ಶುಕ್ರವಾರ, ನವೆಂಬರ್ 22, 2019
23 °C

ಸ್ಪೈವೇರ್ ರಾಜಕಾರಣ | ಬಿಜೆಪಿ ಅಂದ್ರೆ ಭಾರತೀಯ ಜಾಸೂಸ್ ಪಾರ್ಟಿ: ಕಾಂಗ್ರೆಸ್

Published:
Updated:
Priyanka Gandhi Vadra

ನವದೆಹಲಿ: ವಾಟ್ಸ್‌ಆ್ಯಪ್‌ ಮೂಲಕ ಮೊಬೈಲ್‌ಗಳಿಗೆ ಲಗ್ಗೆಯಿಟ್ಟು ಮಾಹಿತಿ ಕದಿಯುತ್ತಿದ್ದ ‘ಪೆಗಾಸಸ್‌’ ಸ್ಪೈವೇರ್ ಹೊತ್ತಿಸಿರುವ ಕಿಡಿ ಇದೀಗ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

‘ನನ್ನ ಮೊಬೈಲ್‌ಗೂ ಪೆಗಾಸಸ್ ನುಸುಳಿತ್ತು. ಈ ಕುರಿತು ವಾಟ್ಸ್‌ಆ್ಯಪ್‌ನಿಂದ ನನಗೆ ಮೆಸೇಜ್‌ ಬಂದಿತ್ತು’ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕಾ ಗಾಂಧಿ ವದ್ರಾ ಭಾನುವಾರ ಹೇಳಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಪ್ರಫುಲ್ ಪಟೇಲ್ ಸಹ ಈಚೆಗೆ ಬೇಹುಗಾರಿಕೆಯ ಆರೋಪ ಮಾಡಿದ್ದರು.

ಇದನ್ನೂ ಓದಿ: ವಾಟ್ಸ್‌ಆ್ಯಪ್‌ ಬಳಸಿ ಮೊಬೈಲ್‌ಗೆ ಕನ್ನ

‘ಪ್ರತಿಪಕ್ಷಗಳ ನಾಯಕರ ಮೇಲೆ ಬೇಹುಗಾರಿಕೆ ಮಾಡಿರುವ ಸರ್ಕಾರದ ದುಸ್ಸಾಹಸ ಇದೀಗ ಬಹಿರಂಗವಾಗಿದೆ’ ಎಂದು ದೂರಿರುವ ಕಾಂಗ್ರೆಸ್, ಸರ್ಕಾರಕ್ಕೆ ಪುಂಖಾನುಪುಂಖವಾಗಿ ಪ್ರಶ್ನೆಗಳನ್ನು ಕೇಳಿ, ‘ಪ್ರಧಾನಿ ನರೇಂದ್ರ ಮೋದಿ ಈ ಪ್ರಶ್ನೆಗಳಿಗೆ ಉತ್ತರಿಸಬೇಕು’ ಎಂದು ಆಗ್ರಹಿಸಿದೆ.

‘ಬಿಜೆಪಿ ಎಂದರೆ ಭಾರತೀಯ ಜನತಾ ಪಾರ್ಟಿ ಅಲ್ಲ, ಭಾರತೀಯ ಜಾಸೂಸ್ (ಗೂಢಚಾರಿ) ಪಾರ್ಟಿ. ಎಲ್ಲ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ಈ ಸರ್ಕಾರ ಇತ್ತು’ ಎಂದು ಕಾಂಗ್ರೆಸ್ ನಾಯಕ ಸುರ್ಜೆವಾಲಾ ಟೀಕಿಸಿದ್ದಾರೆ.

‘ಈ ಅಕ್ರಮ ಮತ್ತು ಸಂವಿಧಾನ ಬಾಹಿರ ಗೂಢಚಾರಿಕೆಗೆ ಆದೇಶ ನೀಡಿದ್ದು, ಅನುಷ್ಠಾನಗೊಳಿಸಿದ್ದು ಬಿಜೆಪಿ ನೇತೃತ್ವದ ಸರ್ಕಾರ’ ಎಂದು ಕಾಂಗ್ರೆಸ್‌ ನೇರ ಆರೋಪ ಮಾಡಿದೆ.

ಇದನ್ನೂ ಓದಿ: ಕಿಸೆಯಲ್ಲಿ ಗೂಢಚಾರಿ | ಪತ್ರಕರ್ತರು, ಚಳವಳಿಗಾರರ ಮೊಬೈಲ್‌ಗಳಲ್ಲಿ ಸ್ಪೈವೇರ್

ಪ್ರಿಯಾಂಕಾ ಗಾಂಧಿಗೂ ಮೆಸೇಜ್‌ ಬಂದಿತ್ತು

‘ಮೊಬೈಲ್‌ಗೆ ಸ್ಪೈವೇರ್‌ ನುಸುಳಿರುವ ಬಗ್ಗೆ ವಾಟ್ಸ್‌ಆ್ಯಪ್‌ನಿಂದ ಪ್ರಿಯಾಂಕಾ ಗಾಂಧಿ ಅವರಿಗೂ ಮೆಸೇಜ್‌ ಬಂದಿತ್ತು’ ಎಂದು ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಭಾನುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ವಾಟ್ಸ್‌ಆ್ಯಪ್‌ನಿಂದ ಪ್ರಿಯಾಂಕಾ ಗಾಂಧಿ ಅವರಿಗೂ ಮೆಸೇಜ್‌ ಬಂದಿತ್ತು. ಮೆಸೇಜ್‌ ಬಗ್ಗೆ ಹೆಚ್ಚು ಗಮನ ಕೊಡದೆ ಡಿಲೀಟ್ ಮಾಡಿದ್ದರು. ನನಗೆ ಬಂದ ಮೆಸೇಜ್‌ ಕುರಿತು ಪ್ರಸ್ತಾಪಿಸಿದಾಗ ಪ್ರಿಯಾಂಕಾ ಅವರು ತಮಗೂ ಇಂಥದ್ದೇ ಮೆಸೇಜ್ ಬಂದಿತ್ತು ಎಂದು ನೆನಪಿಸಿಕೊಂಡರು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಾಟ್ಸ್‌ಆ್ಯಪ್‌ ನಡೆ– ಸರ್ಕಾರಕ್ಕೆ ಸಂದೇಹ

ಏನಿದು ಪ್ರಕರಣ

‘ಪೆಗಾಸಸ್ ಸ್ಪೈವೇರ್‌ ಮೂಲಕ ಹಲವರ ವೈಯಕ್ತಿಕ ಮಾಹಿತಿಗೆ ಕನ್ನ ಹಾಕಲು ತನ್ನ ಅಧೀನದಲ್ಲಿರುವ ವಾಟ್ಸ್‌ಆ್ಯಪ್‌ ಬಳಸಲಾಗಿದೆ’ ಎಂದು ಫೇಸ್‌ಬುಕ್‌ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಮೇಲೆ ಕಳೆದ ವಾರ ಅಮೆರಿಕದಲ್ಲಿ ದಾವೆ ಹೂಡಿತ್ತು.

‘ಪೆಗಾಸಸ್‌ ಮೂಲಕ ಬೇಹುಗಾರಿಕೆಗೆ ಒಳಗಾದವರ ಪಟ್ಟಿಯಲ್ಲಿ ಭಾರತೀಯರು ಇದ್ದಾರೆ. ಈ ಕುರಿತು ಭಾರತ ಸರ್ಕಾರಕ್ಕೆ ಈ ಮೊದಲೇ ಮಾಹಿತಿ ನೀಡಿದ್ದೇವೆ ಮತ್ತು ಸಂಬಂಧಿಸಿದವರನ್ನು ಎಚ್ಚರಿಸಿದ್ದೇವೆ’ ಎಂದು ವಾಟ್ಸ್‌ಆ್ಯಪ್‌ ಹೇಳಿಕೆ ಬಿಡುಗಡೆ ಮಾಡಿತ್ತು.

ಪ್ರತಿಕ್ರಿಯಿಸಿ (+)