ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನೋತ್ತರ ಉದ್ಯಮ, ಉದ್ಯೋಗ: ಯುವ ಸಮೂಹಕ್ಕೆ ಪ್ರಧಾನಿ ಮೋದಿಯ 5 ಸೂತ್ರಗಳು

Last Updated 19 ಏಪ್ರಿಲ್ 2020, 13:48 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವವು ಕೊರೊನಾ ವೈರಸ್ ಸೋಂಕಿನ (ಕೋವಿಡ್–19) ವಿರುದ್ಧ ಹೋರಾಡುತ್ತಿರುವಾಗ ಭಾರತದ ಉತ್ಸಾಹಿ ತರುಣರು ಜಗತ್ತಿಗೆ ದಾರಿ ತೋರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೊನೋತ್ತರ ಉದ್ಯಮ ಮತ್ತು ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿ ಮೋದಿ ಅವರು ಲಿಂಕ್ಡ್‌ಇನ್‌ನಲ್ಲಿ ಐದು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಆ ಕುರಿತು ಟ್ವೀಟ್ ಕೂಡ ಮಾಡಿರುವ ಅವರು, ‘ವಿಶ್ವವು ಕೊರೊನಾ ವಿರುದ್ಧ ಹೋರಾಡುತ್ತಿರುವಾಗ ಭಾರತದ ಉತ್ಸಾಹಿ ಯುವಕರು ಆರೋಗ್ಯಕರ ಮತ್ತು ಸಮೃದ್ಧ ಭವಿಷ್ಯವನ್ನು ರೂಪಿಸುವ ಹಾದಿಯನ್ನು ಜಗತ್ತಿಗೆ ತೋರಬಹುದು. ಲಿಂಕ್ಡ್‌ಇನ್‌ನಲ್ಲಿ ಕೆಲವು ಆಲೋಚನೆಗಳನ್ನು ಹಂಚಿಕೊಂಡಿದ್ದು, ಅವುಗಳು ವೃತ್ತಿಪರರಿಗೆ ಮತ್ತು ಯುವಕರಿಗೆ ಆಸಕ್ತಿ ಉಂಟುಮಾಡಬಲ್ಲವು’ ಎಂದು ಉಲ್ಲೇಖಿಸಿದ್ದಾರೆ.

ಮೋದಿ ಹೇಳಿದೆ ಐದು ಸಂಗತಿಗಳು ಹೀಗಿವೆ:

ಕಾರ್ಯಸಾಧ್ಯತೆ (Adaptability): ಸುಲಭವಾಗಿ ಹೊಂದಿಕೊಳ್ಳಬಲ್ಲ ವ್ಯವಹಾರ ಮತ್ತು ಜೀವನಶೈಲಿಯ ಮಾದರಿಗಳ ಕುರಿತು ಯೋಚಿಸಬೇಕಾದ್ದು ಸದ್ಯದ ಅವಶ್ಯಕತೆಯಾಗಿದೆ

ಹಾಗೆ ಮಾಡುವುದರಿಂದ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಪ್ರಾಣ ಹಾನಿಯಾಗದಂತೆ ನಮ್ಮ ಕಚೇರಿ, ವ್ಯವಹಾರ ಮತ್ತು ಆರ್ಥಿಕತೆಯು ವೇಗವಾಗಿ ಅಭಿವೃದ್ಧಿ ಹೊಂದುವಂತೆ ಮಾಡಬಹುದು.

ಡಿಜಿಟಲ್ ಪಾವತಿಯು ಇದಕ್ಕೊಂದು ಉತ್ತಮ ಉದಾಹರಣೆ. ಡಿಜಿಟಲ್ ಪಾವತಿಯ ಮೂಲಕ ದೊಡ್ಡ ಮತ್ತು ಸಣ್ಣ ಅಂಗಡಿಗಳವರು ಆರ್ಥಿಕವಾಗಿ ಸಂಪರ್ಕದಲ್ಲಿರಬಹುದು. ಭಾರತವು ಈಗಾಗಲೇ ಡಿಜಿಟಲ್ ವ್ಯವಹಾರಕ್ಕೆ ಒತ್ತು ನೀಡಿದೆ.

ಇನ್ನೊಂದು ಟೆಲಿಮೆಡಿಸಿನ್. ಈ ವಿಧಾನದಿಂದ ಕೆಲವು ವೈದ್ಯರು ಕ್ಲಿನಿಕ್‌ ಅಥವಾ ಆಸ್ಪತ್ರೆಗಳಿಗೆ ಹೋಗದೆ ವೈದ್ಯಕೀಯ ಸಲಹೆ ನೀಡುವುದನ್ನು ನಾವು ಕಾಣುತ್ತಿದ್ದೇವೆ. ಇದು ಉತ್ತಮ ಬೆಳವಣಿಗೆ. ಪ್ರಪಂಚದಾದ್ಯಂತ ಇದಕ್ಕೆ ನೆರವಾಗುವಂತಹ ಉದ್ಯಮ ಮಾದರಿಗಳನ್ನು ನಾವು ಯೋಚಿಸಬಹುದೇ?

ದಕ್ಷತೆ (Efficiency): ಎಷ್ಟು ಹೊತ್ತು ಕಚೇರಿಯಲ್ಲಿ ಕಳೆದಿದ್ದೇವೆ ಎಂಬುದು ದಕ್ಷತೆಯಲ್ಲ. ಉತ್ಪಾದಕತೆ ಮುಖ್ಯ. ನಿಗದಿತ ಸಮಯ ಮಿತಿಯಲ್ಲಿ ಕೆಲಸ ಮುಗಿಸುವುದಕ್ಕೆ ಒತ್ತು ನೀಡಬೇಕಿದೆ.

ಒಳಗೊಳ್ಳುವಿಕೆ (Inclusivity): ನಮ್ಮ ಉದ್ಯಮದ ಮಾದರಿಗಳು ಬಡವರು ಸೇರಿದಂತೆ ಎಲ್ಲರನ್ನೂ ಒಳಗೊಳ್ಳುವಂತಿರಬೇಕು. ಹವಾಮಾನ ಬದಲಾವಣೆ ವಿಚಾರದಲ್ಲಿ ನಾವು ಗಮನಾರ್ಹ ಸಾಧನೆ ಮಾಡಿದ್ದೇವೆ. ಮಾನವನ ಚಟುವಟಿಕೆಗಳು ನಿಧಾನವಾಗಿದ್ದಾಗ ತಾನೆಷ್ಟು ಬೇಗ ಏಳ್ಗೆ ಹೊಂದುತ್ತೇನೆ ಎಂಬುದನ್ನು ಪ್ರಕೃತಿ ಮಾತೆ ನಮಗೆಲ್ಲ ತೋರಿಸಿಕೊಟ್ಟಿದ್ದಾಳೆ. ಭೂಮಿಯ ಮೇಲೆ ನಮ್ಮ ದಬ್ಬಾಳಿಕೆ ಕಡಿಮೆ ಮಾಡುವಂತಹ ತಂತ್ರಜ್ಞಾನಗಳು ಮತ್ತು ಅಭಿವೃದ್ಧಿ ಮಾದರಿಯಿಂದ ಹೆಚ್ಚಿನ ಭವಿಷ್ಯವಿದೆ.

ಕಡಿಮೆ ವೆಚ್ಚದಲ್ಲಿ ಮತ್ತು ದೊಡ್ಡ ಪ್ರಮಾಣದಲ್ಲಿ ಕಂಡುಕೊಳ್ಳಬೇಕಾದ ಆರೋಗ್ಯ ಪರಿಹಾರಗಳ ಅವಶ್ಯಕತೆ ಬಗ್ಗೆ ಕೊರೊನಾ ನಮ್ಮ ಕಣ್ತೆರೆಸಿದೆ.

ಅವಕಾಶ (Opportunity): ಪ್ರತಿಯೊಂದು ಬಿಕ್ಕಟ್ಟೂ ಅದರ ಜತೆಗೊಂದು ಅವಕಾಶವನ್ನು ಸೃಷ್ಟಿಸುತ್ತದೆ. ಇದಕ್ಕೆ ಕೊರೊನಾ ಸಹ ಹೊರತಲ್ಲ. ಈಗ ಹೊರಹೊಮ್ಮುವ ಹೊಸ ಅವಕಾಶಗಳು ಮತ್ತು ಬೆಳವಣಿಗೆಯ ಕ್ಷೇತ್ರಗಳು ಯಾವುವೆಂದು ನಾವು ವಿಮರ್ಶೆ ಮಾಡಬೇಕಿದೆ.

ಕೊರೊನಾ ನಂತರದ ಜಗತ್ತಿನಲ್ಲಿ ಭಾರತವು ಮುಂದಿರಬೇಕು. ನಮ್ಮ ಜನರು, ಅವರ ಕೌಶಲ, ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಯೋಚನೆ ಮಾಡೋಣ.

ಸಾರ್ವತ್ರಿಕತೆ (Universalism): ಕೊರೊನಾ ಸೋಂಕು ತಗಲುವಾಗ ಜನಾಂಗ, ಧರ್ಮ, ವರ್ಣ, ಜಾತಿ, ಮತ, ಭಾಷೆ ಅಥವಾ ಗಡಿಯನ್ನು ನೋಡುವುದಿಲ್ಲ. ಕೊರೊನಾ ನಂತರ ನಮ್ಮ ಬದುಕಿನ ವಿಧಾನ ಹಾಗೂ ನಡವಳಿಕೆಯು ಏಕತೆ, ಸಹೋದರತ್ವಕ್ಕೆ ಪ್ರಾಮುಖ್ಯತೆ ನೀಡುವಂತಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT