ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ವಿಸ್ತರಣೆ l ಕಾರ್ಯಸೂಚಿ ಇಲ್ಲದ ಟೊಳ್ಳು ಭಾಷಣ

ಕೋವಿಡ್‌ ವಿರುದ್ಧದ ಹೋರಾಟ: ಪ್ರಧಾನಿ ಮೋದಿ ಭಾಷಣಕ್ಕೆ ವಿರೋಧ ಪಕ್ಷಗಳ ಟೀಕೆ
Last Updated 15 ಏಪ್ರಿಲ್ 2020, 1:40 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ಕೋವಿಡ್‌–19 ಮಹಾಮಾರಿ ವಿರುದ್ಧದ ಹೋರಾಟವನ್ನು ಮತ್ತೊಂದು ಮಜಲಿಗೆ ಒಯ್ಯುವ ಸಲುವಾಗಿ ಮೇ 3ರ ವರೆಗೆ ಲಾಕ್‌ಡೌನ್‌ ಮುಂದುವರಿಸುವ ನಿರ್ಧಾರವನ್ನು ಘೋಷಿಸಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾಡಿದ ಭಾಷಣಕ್ಕೆ ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ಸಹಜ ಎಂಬಂತೆ, ಎನ್‌ಡಿಎ ಮಿತ್ರ ಪಕ್ಷಗಳ ನಾಯಕರು ಪ್ರಧಾನಿ ಕೈಗೊಂಡ ನಿರ್ಧಾರವನ್ನು ಸ್ವಾಗತಿಸಿದ್ದು, ಮೋದಿ ಸರಿಯಾದ ನಿರ್ಧಾರವನ್ನೇ ಕೈಗೊಂಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಕಾಂಗ್ರೆಸ್‌ ಮುಖಂಡರು, ‘ಆರ್ಥಿಕತೆಗೆ ಚೇತರಿಕೆ ನೀಡಲು ಯಾವುದೇ ಹಣಕಾಸು ಪ್ಯಾಕೇಜ್‌ ಇಲ್ಲದ ಟೊಳ್ಳು ಭಾಷಣ’ ಎಂದು ಪ್ರಧಾನಿ ಭಾಷಣವನ್ನು ಟೀಕಿಸಿದ್ದಾರೆ.

ಕಾಂಗ್ರೆಸ್‌ ಮುಖ್ಯವಕ್ತಾರ ರಣದೀಪ್‌ ಸುರ್ಜೆವಾಲಾ ಅವರು, ‘ಕೊರೊನಾ ವೈರಸ್‌ ವಿರುದ್ಧ ಹೋರಾಡಲು ದೇಶಕ್ಕೆ ಸ್ಪಷ್ಟ ಕಾರ್ಯಸೂಚಿ ಏನಿದೆ. ಜನರಿಗೆ ಅವರ ಜವಾಬ್ದಾರಿ ತಿಳಿಸುವುದಷ್ಟೇ ನಾಯಕತ್ವವಲ್ಲ. ಜನರಿಗಾಗಿ ಸರ್ಕಾರ ಕೂಡಾ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ’ ಎಂದು ಟೀಕಿಸಿದ್ದಾರೆ.

ಪಕ್ಷದ ಹಿರಿಯ ಮುಖಂಡ ಪಿ.ಚಿದಂಬರಂ ಅವರು, ‘ಊಟ ಕಂಡುಕೊಳ್ಳುವುದನ್ನು ಬಡವರಿಗೇ ಬಿಡಲಾಗಿದೆ. ಹಣ ಇಲ್ಲ, ಊಟ ಇಲ್ಲ. ಸರ್ಕಾರ ಎರಡನ್ನೂ ನೀಡುವುದಿಲ್ಲ. ದೇಶದ ಜನರು ಅಳಬೇಕಷ್ಟೇ’ ಎಂದು ಟ್ವೀಟ್‌ ಮಾಡಿದ್ದಾರೆ. ಮತ್ತೊಬ್ಬ ವಕ್ತಾರ ಅಭಿಷೇಕ್‌ ಸಿಂಘ್ವಿ ಅವರು ಇಂಗ್ಲಿಷ್‌ನಲ್ಲಿನ ಉಕ್ತಿಯೊಂದನ್ನು ಉಲ್ಲೇಖಿಸಿ, ‘ಪ್ರಧಾನಿಯವರ ಭಾಷಣ ಮುಖ್ಯಪಾತ್ರಧಾರಿಯೇ ಇಲ್ಲದ ನಾಟಕದಂತಿದೆ’ ಎಂದು ಟೀಕಿಸಿದ್ದಾರೆ.

ಶಿವಸೇನಾ, ಎನ್‌ಸಿಪಿ ಟೀಕೆ: ಪ್ರಧಾನಿ ಭಾಷಣವನ್ನು ಟೀಕಿಸುವಲ್ಲಿ ಶಿವಸೇನಾ ಹಾಗೂ ಎನ್‌ಸಿಪಿ ಸಹ ಹಿಂದೆ ಬಿದ್ದಿಲ್ಲ. ‘ಆರ್ಥಿಕತೆ ಬಲಪಡಿಸುವ ಹಾಗೂ ಬಡವರ ಏಳಿಗೆಗಾಗಿ ಯಾವುದೇ ಆರ್ಥಿಕ ಪ್ಯಾಕೇಜ್‌ ಇಲ್ಲದ ಭಾಷಣ’ ಎಂದು ಈ ಎರಡೂ ಪಕ್ಷಗಳು ಟೀಕಿಸಿವೆ.

ಶಿವಸೇನೆ ವಕ್ತಾರ ಡಾ.ಮನೀಷಾ ಕಾಯಂದೆ, ‘ಚಪ್ಪಾಳೆ ಹೊಡೆಯುವುದು, ದೀಪ ಹಚ್ಚುವುದು ಸೇರಿದಂತೆ ಈ ಬಾರಿ ಜನರಿಗೆ ಯಾವುದೇ ಕೆಲಸ ನೀಡಲಿಲ್ಲ ಎಂಬುದೇ ಸಮಾಧಾನಕರ ಸಂಗತಿ’ ಎಂದು ವ್ಯಂಗ್ಯವಾಡಿದ್ದಾರೆ.

ಎನ್‌ಸಿಪಿ ವಕ್ತಾರ, ಸಚಿವಮಹೇಶ್‌ ತಪಾಸೆ, ‘ಪ್ರಧಾನಿ ದೇಶದ ಆರ್ಥಿಕ ಸಮಸ್ಯೆ ಕುರಿತು ಮಾತನಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ನಿರುದ್ಯೋಗ ಸಮಸ್ಯೆ ಎದುರಿಸಲು ಸರ್ಕಾರ ಏನು ಮಾಡಲಿದೆ ಎಂಬ ನಿರೀಕ್ಷೆ ಉದ್ಯೋಗಿಗಳು, ಉದ್ಯಮಿಗಳದಾಗಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎನ್‌ಡಿಎ ನಾಯಕರ ಬೆಂಬಲ

ಲಾಕ್‌ಡೌನ್‌ ಅವಧಿ ವಿಸ್ತರಿಸಿದಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಕ್ಕೆ ಎನ್‌ಡಿಎ ಮಿತ್ರಪಕ್ಷಗಳ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

‘ನಮಗೆ ಎದುರಾಗಿರುವ ಅಪಾಯ ಇನ್ನೂ ಕೊನೆಗೊಂಡಿಲ್ಲ. ಹೀಗಾಗಿ ಲಾಕ್‌ಡೌನ್‌ ವಿಸ್ತರಿಸುವ ಪ್ರಧಾನಿ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ. ಆದರೆ, ಕೃಷಿಕರು ಹಾಗೂ ಕೂಲಿಕಾರ್ಮಿಕರ ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸುವಂತೆ ಪ್ರಧಾನಿಯನ್ನು ಕೇಳಿಕೊಳ್ಳುತ್ತೇವೆ’ ಎಂದು ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಹೇಳಿದ್ದಾರೆ.

‘ದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಪ್ರಧಾನಿ ಕಠಿಣ ನಿರ್ಧಾರವನ್ನೇ ಕೈಗೊಂಡಿದ್ದಾರೆ. ಪ್ರಧಾನಿ ಹೇಳಿರುವ ಏಳು ಸಲಹೆಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಕೊರೊನಾ ವಿರುದ್ಧ ನಮಗೆ ಗೆಲುವು ನಿಶ್ಚಿತ’ ಎಂದು ಎಲ್‌ಜೆಪಿ ವರಿಷ್ಠ ರಾಮವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.

ಪ್ರಧಾನಿ ನಿರ್ಧಾರವನ್ನು ಸ್ವಾಗತಿಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ‘ಮೋದಿ ನೀಡಿರುವ ಸೂಚನೆಗಳನ್ನು ಪಾಲಿಸುವ ಮೂಲಕ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸೋಣ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT