ಎಚ್‌ಎಎಲ್‌ಗೆ ಗುತ್ತಿಗೆ: ದಾಖಲೆ ಕೇಳಿದ ರಾಹುಲ್‌

7

ಎಚ್‌ಎಎಲ್‌ಗೆ ಗುತ್ತಿಗೆ: ದಾಖಲೆ ಕೇಳಿದ ರಾಹುಲ್‌

Published:
Updated:

ನವದೆಹಲಿ: ದೇಶದ ಪ್ರತಿಷ್ಠಿತ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ಗೆ(ಎಚ್‌ಎಎಲ್‌) ಒಟ್ಟು ₹1 ಲಕ್ಷ ಕೋಟಿ ಮೊತ್ತದ ರಕ್ಷಣಾ ಸಾಮಗ್ರಿ ತಯಾರಿಕೆ ಗುತ್ತಿಗೆ ನೀಡಿದ ದಾಖಲೆ ನೀಡುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ದಾಖಲೆ ನೀಡಲು ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ನೀಡುವಂತೆ ಅವರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಒತ್ತಾಯಿಸಿದ್ದಾರೆ. ರಫೇಲ್‌ ಒಪ್ಪಂದ ಕುರಿತು ಲೋಕಸಭೆಯಲ್ಲಿ ಶುಕ್ರವಾರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಎಚ್‌ಎಎಲ್‌ಗೆ ₹1 ಲಕ್ಷ ಕೋಟಿ ಮೊತ್ತದ ಕೆಲಸ ನೀಡಲಾಗಿದೆ ಎಂದು ಹೇಳಿದ್ದರು.

ಆದರೆ, ಎಚ್‌ಎಎಲ್‌ಗೆ ಒಂದು ರೂಪಾಯಿ ಕೆಲಸವನ್ನೂ ನೀಡಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ ನಂತರ ರಾಹುಲ್‌ ಗಾಂಧಿ ಅವರು ಸಚಿವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

‘ರಪೇಲ್‌ ಒಪ್ಪಂದ ಕುರಿತು ಪ್ರಧಾನಿ ಹೇಳಿರುವ ಸುಳ್ಳು ಮುಚ್ಚಿಕೊಳ್ಳಲು ರಕ್ಷಣಾ ಸಚಿವರು ಸಂಸತ್ತಿಗೆ ಮತ್ತೊಂದು ಸುಳ್ಳು ಹೇಳಿದ್ದಾರೆ. ಎಚ್‌ಎಎಲ್‌ಗೆ ಕೆಲಸ ನೀಡಿರುವ ಬಗ್ಗೆ ಸಂಸತ್ತಿನಲ್ಲಿ ದಾಖಲೆ ಮಂಡಿಸಬೇಕು, ಇಲ್ಲದಿದ್ದರೆ ರಾಜೀನಾಮೆ ನೀಡಬೇಕು’ ಎಂದು ರಾಹುಲ್‌ ಟ್ವೀಟ್‌ ಮೂಲಕ ರಕ್ಷಣಾ ಸಚಿವರನ್ನು ಆಗ್ರಹಿಸಿದ್ದಾರೆ.

ಈ ನಡುವೆ ಕಾಂಗ್ರೆಸ್‌ ನಾಯಕರು ರಾಹುಲ್‌ ಗಾಂಧಿ ಅವರ ಎರಡು ನಿರ್ದಿಷ್ಟ ಪ್ರಶ್ನೆಗಳಿಗೆ ರಕ್ಷಣಾ ಸಚಿವರು ಪ್ರತಿಕ್ರಿಯೆ ನೀಡುವಂತೆ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ‘ಉದ್ಯಮಿ ಅನಿಲ್‌ ಅಂಬಾನಿ ಗೆ ಗುತ್ತಿಗೆ ನೀಡಿದವರ‍್ಯಾರು? ಹೊಸ ಒಪ್ಪಂದಕ್ಕೆ ರಕ್ಷಣಾ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರೆ?’ ಎಂದು ರಾಹುಲ್‌ ಶುಕ್ರವಾರ ಲೋಕಸಭೆಯಲ್ಲಿ ಪ್ರಶ್ನಿಸಿದ್ದರು. ಈ ಪ್ರಶ್ನೆಗಳಿಗೆ ನಿರ್ಮಲಾ ಉತ್ತರ ನೀಡಿಲ್ಲ ಎಂದು ಕಾಂಗ್ರೆಸ್‌ ನಾಯಕರು ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.

**

ರಾಹುಲ್‌ಗೆ ಎ.ಬಿ.ಸಿ.ಡಿ. ಗೊತ್ತಿಲ್ಲ

ನವದೆಹಲಿ: ರಕ್ಷಣಾ ಒಪ್ಪಂದಗಳ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಎ.ಬಿ.ಸಿ.ಡಿ .. ಕೂಡ ಗೊತ್ತಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ತಿರುಗೇಟು ನೀಡಿದ್ದಾರೆ.

ಎಚ್‌ಎಎಲ್‌ ಗುತ್ತಿಗೆ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ರಾಹುಲ್‌ ಗಾಂಧಿ, ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.

ರಫೇಲ್‌ ಒಪ್ಪಂದ ಕುರಿತು ಲೋಕಸಭೆಗೆ ಮಾಹಿತಿ ನೀಡಿದ ನಂತರ ತಮ್ಮ ವಿರುದ್ಧ ಮುಗಿಬಿದ್ದ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿರುವ ನಿರ್ಮಲಾ ಸೀತಾರಾಮನ್‌, ಕಾಂಗ್ರೆಸ್‌ ಅಧ್ಯಕ್ಷರು ಪತ್ರಿಕೆಗಳನ್ನು ಸರಿಯಾಗಿ ಓದಬೇಕು ಎಂದು ಕಿವಿಮಾತು ಹೇಳಿದ್ದಾರೆ.

‘ನೀವು ಉಲ್ಲೇಖಿಸುತ್ತಿರುವ ವಿಷಯದ ವರದಿಯನ್ನು ದಯವಿಟ್ಟು ಸಂಪೂರ್ಣ ಓದಿ. ರಕ್ಷಣಾ ಸಚಿವರು ಕೆಲಸಗಳ ಆದೇಶಕ್ಕೆ ಸಹಿ ಹಾಕಿಲ್ಲ, ಆದರೆ, ಕೆಲಸಗಳನ್ನು ನೀಡಲಾಗಿದೆ. 2014 ರಿಂದ 2018ರ ಅವಧಿಯಲ್ಲಿ ₹26,570 ಕೋಟಿ ಮತ್ತು ₹73,000 ಕೋಟಿ ಮೊತ್ತದ ಕೆಲಸಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಸಚಿವರು ಹೇಳಿದ್ದಾರೆ.

**

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅಂಬಾನಿ– ಡಾಸೊ ಜಂಟಿ ಉದ್ಯಮದ ವಕ್ತಾರರಂತೆ ವರ್ತಿಸುತ್ತಿದ್ದಾರೆ
-ಆನಂದ್‌ ಶರ್ಮಾ, ರಾಜ್ಯಸಭೆಯ ಕಾಂಗ್ರೆಸ್‌ ಪಕ್ಷದ ಉಪನಾಯಕ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !