ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ಗಳಿಗೆ ಸೌಕರ್ಯ ಕೊಡಿ: ‘ಸುಪ್ರೀಂ’ ಸೂಚನೆ

Last Updated 16 ನವೆಂಬರ್ 2018, 18:11 IST
ಅಕ್ಷರ ಗಾತ್ರ

ನವದೆಹಲಿ: ಜಿಲ್ಲಾ ನ್ಯಾಯಾಲಯಗಳಿಗೆ ಮೂಲಸೌಕರ್ಯ ಹಾಗೂ ಅಗತ್ಯ ಸಿಬ್ಬಂದಿಯನ್ನು ಒದಗಿಸಬೇಕು ಎಂದು ಸುಪ್ರೀಂಕೋರ್ಟ್‌ ಗುರುವಾರ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

‘ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡುತ್ತೇವೆ. ಆದರೆ, ಅವರಿಗೆ ಕೋರ್ಟ್‌ ಸಭಾಂಗಣ, ಅಗತ್ಯ ಸಿಬ್ಬಂದಿ ಇರದಿದ್ದರೆ ಕೆಲಸ ಮಾಡುವುದಾದರೂ ಹೇಗೆ? ಈವರೆಗೆ ಕಾಯ್ದದ್ದು ಸಾಕು. ಈಗ ಇದು ಬಗೆಹರಿಯಲೇಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ, ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್‌ ಹಾಗೂ ಕೆ.ಎಂ.ಜೋಸೆಫ್‌ ಅವರಿದ್ದ ಪೀಠವು ಹೇಳಿದೆ.

ದೇಶದಾದ್ಯಂತ ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಹುದ್ದೆಗಳು ಖಾಲಿ ಇರುವ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದ ಪೀಠವು, ‘ಇದಕ್ಕಾಗಿ ಸಮಿತಿ ಅಥವಾ ಉಪ ಸಮಿತಿಗೆ ನಾವು ಶಿಫಾರಸು ಮಾಡುವುದಿಲ್ಲ. ಇಂಥ ಸಮಿತಿಗಳ ಮೇಲೆ ನಮಗೆ ನಂಬಿಕೆಯೂ ಇಲ್ಲ. ಇದಕ್ಕೆ ಹೈಕೋರ್ಟ್‌ಗಳು ಹಾಗೂ ರಾಜ್ಯ ಸರ್ಕಾರಗಳನ್ನೇ ಹೊಣೆ ಮಾಡಲಾಗುವುದು’ ಎಂದು ಹೇಳಿದೆ.

ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಛತ್ತೀಸಗಡ ಹಾಗೂ ಈಶಾನ್ಯ ರಾಜ್ಯಗಳ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳ ಕುರಿತು ಪೀಠವು ವರದಿ ಪರಿಶೀಲಿಸಿತು. ದೇಶದಾದ್ಯಂತ 22,036 ನ್ಯಾಯಾಧೀಶರ ಹುದ್ದೆಗಳ ಪೈಕಿ 5,133 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಹೀಗೆ ಖಾಲಿ ಬಿಟ್ಟಿರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆಯೂ ಅತೃಪ್ತಿ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT