ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಚಾರಕ್ಕಿದೆ ರಾಜ್ಯದ ಸ್ವಾಧಾರ ಗೃಹ: ರಾಷ್ಟ್ರೀಯ ಮಹಿಳಾ ಆಯೋಗ ವರದಿ

Last Updated 17 ಡಿಸೆಂಬರ್ 2018, 13:39 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿನ ನಿರ್ಗತಿಕ ಮಹಿಳಾ ಕೇಂದ್ರ (ಸ್ವಾಧಾರ ಗೃಹ) ಕೇವಲ ಕಾಟಾಚಾರಕ್ಕಾಗಿ ಇದೆ. ಅದರಿಂದ ಯಾವುದೇ ಉಪಯೋಗವಾಗುತ್ತಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗ ವರದಿ ನೀಡಿದೆ.

ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಉತ್ತರ ಪ್ರದೇಶದಲ್ಲಿನ 26 ಸ್ವಾಧಾರ ಗೃಹಗಳ ಪರಿಶೀಲನೆ ನಡೆಸಿದ ಆಯೋಗ ನೇಮಿಸಿದ ತನಿಖಾ ಸಮಿತಿ ಅಲ್ಲಿನ ಸ್ಥಿತಿಗತಿಗಳ ಕುರಿತು ವರದಿ ಸಿದ್ಧಪಡಿಸಿದೆ.

ಕೇಂದ್ರ ಸರ್ಕಾರ 2015ರಲ್ಲಿಸ್ವಾಧಾರ ಮತ್ತು ಅಲ್ಪಾವಧಿ ವಸತಿ ಗೃಹ ಎಂಬ ಎರಡು ಯೋಜನೆಗಳನ್ನು ವಿಲೀನಗೊಳಿಸಿ ಸ್ವಾಧಾರ ಗೃಹ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತು. ಪ್ರತಿ ಜಿಲ್ಲೆಯಲ್ಲೂ 30 ಜನರಿಗೆ ವಸತಿ ಸೌಲಭ್ಯ ಹಾಗೂ ಸೂಕ್ತ ಚಿಕಿತ್ಸೆ ಮತ್ತು ತರಬೇತಿ ನೀಡಿ ನಿರ್ಗತಿಕ ಮಹಿಳೆಯರನ್ನು ಸಶಕ್ತರನ್ನಾಗಿಸುವುದು ಈ ಯೋಜನೆಯ ಆಶಯವಾಗಿದೆ.

ಆಯೋಗದ ಸಮಿತಿಯು ರಾಜ್ಯದಲ್ಲಿ ಎಂಟು ಕೇಂದ್ರಗಳಲ್ಲಿ ಪರಿಶೀಲನೆ ನಡೆಸಿದೆ. ಇಲ್ಲಿನ ಸ್ವಾಧಾರ ಗೃಹವೊಂದರಲ್ಲಿ ಆಶ್ರಯ ಪಡೆದ ಅತ್ಯಾಚಾರ ಸಂತ್ರಸ್ತೆ ತೀವ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಆಪ್ತ ಸಮಾಲೋಚನೆ ನೀಡುವ ಯಾವುದೇ ಪ್ರಯತ್ನವನ್ನು ಕೇಂದ್ರದವರು ಮಾಡಿಲ್ಲ ಎನ್ನುವುದನ್ನು ಸಮಿತಿ ದಾಖಲಿಸಿದೆ.

ಸ್ವಾಧಾರ ಗೃಹದ ಪಟ್ಟಿಯಲ್ಲಿದ್ದ ಬೆಂಗಳೂರಿನ ಪ್ರತಿಷ್ಠಿತ ಪ್ರದೇಶದಲ್ಲಿನ ಕೇಂದ್ರಕ್ಕೆ ಭೇಟಿ ನೀಡಿದ ಸಮಿತಿ ಸದಸ್ಯರಿಗೆ ಸಿಕ್ಕಿದ್ದು ಖಾಲಿ ಜಾಗ ಮಾತ್ರ. ಅಲ್ಲಿ ಯಾವುದೇ ಕೇಂದ್ರವಿರಲಿಲ್ಲ. ಅದು ಅಸ್ತಿತ್ವದಲ್ಲಿರುವುದು ಕೇವಲ ದಾಖಲೆಗಳಲ್ಲಿ ಎಂದು ಸಮಿತಿ ವರದಿಯಲ್ಲಿ ವಿವರಿಸಿದೆ.

ಇಲಾಖೆಯ ವೆಬ್‌ಸೈಟ್‌ನಲ್ಲಿ ಸಿಗಲ್ಲ ಸ್ವಾಧಾರ ಗೃಹದ ಮಾಹಿತಿ

ರಾಜ್ಯದಲ್ಲಿ ಪ್ರಸಕ್ತ ಎಷ್ಟು ಸ್ವಾಧಾರ ಗೃಹಗಳಿವೆ ಎಂಬ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಮಾಹಿತಿಯೇ ಇಲ್ಲ. ಇನ್ನೂ ಇಲಾಖೆಗೆ ಕರೆ ಮಾಡಿ ಕೇಳಿದರೆ, ಯಾವ ಅಧಿಕಾರಿಯೂ ಈ ಬಗ್ಗೆ ಮಾಹಿತಿ ನೀಡಲಿಲ್ಲ. ನಿರ್ಗತಿಕ ಮಹಿಳೆಯರಿಗೆ ಆಶ್ರಯ ಒದಗಿಸಬೇಕು ಎಂದು ಯೋಚಿಸುವವರಿಗೆ, ಎಲ್ಲಿ ಸೇರಿಸಬೇಕು ಎಂದು ತಿಳಿಯುವುದೇ ಕಷ್ಟ ಎನ್ನುವುದು ಅನೇಕರ ದೂರು.

2015ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೊರಡಿಸಿದ ಸುತ್ತೋಲೆಯ ಪ್ರಕಾರ ಕರ್ನಾಟಕದಲ್ಲಿ ರಾಜ್ಯದಲ್ಲಿ ಒಟ್ಟು 32 ಸ್ವಾಧಾರ ಗೃಹಗಳಿದ್ದು, ರಾಜ್ಯ ರಾಜಧಾನಿಯಲ್ಲಿ 6 ಕೇಂದ್ರಗಳಿವೆ.

ರಾಜ್ಯದಲ್ಲಿನ ಸ್ವಾಧಾರ ಗೃಹದ ನಿರ್ವಹಣೆಗಾಗಿ ಕೇಂದ್ರ ಸರ್ಕಾರ 2017–18ರಲ್ಲಿ ₹ 5.6 ಕೋಟಿ ಹಾಗೂ ಪ್ರಸಕ್ತ ಸಾಲಿನಲ್ಲಿ ₹1.45 ಲಕ್ಷ ಹಣವನ್ನು ಬಿಡುಗಡೆ ಮಾಡಿದೆ.

ಹೀನಾಯವಾಗಿದೆಇಲ್ಲಿರುವ ಮಹಿಳೆಯರ ಸ್ಥಿತಿ

ಇನ್ನೂ ಪಶ್ಚಿಮ ಬಂಗಾಳದಲ್ಲಿನ ಕೇಂದ್ರಗಳಲ್ಲಿ ಮಹಿಳೆಯರಿಗೆ ದೈಹಿಕ ಹಿಂಸೆ ನೀಡಲಾಗುತ್ತಿದೆ. ಒಡಿಶಾದಲ್ಲಿ ಎಚ್‌ಐವಿ ರೋಗಿಗಳಿಗೆ ಸೂಕ್ತ ಚಿಕಿತ್ಸೆಯೇ ಸಿಗುತ್ತಿಲ್ಲ ಹಾಗೂ ಉತ್ತರ ಪ್ರದೇಶದ ಗೃಹಗಳಲ್ಲಿ ಮಹಿಳೆಯರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಅಲ್ಲಿನ ಸ್ಥಿತಿಗತಿಗಳನ್ನು ದಾಖಲಿಸಿದೆ.

ಪಶ್ಚಿಮ ಬಂಗಾಳದ ಐದು ಸ್ವಾಧಾರಗೃಹಗಳು ಒಡಿಶಾದಲ್ಲಿ ಎಂಟು ಮತ್ತು ಉತ್ತರ ಪ್ರದೇಶದಲ್ಲಿ ಐದು ಕೇಂದ್ರಗಳನ್ನು ಸಮಿತಿ ಪರಿಶೀಲನೆ ನಡೆಸಿದೆ.ಒಟ್ಟು 26 ಸ್ವಾಧಾರ ಗೃಹಗಳ ಪೈಕಿ ಕೇವಲ ಒಂದೇ ಒಂದು ಕೇಂದ್ರ ಯೋಜನೆಯ ಮಾರ್ಗದರ್ಶನಗಳನ್ನು ಪಾಲಿಸುತ್ತಿದೆ ಎಂದು ವರದಿಯಲ್ಲಿ ಹೇಳಿದೆ.

ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದವರು ಮತ್ತು ನಿರ್ಗತಿಕರಿಗೆ ಎನ್‌ಜಿಒಗಳು ತಾತ್ಕಾಲಿಕ ಆಶ್ರಯ ಕಲ್ಪಿಸಿವೆ. ಈ ಕೇಂದ್ರಗಳು ಮಹಿಳಾ ಹಾಸ್ಟೆಲ್‌ಗಳಂತೆ ಕೆಲಸ ಮಾಡುತ್ತಿವೇ ಹೊರತು ಸಬಲೀಕರಣಗೊಳಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಉತ್ತರ ಪ್ರದೇಶ ಕೇಂದ್ರಗಳಲ್ಲಿರುವ ಮಾನಸಿಕ ತೊಂದರೆಯಿಂದ ಬಳಲುತ್ತಿರುವ ಮಹಿಳೆರಿಗೆ ಯಾವುದೇ ಚಿಕಿತ್ಸೆಯನ್ನು ನೀಡಲಾಗುತ್ತಿಲ್ಲ.ಪಶ್ಚಿಮ ಬಂಗಾಳದಲ್ಲಿ ತಮಗೆ ಸ್ವಾಧಾರ ಗೃಹದ ಸಲಹೆಗಾರರು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅಲ್ಲಿನ ಮಹಿಳೆಯರು ಸಮಿತಿಗೆ ದೂರು ನೀಡಿದ್ದಾರೆ.

ಸ್ವಾಧಾರ ಗೃಹ

ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಆಶ್ರಯ, ಆಹಾರ, ಬಟ್ಟೆ, ತರಬೇತಿ ಹಾಗೂ ಶಿಕ್ಷಣ ನೀಡುವುದರ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಸಶಕ್ತರಾಗುವಂತೆ ಮಾಡುವುದು ಯೋಜನೆಯ ಉದ್ದೇಶ. ನೊಂದಣಿಯಾಗಿ ಮೂರು ವರ್ಷವಾಗಿರುವ, ಆರ್ಥಿಕವಾಗಿ ಸದೃಢವಾದ ಎಲ್ಲಾ ಅನುಕೂಲತೆಗಳನ್ನು ಹೊಂದಿರುವ ಹಾಗೂ ಮಹಿಳಾ ಕಲ್ಯಾಣ ಕ್ಷೇತ್ರದಲ್ಲಿ ಅನುಭವವಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಸ್ವಾಧಾರ ಗೃಹದಲ್ಲಿ ಸಲಹಾ ಕೇಂದ್ರ, ತರಬೇತಿ ಕೇಂದ್ರ ಹಾಗೂ ವೈದ್ಯಕೀಯ ಕೇಂದ್ರಗಳನ್ನು ನಡೆಸಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT