ಶನಿವಾರ, ಜನವರಿ 18, 2020
26 °C
ಪೌರತ್ವ ಕಾಯ್ದೆಗೆ ವಿರೋಧ

ಪೊಲೀಸರಿಗೇ ಥಳಿಸಿ ಬಸ್ಸುಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Jamia Millia Protest

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಆವರಣದಲ್ಲಿ ಲಾಠಿಪ್ರಹಾರ ಮಾಡಿದರೆಂಬ ಆರೋಪಕ್ಕೆ ಉತ್ತರಿಸಿರುವ ಪೊಲೀಸರು, ಪ್ರತಿಭಟನಾಕಾರರನ್ನು ಗುರುತಿಸಿ, ವಿದ್ಯಾರ್ಥಿಗಳನ್ನು ರಕ್ಷಿಸುವುದಕ್ಕಾಗಿ ತಾವು ವಿಶ್ವವಿದ್ಯಾಲಯ ಆವರಣದೊಳಕ್ಕೆ ಪ್ರವೇಶಿಸಬೇಕಾಯಿತು ಎಂದಿದ್ದಾರೆ.
ಈ ನಡುವೆ ಪ್ರತಿಭಟನಾಕಾರರು ಪೊಲೀಸರನ್ನೇ ಅಟ್ಟಾಡಿಸಿ ಥಳಿಸುತ್ತಿರುವ ವೀಡಿಯೊವೊಂದು ಬಿಡುಗಡೆಯಾಗಿದ್ದು, ವಿದ್ಯಾರ್ಥಿಗಳ ಪ್ರತಿಭಟನೆಯ ಹಿಂದಿರುವ ಕೈಗಳ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.

ಇದನ್ನೂ ಓದಿ

ಭಾನುವಾರ ನಡೆದ ಪ್ರತಿಭಟನೆಯ ಸಂದರ್ಭ ಸಾರ್ವಜನಿಕ ಆಸ್ತಿಪಾಸ್ತಿಗೆ ತೀವ್ರ ಹಾನಿಯಾಗಿದ್ದು, ಈ ಕುರಿತು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಎಫ್ಐಆರ್‌ನಲ್ಲಿರುವ ಪ್ರಮುಖ ಅಂಶಗಳು ಹೀಗಿವೆ:

* ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದ ಪೊಲೀಸರ ಮನವಿಗೆ ಬೆಲೆಕೊಡದ ವಿದ್ಯಾರ್ಥಿಗಳು, ಪ್ರತಿಭಟನಾಕಾರರು ಕ್ಯಾಂಪಸ್ ಒಳಗಿನಿಂದಲೇ ಪೊಲೀಸರ ಮೇಲೆ ಕಲ್ಲು ತೂರಲಾರಂಭಿಸಿದರು ಮತ್ತು ಗೇಟ್ ಮುಂಭಾಗದಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿದರು.
* ಗಾಯಾಳುಗಳನ್ನು ಕರೆದೊಯ್ಯಲು ತಂದಿದ್ದ ಆ್ಯಂಬುಲೆನ್ಸ್‌ಗೆ ಪ್ರತಿಭಟನಾಕಾರರು ಹಾನಿ ಎಸಗಿದರು. ಮೇಲಧಿಕಾರಿಗಳ ಸೂಚನೆಗೆ ಕನಿಷ್ಠ ಬಲಪ್ರಯೋಗ ಮಾಡುವ ಮೂಲಕ ಪ್ರತಿಭಟನಾಕಾರರನ್ನು ಅಲ್ಲಿಂದ ಹೊರಹೋಗುವಂತೆ ಮಾಡಲಾಯಿತು.
* ಕ್ಯಾಂಪಸ್‌ನಿಂದ ಹೊರಬರುವಂತೆ ಕೇಳಿಕೊಂಡರೂ ಪ್ರತಿಭಟನಾಕಾರರು ಕಲ್ಲು ತೂರಾಟ ಮಾಡಿದ್ದರಿಂದ, ಹಲವು ಮಂದಿ ಪೊಲೀಸರು ತೀವ್ರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
* ಎರಡು ಪೊಲೀಸ್ ಬೂತ್‌ಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು 70-80 ಮೋಟಾರ್ ಸೈಕಲ್‌ಗಳನ್ನೂ ಪುಡಿ ಮಾಡಲಾಯಿತು.

ಈ ಮಧ್ಯೆ, ದೆಹಲಿಯ ಜಾಫ್ರಾಬಾದ್ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ 3 ಎಫ್ಐಆರ್‌ಗಳನ್ನು ದಾಖಲಿಸಲಾಗಿದ್ದು, ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ಹಿನ್ನೆಲೆಯೇನು ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಸೀಲಾಂಪುರದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಿಂಸಾ ಪ್ರವೃತ್ತಿ ತೋರಿದವರಲ್ಲಿ ಹಲವರನ್ನು ಗುರುತಿಸಲಾಗಿದ್ದು, ಅವರ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ. ಸೀಲಾಂಪುರದಲ್ಲಿ ಪ್ರತಿಭಟನಾಕಾರರು ಎರಡು ಬಸ್ಸುಗಳಿಗೆ ಬೆಂಕಿ ಹಚ್ಚಿದ್ದರು. ಇಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು.

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಆವರಣದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಲಾಗಿದೆ. ಅವರೆಲ್ಲರೂ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಯಾವುದೇ ವಿದ್ಯಾರ್ಥಿ ಅಲ್ಲ ಎಂದು ಪೊಲೀಸರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆಯು, ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ಸಂಘರ್ಷಕ್ಕೆ ಈಡಾಗಿ ಭಾರತಕ್ಕೆ ಓಡಿ ಬಂದು ಆಶ್ರಯ ಪಡೆದ ಮುಸ್ಲಿಮೇತರರಿಗೆ ಪೌರತ್ವ ಒದಗಿಸುವ ಆಶಯವನ್ನು ಹೊಂದಿದೆ. 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿ ಈಗಿನ ಕಾಯ್ದೆ ರೂಪಿಸಲಾಗಿದೆ. ಹಳೆಯ ಕಾಯ್ದೆ ಪ್ರಕಾರ ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು, ಸಿಖ್‌, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮೀಯರು ಧಾರ್ಮಿಕ ಸಂಘರ್ಷಕ್ಕೆ ಈಡಾಗಿ ಬಂದು ಭಾರತದಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿದ್ದಲ್ಲಿ ಮಾತ್ರ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದರು. ಅದಕ್ಕೆ ಈಗ ತಿದ್ದುಪಡಿ ಮಾಡಿ, ಇವರೆಲ್ಲಾ ಭಾರತದಲ್ಲಿ 6 ವರ್ಷ ವಾಸವಿದ್ದರೆ ಇಲ್ಲಿಯ ಪೌರತ್ವ ಪಡೆಯಲು ಅರ್ಹರಾಗುತ್ತಾರೆ. ಅವರಿಗೆ ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದನ್ನು ವಿಪಕ್ಷಗಳು ವಿರೋಧಿಸುತ್ತಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು