ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಮೃತಪಟ್ಟ ರೋಗಿಯ ಶವವನ್ನು ಗುಂಡಿಗೆ ಎಸೆದ ಸಿಬ್ಬಂದಿ!

Last Updated 8 ಜೂನ್ 2020, 1:23 IST
ಅಕ್ಷರ ಗಾತ್ರ

ಚೆನ್ನೈ: ಪುದುಚೇರಿಯಲ್ಲಿ ಕೋವಿಡ್‌–19ನಿಂದ ಮೃತಪಟ್ಟ ರೋಗಿಯೊಬ್ಬರ ಶವವನ್ನು ಸರ್ಕಾರಿ ಸಿಬ್ಬಂದಿ ಅವಸರದಲ್ಲಿ ಗುಂಡಿಗೆ ಎಸೆದ ದೃಶ್ಯವೊಂದು ವೈರಲ್‌ ಆಗಿದೆ. ಸಿಬ್ಬಂದಿಯ ಈ ನಡತೆಯನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ಸಾವಿರಾರು ಜನರು ಖಂಡಿಸಿದ್ದಾರೆ.

ಘಟನೆ ಕುರಿತು ಸ್ಥಳೀಯ ಆಡಳಿತ ತನಿಖೆಗೆ ಆದೇಶಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಆಂಬುಲೆನ್ಸ್‌ನಿಂದ ಬಿಳಿಬಟ್ಟೆಯಲ್ಲಿ ಸುತ್ತಿದ್ದ ಶವವೊಂದನ್ನು ಪಿಪಿಇ ಕಿಟ್‌ ಧರಿಸಿದ್ದ ನಾಲ್ವರು ಸಿಬ್ಬಂದಿ ಹೊತ್ತುತರುತ್ತಾರೆ. ನಂತರದಲ್ಲಿ ಹೂಳಲು ತೆಗೆದ ಗುಂಡಿಗೆ ಶವವನ್ನು ದೂರದಿಂದಲೇ ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ. ಇದಾದ 30 ಸೆಕೆಂಡುಗಳ ನಂತರ ಸರ್ಕಾರಿ ಅಧಿಕಾರಿಯೊಬ್ಬರಿಗೆ ‘ಶವವನ್ನು ಎಸೆಯಲಾಗಿದೆ’ ಎಂದು ಒಬ್ಬ ಸಿಬ್ಬಂದಿ ಹೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಮಾರ್ಗಸೂಚಿ ಉಲ್ಲಂಘನೆ

ಕೋವಿಡ್‌–19ನಿಂದ ಮೃತಪಟ್ಟ ರೋಗಿಯ ಶವದ ಅಂತ್ಯಸಂಸ್ಕಾರಕ್ಕೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೆ ಈ ವಿಡಿಯೊದಲ್ಲಿ ಸಿಬ್ಬಂದಿ ಈ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಕೋವಿಡ್‌ನಿಂದ ಮೃತಪಟ್ಟ ರೋಗಿಯ ಶವವನ್ನು ಬ್ಯಾಗ್‌ನಲ್ಲಿ ಸುತ್ತಿ ಹೂಳಬೇಕು. ಆದರೆ ಈ ಪ್ರಕರಣದಲ್ಲಿ ಕೇವಲ ಬಿಳಿಬಟ್ಟೆಯಲ್ಲಿ ಶವವನ್ನು ಸುತ್ತಲಾಗಿತ್ತು. ಶವವನ್ನು ಎಸೆಯುವ ಸಂದರ್ಭದಲ್ಲಿ ಈ ಬಟ್ಟೆ ಕಳಚಿ ಬಿದ್ದಿತ್ತು. ಇದರಿಂದ ಸ್ಥಳದಲ್ಲಿ ಇದ್ದವರಿಗೆ ಸೋಂಕು ಹರಡುವ ಭೀತಿಯೂ ಎದುರಾಗಿತ್ತು.

ಮೃತ ರೋಗಿಯು ಚೆನ್ನೈ ನಿವಾಸಿ ಎಂದು ಮೂಲಗಳು ತಿಳಿಸಿವೆ. ಶವದ ಅಂತ್ಯಸಂಸ್ಕಾರವನ್ನು ಈ ರೀತಿ ನಡೆಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ‘ಸೂಕ್ತ ರೀತಿಯಲ್ಲಿ ಶವಸಂಸ್ಕಾರ ಹಕ್ಕಿನ ವಿಷಯ. ಭಾರತೀಯ ದಂಡ ಸಂಹಿತೆ(ಐಪಿಸಿ) ಅನ್ವಯ ಶವಕ್ಕೆ ಈ ರೀತಿ ಅಗೌರವ ತೋರುವುದು ಶಿಕ್ಷಾರ್ಹ ಅಪರಾಧ. ಆರೋಗ್ಯ ಕಾರ್ಯಕರ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ದಂಡ ಸಹಿತ ಶಿಕ್ಷೆಯಾಗಬೇಕು’ ಎಂದು ಇಂಡಿಯಾ ಅಗೈನ್ಸ್ಟ್‌ ಕರಪ್ಷನ್‌ ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.

ಶೋಕಾಸ್‌ ನೋಟಿಸ್

ಶವವನ್ನು ಹೂಳಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಸಂಬಂಧಿಸಿದ ಇಲಾಖೆಗೆ ನೋಟಿಸ್ ನೀಡಲಾಗಿತ್ತು, ತನಿಖೆಗೆ ಆದೇಶಿಸಲಾಗಿದೆ ಎಂದು ಪುದುಚೇರಿ ಕಲೆಕ್ಟರ್‌ ಅರುಣ್‌ ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಷೋಕಾಸ್‌ ನೋಟಿಸ್‌ ನೀಡಲಾಗಿದೆ ಎಂದು ಪುದುಚೇರಿ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT