ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆಗೆ ಮಹಿಳೆ: ದಾಳಿಯ ಗುರಿ ಸಿಪಿಎಂ

ಪ್ರತಿಭಟನೆ ತೀವ್ರ: ಕಚ್ಚಾ ಬಾಂಬ್‌ ದಾಳಿ: ಕಾಂಗ್ರೆಸ್‌ನಿಂದ ಕರಾಳ ದಿನ
Last Updated 3 ಜನವರಿ 2019, 17:52 IST
ಅಕ್ಷರ ಗಾತ್ರ

ತಿರುವನಂತಪುರ: ಶಬರಿಮಲೆಗೆ ಮಹಿಳೆಯರಿಬ್ಬರು ಬುಧವಾರ ಬೆಳಗ್ಗಿನ ಜಾವ ಪ್ರವೇಶಿಸಿದ್ದನ್ನು ಖಂಡಿಸಿ ಗುರುವಾರ ನಡೆದ ಕೇರಳ ಬಂದ್‌ ಇಡೀ ರಾಜ್ಯವನ್ನು ತತ್ತರಗೊಳಿಸಿತು. ಪ್ರತಿಭಟನಕಾರರು ರಾಜ್ಯದ ವಿವಿಧೆಡೆ ಪೊಲೀಸರು ಮತ್ತು ಆಡಳಿತಾರೂಢ ಸಿಪಿಎಂ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ.

ಪಾಲಕ್ಕಾಡ್‌ನ ಸಿಪಿಐ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ. ಕಚೇರಿಯ ಹೊರಗೆ ನಿಲ್ಲಿಸಿದ್ದ ವಾಹನಗಳನ್ನು ಪುಡಿಗಟ್ಟಲಾಗಿದೆ. ಅದರಲ್ಲಿ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಕೂಡ ಸೇರಿವೆ.

ತಲಶ್ಶೇರಿಯಲ್ಲಿ ಸಿಪಿಎಂ ನಿರ್ವಹಿಸುತ್ತಿರುವ ಬೀಡಿ ಸುತ್ತುವ ಘಟಕವೊಂದರ ಮೇಲೆ ಕಚ್ಚಾ ಬಾಂಬ್‌ ಎಸೆಯಲಾಯಿತು. ಆದರೆ, ಅದು ಸ್ಫೋಟಿಸದ್ದರಿಂದ ಯಾವುದೇ ಅನಾಹುತ ಉಂಟಾಗಲಿಲ್ಲ. ನೆಡುಮಂಗಾಡ್‌ ಎಂಬಲ್ಲಿನ ಪೊಲೀಸ್‌ ಠಾಣೆಯ ಮೇಲೆಯೂ ಕಚ್ಚಾ ಬಾಂಬ್‌ ಎಸೆಯಲಾಗಿದೆ. ಇದರಿಂದ ಏನು ಆನಾಹತು ಆಗಿದೆ ಎಂಬುದು ತಿಳಿದು ಬಂದಿಲ್ಲ.

ಎರ್ನಾಕುಲ ಮತ್ತು ಮಲಪ್ಪುರದ ಸಿಪಿಎಂ ಕಚೇರಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪಾಲಕ್ಕಾಡ್‌ನಲ್ಲಿ ಸಿಪಿಎಂ ನಿರ್ವಹಿಸುತ್ತಿರುವ ಗ್ರಂಥಾಲಯಕ್ಕೆ ನುಗ್ಗಿದ ಪ್ರತಿಭಟನಕಾರರು ದಾಂದಲೆ ನಡೆಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಬೆಂಗಾವಲು ಪಡೆಯ ವಾಹನವೊಂದು ಡಿಕ್ಕಿ ಹೊಡೆದು ಕೆಲವರು ಗಾಯಗೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷವು ಗುರುವಾರವನ್ನು ‘ಕರಾಳ ದಿನ’ ಎಂದು ಆಚರಿಸಿದೆ.

ಮಹಿಳೆಯರಿಗೆ ಭದ್ರತೆ ಕೊಟ್ಟರೆ ಭಕ್ತರಿಗೆ ತೊಂದರೆ: ಹೈಕೋರ್ಟ್‌ಗೆ ವರದಿ

ಋತುಸ್ರಾವದ ವಯಸ್ಸಿನ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಲು ಪೊಲೀಸ್‌ ಭದ್ರತೆ ಒದಗಿಸುವುದು ಇತರ ಭಕ್ತರ ಹಕ್ಕುಗಳು ಮತ್ತು ಸುರಕ್ಷತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಕೇರಳ ಹೈಕೋರ್ಟ್‌ ನೇಮಿಸಿರುವ ಮೂವರು ಸದಸ್ಯರ ಸಮಿತಿಯು ಹೇಳಿದೆ.

ಸಮಿತಿಯು ಹೈಕೋರ್ಟ್‌ಗೆ ಗುರುವಾರ ವರದಿ ಸಲ್ಲಿಸಿದೆ. ಚೆನ್ನೈಯ ಮಾನಿತಿ ಸಂಘಟನೆಯ 11 ಕಾರ್ಯಕರ್ತೆಯರು ಕಳೆದ ಡಿಸೆಂಬರ್‌ 23ರಂದು ಶಬರಿಮಲೆಗೆ ಹೋಗಲು ಪೊಲೀಸರು ರಕ್ಷಣೆ ಕೊಟ್ಟಾಗ ಪಂಪಾದ ತಳ ಶಿಬಿರದಲ್ಲಿ ಭಾರಿ ಉದ್ದದ ಸರತಿ ಸಾಲು ಉಂಟಾಗಿತ್ತು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸ್‌ ರಕ್ಷಣೆಯಲ್ಲಿ ಮಹಿಳೆಯರನ್ನು ಕರೆದೊಯ್ಯುವುದರಿಂದ 50 ವರ್ಷ ದಾಟಿದ ಮಹಿಳೆಯರು ಮತ್ತು ಮಕ್ಕಳು ದರ್ಶನಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ ಎಂದೂ ಸಮಿತಿ ಹೇಳಿದೆ.

ಸನ್ನಿಧಾನಕ್ಕೆ ತೆರಳುವ ದಾರಿಯಲ್ಲಿ ಉಂಟಾಗುವ ಗೊಂದಲಗಳು ಭಕ್ತರ ಸುರಕ್ಷತೆಯನ್ನು ಅಪಾಯಕ್ಕೆ ಒಡ್ಡುತ್ತದೆ ಮತ್ತು ಅವರ ಆತಂಕವನ್ನು ಹೆಚ್ಚಿಸುತ್ತದೆ. ಪಂಪಾದಿಂದ ಸನ್ನಿಧಾನಕ್ಕೆ ಹೋಗುವ ದಾರಿಯು ದಟ್ಟ ಕಾಡಿನಿಂದ ಕೂಡಿದೆ. ಮಾರ್ಗದ ಎರಡೂ ಬದಿಗಳಲ್ಲಿ ಕಂದಕವಿದೆ. ಈ ಮಾರ್ಗದಲ್ಲಿ ಉಂಟಾಗುವ ಯಾವುದೇ ಗೊಂದಲ ಅಮಾಯಕ ಭಕ್ತರ ಜೀವಕ್ಕೇ ಅಪಾಯ ಉಂಟು ಮಾಡಬಹುದು ಎಂಬುದನ್ನು ಗಮನಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ತಂತ್ರಿ ರಾಜೀನಾಮೆ ಕೊಡಬೇಕಿತ್ತು: ಪಿಣರಾಯಿ

ಇಬ್ಬರು ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಿದ ಬಳಿಕ ಮುಖ್ಯ ಅರ್ಚಕ ಕಂಡರಾರು ರಾಜೀವರು ಅವರು ಶುದ್ಧೀಕರಣ ವಿಧಿಗಳನ್ನು ನಡೆಸಿರುವುದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಖಂಡಿಸಿದ್ದಾರೆ.

‘ಅಯ್ಯಪ್ಪ ದೇಗುಲದಲ್ಲಿ ಗುರುವಾರ ವಿಚಿತ್ರವೊಂದು ಸಂಭವಿಸಿತು. ತಂತ್ರಿ (ಅರ್ಚಕ) ದೇಗುಲವನ್ನು ಮುಚ್ಚಿ ಶುದ್ಧೀಕರಣ ಕ್ರಿಯೆಗಳನ್ನು ನಡೆಸಿದರು. ಇದು ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆ’ ಎಂದು ವಿಜಯನ್‌ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ತಂತ್ರಿಯವರಿಗೆ ಆಕ್ಷೇಪ ಇದ್ದರೆ ಅವರು ತಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಿತ್ತು. ಈ ಪ್ರಕರಣದಲ್ಲಿ ತಂತ್ರಿ ಅವರೂ ಪ್ರತಿವಾದಿಗಳಲ್ಲಿ ಒಬ್ಬರಾಗಿದ್ದರು. ಸುಪ್ರೀಂ ಕೋರ್ಟ್‌ಗೆ ಅವರೂ ತಮ್ಮ ಹೇಳಿಕೆ ನೀಡಿದ್ದಾರೆ ಎಂದು ವಿಜಯನ್‌ ಹೇಳಿದ್ದಾರೆ.

ಪತ್ರಕರ್ತರಿಂದ ಬಹಿಷ್ಕಾರ

ಗುರುವಾರದ ಬಂದ್‌ ಸಂದರ್ಭದಲ್ಲಿ ಪ್ರತಿಭಟನಕಾರರು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಖಂಡಿಸಿ ಬಿಜೆಪಿ ಮತ್ತು ಶಬರಿಮಲೆ ಕರ್ಮ ಸಮಿತಿಯ ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು ನಿರ್ಧರಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೆ ಮತ್ತು ಸಮಿತಿಯ ನಾಯಕಿ ಕೆ.ಪಿ. ಶಶಿಕಲಾ ಅವರು ಕರೆದಿದ್ದ ಮಾಧ್ಯಮ ಗೋಷ್ಠಿಯನ್ನು ಈ ಸಂಘಟನೆಯ ಪತ್ರಕರ್ತರು ಗುರುವಾರ ಬಹಿಷ್ಕರಿಸಿದರು.

ವರದಿ ಕೇಳಿದ ರಾಜ್ಯಪಾಲ

ಬಂದ್‌ ವೇಳೆ ನಡೆದ ಹಿಂಸಾಚಾರದ ಬಗ್ಗೆ ತಕ್ಷಣವೇ ವರದಿ ನೀಡುವಂತೆ ಕೇರಳದ ರಾಜ್ಯಪಾಲ ಪಿ. ಸದಾಶಿವಂ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಕೇಳಿದ್ದಾರೆ. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆಯೂ ಅವರು ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

ತುರ್ತು ವಿಚಾರಣೆ ಇಲ್ಲ

ಮಹಿಳೆಯರ ಪ್ರವೇಶದ ಬಳಿಕ ದೇವಾಲಯ ಮುಚ್ಚಿ ಶುದ್ಧೀಕರಣ ವಿಧಿ ನಡೆಸಿರುವುದರ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಮಹಿಳೆಯರ ಪ್ರವೇಶ ನಿಷೇಧ ರದ್ದು ಮಾಡಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಬಾಕಿ ಇದೆ. ಆ ಅರ್ಜಿಗಳ ಜತೆಗೆ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಮತ್ತು ನ್ಯಾಯಮೂರ್ತಿ ಎಸ್‌.ಕೆ. ಕೌಲ್‌ ಅವರ ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT