ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕನಸಿನ ಬುಲೆಟ್‌ ರೈಲಿಗೆ ಬ್ರೇಕ್‌ ಹಾಕುತ್ತಿದೆ ಹಣ, ಭೂ ಒತ್ತುವರಿ ಸಮಸ್ಯೆ

Last Updated 31 ಅಕ್ಟೋಬರ್ 2018, 8:37 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕನಸಿನ ದೇಶದ ಮೊದಲ ಬುಲೆಟ್‌ ರೈಲು ಯೋಜನೆಗೆ ಹಣಕಾಸು ಹಾಗೂ ಭೂಒತ್ತುವರಿ ಸಮಸ್ಯೆ ಎದುರಾಗಿದೆ.ಹೀಗಾಗಿ ಮುಂಬೈ ಹಾಗೂ ಅಹಮದಾಬಾದ್‌ ನಗರಗಳ ನಡುವಣ ಸಂಪರ್ಕ ಕಲ್ಪಿಸುವ ಅತಿವೇಗದ ಬುಲೆಟ್‌ ರೈಲಿಗೆ ಬ್ರೇಕ್‌ ಹಾಕಿದಂತಾಗಿದೆ.

2022ಕ್ಕೆ ಪೂರ್ಣಗೊಳಿಸಲು ಉದ್ದೇಶಿಸಿರುವ ಈ ಯೋಜನೆಯ ಹೊಣೆಯನ್ನು ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೋರೇಷನ್ ಲಿಮಿಟೆಡ್(ಎನ್‌ಎಚ್‌ಎಸ್‌ಆರ್‌ಸಿಎಲ್‌) ಹೊತ್ತುಕೊಂಡಿದೆ.ಆದರೆ, ಅಗತ್ಯವಿರುವ ಹಣಕಾಸಿನ ಅನುದಾನ ಹರಿದುಬರುತ್ತಿಲ್ಲ. ಅಂದುಕೊಂಡಷ್ಟು ಸುಲಭದಲ್ಲಿ ಭೂಮಿ ಒತ್ತುವರಿ ಕಾರ್ಯ ಸಾಗುತ್ತಿಲ್ಲ. ಕೆಲವೆಡೆ ಬುಲೆಟ್‌ ರೈಲು ಯೋಜನೆಯೇ ಬೇಕಿಲ್ಲ ಎಂಬ ಪ್ರತಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ನಿಗದಿ ಪಡಿಸಿಕೊಂಡಿರುವ ಗುರಿ ಮತ್ತಷ್ಟು ದಿನಗಳ ವರೆಗೆ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ದಿ ಪ್ರಿಂಟ್‌ವರದಿ ಮಾಡಿದೆ.

ಅನುದಾನ ಬಿಡುಗಡೆ ಮಾಡದಗುಜರಾತ್‌ - ಮಹಾರಾಷ್ಟ್ರ ಸರ್ಕಾರಗಳು

ಈ ಯೋಜನೆಗೆ ಸುಮಾರು₹ 1ಲಕ್ಷ ಕೋಟಿ ಖರ್ಚಿನ ಅಂದಾಜು ಮಾಡಿಕೊಳ್ಳಲಾಗಿದೆ. ಹಣಕಾಸಿನ ಸಂಪೂರ್ಣ ಹೊಣೆಯನ್ನು ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಮಂಡಳಿ(ಜೆಐಸಿಎ), ಭಾರತೀಯ ರೈಲ್ವೆ ಇಲಾಖೆ, ಗುಜರಾತ್‌ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಹೊತ್ತುಕೊಂಡಿವೆ.

ಜಪಾನ್‌ ಒಟ್ಟು ವೆಚ್ಚದ ಶೇ. 80 ರಷ್ಟು ಅಂದರೆ ₹86 ಸಾವಿರ ಕೋಟಿ ಅನುದಾನ ನೀಡಲಿದ್ದು, ಮೊದಲ ಹಂತದಲ್ಲಿ ಈಗಾಗಲೇ ₹ 5, 500 ಕೋಟಿ ನೀಡಿದೆ. ಆದರೆ, ₹10 ಸಾವಿರ ಕೋಟಿ ಹೊಣೆ ಹೊತ್ತಿರವ ರೈಲ್ವೆ ಇಲಾಖೆ, ತಲಾ ₹ 5 ಸಾವಿರ ಕೋಟಿ ನೀಡಬೇಕಿರುವ ಗುಜರಾತ್‌ ಮತ್ತು ಮಹಾರಾಷ್ಟ್ರ ಸರ್ಕಾರಗಳು ಇದುವರೆಗೆ ಖಚಾನೆ ಭಾರ ಇಳಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ.

ಈ ಕುರಿತು ಮಾತನಾಡಿರುವಎನ್‌ಎಚ್‌ಎಸ್‌ಆರ್‌ಸಿಎಲ್‌ನ ಮುಖ್ಯಸ್ಥ ವಿನಾಯಕ ಚಟರ್ಜಿ ಅವರು ಯೋಜನೆಯು ದೀರ್ಘಾವಧಿಗೆ ಮುಂದುವರಿಯುವ ಸಾಧ್ಯತೆ ಇದೆ ಎಂದಿದ್ದಾರೆ. ‘ಅಂದರೆ, 2022 ಅಥವಾ 2023ಕ್ಕೆ ಪೂರ್ಣಗೊಳಿಸಲು ಉದ್ದೇಶಿಸಿರುವ ನಮ್ಮ ಯೋಜನೆಯು ಯಶಸ್ವಿಯಾಗುವುದು ಅತ್ಯಂತ ಸವಾಲಿನಿಂದ ಕೂಡಿದೆ’ ಎಂದು ಹೇಳಿದ್ದಾರೆ.

‘ನಾವು ಇನ್ನೂ ಟೆಂಡರ್‌ ಹಂಚಿಕೆ ಪ್ರಕ್ರಿಯೆ ನಡೆಸುತ್ತಿದ್ದೇವೆ. ಮುಂದಿನ ವರ್ಷದ ಮೊದಲ ಆರು ತಿಂಗಳ ಒಳಗಾಗಿ ಟೆಂಡರ್‌ ಪ್ರಕ್ರಿಯೆನ್ನು ಸಂಪೂರ್ಣ ಮುಗಿಸಲಿದ್ದು, 2019ರ ಜುಲೈನಲ್ಲಿ ನಿರ್ಮಾಣ ಕಾರ್ಯ ಆರಂಭಿಸಲಿದ್ದೇವೆ. ಅಗತ್ಯಕ್ಕನುಗುಣವಾಗಿ ನಮ್ಮ ಸಂಸ್ಥೆಯೇ ಹಣ ವಿನಿಯೋಗಿಸಲಿದ್ದು, ಬಳಿಕ ಮರುಭರ್ತಿ ಮಾಡಿಕೊಳ್ಳಲಿದ್ದೇವೆ’ ಎಂದು ತಿಳಿಸಿದರು.ಆದರೆ, ಅನುದಾನ ನೀಡಲಿರುವಜೆಐಸಿಎ, ರೈಲ್ವೆ ಸಚಿವಾಲಯ ಹಾಗೂ ರಾಜ್ಯ ಸರ್ಕಾರಗಳು ಮೊದಲ ಹಂತದಲ್ಲಿ ಯಾವ ಪ್ರಮಾಣದಲ್ಲಿ ಹಣ ವಿನಿಯೋಗಿಸಲಿವೆ ಎಂಬ ಮಾಹಿತಿಯನ್ನು ಬಿಟ್ಟುಕೊಡಲಿಲ್ಲ.

‘ಸದ್ಯ ಎರಡು ಸಂಸ್ಥೆಗಳಿಗೆ ಟೆಂಡರ್ ನೀಡಿದ್ದೇವೆ. ಟೆಂಡರ್‌ ಪಡೆದಿರುವ ವಡೋದರ ಸಂಸ್ಥೆ ತನ್ನ ಪಾಲಿನ ಶೇ. 30–40ರಷ್ಟು ಕಾಮಗಾರಿಯನ್ನು ಮುಗಿಸಿದೆ. ಸಾಬರಮತಿ ಟರ್ಮಿನಲ್ಸ್‌ ಇನ್ನಷ್ಟೇ ಕಾರ್ಯಾರಂಭ ಮಾಡಬೇಕಿದೆ’ಎಂದರು.

ತಲನೋವು ತಂದ ಭೂ ಒತ್ತುವರಿ

ಪ್ರಸ್ತುತಯೋಜನೆಗಾಗಿ ಒಟ್ಟು 1,400 ಹೆಕ್ಟೆರ್‌ ಭೂ ಪ್ರದೇಶ ಒತ್ತುವರಿ ಮಾಡಿಕೊಳ್ಳಬೇಕಾದ ಅನಿವಾರ್ಯವಿದೆ. ಆದರೆ, ನಿರ್ಮಾಣ ಸಂಸ್ಥೆ ಸದ್ಯ ಒತ್ತುವರಿ ಮಾಡಿಕೊಂಡಿರುವ ಭೂಮಿ ಕೇವಲ 0.9 ಹೆಕ್ಟೆರ್‌ ಮಾತ್ರ.

‘ರೈಲು ಹಳಿಗಳ ನಿರ್ಮಾಣಕ್ಕಾಗಿ ಸಾಕಷ್ಟು ಉದ್ದದ ಸುರಂಗಗಳನ್ನು ನಿರ್ಮಿಸಬೇಕಿದೆ.ಕಾಮಗಾರಿ ಯಶಸ್ಸಿಗೆ ಭೂಮಿ ಒತ್ತುವರಿಯು ದೊಡ್ಡ ಅಡೆತಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ. ಯೋಜನೆಯು ಅಂದಾಜು 300 ಹಳ್ಳಿಗಳನ್ನು ಹಾದು ಹೋಗಲಿದ್ದು, ಸದ್ಯ ಸುಮಾರು 250 ಹಳ್ಳಿಗಳ ಆಸುಪಾಸಿನಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದೆ’ ಎಂದು ಮೂಲಗಳು ತಿಳಿಸಿವೆ.

‘ಗುಜರಾತಿನಲ್ಲಿ ಭೂಮಿ ಒತ್ತುವರಿ ಸಂಬಂಧದಪರಿಹಾರದ ವಿಚಾರ ವಿವಾದದ ರೂಪ ಪಡೆದುಕೊಂಡಿದೆ. ಕೋರ್ಟ್‌ಗೆ 9 ಮೇಲ್ಮನವಿಗಳು ಸಲ್ಲಿಕೆಯಾಗಿದ್ದವು. ಸದ್ಯ 4 ಅರ್ಜಿಗಳನ್ನು ಹಿಂಪಡೆಯಲಾಗಿದ್ದು, ಇನ್ನೂ ಐದು ವಿಚಾರಣೆಯ ಹಂತದಲ್ಲಿವೆ.ಉಳಿದಂತೆ ಮಹಾರಾಷ‌್ಟ್ರದಲ್ಲಿ ಬುಲೆಟ್‌ ರೈಲು ವಿರೋಧಿಸಿ ಹೋರಾಟಗಳು ನಡೆಯುತ್ತಿವೆ. ಅಲ್ಲಿನ ಜನರು ನಮಗೆ ಬುಲೆಟ್‌ ರೈಲು ಬೇಕಾಗಿಲ್ಲ ಎನ್ನುತ್ತಿದ್ದಾರೆ. ತಮ್ಮ ಜಮೀನು ಅಥವಾ ಭೂಮಿಗೆ ಯಾವುದೇ ಸಮಸ್ಯೆ ಆಗದಿದ್ದರೂ ಕೆಲವರುಬುಲೆಟ್‌ ರೈಲು ವಿರೋಧಿಸಿ ಹೋರಾಟ ನಡೆಸುತ್ತಿದ್ದಾರೆ. ಇದು ರಾಜಕೀಯದ ಸ್ವರೂಪ ಪಡೆದುಕೊಳ್ಳುತ್ತಿದೆ’ ಎಂದು ಹೇಳಿವೆ.

ಪ್ರಗತಿಯಲ್ಲಿದೆ ಪರಿಹಾರ ಪ್ರಕ್ರಿಯೆ

ಮಹಾರಾಷ್ಟ್ರದಲ್ಲಿಭೂಮಿ ಕಳೆದುಕೊಂಡಿರುವವರಿಗೆ ಪರಿಹಾರ ಹಣವನ್ನು ಭೂಮಿಯ ಒಟ್ಟು ಬೆಲೆಗೆ ಶೇ. 25 ರಷ್ಟು ಬೋನಸ್‌ ಸೇರಿಸಿ ನಾಲ್ಕು ಕಂತುಗಳಲ್ಲಿ ಪಾವತಿಸುವುದಾಗಿ ಹಾಗೂ₹ 5 ಲಕ್ಷ ಹೆಚ್ಚುವರಿ ಹಣ ನೀಡುವುದಾಗಿ ಯೋಜನೆಯ ನಿರ್ಮಾಣಹೊಣೆ ಹೊತ್ತಿರುವ ಎನ್‌ಎಚ್‌ಎಸ್‌ಆರ್‌ಸಿಎಲ್‌ ಸಂಸ್ಥೆ ಹೇಳಿದೆ. ಅದಲ್ಲದೆ ಭೂಮಿ ಕಳೆದುಕೊಂಡವರ ಜೀವನೋಪಾಯಕ್ಕಾಗಿ ಮಾಸಿಕ ₹ 3,600 ನೀಡುವುದಾಗಿಯೂ ಪ್ರಕಟಿಸಿದೆ.

ಅರಣ್ಯ ಭೂಮಿಗೆ ಶೇ. 50 ರಷ್ಟು ಪರಿಹಾರ ನೀಡಲಾಗುವುದು ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಮಾಹಿತಿ ನೀಡಲಾಗಿದೆ.

ಗುಜರಾತಿನಲ್ಲಿ ಭೂಮಿಗೆ ಸದ್ಯ ಸರ್ಕಾರ ನಿಗದಿ ಪಡಿಸಿರುವ ಮಾರ್ಗದರ್ಶಿ ದರದ4.75 ರಷ್ಟು ಹಣವನ್ನು ಹೆಚ್ಚುವರಿಯಾಗಿ ನೀಡಲು ಇಲ್ಲವೇ,ರೈಲು ಮಾರ್ಗದ ಸುತ್ತಲಿನ ಸುಮಾರು 1.5 ವಿಸ್ತೀರ್ಣದ ಭೂ ಪ್ರದೇಶಕ್ಕೆಸರಾಸರಿ ದರ ನಿಗದಿ ಪಡಿಸಿ ಪರಿಹಾರ ನೀಡಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT