ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಮಸೂದೆ ವಿರೋಧಿಸಿ ಪ್ರತಿಭಟನೆ: ಈಶಾನ್ಯದಲ್ಲಿ ತಾರಕ್ಕೇರಿದ ಕಿಚ್ಚು

24 ರೈಲುಗಳ ಸಂಚಾರ ರದ್ದು; ವಿ.ವಿ ಪರೀಕ್ಷೆ ಮುಂದೂಡಿಕೆ
Last Updated 11 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಪೌರತ್ವ (ತಿದ್ದುಪಡಿ) ಮಸೂದೆಯು ಈಶಾನ್ಯದಲ್ಲಿ ಹಿಂಸೆಗೆ ಕಾರಣವಾಗಿದೆ. ಬುಧವಾರ ನಡೆದ ಬೃಹತ್ ಪ್ರತಿಭಟನೆಗೆ ಯಾವುದೇ ಪಕ್ಷ ಕರೆ ನೀಡಿರಲಿಲ್ಲವಾದರೂ, ಸಾವಿರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಸ್ವಯಂ ಪ್ರೇರಣೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರತಿಭಟನೆಯ ಕಿಚ್ಚು ತೀವ್ರಗೊಂಡಿದ್ದರಿಂದ ಅಸ್ಸಾಂನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ತ್ರಿಪುರಾದಲ್ಲಿ ಸೇನಾ ಕಣ್ಗಾವಲು ಹಾಕಲಾಗಿದೆ

ಪ್ರತಿಭಟನೆ ತೀವ್ರ: ತಣಿಯದ ಆಕ್ರೋಶ

-ಸಚಿವಾಲಯದ ಎದುರು ಪ್ರತಿಭಟನೆ ನಡೆಸುತ್ತಿದ್ದ ಹಲವು ಜನರು ಹಾಗೂ ಪತ್ರಕರ್ತರಿಗೆ ಗಾಯ

-ಗುವಾಹಟಿ, ದಿಬ್ರುಗಡ, ಜೊಹ್ರತ್‌ನಲ್ಲಿ ಧರಣಿನಿರತ ನೂರಾರು ಜನರನ್ನು ವಶಕ್ಕೆ ಪಡೆದ
ಪೊಲೀಸರು

-ಗುವಾಹಟಿಯ ಸಚಿವಾಲಯ ಸಂಕೀರ್ಣ ಮಾರ್ಗದ ರಸ್ತೆಯನ್ನು ಬಂದ್ ಮಾಡಿದ ಹೋರಾಟಗಾರರು

-ಪ್ರಧಾನಿ ಮೋದಿ, ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಭಾನುವಾರ ಪಾಲ್ಗೊಳ್ಳಲಿರುವ ಶೃಂಗಸಭೆಯ ವೇದಿಕೆಗೂ ಹಾನಿ; ಬ್ಯಾನರ್, ಜಾಹೀರಾತು ಫಲಕ ಹರಿದು ಆಕ್ರೋಶ

-ದಿಬ್ರುಗಡದಲ್ಲಿ ಗುಂಪು ಚದುರಿಸಲು ರಬ್ಬರ್‌ ಬುಲೆಟ್ ಹಾಗೂ ಅಶ್ರುವಾಯು ಪ್ರಯೋಗ

-ಮುಂಜಾಗ್ರತಾ ಕ್ರಮವಾಗಿ 24 ರೈಲುಗಳ ಸಂಚಾರ ರದ್ದು

-ಗುವಾಹಟಿ ವಿ.ವಿ, ದಿಬ್ರುಗಡ ವಿ.ವಿಯಲ್ಲಿ ಬುಧವಾರ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

-ದೆಹಲಿಯ ಜಂತರ್‌ ಮಂತರ್‌ನಲ್ಲಿ ಈಶಾನ್ಯ ರಾಜ್ಯಗಳಿಂದ ಬಂದಿದ್ದ ಜನರಿಂದ ಧರಣಿ

-ಜಮ್ಮು–ಕಾಶ್ಮೀರ ಕಾಂಗ್ರೆಸ್ ಘಟಕದಿಂದ ಜಮ್ಮುವಿನಲ್ಲಿ ಪ್ರತಿಭಟನೆ; ಶಾಂತಿಯುತವಾಗಿ ಅಂತ್ಯ

-ಮಸೂದೆಯನ್ನು ಬೆಂಬಲಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪಟ್ನಾದಲ್ಲಿ ಆರ್‌ಜೆಡಿ, ಕಾಂಗ್ರೆಸ್‌ ಪಕ್ಷಗಳ ಆಕ್ರೋಶ

ಅಸ್ಸಾಂ, ತ್ರಿಪುರಾದಲ್ಲಿ ಸೇನೆ ನಿಯೋಜನೆ

ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ತಾಳಿದ್ದು, ಹಿಂಸಾಪೀಡಿತ ತ್ರಿಪುರಾ ಹಾಗೂ ಅಸ್ಸಾಂನಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ 5000 ಅರೆಸೇನಾಪಡೆ ಸಿಬ್ಬಂದಿಯನ್ನು ವಿಶೇಷ ವಿಮಾನಗಳ ಮೂಲಕ ಕಳುಹಿಸಿಕೊಡಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಭದ್ರತೆಗೆ ನಿಯೋಜಿಸಿದ್ದ ಸಿಬ್ಬಂದಿ ಪೈಕಿ 2 ಸಾವಿರ ಯೋಧರು ಹಾಗೂ ದೇಶದ ವಿವಿಧ ಭಾಗಗಳಿಂದ 3 ಸಾವಿರ ಯೋಧರನ್ನು ಕರೆಯಿಸಿಕೊಂಡು, ಈಶಾನ್ಯ ರಾಜ್ಯಗಳಿಗೆ ರವಾನಿಸಲಾಗಿದೆ. ಸಿಆರ್‌ಪಿಎಫ್, ಬಿಎಸ್‌ಎಫ್ ಹಾಗೂ ಎಸ್‌ಎಸ್‌ಬಿ ಯೋಧರು ಈ ತಂಡಗಳಲ್ಲಿದ್ದಾರೆ.


ಅಲಿಗಡ ವಿ.ವಿ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌

ಅಲಿಗಡ (ಉತ್ತರ ಪ್ರದೇಶ): ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿದ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ 20 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಶ್ವವಿದ್ಯಾಲಯದ ಪ್ರವೇಶ ದ್ವಾರಗಳಲ್ಲಿ ಕ್ಷಿಪ್ರ ಕಾರ್ಯಪಡೆ ನಿಯೋಜಿಸಲಾಗಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ.

ನಿಷೇಧಾಜ್ಞೆ (144 ಸೆಕ್ಷನ್) ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ವಿದ್ಯಾರ್ಥಿ ಮುಖಂಡರು ಹಾಗೂ 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಶಾಂತಿಭಂಗ ಆರೋಪದ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿವಿಲ್ ಲೈನ್ಸ್ ಠಾಣಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ. ಆದರೆ ಮಂಗಳವಾರ ಸಂಜೆ ವಿದ್ಯಾರ್ಥಿಗಳು ನಡೆಸಿದ ಮೆರವಣಿಗೆ ಶಾಂತಿಯುತವಾಗಿತ್ತು ಎಂದು ವಿಶ್ವವಿದ್ಯಾಲಯದ ಶಿಸ್ತುಪಾಲನಾ ಅಧಿಕಾರಿ ಅಫಿಫುಲ್ಲಾ ಖಾನ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT