಡಿಸಿದ್ದಾರೆ’ ಎಂದು ಶಿವಸೇನಾ ಹೇಳಿದೆ.

‘ಈ ಮೂಲಕ, ಆಯೋಜಕರು ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆತ್ಮಗೌರವಕ್ಕೆ ಧಕ್ಕೆ ತಂದಿದ್ದಾರೆ’ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿನ ಸಂಪಾದಕೀಯದಲ್ಲಿ ಬರೆಯಲಾಗಿದೆ.

ದ್ವೇಷದ ರಾಜಕಾರಣ, ವಿರೋಧ ಪಕ್ಷಗಳ ವಿರುದ್ಧ ಸರ್ಕಾರಿ ಯಂತ್ರ ಬಳಕೆ, ಪತ್ರಕರ್ತರ ಮೇಲೆ ರಾಜಕೀಯ ಒತ್ತಡ, ಲೇಖಕರ ಹತ್ಯೆಯಂತಹ ವಿಷಯಗಳನ್ನು ಒಳಗೊಂಡ ಸೆಹಗಲ್‌ ಅವರ ಭಾಷಣವನ್ನು ಅದಾಗಲೇ ಸಂಘಟಕರಿಗೆ ಕಳುಹಿಸಿಕೊಡಲಾಗಿತ್ತು. ಹೀಗಾಗಿ, ಅವರಿಗೆ ನೀಡಿದ್ದ ಆಹ್ವಾನವನ್ನು ಹಿಂತೆಗೆದುಕೊಂಡರೆ ಸರ್ಕಾರದ ಕೃಪಾಕಟಾಕ್ಷಕ್ಕೆ ಪಾತ್ರವಾಗಬಹುದು ಎಂದು ಸಂಘಟಕರು ಭಾವಿಸಿದ್ದಿರಬಹುದು ಎಂದು ಉದ್ಧವ್‌ ಠಾಕ್ರೆ ನೇತೃತ್ವದ ಪಕ್ಷ ಹೇಳಿದೆ.

ಆಡಳಿತಾರೂಢ ಪಕ್ಷದಿಂದ ಇಂದು ಬೆದರಿಕೆಗೆ ಒಳಗಾಗಿರುವ ಇದೇ ಸೆಹಗಲ್‌ ಅವರು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧ ಮಾತನಾಡಿ ಜೈಲು ಸೇರಿದ್ದರು. ಇದರಿಂದ, ಅವರು ಯಾವುದೇ ಸಿದ್ಧಾಂತ ಅಥವಾ ರಾಜಕೀಯ ಪಕ್ಷದ ವಿರುದ್ಧ ಅಲ್ಲ, ಬದಲಾಗಿ ಎಲ್ಲ ಬಗೆಯ ತಪ್ಪುಗಳನ್ನೂ ಖಂಡಿಸುತ್ತಾರೆ ಎಂಬುದು ಅರ್ಥವಾಗುತ್ತದೆ ಎಂದು ಸಂಪಾದಕೀಯ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT