ಬುಧವಾರ, ಜೂನ್ 23, 2021
30 °C
ಕಾಶ್ಮೀರಿ ಯುವಕರನ್ನು ಆತ್ಮಾಹುತಿ ದಾಳಿಗೆ ಸಜ್ಜುಗೊಳಿಸುವಂತೆ ಸೂಚಿಸಿದ್ದ ಮುದಾಸಿರ್

ಪುಲ್ವಾಮಾ ದಾಳಿ ಸಂಚುಕೋರನ ಆಪ್ತ ಸಜ್ಜದ್‌ ಖಾನ್‌ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪುಲ್ವಾಮಾ ದಾಳಿಯ ಸಂಚುಕೋರ ಮುದಾಸಿರ್‌ನ ಆಪ್ತ, ಜೈಶ್‌–ಎ–ಮೊಹಮ್ಮದ್‌ ಸಂಘಟನೆಯ ಉಗ್ರ ಸಜ್ಜದ್‌ ಖಾನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಪುಲ್ವಾಮಾ ನಿವಾಸಿಯಾಗಿರುವ ಸಜ್ಜದ್‌ ಖಾನ್‌ನನ್ನು (27) ಗುರುವಾರ ರಾತ್ರಿ ಲಜಪತ್‌ ರಾಯ್‌ ಮಾರುಕಟ್ಟೆ ಬಳಿ ಬಂಧಿಸಲಾಯಿತು ಎಂದು ಅವರು ಹೇಳಿದ್ದಾರೆ. 

’ಜಮ್ಮು–ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಇತ್ತೀಚೆಗೆ ನಡೆಸಿದ ಗುಂಡಿನ ದಾಳಿಯಲ್ಲಿ ಮುದಾಸಿರ್‌ನನ್ನು ಹತ್ಯೆ ಮಾಡಲಾಗಿದೆ‘ ಎಂದು ಡಿಸಿಪಿ (ವಿಶೇಷ ಘಟಕ) ಪ್ರಮೋದ್‌ ಸಿಂಗ್‌ ಕುಶ್ವಾಹ್ ತಿಳಿಸಿದ್ದಾರೆ. 

ಪುಲ್ವಾಮಾ ದಾಳಿಯ ಮೊದಲು ಮತ್ತು ನಂತರ, ಸಜ್ಜದ್‌ ಖಾನ್‌ ಮುದಾಸಿರ್‌ ಜೊತೆ ಸತತ ಸಂಪರ್ಕದಲ್ಲಿದ್ದ ಎಂದು ಅವರು ಹೇಳಿದ್ದಾರೆ.

‘ಪುಲ್ವಾಮಾ ದಾಳಿ ನಡೆದ ಫೆಬ್ರುವರಿ 14ರಂದು, ಮುದಾಸಿರ್‌ ಸಜ್ಜದ್‌ಗೆ ವಾಟ್ಸ್‌ಆ್ಯಪ್‌ ಮಾಡಿದ್ದು, ಸಿಆರ್‌ಪಿಎಫ್‌ ಮೇಲೆ ದಾಳಿ ನಡೆಸುವ ಕುರಿತು ಮಾಹಿತಿ ನೀಡಿದ್ದಾನೆ. ಅಲ್ಲದೆ, ಆದಿಲ್‌ ದಾರ್‌ ಎಂಬುವನು ದಾಳಿ ಸಂಘಟಿಸುವ ಕುರಿತ ವಿಡಿಯೊವನ್ನೂ ಕಳಿಸಿದ್ದಾನೆ. ನಂತರ, ಈ ವಿಡಿಯೊವನ್ನು ಅವನ ಫೋನ್‌ನಿಂದ ಡಿಲೀಟ್‌ ಮಾಡಲಾಗಿದೆ’ ಎಂದು ಡಿಸಿಪಿ ತಿಳಿಸಿದ್ದಾರೆ. 

‘ಉತ್ತರ ಪ್ರದೇಶ ಮತ್ತು ಇತರೆ ರಾಜ್ಯಗಳ ಮುಸ್ಲಿಂ ಯುವಕರನ್ನು ತೀವ್ರಗಾಮಿ ಚಟುವಟಿಕೆಗಳಿಗೆ ನೇಮಕ ಮಾಡಿಕೊಂಡು ಅವರಿಗೆ ಶಸ್ತ್ರಾಸ್ತ್ರ, ಸ್ಫೋಟಕಗಳ ಬಳಕೆ ತರಬೇತಿ ನೀಡುವುದು, ನಿಧಿ ಮತ್ತು ಶಸ್ತ್ರಾಸ್ತ್ರ ಸಂಗ್ರಹಿಸುವ ತರಬೇತಿ ಕೊಡುವ ಕೆಲಸವನ್ನು ಸಜ್ಜದ್‌ಗೆ ವಹಿಸಲಾಗಿತ್ತು’ ಎಂದೂ ಅವರು ಹೇಳಿದರು. 

‘ಕಾಶ್ಮೀರಿ ಯುವಕರನ್ನು ಆತ್ಮಾಹುತಿ ದಾಳಿಗೆ ಸಜ್ಜುಗೊಳಿಸುವಂತೆಯೂ ಮುದಾಸಿರ್‌ ಸಜ್ಜದ್‌ಗೆ ಸೂಚನೆ ನೀಡಿದ್ದ’ ಎಂದು ಪ್ರಮೋದ್‌ಸಿಂಗ್‌ ಹೇಳಿದರು.  ‘ಸಜ್ಜದ್‌ನ ಸಹೋದರರು ಜೆಇಎಂ ಉಗ್ರರಾಗಿದ್ದರು. ಇವರು ಈ ಮೊದಲು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದರು. ಇದೇ ಕಾರಣಕ್ಕೆ, ಸಜ್ಜದ್‌ ಸಹೋದರ ಇಶ್ಫಾಕ್‌ನನ್ನು 2015ರ ಫೆಬ್ರುವರಿಯಲ್ಲಿ ಬಂಧಿಸಲಾಗಿತ್ತು. ಶ್ರೀನಗರದ ಜೈಲಿನಲ್ಲಿ ಅವನು 9 ತಿಂಗಳು ಕಳೆದಿದ್ದ’ ಎಂದು ಅವರು ಮಾಹಿತಿ ನೀಡಿದರು. 

ಇಶ್ಫಾಕ್‌ ಶ್ರೀನಗರ ಜೈಲಿನಲ್ಲಿದ್ದಾಗ, ಜೆಇಎಂ ಉಗ್ರ ನೂರ್‌ ಮೊಹಮ್ಮದ್‌ ತಾಂತಾರೆ ಸಂಪರ್ಕಕ್ಕೆ ಸಿಕ್ಕಿದ. 2017ರಲ್ಲಿ ತಾಂತಾರೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಅಸುನೀಗಿದ. ಜೈಲಿನಿಂದ ಬಿಡುಗಡೆಗೊಂಡ ಇಶ್ಫಾಕ್‌ ಜೆಇಎಂ ಉಗ್ರನಾಗಿ ಬದಲಾದ ಎಂದು ಡಿಸಿಪಿ ತಿಳಿಸಿದರು. 

ಎನ್‌ಐಎ ವಶಕ್ಕೆ

ದೆಹಲಿ ಕೋರ್ಟ್‌ ಸಜ್ಜದ್‌ ಖಾನ್‌ನನ್ನು ಮಾರ್ಚ್‌ 29ರವರೆಗೆ ರಾಷ್ಟ್ರೀಯ ತನಿಖಾ ತಂಡದ (ಎನ್‌ಐಎ) ವಶಕ್ಕೆ ನೀಡಿದೆ.

ಹತ್ತು ದಿನಗಳವರೆಗೆ ಸಜ್ಜದ್‌ ಖಾನ್‌ನನ್ನು ತಮ್ಮ ವಶಕ್ಕೆ ನೀಡುವಂತೆ ಎನ್‌ಐಎ ಮನವಿ ಮಾಡಿಕೊಂಡಿತ್ತು. ಆದರೆ, ಸಜ್ಜದ್‌ ಖಾನ್‌ ಪರ ವಕೀಲ ಎಂ.ಎಸ್. ಖಾನ್‌ ಈ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು