ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮಾ ದಾಳಿ ಅತ್ಯಂತ ಹೀನ, ಹೇಡಿತನದ ಕೃತ್ಯ: ಭದ್ರತಾ ಮಂಡಳಿ ಖಂಡನೆ

Last Updated 23 ಫೆಬ್ರುವರಿ 2019, 1:19 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಪಾಕಿಸ್ತಾನ ಮೂಲದ ಜೈಷ್‌ ಎ ಮೊಹಮ್ಮದ್‌ (ಜೆಇಎಂ) ಉಗ್ರಗಾಮಿ ಸಂಘಟನೆಯ ಉಗ್ರರು ಎಸಗಿದ್ದಾರೆ ಎಂದು ಹೇಳಲಾದ ಪುಲ್ವಾಮಾ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕಟುವಾಗಿ ಖಂಡಿಸಿದೆ. ಇದು ಅತ್ಯಂತ ಹೀನ ಮತ್ತು ಹೇಡಿತನದ ಕೃತ್ಯ ಎಂದು ಹೇಳಿದೆ. ಈ ಕೃತ್ಯದ ಹಿಂದೆ ಇರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದೆ.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಅರೆ ಸೇನಾ ಪಡೆಯ 40 ಮಂದಿಯ ಸಾವಿಗೆ ಮತ್ತು ಹಲವು ಮಂದಿ ಗಾಯಗೊಳ್ಳಲು ಕಾರಣವಾದ ಜೈಷ್‌ ಎ ಮೊಹಮ್ಮದ್‌ ಸಂಘಟನೆ ಹೊಣೆ ಹೊತ್ತುಕೊಂಡಿರುವ ಹೀನ ಮತ್ತು ಹೇಡಿತನದ ಆತ್ಮಹತ್ಯಾ ದಾಳಿಯನ್ನು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಅತ್ಯಂತ ಕಟು ಪದಗಳಲ್ಲಿ ಖಂಡಿಸಿವೆ’ ಎಂದು ಭದ್ರತಾ ಮಂಡಳಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಈ ಭಯೋತ್ಪಾದನಾ ಕೃತ್ಯ ಎಸಗಿದವರು, ಅದರ ಸಂಘಟಕರು, ಹಣ ಒದಗಿಸಿದವರು ಮತ್ತು ಪ್ರಾಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ’ ಎಂದು ವಿಶ್ವಸಂಸ್ಥೆಯ ಅತ್ಯಂತ ಪ್ರಭಾವಿ ಸಂಸ್ಥೆಯಾಗಿರುವ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾದ ಚೀನಾ, ಫ್ರಾನ್ಸ್‌, ರಷ್ಯಾ, ಬ್ರಿಟನ್‌ ಮತ್ತು ಅಮೆರಿಕ ಹೇಳಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಂತರರಾಷ್ಟ್ರೀಯ ಕಾನೂನು ಮತ್ತು ಭದ್ರತಾ ಮಂಡಳಿಯ ಸಂಬಂಧಪಟ್ಟ ನಿರ್ಣಯಗಳ ಅನುಸಾರ ಎಲ್ಲ ರಾಷ್ಟ್ರಗಳು ಭಾರತ ಸರ್ಕಾರಕ್ಕೆ ಸಕ್ರಿಯ ಸಹಕಾರ ನೀಡಬೇಕು ಎಂದು ಹೇಳಲಾಗಿದೆ.

ಜೆಇಎಂ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿಯು ಘೋಷಿಸಬೇಕು ಎಂಬ ಭಾರತದ ಒತ್ತಾಯಕ್ಕೆ ಚೀನಾ ನಿರಂತರವಾಗಿ ತಡೆ ಒಡ್ಡುತ್ತಾ ಬಂದಿದೆ. ಹಾಗಾಗಿ, ಈಗ ಖಂಡನಾ ಹೇಳಿಕೆಯಲ್ಲಿ ಜೆಇಎಂ ಹೆಸರು ಸೇರ್ಪಡೆಯಾಗಿರುವುದು ಮಹತ್ವದ ಅಂಶವಾಗಿದೆ.

ಚೀನಾದ ವಿರೋಧವೇ ವಿಳಂಬಕ್ಕೆ ಕಾರಣ
ಚೀನಾದ ವಿರೋಧವೇ ಖಂಡನಾ ಹೇಳಿಕೆ ಪ್ರಕಟವಾಗುವುದನ್ನು ಒಂದು ವಾರ ವಿಳಂಬವಾಗಿಸಿತು ಎಂದು ಹೇಳಲಾಗಿದೆ.

ಆದರೆ, ವಿವಿಧ ರೀತಿಯ ಹೊಂದಾಣಿಕೆ ಮೂಲಕ ಭದ್ರತಾ ಮಂಡಳಿಯ ಎಲ್ಲ ಸದಸ್ಯ ರಾಷ್ಟ್ರಗಳು ಖಂಡನಾ ನಿರ್ಣಯವನ್ನು ಒಪ್ಪುವಂತೆ ಮಾಡಲು ಅಮೆರಿಕ ಸತತ ಪ್ರಯತ್ನ ನಡೆಸಿ ಯಶಸ್ವಿಯಾಯಿತು ಎಂದು ಮೂಲಗಳು ಹೇಳಿವೆ.

ಪುಲ್ವಾಮಾ ದಾಳಿಯನ್ನು ಖಂಡಿಸುವ ಹೇಳಿಕೆಯನ್ನು ದುರ್ಬಲಗೊಳಿಸಲು ಚೀನಾ ಪ್ರಯತ್ನಿಸಿದೆ. ಮಂಡಳಿಯು ಯಾವುದೇ ಹೇಳಿಕೆ ನೀಡದಂತೆ ತಡೆಯಲು ಪಾಕಿಸ್ತಾನ ಪ್ರಯತ್ನಿಸಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ಪ್ರತಿನಿಧಿಯಾಗಿರುವ ಮಲೀಹಾ ಲೋಧಿ ಅವರು ಭದ್ರತಾ ಮಂಡಳಿಯ ಅಧ್ಯಕ್ಷರನ್ನು ಭೇಟಿಯಾಗಿ ಒತ್ತಡ ಹೇರಲು ಯತ್ನಿಸಿದರು. ಆದರೆ, ಅದು ಫಲ ನೀಡಿಲ್ಲ.

ದಾಳಿಯ ಮರುದಿನ ಅಂದರೆ ಫೆ. 15ರಂದೇ ಖಂಡನಾ ಹೇಳಿಕೆ ಪ್ರಕಟಿಸಲು ಭದ್ರತಾ ಮಂಡಳಿಯು ಬಯಸಿತ್ತು. ಆದರೆ, ಹೇಳಿಕೆ ಪ್ರಕಟಿಸುವುದನ್ನು ಮುಂದಕ್ಕೆ ಹಾಕುವಂತೆ ಚೀನಾ ಒತ್ತಡ ಹೇರಿತ್ತು. ಮಂಡಳಿಯ 14 (ನಾಲ್ಕು ಕಾಯಂ ಸದಸ್ಯರು ಮತ್ತು ಇತರ ಸದಸ್ಯರು) ಸದಸ್ಯ ರಾಷ್ಟ್ರಗಳು ಫೆ. 15ರಂದೇ ಹೇಳಿಕೆ ಪ್ರಕಟಿಸಲು ನಿರ್ಧರಿಸಿದ್ದವು. ಆದರೆ, ಫೆ. 18ರವರೆಗೆ ಅದನ್ನು ಮುಂದೂಡುವಂತೆ ಚೀನಾ ಕೋರಿತ್ತು. ಬಳಿಕ, ನಿರ್ಣಯಕ್ಕೆ ಹಲವು ತಿದ್ದುಪಡಿಗಳನ್ನು ಸೂಚಿಸುತ್ತಾ ಬಂತು. ಖಂಡನಾ ಹೇಳಿಕೆ ಪ್ರಕಟಿಸುವ ಪ್ರಯತ್ನವನ್ನೇ ದಿಕ್ಕುತಪ್ಪಿಸುವ ಪ್ರಯತ್ನ ಇದಾಗಿತ್ತು ಎಂದು ಮೂಲಗಳು ಹೇಳಿವೆ.

ಪುಲ್ವಾಮಾ ದಾಳಿಯನ್ನು ಭಯೋತ್ಪಾದನಾ ಕೃತ್ಯ ಎಂದೇ ಪರಿಗಣಿಸಬೇಕು ಎಂಬುದು 14 ಸದಸ್ಯ ರಾಷ್ಟ್ರಗಳ ಒತ್ತಾಯವಾಗಿತ್ತು. ಆದರೆ, ‘ಭಯೋತ್ಪಾದನೆ’ ಪ‍ದ ಬಳಕೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಖಂಡನೆ ತೀರ್ಪು ಅಲ್ಲ: ಚೀನಾ
ಖಂಡನಾ ಹೇಳಿಕೆಯಲ್ಲಿ ಜೈಷ್‌ ಎ ಮೊಹಮ್ಮದ್‌ ಹೆಸರು ಸಾಮಾನ್ಯವಾದ ಪ್ರಸ್ತಾಪ ಮಾತ್ರ. ಅದು ಯಾವುದೇ ತೀರ್ಪು ಅಲ್ಲ ಎಂದು ಹೇಳುವ ಮೂಲಕ ಖಂಡನಾ ಹೇಳಿಕೆಯ ಮಹತ್ವವನ್ನು ಕುಗ್ಗಿಸುವ ಪ್ರಯತ್ನವನ್ನು ಚೀನಾ ಮಾಡಿದೆ.

ಪುಲ್ವಾಮಾ ದಾಳಿಗೆ ಸಂಬಂಧಿಸಿದ ಬೆಳವಣಿಗೆಗಳನ್ನು ಚೀನಾ ಗಂಭೀರವಾಗಿ ಗಮನಿಸುತ್ತಿದೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುಆಂಗ್‌ ಹೇಳಿದ್ದಾರೆ.

ವಿವಿಧ ದೇಶಗಳ ಒತ್ತಡದಿಂದಾಗಿ ಖಂಡನಾ ಹೇಳಿಕೆಗೆ ಚೀನಾ ಅನುಮೋದನೆ ಕೊಟ್ಟಿದೆ. ಚೀನಾದ ಅನುಮೋದನೆ ಇಲ್ಲದೆ ಈ ಹೇಳಿಕೆ ಪ್ರಕಟವಾಗುತ್ತಿರಲಿಲ್ಲ. ಈಗ, ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನದ ಓಲೈಕೆಗಾಗಿ ಇಂತಹ ಹೇಳಿಕೆ ನೀಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಸೂದ್‌ ನಿಷೇಧಕ್ಕೆ ಮತ್ತೆ ನಿರ್ಣಯ

ಮಸೂದ್‌ ಅಜರ್‌ನ ಮೇಲೆ ನಿಷೇಧ ಹೇರಬೇಕು ಎಂಬ ನಿರ್ಣಯವನ್ನು ಭದ್ರತಾ ಮಂಡಳಿಯಲ್ಲಿ ಮಂಡಿಸುವುದಾಗಿ ಕಾಯಂ ಸದಸ್ಯ ರಾಷ್ಟ್ರ ಫ್ರಾನ್ಸ್‌ ಹೇಳಿದೆ.

ಮಸೂದ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ಭಾರತವು 2016ರಲ್ಲಿ ನಿರ್ಣಯ ಮಂಡಿಸಿತ್ತು. ಬಳಿಕ, ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ದೇಶಗಳು ಇಂತಹುದೇ ನಿರ್ಣಯ ಮಂಡಿಸಿದ್ದವು. ಈ ಎಲ್ಲದಕ್ಕೂ ಚೀನಾ ತಡೆ ಒಡ್ಡಿತ್ತು. ಈಗ, ಖಂಡನಾ ನಿರ್ಣಯಕ್ಕೆ ಒಪ್ಪುವ ಮೂಲಕ ಚೀನಾದ ನಿಲುವು ಸ್ವಲ್ಪ ಸಡಿಲವಾದಂತೆ ಕಾಣಿಸುತ್ತಿದೆ. ಹಾಗಾಗಿ, ಫ್ರಾನ್ಸ್‌ ನಿರ್ಣಯ ಮಂಡಿಸಿದಾಗ ಚೀನಾ ಯಾವ ನಿಲುವು ತೆಗೆದುಕೊಳ್ಳಬಹುದು ಎಂಬ ಕುತೂಹಲ ಮೂಡಿದೆ.

ಶಂಕಿತ ಜೈಷ್‌ ಉಗ್ರರ ಸೆರೆ
ಜೈಷ್‌ ಎ ಮೊಹಮ್ಮದ್‌ ಸಂಘಟನೆಗೆ ಜನರನ್ನು ಸೇರಿಸುತ್ತಿದ್ದ ಆರೋಪದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಸಹರಾನ್‌ಪುರ ಜಿಲ್ಲೆಯ ದೇವಬಂದ್‌ನಿಂದ ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್‌ ಮಹಾ ನಿರ್ದೇಶಕ ಒ.ಪಿ.ಸಿಂಗ್‌ ಹೇಳಿದ್ದಾರೆ.

ಬಂಧಿತರನ್ನು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನ ಶಾನವಾಜ್‌ ಅಹ್ಮದ್‌ ಮತ್ತು ಪುಲ್ವಾಮಾದ ಅಕೀಬ್‌ ಅಹ್ಮದ್‌ ಮಲಿಕ್‌ ಎಂದು ಗುರುತಿಸ ಲಾಗಿದೆ. ಪಿಸ್ತೂಲು, ಗುಂಡುಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್‌) ಮುಖ್ಯಸ್ಥ ಅಸೀಮ್‌ ಅರುಣ್‌ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ.

20–25 ವರ್ಷ ವಯಸ್ಸಿನ ಈ ಇಬ್ಬರು ತಮ್ಮನ್ನು ವಿದ್ಯಾರ್ಥಿಗಳು ಎಂದು ಪರಿಚಯಿಸಿಕೊಳ್ಳುತ್ತಿದ್ದರು. ಆದರೆ, ಯಾವುದೇ ವಿದ್ಯಾಸಂಸ್ಥೆಯಲ್ಲಿ ಪ್ರವೇಶ ಪಡೆದಿರಲಿಲ್ಲ. ಎಟಿಎಸ್‌ಗೆ ಸಿಕ್ಕ ಸುಳಿವಿನ ಆಧಾರದಲ್ಲಿ ತನಿಖೆ ನಡೆಸಲಾಗಿತ್ತು. ಈ ಇಬ್ಬರ ಮೇಲೆ ಬಹಳ ದಿನಗಳಿಂದ ನಿಗಾ ಇರಿಸಲಾಗಿತ್ತು ಎಂದು ಸಿಂಗ್‌ ಅವರು ಮಾಹಿತಿ ಕೊಟ್ಟಿದ್ದಾರೆ.

ಈ ಇಬ್ಬರು ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದರೇ ಎಂಬುದನ್ನು ಈಗಲೇ ಹೇಳುವುದು ಸಾಧ್ಯವಿಲ್ಲ, ತನಿಖೆ ನಡೆಯುತ್ತಿದೆ ಎಂದು ಸಿಂಗ್‌ ತಿಳಿಸಿದ್ದಾರೆ.

ಪಾಕಿಸ್ತಾನ: ನಿಷೇಧಿತ ಸಂಘಟನೆಗಳ ತವರೂರು
ಪಾಕಿಸ್ತಾನದಲ್ಲಿ ಹತ್ತಾರು ನಿಷೇಧಿತ ಸಂಘಟನೆಗಳಿವೆ. ನಿಷೇಧಿತ ಸಂಘಟನೆಗಳ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಜಮಾತ್‌ ಉದ್‌ ದವಾ. ಪಾಕಿಸ್ತಾನ ಸರ್ಕಾರವೇ ಈ ಉಗ್ರಗಾಮಿ ಸಂಘಟನೆಗಳಿಗೆ ಕುಮ್ಮಕ್ಕು ಮತ್ತು ನೆರವು ನೀಡುತ್ತಿದೆ ಎಂದು ಅಧಿಕೃತ ದಾಖಲೆಯೊಂದು ಹೇಳಿದೆ.

ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನಾ ತಡೆ ಪ್ರಾಧಿಕಾರವು (ಎನ್‌ಸಿಟಿಎ) ಈವರೆಗೆ 69 ಭಯೋತ್ಪಾದನಾ ಸಂಘಟನೆಗಳನ್ನು ನಿಷೇಧಿಸಿದೆ. ಆದರೆ, ಹಿಜ್ಬುಲ್‌ ಮುಜಾಹಿದೀನ್‌, ಹರ್ಕತ್‌ ಉಲ್‌ ಮುಜಾಹಿದೀನ್‌, ಅಲ್‌ ಬದ್ರ್‌ನಂತಹ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸಂಘಟನೆಗಳಿಗೆ ನಿಷೇಧ ಹೇರಿಲ್ಲ.

2008ರ ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌ ಉದ್‌ ದವಾ ಮತ್ತು ಅದರ ಇನ್ನೊಂದು ವಿಭಾಗ ಫಲಾಹ್‌ ಎ ಇನ್‌ಸಾನಿಯತ್‌ ಪ್ರತಿಷ್ಠಾನದ ಮೇಲೆ ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನ ನಿಷೇಧ ಹೇರಿದೆ. ಭಯೋತ್ಪಾದನಾ ಸಂಘಟನೆಗಳ ಮೇಲೆ ನಿಯಂತ್ರಣ ಹೇರುವಂತೆ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಒತ್ತಡದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಎನ್‌ಸಿಟಿಎಯ ನಿಷೇಧಿತ ಸಂಘಟನೆಗಳ ಪಟ್ಟಿಯಲ್ಲಿರುವ ಗಣನೀಯ ಸಂಖ್ಯೆಯ ಸಂಘಟನೆಗಳು ಬಲೂಚಿಸ್ತಾನ, ಗಿಲ್ಗಿಟ್‌ ಬಲ್ತಿಸ್ತಾನ ಮತ್ತು ಕೇಂದ್ರಾಡಳಿತ ಬುಡಕಟ್ಟು ಪ್ರದೇಶಗಳಲ್ಲಿ ನೆಲೆಯಾಗಿವೆ.

ಭಾರತ ನಿಷೇಧಿಸಿರುವ 41 ಸಂಘಟನೆಗಳ ಪೈಕಿ ಶೇ 50ಕ್ಕಿಂತ ಹೆಚ್ಚು ಸಂಘಟನೆಗಳು ಪಾಕಿಸ್ತಾನ ಮೂಲದ್ದಾಗಿವೆ ಅಥವಾ ಅವುಗಳ ಮುಖಂಡರು ಆ ದೇಶದಲ್ಲಿ ನೆಲೆಸಿದ್ದಾರೆ ಅಥವಾ ಈ ಸಂಘಟನೆಗಳನ್ನು ಪಾಕಿಸ್ತಾನ ಪ್ರಾಯೋಜಿಸುತ್ತಿದೆ ಎಂದು ಭಾರತದ ಗೃಹ ಸಚಿವಾಲಯದ ದಾಖಲೆಗಳು ಹೇಳುತ್ತಿವೆ. ಪುಲ್ವಾಮಾ ದಾಳಿಯ ಹೊಣೆ ಹೊತ್ತಿರುವ ಜೈಷ್‌ ಎ ಮೊಹಮ್ಮದ್‌ ಮತ್ತು ಮುಂಬೈ ದಾಳಿಯ ಹಿಂದಿನ ಸಂಚು ರೂಪಿಸಿದ್ದ ಲಷ್ಕರ್‌ ಎ ತಯಬಾ ಸಂಘಟನೆಗಳನ್ನು ಪಾಕಿಸ್ತಾನ ನಿಷೇಧಿಸಿದೆ. ಆದರೆ, ಇವುಗಳ ಮುಖ್ಯಸ್ಥರಾದ ಮಸೂದ್‌ ಅಜರ್‌ ಮತ್ತು ಹಫೀಜ್‌ ಸಯೀದ್‌ ಅವರು ಪಾಕಿಸ್ತಾನದಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದಾರೆ.

ಎಫ್‌ಎಟಿಎಫ್ ತರಾಟೆ
ಭಯೋತ್ಪಾದನೆಗೆ ಹಣಕಾಸಿನ ಹರಿವಿನ ಮೇಲೆ ನಿಗಾ ಇರಿಸುವ ಅಂತರರಾಷ್ಟ್ರೀಯ ಸಂಘಟನೆ ಎಫ್‌ಎಟಿಎಫ್‌, ಪುಲ್ವಾಮಾ ದಾಳಿಯನ್ನು ಖಂಡಿಸಿದೆ. ಜೈಷ್‌ ಎ ಮೊಹಮ್ಮದ್‌, ಲಷ್ಕರ್‌ ಎ ತಯಬಾ ಮತ್ತು ಜಮಾತ್‌ ಉದ್‌ ದವಾದಂತಹ ಉಗ್ರಗಾಮಿ ಸಂಘಟನೆಗಳಿಗೆ ಆರ್ಥಿಕ ನೆರವನ್ನು ತಡೆಯಲು ವಿಫಲವಾಗಿರುವ ಪಾಕಿಸ್ತಾನವನ್ನು ‘ಮಸುಕು ಪಟ್ಟಿ’ಯಲ್ಲಿ (ಗ್ರೇ ಲಿಸ್ಟ್‌) ಮುಂದುವರಿಸಿದೆ.

ಗ್ರೇ ಲಿಸ್ಟ್‌ ಎಂಬುದು ಎಚ್ಚರಿಕೆಯ ಸಂಕೇತವಾಗಿದ್ದು ಮುಂದಿನ ಹಂತದಲ್ಲಿ ಕಪ್ಪು ಪಟ್ಟಿಗೆ ಸೇರ್ಪಡೆಯಾಗಬಹುದು ಎಂಬುದರ ಸೂಚನೆಯಾಗಿದೆ.

ಲೋಪಗಳನ್ನು ಪರಿಹರಿಸಿಕೊಳ್ಳಲು ರೂಪಿಸಿರುವ ಕ್ರಿಯಾ ಯೋಜನೆಗಳನ್ನು ಗಂಭೀರವಾಗಿ ಜಾರಿ ಮಾಡಬೇಕು. ಭಯೋತ್ಪಾದನಾ ಸಂಘಟನೆಗಳಿಗೆ ಹಣಕಾಸಿನ ನೆರವು ಹರಿಯುವುದರಿಂದ ಆಗಬಹುದಾದ ಅಪಾಯಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬುದನ್ನು ಪಾಕಿಸ್ತಾನ ತೋರಿಸಬೇಕು ಎಂದು ಎಫ್‌ಎಟಿಎಫ್‌ ಹೇಳಿದೆ.

2018ರ ಜೂನ್‌ನಲ್ಲಿ ಪಾಕಿಸ್ತಾನವನ್ನು ಮಸುಕು ಪಟ್ಟಿಗೆ ಸೇರಿಸಲಾಗಿತ್ತು. 27 ಅಂಶಗಳ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುವಂತೆ ಪಾಕಿಸ್ತಾನಕ್ಕೆ ಎಫ್‌ಎಟಿಎಸ್‌ ಸೂಚಿಸಿತ್ತು. ಕಳೆದ ಅಕ್ಟೋಬರ್‌ನಲ್ಲಿ ಮತ್ತು ಈ ವಾರದಲ್ಲಿ ಈ ಕ್ರಿಯಾ ಯೋಜನೆಗಳ ಅನುಷ್ಠಾನದ ವಿಶ್ಲೇಷಣೆ ನಡೆಸಲಾಗಿದೆ.

ಪಾಕಿಸ್ತಾನವು ಮಸುಕು ಪಟ್ಟಿಯಲ್ಲಿ ಮುಂದುವರಿದರೆ ಆ ದೇಶವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದು ಕಷ್ಟವಾಗುತ್ತದೆ. ಐಎಂಎಫ್‌, ವಿಶ್ವ ಬ್ಯಾಂಕ್‌, ಎಡಿಬಿ, ಐರೋಪ್ಯ ಒಕ್ಕೂಟದಂತಹ ಸಂಸ್ಥೆಗಳು ಸಾಲ ನಿರಾಕರಿಸಬಹುದು. ಮೂಡೀಸ್‌, ಎಸ್‌ ಎಂಡ್‌ ಪಿ, ಫಿಚ್‌ನಂತಹ ರೇಟಿಂಗ್ ಸಂಸ್ಥೆಗಳು ದೇಶದ ರ‍್ಯಾಂಕಿಂಗ್‌ ಅನ್ನು ಕೆಳಗಿಳಿಸಬಹುದು.

ಕಾಶ್ಮೀರಿಗಳಿಗೆ ರಕ್ಷಣೆ ಕೊಡಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ
ಕಾಶ್ಮೀರಿಗಳು ಮತ್ತು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಬೆದರಿಕೆ, ಹಲ್ಲೆ ಮತ್ತು ಬಹಿಷ್ಕಾರದಂತಹ ಕೃತ್ಯಗಳನ್ನು ತಡೆಯುವಂತೆ 11 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಗಳಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.

ಪುಲ್ವಾಮಾ ಭಯೋತ್ಪಾದನಾ ದಾಳಿಯ ಬಳಿಕ ಕಾಶ್ಮೀರಿಗಳ ವಿರುದ್ಧದ ಕೃತ್ಯಗಳು ವರದಿಯಾದ ಮಹಾರಾಷ್ಟ್ರ, ಪಂಜಾಬ್‌, ಉತ್ತರ ಪ್ರದೇಶ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಮೇಘಾಲಯ, ಪಶ್ಚಿಮ ಬಂಗಾಳ, ಛತ್ತೀಸಗಡ ಮತ್ತು ಉತ್ತರಾಖಂಡ ರಾಜ್ಯಗಳಿಗೆ ಈ ನಿರ್ದೇಶನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT