ಪುಲ್ವಾಮಾ ದಾಳಿ: ಸಂಚುಕೋರನ ಗುರುತು ಪತ್ತೆ

ಭಾನುವಾರ, ಮಾರ್ಚ್ 24, 2019
33 °C

ಪುಲ್ವಾಮಾ ದಾಳಿ: ಸಂಚುಕೋರನ ಗುರುತು ಪತ್ತೆ

Published:
Updated:

ಶ್ರೀನಗರ: ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಮುದಸ್ಸಿರ್‌ ಅಹ್ಮದ್‌ ಖಾನ್‌ ಅಲಿಯಾಸ್‌ ಮೊಹಮ್ಮದ್‌ ಭಾಯಿ  ಪುಲ್ವಾಮಾದಲ್ಲಿ ಫೆ.14ರಂದು ಸಿಆರ್‌ಪಿಎಫ್‌ ಸಿಬ್ಬಂದಿ ಮೇಲೆ ನಡೆದ ಆತ್ಮಾಹುತಿ ದಾಳಿಯ ಸಂಚುಕೋರ ಎಂದು ಗುರುತಿಸಲಾಗಿದೆ. 

ಈತನಕ ಲಭ್ಯವಾದ ಸಾಕ್ಷ್ಯಗಳನ್ನು ಕ್ರೋಡೀಕರಿಸಿ ದಾಳಿಯ ಹಿಂದೆ ಇದ್ದ ವ್ಯಕ್ತಿಯನ್ನು ಪತ್ತೆ ಮಾಡಲಾಗಿದೆ. 23 ವರ್ಷದ ಮುದಸ್ಸಿರ್‌ ಪುಲ್ವಾಮಾ ಜಿಲ್ಲೆಯವನು. ಈತ ಪದವೀಧರನಾಗಿದ್ದು, ಎಲೆಕ್ಟ್ರೀಷಿಯನ್‌ ಆಗಿ ಕೆಲಸ ಮಾಡುತ್ತಿದ್ದ. ಪುಲ್ವಾಮಾ ದಾಳಿಗೆ ಬಳಸಿದ ವಾಹನ ಮತ್ತು ಸ್ಫೋಟಕಗಳನ್ನು ಈತ ಒದಗಿಸಿದ್ದ. 

2017ರಲ್ಲಿ ಈತ ಜೈಷ್‌ ಎ ಮೊಹಮ್ಮದ್‌ ಸಂಘಟನೆ ಸೇರಿದ್ದ. ಬಹಿರಂಗವಾಗಿ ಕೆಲಸ ಮಾಡುತ್ತಿದ್ದ ಈತನನ್ನು ನೂರ್‌ ಮೊಹಮ್ಮದ್‌ ತಾಂತ್ರೆ ಎಂಬಾತ ಭೂಗತ ಚಟುವಟಿಕೆಗಳಿಗೆ ಹಚ್ಚಿದ. ಈ ತಾಂತ್ರೆಯೇ ಕಾಶ್ಮೀರ ಕಣಿವೆಯಲ್ಲಿ ಜೈಷ್‌ ಸಂಘಟನೆಯನ್ನು ಪುನಶ್ಚೇತನಗೊಳಿಸಿದ ಎಂದು ಹೇಳಲಾಗಿದೆ. 

2017ರ ಡಿಸೆಂಬರ್‌ನಲ್ಲಿ ತಾಂತ್ರೆ ಸತ್ತ. 2018ರ ಜನವರಿ 14ರಂದು ಮುದಸ್ಸಿರ್‌ ಮನೆಯಿಂದ ಪರಾರಿಯಾಗಿ ಜೈಷ್‌ನ ಚಟುವಟಿಕೆಗಳಲ್ಲಿ ಸಕ್ರಿಯನಾದ. 

ಪುಲ್ವಾಮಾ ದಾಳಿ ನಡೆಸಿದ ಅದಿಲ್‌ ಅಹ್ಮದ್‌ ದರ್‌ ಜತೆಗೆ ಮುದಸ್ಸಿರ್ ನಿರಂತರವಾಗಿ ಸಂಪರ್ಕದಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಪದವಿ ಪಡೆದ ಬಳಿಕ ಈತ ಒಂದು ವರ್ಷದ ಎಲೆಕ್ಟ್ರೀಷಿಯನ್‌ ಡಿಪ್ಲೊಮಾ ಮಾಡಿದ್ದ. ಈತ ಹಲವು ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿದ್ದ. 2018ರ ಫೆಬ್ರುವರಿಯಲ್ಲಿ ಸುಂಜವನ್‌ ಸೇನಾ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಈತ ಭಾಗಿಯಾಗಿದ್ದ. ಈ ದಾಳಿಯಲ್ಲಿ ಆರು ಯೋಧರು ಮತ್ತು ಒಬ್ಬ ನಾಗರಿಕ ಬಲಿಯಾಗಿದ್ದರು. 

ಲೆತ್‌ಪೋರಾದಲ್ಲಿ ಸಿಆರ್‌ಪಿಎಫ್‌ ಶಿಬಿರದ ಮೇಲೆ 2018ರ ಜನವರಿಯಲ್ಲಿ ದಾಳಿಯಾಗಿತ್ತು. ಅದರಲ್ಲಿ ಐವರು ಸಿಆರ್‌ಪಿಎಫ್‌ ಯೋಧರು ಬಲಿಯಾಗಿದ್ದರು. ಈ ದಾಳಿಯಲ್ಲಿಯೂ ಮುದಸ್ಸಿರ್‌ನ ಕೈವಾಡ ಇದೆ ಎನ್ನಲಾಗಿದೆ. 

ಪುಲ್ವಾಮಾ ದಾಳಿಯ ತನಿಖೆ ನಡೆಸುತ್ತಿರುವ ಭಾರತೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡ ಮುದಸ್ಸಿರ್‌ನ ಮನೆಯಲ್ಲಿ ಶೋಧ ನಡೆಸಿದೆ. 

ಪುಲ್ವಾಮಾ ದಾಳಿಗೆ ಬಳಸಲಾದ ಮಾರುತಿ ಇಕೊ ವ್ಯಾನ್‌ ಅನ್ನು ದಾಳಿ ನಡೆಸುವುದಕ್ಕೆ ಹತ್ತು ದಿನ ಮೊದಲು ಜೈಷ್‌ನ ಉಗ್ರನೊಬ್ಬ ಖರೀದಿಸಿದ್ದ. ಸಜ್ಜದ್‌ ಭಟ್‌ ಎಂಬ ಜೈಷ್‌ ಉಗ್ರನೊಬ್ಬ ದಾಳಿಯ ಬಳಿಕ ತಲೆಮರೆಸಿಕೊಂಡಿದ್ದಾನೆ. ಈತನೂ ಉಗ್ರಗಾಮಿ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದಾನೆ ಎನ್ನಲಾಗಿದೆ.  

ಭಯೋತ್ಪಾದಕರಿಗೆ ಪ್ರಧಾನಿ ನರೇಂದ್ರ ಮೋದಿ ಕಟು ಎಚ್ಚರಿಕೆ
ಗಾಜಿಯಾಬಾದ್‌ (ಪಿಟಿಐ): ಭಾರತವು ನಿರಂತರವಾಗಿ ಭಯೋತ್ಪಾದನೆಯಿಂದ ನರಳುತ್ತಲೇ ಇರುವುದು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದಕರಿಗೆ ಕಟು ಎಚ್ಚರಿಕೆ ನೀಡಿದ್ದಾರೆ. 

‘ಈವರೆಗೆ ಆಗಿದ್ದು ಸಾಕು. ನಾವು ನರಳುತ್ತಲೇ ಇರಲು ಆಗದು’ ಎಂದು ಪುಲ್ವಾಮಾ ಮತ್ತು ಉರಿ ಭಯೋತ್ಪಾದನಾ ದಾಳಿಗಳನ್ನು ಉಲ್ಲೇಖಿಸಿ ಮೋದಿ ಅವರು ಹೇಳಿದ್ದಾರೆ. 

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) 50ನೇ ಸ್ಥಾಪನಾ ದಿನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

ನೆರೆ ದೇಶವು ಶತ್ರುವಿನಂತೆ ವರ್ತಿಸುತ್ತಿರುವ ಮತ್ತು ದೇಶದೊಳಗೆಯೇ ನಡೆಯುವ ಷಡ್ಯಂತ್ರಗಳಿಗೆ ಗಡಿಯಾಚೆಗಿನಿಂದ ಪ್ರೋತ್ಸಾಹ ದೊರೆಯುವ ಈ ಸಂದರ್ಭದಲ್ಲಿ ಸಿಐಎಸ್‌ಎಫ್‌ನ ಪಾತ್ರ ಬಹಳ ಮಹತ್ವವಾದುದು ಎಂದು ಅವರು ಹೇಳಿದರು.

‘ನೆರೆಯ ದೇಶವು ಶತ್ರುವಿನಂತೆ ವರ್ತಿಸುತ್ತಿದೆ. ಆದರೆ, ಆ ದೇಶಕ್ಕೆ ಯುದ್ಧ ಮಾಡುವ ತಾಕತ್ತು ಇಲ್ಲ. ಹಾಗಾಗಿ, ದೇಶದೊಳಗಿನ ವಿವಿಧ ಷಡ್ಯಂತ್ರಗಳಿಗೆ ನೆರವು ನೀಡುವ ಪ್ರಯತ್ನ ನಡೆಸುತ್ತಿದೆ. ಹಾಗಾಗಿ, ದೇಶದಲ್ಲಿ ಭೀಕರವಾದ ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ದೇಶದ ಭದ್ರತೆ ಮತ್ತು ಭದ್ರತಾ ಸಂಸ್ಥೆಗಳು ಸವಾಲಿನ ಸ್ಥಿತಿ ಎದುರಿಸುತ್ತವೆ’ ಎಂದು ಅವರು ಹೇಳಿದರು. 

ಸರ್ಕಾರವು ಕೆಲವೊಮ್ಮೆ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳುವ ಮೂಲಕ ಅವರು ಪಾಕಿಸ್ತಾನದ ಬಾಲಾಕೋಟ್‌ನ ಉಗ್ರರ ತರಬೇತಿ ಶಿಬಿರಗಳ ಮೇಲಿನ ವಾಯುದಾಳಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದರು. 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !