ಯುಜಿಸಿ ರದ್ದು: ಶಿಕ್ಷಕರ ಸಂಘಗಳ ವಿರೋಧ

7
ಭಾರತೀಯ ಉನ್ನತ ಶಿಕ್ಷಣ ಆಯೋಗ ರಚನೆ: ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಆಕ್ಷೇಪ

ಯುಜಿಸಿ ರದ್ದು: ಶಿಕ್ಷಕರ ಸಂಘಗಳ ವಿರೋಧ

Published:
Updated:

ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಬದಲಿಗೆ ಹೊಸದಾಗಿ ಭಾರತೀಯ ಉನ್ನತ ಶಿಕ್ಷಣ ಆಯೋಗ (ಎಚ್‌ಇಸಿಐ) ಸ್ಥಾಪಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿಶ್ವವಿದ್ಯಾಲಯಗಳ ಶಿಕ್ಷಕರ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. 

ಹೊಸ ಆಯೋಗದ ಸ್ಥಾಪನೆಯಾದರೆ ಅನುದಾನ ನೀಡಿಕೆಯ ನಿಯಂತ್ರಣ ಸರ್ಕಾರದ ಕೈಗೆ ಹೋಗುತ್ತದೆ ಮತ್ತು ವಿಶ್ವವಿದ್ಯಾಲಯಗಳ ಸ್ವಾಯತ್ತೆಗೆ ಧಕ್ಕೆ ಉಂಟಾಗುತ್ತದೆ ಎಂಬ ಆತಂಕವನ್ನು ಈ ಸಂಘಟನೆಗಳು ವ್ಯಕ್ತಪಡಿಸಿವೆ. 

ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರ ಸಂಘಟನೆಗಳ ಒಕ್ಕೂಟವು (ಎಐಎಫ್‌ಯುಸಿಟಿಒ) ಹಂತ ಹಂತವಾಗಿ ದೇಶವ್ಯಾಪಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳ ಶಿಕ್ಷಕರ ಸಂಘಟನೆಯು ಈ ಬಗ್ಗೆ ಚರ್ಚಿಸಲು ಮುಂದಿನ ವಾರ ಸಭೆ ಕರೆದಿದೆ. ಆಯೋಗ ಸ್ಥಾಪನೆಯ ಪ್ರಸ್ತಾವವನ್ನು ಮರು ಪರಿಶೀಲಿಸುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ (ಎಚ್‌ಆರ್‌ಡಿ) ಮನವಿ ಸಲ್ಲಿಸಲು ನಿರ್ಧರಿಸಿದೆ. 

ಒಕ್ಕೂಟವು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. 

ಯುಜಿಸಿ ಬದಲಿಗೆ ಎಚ್‌ಇಸಿಐ ಸ್ಥಾಪಿಸುವ ಪ್ರಸ್ತಾವವನ್ನು ಎಚ್‌ಆರ್‌ಡಿ ಸಚಿವಾಲಯವು ಬುಧವಾರ ಮುಂದಿಟ್ಟಿತ್ತು. ಈ ಬಗೆಗಿನ ಮಸೂದೆಯ ಕರಡನ್ನು ಕೂಡ ಸಚಿವಾಲಯ ಸಿದ್ಧಪಡಿಸಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಹೆಚ್ಚಳ ಹೊಸ ಆಯೋಗ ರಚನೆಯ ಉದ್ದೇಶ ಎಂದು ಸಚಿವಾಲಯ ಹೇಳಿತ್ತು. 

ಪ್ರಸ್ತಾವಿತ ಎಚ್‌ಇಸಿಐಗೆ ಅನುದಾನ ನೀಡಿಕೆ ಅಧಿಕಾರ ಇರುವುದಿಲ್ಲ. ಶೈಕ್ಷಣಿಕ ವಿಚಾರಗಳ ಮೇಲ್ವಿಚಾರಣೆ ಮಾತ್ರ ಆಯೋಗದ ಕೆಲಸ ಎಂದು ಪ್ರಸ್ತಾವದಲ್ಲಿ ಹೇಳಲಾಗಿತ್ತು. ಅನುದಾನ ನೀಡಿಕೆಯ ಅಧಿಕಾರ ಸರ್ಕಾರದ ಬಳಿಯೇ ಇರಲಿದೆ ಎಂದು ತಿಳಿಸಲಾಗಿತ್ತು. 

‘ಸರ್ಕಾರದ ಕ್ರಮವನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಯುಜಿಸಿ ಬದಲಿಗೆ ಎಚ್‌ಇಸಿಐ ರಚನೆಯ ಕರಡು ಮಸೂದೆಯನ್ನು ತರಾತುರಿಯಲ್ಲಿ ಎಚ್‌ಆರ್‌ಡಿ ಸಚಿವಾಲಯ ಸಿದ್ಧಪಡಿಸಿದೆ. ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು ಮತ್ತು ಶಿಕ್ಷಕರ ಬಳಿ ಈ ವಿಚಾರವನ್ನೇ ಪ್ರಸ್ತಾಪಿಸಿಲ್ಲ. ಈ ಮಸೂದೆಯನ್ನು ಖಂಡಿಸುತ್ತೇವೆ ಮತ್ತು ತಿರಸ್ಕರಿಸುತ್ತೇವೆ’ ಎಂದು ಎಐಎಫ್‌ಯುಸಿಟಿಒ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌ ಹೇಳಿದ್ದಾರೆ. 

ಎಫ್‌ಇಡಿಸಿಯುಟಿಎ ಕೂಡ ಎಚ್‌ಆರ್‌ಡಿ ಸಚಿವಾಲಯದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಅನುದಾನ ಹಂಚಿಕೆಯ ಅಧಿಕಾರವು ಸರ್ಕಾರದ ಕೈಗೆ ಹೋದರೆ ವಿಶ್ವವಿದ್ಯಾಲಯಗಳು ಸ್ವಾಯತ್ತೆಯನ್ನು ಕಳೆದುಕೊಳ್ಳಲಿವೆ ಎಂದು ಎಫ್‌ಇಡಿಸಿಯುಟಿಎ ಅಧ್ಯಕ್ಷ ರಾಜೀವ್‌ ರಾಯ್‌ ಹೇಳಿದ್ದಾರೆ. 

ಯುಜಿಸಿಯಲ್ಲಿ ಸುಧಾರಣೆ ತರುವ ಅಗತ್ಯ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಯುಜಿಸಿಯನ್ನೇ ರದ್ದು ಮಾಡಿ ಹೊಸ ಆಯೋಗ ರಚನೆ ಮಾಡುವುದರಿಂದ ಯಾವುದೇ ಪ್ರಯೋಜನ ಆಗದು ಎಂದು ರಾಜೀವ್‌ ಅಭಿಪ್ರಾಯಪಟ್ಟಿದ್ದಾರೆ. ಹೊಸ ಆಯೋಗ ರಚನೆಯಿಂದ ಶಿಕ್ಷಣ ವ್ಯವಸ್ಥೆಯು ಅಧಿಕಾರಶಾಹಿ ಕೈಗೆ ಹೋಗಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ. 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !