ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸದ ಮೋದಿ, ಇದು ಮೋದಿಯವರ ಪತ್ರಿಕಾಗೋಷ್ಠಿ ಅಲ್ಲ!

ಭಾನುವಾರ, ಮೇ 26, 2019
30 °C

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸದ ಮೋದಿ, ಇದು ಮೋದಿಯವರ ಪತ್ರಿಕಾಗೋಷ್ಠಿ ಅಲ್ಲ!

Published:
Updated:

ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಮಿತ್ ಶಾ,  ಲೋಕಸಭಾ ಚುನಾವಣೆಗಾಗಿ ಫೆಬ್ರುವರಿ ತಿಂಗಳಿನಿಂದ ಇಲ್ಲಿಯವರೆಗೆ ನಡೆದ ಮೂರು ತಿಂಗಳ ಚುನಾವಣಾ ಪ್ರಚಾರದ ಬಗ್ಗೆ ವಿವರಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕಿಂತಲೂ ಹೆಚ್ಚು ಸೀಟು ಗಳಿಸಲಿದೆ ಎಂದು ಹೇಳಿದಾಗ, ಚುನಾವಣಾ ಪ್ರಚಾರಗಳು ಯಾವ ರೀತಿ ಶಿಸ್ತಿನಿಂದ ಮತ್ತು ಶಾಂತಿಯುತ ರೀತಿಯಲ್ಲಿ ನಡೆದವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೊದಲ ದಿನ ನಾನು ಯಾವ ರೀತಿಯ ಉತ್ಸಾಹದಿಂದ ನಿಮ್ಮ ಮುಂದೆ ಬಂದಿದ್ದೆನೋ ಅದೇ ಉತ್ಸಾಹದಲ್ಲಿ ನಾನು ಈಗ ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮನ್ನೆಲ್ಲ ಭೇಟಿ ಮಾಡಿದ್ದು ಸಂತೋಷ. ಧನ್ಯವಾದಗಳು ಎಂದು ಹೇಳಿ ಮೋದಿ ಮಾತು ನಿಲ್ಲಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಮಿತ್ ಶಾ ಪಕ್ಕದಲ್ಲಿ ಕುಳಿತ ನರೇಂದ್ರ ಮೋದಿ ಪತ್ರಕರ್ತರು ಕೇಳಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಅಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದ್ದು ಅಮಿತ್ ಶಾ ಮಾತ್ರ.

 ಟೈಮ್ಸ್ ನೌ, ಇಂಡಿಯನ್ ಎಕ್ಸ್‌ಪ್ರೆಸ್, ಸಿಎನ್‌ಎನ್ -ನ್ಯೂಸ್ 18, ಎನ್‍ಡಿಟಿವಿ ಮೊದಲಾದ ಮಾಧ್ಯಮಗಳು ಈ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದವು. ಅಮಿತ್  ಶಾ ಅವರು ರಫೇಲ್ ವಿವಾದ, ಬಂಗಾಳದಲ್ಲಿನ ಹಿಂಸಾಚಾರ, ಪ್ರಜ್ಞಾ ಠಾಕೂರ್, ಪ್ರಜಾಪ್ರಭುತ್ವ ಮತ್ತು ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದಾರೆ.

ಈ ವೇಳೆ ಆಜ್ ತಕ್ ಸುದ್ದಿವಾಹಿನಿಯ ಅಂಜನಾ ಓಂ ಕಶ್ಯಪ್ ಮತ್ತು ಎನ್‌ಡಿಟಿವಿಯ ಅಖಿಲೇಶ್ ಶರ್ಮಾ ಅವರು ಮೋದಿಯವರಲ್ಲಿ ಪ್ರಶ್ನೆ ಕೇಳಿದ್ದಾರೆ, 'ನಮ್ಮ ಪ್ರಶ್ನೆ ಮೋದಿಯವರಿಗೆ...' ಎಂದು ಕಶ್ಯಪ್ ಹೇಳಿದ ಕೂಡಲೇ ಮೋದಿಯವರು ಶಾ ಅವರತ್ತ ಬೆರಳು ತೋರಿಸಿದ್ದಾರೆ. ನಮ್ಮ ಪಕ್ಷದ ಅಧ್ಯಕ್ಷರು ಮಾತನಾಡುವಾಗ ನಾವು ಶಿಸ್ತು ಪಾಲಿಸಬೇಕು ಎಂಬುದಾಗಿತ್ತು ಮೋದಿ ಮಾತು.

ಎನ್‌ಡಿಟಿವಿಯ ಅಖಿಲೇಶ್ ಶರ್ಮಾ ಅವರು ಮೇ 23ರಂದು ವಿಪಕ್ಷಗಳೊಂದಿಗೆ ನಡೆಸಲು ನಿರ್ಧರಿಸಿರುವ ಸಭೆ ಬಗ್ಗೆ ಕೇಳಿದಾಗಲೂ ಮೋದಿ, ಅಮಿತ್ ಶಾ ಅವರತ್ತವೇ ಕೈ ತೋರಿಸಿದ್ದಾರೆ.

ಅಮಿತ್ ಶಾ ಅವರಲ್ಲಿ ಪತ್ರಕರ್ತರು ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕೇಳಿದಾಗ ಅವರು ಮಾಧ್ಯಮದವರನೇನೇ ದೂರಿದ್ದಾರೆ. 2014ರಿಂದ ಇಲ್ಲಿಯವರೆಗೆ 80 ಬಿಜೆಪಿ ಕಾರ್ಯಕರ್ತರು ಜೀವ ಕಳೆದುಕೊಂಡಿದ್ದಾರೆ. ನನ್ನ ಅಸಮಾಧಾನ ಇರುವುದು ಮಮತಾಜಿಯ ಜತೆ ಅಲ್ಲ, ನನಗೆ ಅಸಮಾಧಾನ ಇರುವುದು ನಿಮ್ಮಂತ ಜನರ ಮೇಲೆ.ನೀವು ಯಾಕೆ ಈ ಪ್ರಶ್ನೆಯನ್ನು ಅವರಲ್ಲಿ ಕೇಳುತ್ತಿಲ್ಲ? ಎಂದಿದ್ದಾರೆ.

 ಈ ಅಧಿಕಾರವಧಿಯಲ್ಲಿ ಮೋದಿ ಸರ್ಕಾರಕ್ಕೆ ಸಾಧನೆ ಮಾಡಲು ಸಾದ್ಯವಾಗದೇ ಇದ್ದುದು ಯಾವುದು ಎಂದು ಆಜ್ ತಕ್ ಮಾಧ್ಯಮದ ಅಶೋಕ್ ಸಿಂಘಾಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾ, ನಾವು ಮಾಧ್ಯಮದವರನ್ನು ಎಲ್ಲೆಡೆಗೆ ಕರೆದುಕೊಂಡು ಹೋಗಲು ಆಗುವುದಿಲ್ಲ. ನಿಮಗೆ ಮನದಟ್ಟು ಮಾಡಿಸಲು ನಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ.

ಪ್ರಧಾನಿಯ ಮೊದಲ ಸುದ್ದಿಗೋಷ್ಠಿ ಇದು ಎಂದು ಹೇಳಲಾಗುತ್ತಿದ್ದರೂ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ಮೋದಿ ಮುಂದಾಗಲಿಲ್ಲ. ಹಾಗಾಗಿ 5 ವರ್ಷಗಳ ಅಧಿಕಾರಾವಧಿಯಲ್ಲಿ ಪತ್ರಿಕಾಗೋಷ್ಠಿ ನಡೆಸದ ಏಕೈಕ ಪ್ರಧಾನಿ ಮೋದಿಯವರೇ ಆಗಿದ್ದಾರೆ.
 

ಬರಹ ಇಷ್ಟವಾಯಿತೆ?

 • 23

  Happy
 • 4

  Amused
 • 1

  Sad
 • 0

  Frustrated
 • 10

  Angry

Comments:

0 comments

Write the first review for this !