ರಾವಣನ ಭೇಟಿಯಾದ ಪ್ರಿಯಾಂಕಾ ಗಾಂಧಿ

ಶನಿವಾರ, ಮಾರ್ಚ್ 23, 2019
31 °C
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌–ಭೀಮ್‌ ಆರ್ಮಿ ನಡುವೆ ಮೈತ್ರಿ ವದಂತಿ

ರಾವಣನ ಭೇಟಿಯಾದ ಪ್ರಿಯಾಂಕಾ ಗಾಂಧಿ

Published:
Updated:
Prajavani

ಲಖನೌ: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಮುಖ ದಲಿತ ನಾಯಕ ಮತ್ತು ಭೀಮ್‌ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಅಲಿಯಾಸ್‌ ರಾವಣ ಅವರನ್ನು ಮೀರಠ್‌ನ ಆಸ್ಪತ್ರೆಯಲ್ಲಿ ಬುಧವಾರ ಭೇಟಿಯಾಗಿದ್ದಾರೆ. ರಾಜಕೀಯ ವಲಯದಲ್ಲಿ ಇದು ಅಚ್ಚರಿಗೆ ಕಾರಣವಾಗಿದೆ. 

ಸಹರಾನ್‌ಪುರ ಜಿಲ್ಲೆಯ ದೇವಬಂದ್‌ನಲ್ಲಿ ಮೆರವಣಿಗೆ ನಡೆಸಲು ಯತ್ನಿಸಿದ್ದ ಚಂದ್ರಶೇಖರ್‌ ಅವರನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಅವರನ್ನು ಮೀರಠ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕಾಂಗ್ರೆಸ್‌ ಪಕ್ಷದ ಜತೆಗೆ ದೇಶದ ಎಲ್ಲಿಯೂ ಮೈತ್ರಿ ಅಥವಾ ಹೊಂದಾಣಿಕೆ ಇಲ್ಲ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಮಂಗಳವಾರ ಘೋಷಿಸಿದ್ದಾರೆ. ಅದರ ಮರುದಿನವೇ ಚಂದ್ರಶೇಖರ್‌ ಅವರನ್ನು ಪ್ರಿಯಾಂಕಾ ಭೇಟಿಯಾಗಿದ್ದಾರೆ. ಪ್ರಿಯಾಂಕಾ ಸುಮಾರು ಹತ್ತು ನಿಮಿಷ ಆಸ್ಪತ್ರೆಯಲ್ಲಿ ಇದ್ದರು.  

ಈ ಭೇಟಿಗೆ ರಾಜಕೀಯ ಅರ್ಥ ಕಲ್ಪಿಸಬೇಡಿ ಎಂದು ಪ್ರಿಯಾಂಕಾ ಹೇಳಿದ್ದಾರೆ. ಆದರೆ, ಸಹರಾನ್‌ಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯೂ ಭೇಟಿಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾರಣಕ್ಕೆ ಈ ಭೇಟಿ ರಾಜಕೀಯ ಬಣ್ಣ ಪಡೆದುಕೊಂಡಿದೆ. ಭೀಮ್‌ ಆರ್ಮಿಯ ಜತೆಗೆ ಕಾಂಗ್ರೆಸ್‌ ಪಕ್ಷ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 

ಉತ್ತರ ಪ್ರದೇಶದ ಪಶ್ಚಿಮ ಭಾಗದ ಸಹರಾನ್‌ಪುರದಲ್ಲಿ ದಲಿತ ಸಮುದಾಯದ ಇಬ್ಬರು ಠಾಕೂರ್‌ ಸಮುದಾಯದ ಜತೆಗಿನ ಸಂಘರ್ಷದಲ್ಲಿ ಹತ್ಯೆಯಾಗಿದ್ದರು. ಆ ಬಳಿಕ, ಚಂದ್ರಶೇಖರ್‌ ಅವರು ಭಾರಿ ಪ್ರತಿಭಟನೆ ನಡೆಸಿ ಸುದ್ದಿಯಾಗಿದ್ದರು.

ಪ್ರಿಯಾಂಕಾ ಅವರ ಜತೆಗೆ ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ರಾಜ್‌ ಬಬ್ಬರ್‌ ಮತ್ತು ಉತ್ತರ ಪ್ರದೇಶ ಪಶ್ಚಿಮ ವಿಭಾಗದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ಇದ್ದರು. 

 

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !