ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಿಡಿ ಸರ್ಕಸ್ ಬೇಡ, ಆರ್ಥಿಕತೆ ಸುಧಾರಿಸಿ: ಗೋಯಲ್‌ಗೆ ಪ್ರಿಯಾಂಕಾ ತಿರುಗೇಟು

Last Updated 19 ಅಕ್ಟೋಬರ್ 2019, 11:07 IST
ಅಕ್ಷರ ಗಾತ್ರ

ನವದೆಹಲಿ:ಅರ್ಥಶಾಸ್ತ್ರ ನೊಬೆಲ್ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಅವರನ್ನು ಟೀಕಿಸಿದ್ದಕ್ಕೆ ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ತಿರುಗೇಟು ನೀಡಿದ್ದಾರೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಸುಧಾರಿಸುವುದು ಸರ್ಕಾರದ ಕೆಲಸವೇ ವಿನಃ ‘ಕಾಮಿಡಿ ಸರ್ಕಸ್’ ಮಾಡುವುದಲ್ಲ ಎಂದು ಅವರು ಹೇಳಿದ್ದಾರೆ.

‘ಬಿಜೆಪಿನಾಯಕರು ತಮ್ಮ ಕೆಲಸ ಮಾಡುವ ಬದಲು ಇತರರ ಸಾಧನೆಯ ಬಗ್ಗೆ ಮಾತನಾಡುತ್ತಾರೆ. ನೊಬೆಲ್ ಪುರಸ್ಕೃತರು ಪ್ರಮಾಣಿಕವಾಗಿ ಅವರ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ನೊಬೆಲ್ ದೊರೆತಿದೆ’ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

‘ಆರ್ಥಿಕತೆ ಕುಸಿಯುತ್ತಿದೆ. ಅದನ್ನು ಸುಧಾರಿಸುವುದು ನಿಮ್ಮ ಕೆಲಸ’ ಎಂದು ಸಚಿವರನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.

ಶುಕ್ರವಾರ ಪುಣೆಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಗೋಯಲ್, ‘ಅಭಿಜಿತ್‌ ಅವರು ಕಾಂಗ್ರೆಸ್‌ನ ನ್ಯಾಯ್‌ (ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಪಕ್ಷವು ಪ್ರಕಟಿಸಿದ್ದ ಬಡತನ ನಿರ್ಮೂಲನೆ ಯೋಜನೆ) ಅನ್ನು ಬೆಂಬಲಿಸಿದ್ದರು. ಆದರೆ, ಭಾರತದ ಜನರು ಅವರ ಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ’ ಎಂದು ಹೇಳಿದ್ದರು. ಈ ಬಾರಿ ಅರ್ಥಶಾಸ್ತ್ರದಲ್ಲಿ ನೊಬೆಲ್‌ ಪುರಸ್ಕಾರಕ್ಕೆ ಪಾತ್ರರಾದ ಭಾರತ ಸಂಜಾತ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಅವರು ಎಡಪಂಥೀಯ ಒಲವು ಇರುವವರು ಎಂದೂ ಹೇಳಿದ್ದರು.

ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಭಿಷೇಕ್ ಸಿಂಘ್ವಿ,ಪ್ರದೀಪ್‌ ಭಟ್ಟಾಚಾರ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಗೋಯಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT