ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ: ಚರ್ಚೆ ಕಾಲ ಮುಗಿದಿದೆ

ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಹಿಂಜರಿದರೆ ಉಗ್ರವಾದ ಪ್ರೋತ್ಸಾಹಿಸಿದಂತೆ: ಪ್ರಧಾನಿ ಮೋದಿ ಗುಡುಗು
Last Updated 18 ಫೆಬ್ರುವರಿ 2019, 19:40 IST
ಅಕ್ಷರ ಗಾತ್ರ

ನವದೆಹಲಿ:ಭಯೋತ್ಪಾದನೆ ನಿಗ್ರಹ ಕುರಿತು ಮಾತನಾಡುವ ಸಮಯ ಮೀರಿಹೋಗಿದೆ. ಈಗ ಭಯೋತ್ಪಾದನೆ ವಿರುದ್ಧ ಜಾಗತಿಕ ಮಟ್ಟದಲ್ಲಿ ಒಗ್ಗಟ್ಟಾಗಿ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಭಯೋತ್ಪಾದನೆ ಮತ್ತು ಅದಕ್ಕೆ ಬೆಂಬಲ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದು ಸಹ ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿದಂತೆಯೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅರ್ಜೆಂಟೀನಾ ಅಧ್ಯಕ್ಷ ಮರಿಸಿಯೊ ಮ್ಯಾಕ್ರಿ ಅವರೊಂದಿಗೆ ಸೋಮವಾರ ನಿಯೋಗ ಮಟ್ಟದ ಮಾತುಕತೆ ನಡೆಸಿದ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ವಿಶ್ವದ ಶಾಂತಿ ಮತ್ತು ಸ್ಥಿರತೆಗೆ ಭಯೋತ್ಪಾದನೆ ತೀವ್ರ ಅಪಾಯಕಾರಿ ಎನ್ನುವುದು ನಮ್ಮಿಬ್ಬರ ನಿಲುವಾಗಿದೆ’ ಎಂದಿದ್ದಾರೆ.

ಮಾತುಕತೆ ಬಳಿಕ ಉಭಯ ರಾಷ್ಟ್ರಗಳು ರಕ್ಷಣೆ, ಪರಮಾಣು, ಪ್ರವಾಸೋದ್ಯಮ, ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಕೃಷಿ ಕ್ಷೇತ್ರಗಳಲ್ಲಿ 10 ಒಪ್ಪಂದಗಳಿಗೆ ಸಹಿ ಮಾಡಿವೆ.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಸಿಬ್ಬಂದಿಗೆ ಸಂತಾಪ ಸೂಚಿಸಿದಮ್ಯಾಕ್ರಿ, ಭಯೋತ್ಪಾದನೆಯ ಪಿಡುಗಿನ ವಿರುದ್ಧ ಉಭಯ ರಾಷ್ಟ್ರಗಳು
ಒಟ್ಟಾಗಿ ಹೋರಾಡಬೇಕು ಎಂದರು.

ಸಾನಿಯಾ ಮಿರ್ಜಾ ಕೈಬಿಡಲು ಒತ್ತಾಯ(ಹೈದರಾಬಾದ್‌): ತೆಲಂಗಾಣದ ರಾಯಭಾರಿ ಸ್ಥಾನದಿಂದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ಕೈಬಿಡುವಂತೆ
ಬಿಜೆಪಿಯ ಏಕೈಕ ಶಾಸಕ ರಾಜಾ ಸಿಂಗ್‌ ಲೋಧ್‌ ಒತ್ತಾಯಿಸಿದ್ದಾರೆ.

ಪಾಕಿಸ್ತಾನದ ಕ್ರಿಕೆಟ್‌ ಆಟಗಾರ ಶೊಯಬ್‌ ಮಲಿಕ್‌ ಅವರನ್ನು ಮದುವೆಯಾಗಿರುವ ಸಾನಿಯಾ ಮಿರ್ಜಾ ಅವರನ್ನು ತೆಲಂಗಾಣ ರಾಯಭಾರಿಯಾಗಿ ಮುಂದುವರಿಸುವುದು ಸರಿಯಲ್ಲ ಎಂದು ಅವರು ವಾದಿಸಿದ್ದಾರೆ.

ಜಮ್ಮುವಿನಲ್ಲಿ ಮೂರು ತಾಸು ಕರ್ಫ್ಯೂಸಡಿಲ
ಜಮ್ಮು (ಪಿಟಿಐ):
ಜಮ್ಮುವಿನ ಕೆಲವು ಭಾಗಗಳಲ್ಲಿ ಸೋಮವಾರ ಮೂರು ತಾಸು ಕರ್ಫ್ಯೂ ಸಡಿಲಿಸಲಾಗಿತ್ತು.

ಪುಲ್ವಾಮಾ ದಾಳಿ ನಂತರ ಭುಗಿಲೆದ್ದ ಹಿಂಸಾಚಾರ ಮತ್ತು ಪಾಕಿಸ್ತಾನದ ವಿರುದ್ಧ ಆಕ್ರೋಶದ ಹಿನ್ನೆಲೆಯಲ್ಲಿ ಹೇರಲಾಗಿದ್ದ ಕರ್ಫ್ಯೂ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕಾನೂನು, ಸುವ್ಯವಸ್ಥೆ ಅವಲೋಕಿಸಿ ಕರ್ಫ್ಯೂ ಸಡಿಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಜಮ್ಮುವಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಶಾಂತಿ, ಸಾಮರಸ್ಯ ಕಾಪಾಡಿಕೊಳ್ಳುವಂತೆ ಜನರಿಗೆ ಮನವಿ ಮಾಡಿದೆ. ಪೊಲೀಸರು ಮುಂಜಾಗ್ರತಾ ಕ್ರಮವಾಗಿ 150 ಜನರನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.

ವಹಿವಾಟು, ಸಾರಿಗೆ ಸಂಚಾರ ಸ್ಥಗಿತಗೊಂಡಿವೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪೊಲೀಸರು, ಅರೆ ಸೇನಾಪಡೆ ಮತ್ತು ಸೇನೆಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ಅವಲೋಕಿಸಲು ಹೆಲಿಕಾಪ್ಟರ್‌ ಬಳಸಿಕೊಳ್ಳಲಾಗುತ್ತಿದೆ.

ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯಲು ಮೊಬೈಲ್‌ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ನೌಕರರು ಮತ್ತು ವಿದ್ಯಾರ್ಥಿಗಳ ಗುರುತಿನ ಚೀಟಿ, ಪ್ರಯಾಣಿಕರ ವಿಮಾನ, ರೈಲು ಟಿಕೆಟ್‌ಗಳನ್ನು ಕರ್ಪ್ಯೂ ಪಾಸ್‌ ಎಂದು ಪರಿಗಣಿಸುವಂತೆ ಸೂಚಿಸಲಾಗಿದೆ.

ಬಸ್‌ ಸೇವೆ ತಾತ್ಕಾಲಿಕ ರದ್ದು
ವಾರಕ್ಕೊಮ್ಮೆ ಗಡಿಯನ್ನು ದಾಟಿ ಪೂಂಚ್‌–ರಾವಲ್‌ಕೋಟ್‌ ನಡುವೆ ಸಂಚರಿಸುವ ಬಸ್‌ ಸೇವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಭಾರತ–ಪಾಕಿಸ್ತಾನ ಮಧ್ಯೆ 2006ರಲ್ಲಿ ಈ ಬಸ್‌ ಸೇವೆ ಆರಂಭಿಸಲಾಗಿತ್ತು.

ಪಾಕ್ ಕ್ರಿಕೆಟಿಗರ ಚಿತ್ರ ತೆರವು: ಪಿಸಿಬಿ ಕಿಡಿ
ಕರಾಚಿ (ಪಿಟಿಐ):
ಭಾರತದ ಕೆಲವು ಕ್ರೀಡಾಂಗಣಗಳಿಂದ ಪಾಕಿಸ್ತಾನ ಕ್ರಿಕೆಟಿಗರ ಭಾವಚಿತ್ರಗಳನ್ನುತೆರವುಗೊಳಿಸಿದ್ದಕ್ಕೆ ಮತ್ತು ಮುಚ್ಚಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬೇಸರವ್ಯಕ್ತಪಡಿಸಿದೆ. ಇದನ್ನುಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ಗಮನಕ್ಕೆ ತಂದು ಪ್ರತಿಭಟನೆ ವ್ಯಕ್ತಪಡಿಸಲಾಗುವುದು ಎಂದೂಪಿಸಿಬಿ ಹೇಳಿದೆ.

ಪಾಕಿಸ್ತಾನದ ಪ್ರಧಾನಮಂತ್ರಿಯೂ ಆಗಿರುವ ಇಮ್ರಾನ್‌ ಖಾನ್ ಮತ್ತು ಪ್ರಮುಖ ಆಟಗಾರರ ಚಿತ್ರಗಳನ್ನು ಪುಲ್ವಾಮಾ ದಾಳಿ ನಂತರ ಭಾರತದ ಕೆಲವುಕ್ರೀಡಾಂಗಣಗಳಿಂದ ತೆರವುಗೊಳಿಸಲಾಗಿತ್ತು. ಕೆಲವು ಕಡೆಗಳಲ್ಲಿ ಮುಚ್ಚಲಾಗಿತ್ತು. ಇದರಿಂದ ಬೇಸರಗೊಂಡ ಪಿಸಿಬಿ, ವ್ಯವಸ್ಥಾಪಕ ನಿರ್ದೇಶಕ ವಸೀಂ ಖಾನ್‌ ಮೂಲಕ ಭಾನುವಾರ ರಾತ್ರಿ ಪತ್ರಿಕಾ ಹೇಳಿಕೆಬಿಡುಗಡೆಗೊಳಿಸಿದ್ದು ‘ಇದೇ28ರಂದು ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗುವುದು’ ಎಂದಿದೆ.

‘ಕ್ರೀಡೆ ಮತ್ತು ರಾಜಕೀಯವನ್ನು ಭಿನ್ನ ನೆಲೆಯಲ್ಲೇ ನೋಡಬೇಕು. ಕ್ರೀಡೆ, ವಿಶೇಷವಾಗಿ ಕ್ರಿಕೆಟ್‌, ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯ
ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಟಗಾರರ ಚಿತ್ರಗಳನ್ನುಕ್ರೀಡಾಂಗಣಗಳಿಂದ ತೆರವುಗೊಳಿಸುವುದು ಅಥವಾ ಮುಚ್ಚುವುದು ಖಂಡನೀಯ’ ಎಂದು ಪಿಸಿಬಿಅಭಿಪ್ರಾಯಪಟ್ಟಿದೆ. ಪುಲ್ವಾಮಾ ದಾಳಿಯ ನಂತರ ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿನ
ಇಮ್ರಾನ್ ಖಾನ್‌ ಚಿತ್ರವನ್ನು ಮುಚ್ಚಲಾಗಿತ್ತು.ಪಂಜಾಬ್ ಕ್ರಿಕೆಟ್ ಸಂಸ್ಥೆ, ಮೊಹಾಲಿ ಕ್ರೀಡಾಂಗಣದ ವಿವಿಧ ಕಡೆಗಳಲ್ಲಿದ್ದ ಇಮ್ರಾನ್ ಖಾನ್ ಮತ್ತುಪಾಕಿಸ್ತಾನದ ಇತರ ಆಟಗಾರರ ಚಿತ್ರಗಳನ್ನುತೆರವುಗೊಳಿಸಿತ್ತು.

ವಿಶ್ವಕಪ್ ಪಂದ್ಯ ಬಹಿಷ್ಕಾರಕ್ಕೆ ಒತ್ತಡ
ವಿಶ್ವಕಪ್‌ನಲ್ಲಿ ಪಾಕಿಸ್ತಾನ ಎದುರಿನ ಪಂದ್ಯ ಬಹಿಷ್ಕರಿಸಬೇಕು ಎಂದು ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾವು ಆಗ್ರಹಿಸಿರುವುದಕ್ಕೆ ಸಾಮಾಜಿಕ ತಾಣಗಳಲ್ಲಿ ಕ್ರೀಡಾಭಿಮಾನಿಗಳು ಭಾರಿ ಬೆಂಬಲ ಸೂಚಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಆಡಬಾರದು ಎಂದು ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾದ ಕಾರ್ಯದರ್ಶಿ ಸುರೇಶ್ ಬಾಫ್ನಾ ಶನಿವಾರ ಒತ್ತಾಯಿಸಿದ್ದರು. ಇದನ್ನು ಬೆಂಬಲಿಸಿರುವ ನೆಟ್ಟಿಗರು ಪಾಕ್‌ ವಿರುದ್ಧ ಪಂದ್ಯ ಆಡದಿರಲು ಬಿಸಿಸಿಐ ಮತ್ತು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಬೇಕು ಎಂದು ಆಗ್ರಹಿಸಿದ್ದಾರೆ.

***
ಸರ್ಕಾರ ಏಕೆ ಕಾಯುತ್ತಿದೆ
ಸರ್ಕಾರ ಇನ್ನೂ ಏಕೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಪ್ರತಿದಿನ ಯೋಧರು ಹುತಾತ್ಮರಾಗುತ್ತಿರುವ ಸುದ್ದಿ ಬರುತ್ತಿವೆ. ಬಿಜೆಪಿಯ ರಾಜಕಾರಣಿಗಳು ನಗುತ್ತ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನೂ ಎಷ್ಟು ದಿನ ಶೋಕಾಚರಣೆ ಆಚರಿಸಬೇಕು.
–ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖಂಡ

**
ಮೋದಿಗೆ ಇಚ್ಛಾಶಕ್ತಿ ಇದೆ
ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವ ತಾಕತ್ತು ಮತ್ತು ರಾಜಕೀಯ ಇಚ್ಛಾಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲದೇ ವಿಶ್ವದಲ್ಲಿ ಬೇರೆ ಯಾವ ರಾಜಕೀಯ ನಾಯಕರಲ್ಲೂ ಇಲ್ಲ.
–ಅಮಿತ್ ಶಾ,ಬಿಜೆಪಿ ಅಧ್ಯಕ್ಷ

**
ಸುಳಿವಿದ್ದರೂ ಕ್ರಮ ಏಕಿಲ್ಲ
ದಾಳಿ ನಡೆಯುವ ಬಗ್ಗೆ ಮುಂಚಿತವಾಗಿ ಗುಪ್ತಚರ ವರದಿಗಳು ಸುಳಿವು ನೀಡಿದ್ದರೂ ಕೇಂದ್ರ ಸರ್ಕಾರ ಏಕೆ ಕ್ರಮ ಕೈಗೊಂಡಿರಲಿಲ್ಲ. ಹಾಗಾದರೆ ಯೋಧರ ಸಾವಿಗೆ ಹೊಣೆ ಯಾರು?
–ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳದ ಮುಖ್ಯಮಂತ್ರಿ

**
ಜನಾಭಿಪ್ರಾಯಕ್ಕೆ ಏಕೆ ಭಯ
ಕಾಶ್ಮೀರ ಕಣಿವೆಯಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಭಾರತ ಸರ್ಕಾರ ಏಕೆ ಭಯಪಡುತ್ತಿದೆ. ಅಲ್ಲಿನ ಜನರ ಮಾತಿಗೂ ಅವಕಾಶ ನೀಡಬೇಕು. ಭಾರತವು ಪಾಕಿಸ್ತಾನಕ್ಕಿಂತ ಉತ್ತಮ ದೇಶ ಎಂದು ತೋರಿಸಬೇಕಾದ ಅಗತ್ಯವಿದೆ.
–ಕಮಲ್ ಹಾಸನ್,‘ಮಕ್ಕಳ್ ನೀಧಿ ಮೈಯಂ’ ಪಕ್ಷದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT