ಭಾರತದ ವಿರುದ್ಧ ಎಫ್–16 ಬಳಸಿದ್ದೀರಾ? ಪಾಕಿಸ್ತಾನದಿಂದ ವಿವರಣೆ ಕೇಳಿದ ಅಮೆರಿಕ

ಶನಿವಾರ, ಮಾರ್ಚ್ 23, 2019
21 °C

ಭಾರತದ ವಿರುದ್ಧ ಎಫ್–16 ಬಳಸಿದ್ದೀರಾ? ಪಾಕಿಸ್ತಾನದಿಂದ ವಿವರಣೆ ಕೇಳಿದ ಅಮೆರಿಕ

Published:
Updated:

ವಾಷಿಂಗ್ಟನ್ : ಭಾರತದ ಮೇಲೆ ದಾಳಿ ನಡೆಸಲು ಎಫ್‌–16 ಯುದ್ಧ ವಿಮಾನಗಳನ್ನು ಬಳಸಿರುವ ಬಗ್ಗೆ ವಿವರಣೆ ನೀಡುವಂತೆ ಅಮೆರಿಕವು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.

‘ಭಾರತದ ವಿರುದ್ಧ ಎಫ್‌–16 ಅನ್ನು ದುರ್ಬಳಕೆ ಮಾಡಿರುವ ಸಾಧ್ಯತೆ ಇದೆ. ಈ ಮೂಲಕ ಪಾಕಿಸ್ತಾನವು ‘ಬಳಕೆದಾರರ ಒಪ್ಪಂದ’ವನ್ನು ಉಲ್ಲಂಘಿಸಿರುವ ಸಾಧ್ಯತೆ. ಈ ಬಗ್ಗೆ ಹೆಚ್ಚಿನ ವಿವರ ನೀಡುವಂತೆ ಪಾಕಿಸ್ತಾನಕ್ಕೆ ಸೂಚಿಸಿದ್ದೇವೆ’ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ಹೇಳಿದೆ.

ಅಮೆರಿಕದ ವಿದೇಶಾಂಗ ಸಚಿವಾಲಯದ ಅಧಿಕಾರಿಯು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಮಾಹಿತಿ ನೀಡಿದ್ದಾರೆ. ಎಫ್‌–16 ಬಳಕೆ ಬಗ್ಗೆ ಭಾರತ ಮತ್ತು ಪಾಕಿಸ್ತಾನಗಳ ಪ್ರತಿಪಾದನೆಯನ್ನು ಉಲ್ಲೇಖಿಸಿ ಅವರು ಮಾತನಾಡಿದ್ದಾರೆ. 

ಬಾಲಾಕೋಟ್‌ ಉಗ್ರರ ನೆಲೆ ಮೇಲೆ ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ನಡೆಸಿದ್ದ ದಾಳಿಗೆ ಪಾಕಿಸ್ತಾನವು ಭಾರತದ ಸೇನಾ ಸ್ವತ್ತುಗಳ ಮೇಲೆ ದಾಳಿಗೆ ಮುಂದಾಗಿತ್ತು. ಆದರೆ ಈ ದಾಳಿ ವಿಫಲವಾಗಿತ್ತು. ದಾಳಿಗೆ ಅಮೆರಿಕ ನಿರ್ಮಿತ ಎಫ್‌–16 ಯುದ್ಧವಿಮಾನಗಳನ್ನು ಪಾಕಿಸ್ತಾನ ಬಳಸಿದೆ. ನಾವು ಒಂದು ಎಫ್‌–16 ಅನ್ನು ಹೊಡೆದುರುಳಿಸಿದ್ದೇವೆ ಎಂದು ಭಾರತದ ಭದ್ರತಾ ಪಡೆಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದವು. ಎಫ್‌–16 ಯುದ್ಧವಿಮಾನಗಳಲ್ಲಿ ಬಳಸಲಾಗುವ ‘ಎಎಂಆರ್‌ಎಎಎಂ’ ಕ್ಷಿಪಣಿಯ ತುಣುಕನ್ನು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಲಾಗಿತ್ತು.

‘ಈ ಕಾರ್ಯಾಚರಣೆಯಲ್ಲಿ ನಮ್ಮ ಯಾವ ವಿಮಾನಕ್ಕೂ ಹಾನಿಯಾಗಿಲ್ಲ. ನಮ್ಮ ದಾಳಿಯಲ್ಲಿ ಎಫ್‌–16 ಬಳಸಿಲ್ಲ’ ಎಂದು ಪಾಕಿಸ್ತಾನ ಹೇಳಿತ್ತು.

‘ಈ ಎರಡೂ ಹೇಳಿಕೆಗಳ ಪತ್ರಿಕಾ ವರದಿಗಳನ್ನು ನಾವು ಗಮನಿಸಿದ್ದೇವೆ. ಬೇರೆ ದೆಶಗಳಿಗೆ ನಾವು ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವಾಗ ಅವುಗಳ ಬಳಕೆ ಮೇಲೆ ಕೆಲವಾರು ನಿರ್ಬಂಧಗಳನ್ನು ಹೇರಿರುತ್ತೇವೆ. ಅಲ್ಲದೆ ಆ ಶಸ್ತ್ರಾಸ್ತ್ರಗಳ ಬಳಕೆಗೆ ಸಂಬಂಧಿಸಿದಂತೆ ಪ್ರಕಟವಾಗುವ ಎಲ್ಲಾ ವರದಿಗಳನ್ನೂ ಗಂಭೀರವಾಗಿ ಪರಿಗಣಿಸುತ್ತೇವೆ. ಈ ವರದಿಗಳನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ಮಾಹಿತಿ ನೀಡಿದ್ದಾರೆ.

‘ಎಫ್‌–16 ಬಳಕೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮೇಲೆ ಹಲವು ನಿರ್ಬಂಧಗಳಿವೆ. ಇದು ಸೇನಾ ಒಪ್ಪಂದವಾಗಿರುವ ಕಾರಣ ಆ ನಿರ್ಬಂಧಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಭಾರತದ ವಿರುದ್ಧ ಎಫ್‌–16 ಬಳಸಲಾಗಿದೆ ಎಂಬುದರ ಬಗ್ಗೆ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸಬೇಕಾಗುತ್ತದೆ’ ಎಂದು ಅಮೆರಿಕದ ರಕ್ಷಣಾ ಸಚಿವಾಲಯದ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಕೋನ್ ಫಲ್ನೇರ್ ಹೇಳಿದ್ದಾರೆ.

* ಭಾರತದ ಮೇಲಿನ ದಾಳಿಯಲ್ಲಿ ಅಮೆರಿಕ ನಿರ್ಮಿತ ವಿಮಾನ ಬಳಕೆ

* ಪಾಕಿಸ್ತಾನವು ಭಾರತದ ಸೇನಾ ಠಾಣೆಗಳ ಮೇಲೆ ದಾಳಿಗೆ ಯತ್ನಿಸಿತ್ತು ಎಂಬುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಭಾರತ ಒದಗಿಸಿದೆ

ಪಾಕಿಸ್ತಾನದ ದಾಳಿ ವಿವರ

* ಪಾಕಿಸ್ತಾನದ ಯುದ್ಧವಿಮಾನಗಳು ನಮ್ಮ ಗಡಿಯತ್ತ ನುಗ್ಗುತ್ತಿರುವುದನ್ನು ಗುರುತಿಸಿ, ದಾಳಿಯನ್ನು ವಿಫಲಗೊಳಿಸಲಾಯಿತು – ಭಾರತ    

* ಭಾರತದ ವಿರುದ್ಧ ಎಫ್‌–16 ಬಳಸಲಾಗಿದೆ ಎಂಬುದರ ಬಗ್ಗೆ ತಕ್ಷಣವೇ ಯಾವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಸಂಬಂಧ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸ ಬೇಕಾಗುತ್ತದೆ ಎಂದು ಅಮೆರಿಕ ಹೇಳಿದೆ.

* 24 ಭಾರತದ ಮೇಲೆ ದಾಳಿಗೆ ಬಳಸಲಾದ ಎಫ್‌–16ಗಳು

* 3 ಭಾರತದ ಗಡಿಯೊಳಗೆ ಬಂದಿದ್ದ ಎಫ್‌–16ಗಳು

ನಿರ್ಬಂಧ ಬಹಿರಂಗವಿಲ್ಲ

‘ಎಫ್‌–16 ಬಳಕೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮೇಲೆ ಹಲವು ನಿರ್ಬಂಧಗಳಿವೆ. ಇದು ಸೇನಾ ಒಪ್ಪಂದವಾಗಿರುವ ಕಾರಣ ಆ ನಿರ್ಬಂಧಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಅಮೆರಿಕದ ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದೆ.

ಅನುಮತಿ ಅಗತ್ಯ

‘ಎಫ್‌–16 ಅನ್ನು ಬೇರೆ ದೇಶದ ವಿರುದ್ಧ ಸೇನಾ ಕಾರ್ಯಾಚರಣೆಗೆ, ಜಂಟಿ ಸಮರಭ್ಯಾಸಕ್ಕೆ ಬಳಸುವ ಮುನ್ನ ಪಾಕಿಸ್ತಾನವು ಅಮೆರಿಕದ ಅನುಮತಿ ಪಡೆಯಲೇಬೇಕು. ವಿಮಾನ ಬಳಕೆ ಬಗ್ಗೆ ದಾಖಲೆಗಳನ್ನು ಇಡಬೇಕು’ ಎಂದು 2006ರಲ್ಲಿ ಅಮೆರಿಕ ಸರ್ಕಾರವು ತನ್ನ ಸಂಸತ್ತಿನಲ್ಲಿ ಹೇಳಿತ್ತು.
 

ಬರಹ ಇಷ್ಟವಾಯಿತೆ?

 • 38

  Happy
 • 7

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !