ಕಾಂಗ್ರೆಸ್ ಕಚೇರಿ: ಪ್ರಿಯಾಂಕಾಗೆ ರಾಹುಲ್‌ ಗಾಂಧಿ ಪಕ್ಕದ ಕೊಠಡಿ

7
ಟಾರ್ಗೆಟ್‌ ಉತ್ತರ ಪ್ರದೇಶ

ಕಾಂಗ್ರೆಸ್ ಕಚೇರಿ: ಪ್ರಿಯಾಂಕಾಗೆ ರಾಹುಲ್‌ ಗಾಂಧಿ ಪಕ್ಕದ ಕೊಠಡಿ

Published:
Updated:

ನವದೆಹಲಿ: ಇಲ್ಲಿನ 24 ಅಕ್ಬರ್‌ ರಸ್ತೆಯ ಕಾಂಗ್ರೆಸ್‌ ಮುಖ್ಯಕಚೇರಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ಕಚೇರಿ ಕೊಠಡಿಯೊಂದನ್ನು ನಿಗದಿ ಪಡಿಸಲಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಪಕ್ಕದ ಕೊಠಡಿಯಲ್ಲಿ ಪ್ರಿಯಾಂಕಾ ಪಕ್ಷದ ಚಟುವಟಿಕೆಗಳಲ್ಲಿ ಮಗ್ನರಾಗಲಿದ್ದಾರೆ. 

ಕೊಠಡಿಯ ಹೊರಗೆ ಪ್ರಿಯಾಂಕಾ ಅವರ ನಾಮಫಲಕ ಅಳವಡಿಸಲಾಗಿದೆ. ರಾಹುಲ್‌ ಗಾಂಧಿ ಪಕ್ಷದ ಉಪಾಧ್ಯಕ್ಷರಾಗಿದ್ದಾಗ ಇದೇ ಕೊಠಡಿಯಲ್ಲಿ ಪಕ್ಷದ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಕಾಂಗ್ರೆಸ್‌ನ ಹಿಂದಿನ ಪ್ರಧಾನ ಕಾರ್ಯದರ್ಶಿಗಳಾದ ಜನಾರ್ಧನ ದ್ವಿವೇದಿ ಹಾಗೂ ಸುಶೀಲ್‌ಕುಮಾರ್ ಶಿಂಧೆ ಇದೇ ಕೊಠಡಿಯಲ್ಲಿ ಕಚೇರಿ ಹೊಂದಿದ್ದರು. 

ಪ್ರಧಾನ ಕಾರ್ಯದರ್ಶಿ ಉತ್ತರ ಪ್ರದೇಶದ ಉಸ್ತುವಾರಿಯಾಗಿ ಪ್ರಿಯಾಂಕಾ ಅವರನ್ನು ನೇಮಿಸುವ ಮೂಲಕ ಸಹೋದರಿಯ ಸಕ್ರಿಯ ರಾಜಕೀಯ ಪ್ರವೇಶವನ್ನು ಕಳೆದ ತಿಂಗಳು ರಾಹುಲ್‌ ಗಾಂಧಿ ಘೋಷಿಸಿದ್ದರು. 

‘ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಉತ್ತರ ಪ್ರದೇಶದಿಂದ ಆಚೆಗೂ ಪ್ರಿಯಾಂಕಾ ಪಾತ್ರವಿರಲಿದೆ. ರಾಷ್ಟ್ರೀಯ ಮಟ್ಟದಲ್ಲಿ..’ ಎಂದು ಸಂದರ್ಶನವೊಂದರಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. 

ಲೋಕಸಭಾ ಚುನಾವಣೆಗಾಗಿ ಗುರುವಾರ ದೆಹಲಿಯಲ್ಲಿ ಕರೆಯಲಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿವಿಧ ರಾಜ್ಯಗಳ ಉಸ್ತುವಾರಿಗಳ ಸಭೆಯಲ್ಲಿ ಪ್ರಿಯಾಂಕಾ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಪ್ರಿಯಾಂಕಾ ಇತರೆ ರಾಜ್ಯಗಳಲ್ಲಿಯೂ ಚುನಾವಣಾ ಪ್ರಚಾರಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಉತ್ತರ ಪ್ರದೇಶ ಹಿಡಿತಕ್ಕೆ ಪಡೆಯಲು...

2014ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ರಾಹುಲ್‌ ಗಾಂಧಿ ಹಾಗೂ ರಾಯ್‌ ಬರೇಲಿ ಇಂದ ಸೋನಿಯಾ ಗಾಂಧಿ ಗೆಲುವು ಬಿಟ್ಟರೆ ಉತ್ತರ ಪ್ರದೇಶದಲ್ಲಿ ಮತ್ತೊಂದು ಸ್ಥಾನ ದೊರೆತಿರಲಿಲ್ಲ. ಒಟ್ಟು 80 ಸ್ಥಾನಗಳ ಪೈಕಿ ಕಾಂಗ್ರೆಸ್‌ ಪಾಲಿಗೆ ಕೇವಲ ಎರಡು ಸ್ಥಾನಗಳು ಒಲಿದಿದ್ದವು. 1989ರಿಂದಲೂ ಕಾಂಗ್ರೆಸ್‌ ಉತ್ತರ ಪ್ರದೇಶದಲ್ಲಿ ಅಧಿಕಾರ ಪುನರ್‌ಸ್ಥಾಪಿಸಲು ಶ್ರಮಿಸುತ್ತಿದೆ. ಈ ನಡುವೆ 2009ರಲ್ಲಿ 22 ಸ್ಥಾನಗಳಲ್ಲಿ ಗೆಲುವು ಪಡೆಯುವ ಮೂಲಕ ಅಚ್ಚರಿಯ ಫಲಿತಾಂಶ ಪಡೆದಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಉತ್ತರ ಪ್ರದೇಶದಲ್ಲಿ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಪಕ್ಷದಲ್ಲಿ ಮುಂಚೂಣಿಗೆ ತಂದಿದ್ದಾರೆ. 

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !