ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮ ಮಾದರಿ ದಾಳಿಯನ್ನು ತಡೆದ ಭಾರತೀಯ ಸೇನೆ; ತಪ್ಪಿದ ಭಾರೀ ಅನಾಹುತ

Last Updated 28 ಮೇ 2020, 6:16 IST
ಅಕ್ಷರ ಗಾತ್ರ

ಶ್ರೀನಗರ (ಜಮ್ಮು-ಕಾಶ್ಮೀರ): 2019ರಲ್ಲಿ ನಡೆದ ಪುಲ್ವಾಮ ಮಾದರಿಯ ಮತ್ತೊಂದು ಉಗ್ರರ ದಾಳಿಯ ಸಂಚನ್ನು ಭಾರತೀಯ ಸೇನೆ, ಪೊಲೀಸರು ಮತ್ತು ಅರೆ ಸೇನಾಪಡೆಗಳು ವಿಫಲಗೊಳಿಸಿವೆ. ಆ ಮೂಲಕ ಭಾರೀ ಅನಾಹುತವೊಂದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿವೆ.

ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸುಮಾರು 20 ಕೆ.ಜಿಗೂ ಅಧಿಕ ತೂಕದ ಸುಧಾರಿತ ಸ್ಪೋಟಕವನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ತಡೆದ ಸೇನಾ ಸಿಬ್ಬಂದಿ, ಆ ನಂತರ ಸ್ಪೋಟಿಸಿ ನಾಶಮಾಡಿದ್ದಾರೆ.

ವಾಹನ ಚಲಾಯಿಸುತ್ತಿದ್ದ ಚಾಲಕ ತಪ್ಪಿಕೊಂಡಿದ್ದಾನೆಂದು ತಿಳಿದುಬಂದದ್ದು, ಶೋಧ ಕಾರ್ಯ ಮುಂದುವರೆದಿದೆ.

ಕಳೆದ ವರ್ಷ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯ ಹೋಲಿಕೆಗಳಿರುವ ಸಂಚನ್ನೇ ಮತ್ತೊಮ್ಮೆ ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಬುಧವಾರ ರಾತ್ರಿ ಚೆಕ್ ಪಾಯಿಂಟ್‌ನಲ್ಲಿ ನಕಲಿ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಬಿಳಿ ಬಣ್ಣದ ಸ್ಯಾಂಟ್ರೊ ಕಾರನ್ನು ಗುರುತಿಸಲಾಗಿತ್ತು. ಆದರೆ, ಅದರಲ್ಲಿದ್ದ ಚಾಲಕ ಕಾರಿನ ವೇಗ ಹೆಚ್ಚಿಸಿ ಬ್ಯಾರಿಕೇಡ್ ಮೂಲಕ ನುಗ್ಗಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಧಾರಿತ ಸ್ಪೋಟಕ (ಐಇಡಿ) ಹೊಂದಿದ್ದ ಕಾರಿನ ಮೇಲೆ ಭದ್ರತಾ ಪಡೆಯ ಯೋಧರು ಗುಂಡು ಹಾರಿಸಿದರು. ಚಾಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಪೊಲೀಸ್ ಇನ್ಸಪೆಕ್ಟರ್‌ ಜನರಲ್ ವಿಜಯ್ ಕುಮಾರ್ ಹೇಳಿದ್ದಾರೆ.

'ಸಂಭವನೀಯ ದಾಳಿಯ ಬಗ್ಗೆ ನಮಗೆ ಗುಪ್ತಚರ ಮಾಹಿತಿ ದೊರೆತಿತ್ತು. ನಾವು ನಿನ್ನೆಯಿಂದ ಐಇಡಿ ಹೊಂದಿರುವ ವಾಹನವನ್ನು ಹುಡುಕುತ್ತಿದ್ದೆವು' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಐಇಡಿ ಹೊಂದಿದ್ದ ಕಾರನ್ನು ವಶಪಡಿಸಿಕೊಂಡ ಪೊಲೀಸರು ನಂತರ ಬಾಂಬ್ ನಿಷ್ಕ್ರೀಯ ದಳದ ಸಹಾಯದಿಂದ ಸ್ಪೋಟಿಸಿ ನಾಶಮಾಡಿದ್ದಾರೆ. ಆ ಸಮಯದಲ್ಲಿ ಸ್ಥಳೀಯರನ್ನು ಸ್ಥಳಾಂತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT