ಮುಕ್ತ ಬಂದೀಖಾನೆಯಲ್ಲೊಂದು ಮನೆ! ಇಂದೋರ್ ಜಿಲ್ಲಾಡಳಿತದ ವಿನೂತನ ಪ್ರಯತ್ನ

7

ಮುಕ್ತ ಬಂದೀಖಾನೆಯಲ್ಲೊಂದು ಮನೆ! ಇಂದೋರ್ ಜಿಲ್ಲಾಡಳಿತದ ವಿನೂತನ ಪ್ರಯತ್ನ

Published:
Updated:

ಇಂದೋರ್: ಒಂದು ಕಾರಾಗೃಹ ಹೇಗಿರಬಹುದು ಊಹಿಸಿಕೊಳ್ಳಿ. ಕತ್ತಲೆ ಮತ್ತು ಇಕ್ಕಟ್ಟಾದ ಕೋಣೆ, ಆಯ್ಕೆಯೇ ಇಲ್ಲದ ಊಟ, ಯಾವಾಗ ಏನಾಗಬಹುದು ಎಂಬ ಭಯ ತುಂಬಿದ ವಾತಾವರಣ... ಕಾರಾಗೃಹದ ಈ ಪರಿಕಲ್ಪನೆಯನ್ನು ಬದಲಿಸುವ ಪ್ರಯತ್ನಕ್ಕೆ ಮಧ್ಯಪ್ರದೇಶದ ಇಂದೋರ್ ಜಿಲ್ಲಾಡಳಿತ ಮುಂದಾಗಿದೆ.

ಎರಡು ಕೊಠಡಿಗಳಿರುವ ಸಣ್ಣ ಮನೆ, ಕುಟುಂಬದೊಂದಿಗೆ ವಾಸ, ಕೆಲಸಕ್ಕೆಂದು ಹೊರಹೋಗಲು ಅವಕಾಶ... ಹೀಗೆ ಒಂದು ಮಿತಿಯಲ್ಲಿ ಮುಕ್ತ ಜೀವನಕ್ಕೆ ಅವಕಾಶವಿರುವ ಕಾರಾಗೃಹವನ್ನು ಇಂದೋರ್ ಜಿಲ್ಲಾಡಳಿತ ಆರಂಭಿಸಿದೆ. ನಗರದ ಕೇಂದ್ರ ಕಾರಾಗೃಹಕ್ಕೆ ಹೊಂದಿಕೊಂಡಂತೆ ಆರಂಭಿಸಿರುವ ಹೊಸ ಸ್ವರೂಪದ ಜೈಲಿಗೆ ‘ದೇವಿ ಅಹಲ್ಯಾಬಾಯಿ ಓಪನ್ ಕಾಲೊನಿ’ ಎಂದು ಹೆಸರಿಡಲಾಗಿದೆ.

ಈ ‘ಮುಕ್ತ ಜೈಲಿ’ನಲ್ಲಿರುವ ಮನೆಗಳಲ್ಲಿ ಸದ್ಯ 10 ಕೈದಿಗಳೊಂದಿಗೆ ಅವರ ಕುಟುಂಬದವರು ವಾಸವಾಗಿದ್ದಾರೆ. ಆ ಕೈದಿಗಳ ಶಿಕ್ಷೆ ಪೂರ್ಣಗೊಂಡ ನಂತರ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ತೆರವಾದ ಮನೆಗಳಿಗೆ ಬೇರೆ ಕೈದಿಗಳನ್ನು ನಿಯೋಜಿಸಲಾಗುತ್ತದೆ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲಾಡಳಿತದ ಈ ಪ್ರಯತ್ನಕ್ಕೆ ಇಂದೋರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ನ್ಯಾಯಾಧೀಶ ರಾಜೀವ್ ಕುಮಾರ್ ಶ್ರೀವತ್ಸ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಕೆಲವರು ಆ ಕ್ಷಣದ ಕೋಪದಲ್ಲಿ ತಪ್ಪುಗಳನ್ನು ಮಾಡಿರುತ್ತಾರೆ. ಅಂತಹವರನ್ನು ದೀರ್ಘಕಾಲ ಜೈಲಿನಲ್ಲಿ ಕೊಳೆಹಾಕಿದರೆ, ಸಮಾಜದ ಬಗ್ಗೆ ಅವರಲ್ಲಿ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಶಿಕ್ಷೆ ಮುಗಿದು ಬಿಡುಗಡೆಯಾದರೂ ಸಮಾಜಕ್ಕೆ ಹೊಂದಿಕೊಳ್ಳಲು ಅವರಿಗೆ ಕಷ್ಟವಾಗುತ್ತದೆ. ಸಮಾಜವೂ ಅವರನ್ನು ಮುಕ್ತವಾಗಿ ಸ್ವೀಕರಿಸುವುದಿಲ್ಲ. ಸಮಾಜದೊಂದಿಗೆ ಸ್ವಲ್ಪಸ್ವಲ್ಪವೇ ಬೆರೆಯಲು ಮುಕ್ತ ಜೈಲು ಅವಕಾಶ ಮಾಡಿಕೊಡುತ್ತದೆ. ಕೈದಿಗಳು ಬಿಡುಗಡೆಯಾದ ನಂತರ ಅವರು ಸಮಾಜದೊಂದಿಗೆ ಬೆರೆಯಲು ಇದರಿಂದ ಅನುಕೂಲವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಬೆಳಿಗ್ಗೆ ಹೊರಗೆ, ಸಂಜೆ ಒಳಕ್ಕೆ: ಇಲ್ಲಿರುವ ಕೈದಿಗಳು ಜೈಲಿನಿಂದ ಹೊರಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಅವರು ಬೆಳಿಗ್ಗೆ 8 ಗಂಟೆಯ ನಂತರ ಜೈಲಿನಿಂದ ಹೊರಗೆ ಹೋಗಬಹುದು. ಕೆಲಸ ಮುಗಿಸಿ ಸಂಜೆ 6 ಗಂಟೆಯ ಒಳಗೆ ವಾಪಸಾಗಬೇಕು. ಆದರೆ ನಗರವನ್ನು ಬಿಟ್ಟು ಹೊರಹೋಗುವಂತಿಲ್ಲ. 

ಮುಕ್ತ ಜೈಲಿನಲ್ಲಿರುವ ಕೈದಿಗಳು ಮತ್ತು ಅವರ ಕುಟುಂಬದವರ ಮೇಲ್ವಿಚಾರಣೆಗೆ ಮೂವರು ಸಿಬ್ಬಂದಿಯನ್ನಷ್ಟೇ ನಿಯೋಜಿಸಲಾಗಿದೆ.

******

ನ್ಯಾಯಾಲಯದ ನಿರ್ದೇಶನದ ಮೇರೆಗೆ ಇಂತಹ ಜೈಲನ್ನು ಆರಂಭಿಸಲಾಯಿತು. ಹೆಸರೇ ಹೇಳುವಂತೆ ಈ ಜೈಲು ಮುಕ್ತ ವಾತಾವರಣದಿಂದ ಕೂಡಿದೆ.

– ಇಂದೋರ್ ಪೊಲೀಸ್ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !